ಹಿಂದುಗಳೇ ಬಹುಸಂಖ್ಯಾತರಾಗಿರುವ ಭಾರತದಲ್ಲಿ ʻಬಲವಂತದ ಮತಾಂತರವು ದೇಶದ ಭದ್ರತೆಗೆ ಅಪಾಯಕಾರಿʼ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ, ಜಗತ್ತಿನ ಏಕೈಕ ಹಿಂದು ರಾಷ್ಟ್ರ ಎಂಬ ಖ್ಯಾತಿ ಗಳಿಸಿರುವ ನೇಪಾಳದಲ್ಲಿ ಕಳೆದ ಒಂದು ದಶಕದಲ್ಲಿ ಕ್ರೈಸ್ತರ ಸಂಖ್ಯೆ ಶೇ. 68ರಷ್ಟು ಹೆಚ್ಚಾಗಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಹಾಗೆಯೇ, ಬುದ್ಧ ಜನಿಸಿದ ನೇಪಾಳದಲ್ಲಿ ಕ್ರೈಸ್ತ ಮತ ಪ್ರಚಾರ ಹಾಗೂ ಹಿಂದುಗಳನ್ನು ಗುರಿಯಾಗಿಸಿ ಮತಾಂತರ ಮಾಡುವುದು ಮಿಷನರಿಗಳ ಕುತಂತ್ರವಾಗಿದೆ ಎಂದು ವರದಿ ಎಚ್ಚರಿಸಿದೆ. ಹಾಗಾದರೆ, ವರದಿಯಲ್ಲಿ ಇನ್ನೂ ಏನೇನಿದೆ? ನೇಪಾಳದಲ್ಲಿ ಎಷ್ಟರಮಟ್ಟಿಗೆ ಕ್ರೈಸ್ತ ಮಿಷನರಿಗಳು ಮತಾಂತರದಲ್ಲಿ ತೊಡಗಿದ್ದಾರೆ? ಕ್ರೈಸ್ತರ ಸಂಖ್ಯೆ ಹೇಗೆ ಹೆಚ್ಚಾಗಿದೆ ಎಂಬುದರ ಕುರಿತ ಮಾಹಿತಿಯುಳ್ಳ ವಿಸ್ತಾರ Explainer ಇಲ್ಲಿದೆ.
ಏನಿದು ಮತಾಂತರ ವರದಿ?
ನೇಪಾಳದಲ್ಲಿ ನಡೆಯುತ್ತಿರುವ ಮತಾಂತರದ ಕುರಿತು ಜಾಗತಿಕ ಮಾಧ್ಯಮ ಸಂಸ್ಥೆ ಬಿಬಿಸಿ (BBC)ಯು ಜನವರಿ 14ರಂದು ವರದಿ ಪ್ರಕಟಿಸಿದೆ. ಇದು ಈಗ ಜಾಗತಿಕವಾಗಿ ಸಂಚಲನ ಮೂಡಿಸಿದೆ. ʻಕ್ರಿಶ್ಚಿಯನ್ ಮಿಷನರಿಗಳಿಗೆ ನೇಪಾಳದಲ್ಲಿ ಬುದ್ಧನ ಜನ್ಮಸ್ಥಾನವೇ ಗುರಿʼ ಎಂಬ ವರದಿ ಪ್ರಕಟಿಸಿದ್ದು, ನೇಪಾಳದಲ್ಲಿ ಕ್ರೈಸ್ತ ಮತ ಪ್ರಚಾರಕರು ಹೇಗೆ ಕುತಂತ್ರ ಮಾಡುತ್ತಿದ್ದಾರೆ, ಜನರನ್ನು ಹೇಗೆ ಮತಾಂತರಗೊಳಿಸುತ್ತಿದ್ದಾರೆ ಎಂಬುದರ ಮಾಹಿತಿಯನ್ನು ಬಿಬಿಸಿ ವರದಿ ಒಳಗೊಂಡಿದೆ.
ಕ್ರೈಸ್ತರ ಸಂಖ್ಯೆ ಈಗ ಎಷ್ಟಿದೆ?
ನೇಪಾಳದಲ್ಲಿ 2011ರ ಜನಗಣತಿ ಪ್ರಕಾರ 3.76 ಲಕ್ಷ ಕ್ರೈಸ್ತರು ಇದ್ದರು. ಆದರೆ, ಕಳೆದ ಒಂದು ದಶಕದಲ್ಲಿ ಇದು 5.45 ಲಕ್ಷಕ್ಕೆ ಏರಿಕೆಯಾಗಿದ್ದು, ಶೇ.68ರಷ್ಟು ಹೆಚ್ಚಳವಾಗಿದೆ. ನೇಪಾಳದಲ್ಲಿ ಶೇ.80ರಷ್ಟು ಹಿಂದುಗಳು, ಶೇ.9ರಷ್ಟು ಬೌದ್ಧರು ಹಾಗೂ ಶೇ.2ರಷ್ಟು ಕ್ರಿಶ್ಚಿಯನ್ನರಿದ್ದಾರೆ. ಹಾಗೆ, ನೋಡಿದರೆ 1951ರಲ್ಲಿ ನೇಪಾಳದಲ್ಲಿ ಒಬ್ಬರೇ ಒಬ್ಬ ಕ್ರೈಸ್ತ ಧರ್ಮೀಯನಿರಲಿಲ್ಲ. ಆದರೆ, 1961ರ ವೇಳೆಗೆ ನೇಪಾಳದಲ್ಲಿ ಕ್ರೈಸ್ತರ ಸಂಖ್ಯೆ 458 ಆಯಿತು. 1970ರಲ್ಲಿ 7,400 ಇತ್ತು. ಇದಾದ ಬಳಿಕ ಸಂಖ್ಯೆ ಏರಿಕೆಯಾಗುತ್ತಲೇ ಬಂದಿದೆ. ಇದರಿಂದಾಗಿ 240 ವರ್ಷ ಹಿಂದು ರಾಷ್ಟ್ರ ಎನಿಸಿದ್ದ ನೇಪಾಳವು 2008ರಲ್ಲಿ ಜಾತ್ಯತೀತ ರಾಷ್ಟ್ರವಾಯಿತು. ಹೀಗೆ, ಜಾತ್ಯತೀತ ರಾಷ್ಟ್ರ ಎನಿಸಿಕೊಂಡ ಬಳಿಕವೇ ಕ್ರೈಸ್ತ ಮಿಷನರಿಗಳು ಮತಾಂತರದ ಅಸ್ತ್ರ ಪ್ರಯೋಗಿಸಲು ಶುರು ಮಾಡಿದರು.
ನೇಪಾಳದಲ್ಲಿ ಮತಾಂತರ ನಿಷಿದ್ಧ
ನೇಪಾಳದಲ್ಲಿ ಮತಾಂತರವು ಕಾನೂನುಬಾಹಿರ ಎಂಬ ನಿಯಮ ಇದೆ. ಹೀಗಿದ್ದರೂ, ಕ್ರೈಸ್ತ ಮಿಷನರಿಗಳು ನೇಪಾಳದಲ್ಲಿ ಜನರಿಗೆ ಹಲವು ಆಮಿಷಗಳನ್ನು ಒಡ್ಡಿ, ಜನರ ಬಡತನವನ್ನೇ ಬಂಡವಾಳವನ್ನಾಗಿಸಿಕೊಂಡು ಮತಾಂತರ ಮಾಡುತ್ತಿದ್ದಾರೆ. ದಲಿತರು, ದಲಾಯಿ ಲಾಮಾ ಅನುಯಾಯಿಗಳಾದ ತಮಾಂಗ್ ಸಮುದಾಯದವರನ್ನೇ ಹೆಚ್ಚು ಮತಾಂತರ ಮಾಡಲಾಗುತ್ತಿದೆ. ಎರಡೂ ಸಮುದಾಯದ ಹೆಚ್ಚಿನ ಜನ ಬಡವರಾಗಿರುವುದರಿಂದ ಇದನ್ನೇ ಮಿಷನರಿಗಳು ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿವೆ ಎಂದು ವರದಿ ತಿಳಿಸಿದೆ. ಇದರಿಂದಾಗಿಯೇ, ನೇಪಾಳವು ಜಗತ್ತಿನಲ್ಲೇ ಕ್ರೈಸ್ತರ ಸಂಖ್ಯೆ ವೇಗವಾಗಿ ಏಳಿಗೆ ಹೊಂದುತ್ತಿರುವ ರಾಷ್ಟ್ರ ಎನಿಸಿದೆ.
ದಕ್ಷಿಣ ಕೊರಿಯಾ ಮತ ಪ್ರಚಾರಕರ ಹಾವಳಿ
ಕಳೆದ ಎರಡು ದಶಕದಲ್ಲಿ ದಕ್ಷಿಣ ಕೊರಿಯಾದಿಂದ ಸಾವಿರಾರು ಸಂಖ್ಯೆಯ ಮತ ಪ್ರಚಾರಕರು ನೇಪಾಳದಲ್ಲಿ ಕ್ಷಿಪ್ರವಾಗಿ ಮತಾಂತರ ನಡೆಸುತ್ತಿದ್ದಾರೆ ಎಂದು ಬಿಬಿಸಿ ತಿಳಿಸಿದೆ. ಕ್ರೈಸ್ತ ಮಿಷನರಿಗಳನ್ನು ಬೇರೆ ದೇಶಗಳಿಗೆ ಕಳುಹಿಸುವ ಬೃಹತ್ ರಾಷ್ಟ್ರವಾಗಿ ದಕ್ಷಿಣ ಕೊರಿಯಾ ರೂಪುಗೊಂಡಿದೆ. ಕೊರಿಯನ್ ವರ್ಲ್ಡ್ ಮಿಷನ್ ಅಸೋಸಿಯೇಷನ್‌ನಿಂದ ಎರಡು ದಶಕದಲ್ಲಿ ನೇಪಾಳಕ್ಕೆ 22 ಸಾವಿರ ಮತ ಪ್ರಚಾರಕರನ್ನು ಕಳುಹಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮತ ಪ್ರಚಾರಕರು ಗ್ರಾಮ ಗ್ರಾಮಗಳಿಗೆ ತೆರಳಿ ಬುಡಕಟ್ಟು ಜನಾಂಗದವರು, ದಲಿತರಿಗೆ ಆಮಿಷಗಳನ್ನು ಒಡ್ಡುವ ಮೂಲಕ ಅವರನ್ನು ಮತಾಂತರಗೊಳಿಸಲಾಗುತ್ತಿದೆ. ಗ್ರಾಮ ಗ್ರಾಮಗಳಲ್ಲೂ ಚರ್ಚ್‌ಗಳನ್ನು ನಿರ್ಮಿಸಲಾಗುತ್ತಿದೆ. ವರದಿ ಪ್ರಕಾರ ನೇಪಾಳದಲ್ಲಿ ಸುಮಾರು 7,758 ಚರ್ಚ್‌ಗಳಿವೆ ಎಂದು ತಿಳಿದುಬಂದಿದೆ.
ಕಠಿಣ ಕಾನೂನು ಕ್ರಮ ಅಗತ್ಯ
ನೇಪಾಳದಲ್ಲಿ 2018ರಲ್ಲಿಯೇ ಮತಾಂತರ ನಿಗ್ರಹ ಕಾನೂನು ಜಾರಿಗೆ ಬಂದಿದ್ದರೂ, ಅದರ ಸಮರ್ಪಕ ಅನುಷ್ಠಾನವಾಗಿಲ್ಲ. ಹಳ್ಳಿ ಹಳ್ಳಿಗಳಲ್ಲೂ ಮತಾಂತರ ನಡೆಯುತ್ತಿದ್ದರೂ ಸದ್ಯ ಐವರ ವಿರುದ್ಧ ಮಾತ್ರ ಕೇಸ್ ದಾಖಲಾಗಿದೆ. ಕಳೆದ ವರ್ಷ ನಾಲ್ವರು ಕೊರಿಯನ್ನರ ವಿರುದ್ಧದ ಪ್ರಕರಣ ಕೈಬಿಡಲಾಗಿದೆ. ಇದುವರೆಗೆ ಪ್ರಕರಣ ದಾಖಲಿಸುವುದು ಹಾಗೂ ಬಳಿಕ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆಯೇ ಹೊರತು, ಕ್ರಮ ತೆಗೆದುಕೊಂಡಿಲ್ಲ. 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ವೇಳೆ ಜನರಿಗೆ ನೆರವು ನೀಡುವ ಸೋಗಿನಲ್ಲಿ ನೇಪಾಳಕ್ಕೆ ಹೋದ ಕೊರಿಯನ್ ಮತಪ್ರಚಾರಕರು ಅಲ್ಲಿಯೇ ತಳವೂರಿ ಮತಾಂತರಗೊಳಿಸಿದ್ದಾರೆ. ಹಾಗಾಗಿ, ಮತಾಂತರ ತಡೆ ಕಾಯ್ದೆಯ ಸಮರ್ಪಕ ಅನುಷ್ಠಾನ, ಕಠಿಣ ನಿಯಮ ಜಾರಿಯ ಅಗತ್ಯವಿದೆ ಎಂಬುದು ನೇಪಾಳ ರಾಜಕಾರಣಿಗಳು, ಬುದ್ಧಿಜೀವಿಗಳ ಒತ್ತಾಯವಾಗಿದೆ.
ಇದನ್ನೂ ಓದಿ | Conversion at Kodagu | ಸಂಕ್ರಾಂತಿ ಎಳ್ಳು ಬೆಲ್ಲ ಹಂಚಲು ಹಾಡಿಗೆ ಹೋದಾಗ ಬಯಲಾಯ್ತು ಮತಾಂತರ ಜಾಲ, ಐವರು ಪೊಲೀಸರ ಕೈಗೆ