ಬೆಂಗಳೂರು: 5, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ್ದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶ (Class 5 8 9 Exam Result) ಪ್ರಕಟಿಸಲಾದೆ. ಆಯಾ ಶಾಲೆಗಳಲ್ಲೇ ಫಲಿತಾಂಶ ಪ್ರಕಟಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಸೂಚಿಸಿದ್ದು, ಆಯಾ ಶಾಲೆಗಳಲ್ಲಿ ಇದನ್ನು ಪ್ರಕಟಿಸಲಾಗುತ್ತದೆ.
ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಾರ್ಚ್ 11, 12 ಮತ್ತು ಮಾರ್ಚ್ 25 ರಿಂದ 28 ರವರೆಗೆ ಮೌಲ್ಯಾಂಕನ ಪರೀಕ್ಷೆಗಳು ನಡೆದಿದ್ದವು. ಈ ಎಲ್ಲಾ ಶಾಲೆಗಳಲ್ಲಿ ಇವತ್ತು ಸಮುದಾಯದತ್ತ ಶಾಲಾ ದಿನ ಕಾರ್ಯಕ್ರಮ ನಡೆಯಲಿದ್ದು, ಫಲಿತಾಂಶ ಪ್ರಕಟಣೆ ಬಗ್ಗೆ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಡಳಿಗೆ ವರದಿ ನೀಡಬೇಕೆಂದು ನಿರ್ದೇಶಿಸಲಾಗಿದೆ.
5, 8 ಹಾಗೂ 9ನೇ ತರಗತಿ ಬೋರ್ಡ್ ಪರೀಕ್ಷೆ ಕೊಂಚ ಗೊಂದಲದ ಗೂಡಾಗಿತ್ತು. ಪರೀಕ್ಷೆ ನಡೆಸಲು ಕರ್ನಾಟಕ ಹೈಕೋರ್ಟ್ ತಡೆ ನೀಡಿತ್ತು. ಬಳಿಕ ಸರ್ಕಾರ ಸುಪ್ರೀಂ ಕೋರ್ಟ್ ಮೇಟ್ಟಿಲೇರಿತ್ತು. ಉನ್ನತ ನ್ಯಾಯಾಲಯ ಪರೀಕ್ಷೆ ನಡೆಸಬೇಕೆಂದು ಹೇಳಿ ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿತ್ತು. ಸದ್ಯ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇಂದು ಫಲಿತಾಂಶ ಪಡೆದಿದ್ದಾರೆ.
ಮೊದಲು ಶಾಲೆಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಆ ನಂತರ ಆನ್‌ಲೈನ್ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದು. ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ kseab.karnataka.gov.in ಫಲಿತಾಂಶ ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ಮುಂದಿನ ತರಗತಿಗಳಿಗೆ ದಾಖಲಾಗಲು ಅಂಕಗಳು ಮತ್ತು ಶ್ರೇಣಿಯ ಹಾರ್ಡ್ ಕಾಪಿಯನ್ನು ತೋರಿಸಬೇಕಾಗುತ್ತದೆ. ಹೀಗಾಗಿ ಶಾಲೆಯಲ್ಲಿ ನೀಡುವ ಅಂಕಪಟ್ಟಿಯನ್ನು ಪಡೆಯಬೇಕಾಗುತ್ತದೆ.
ವಿದ್ಯಾರ್ಥಿಗಳಿಗೆ ಫಲಿತಾಂಶದ ಬಗ್ಗೆ ತೃಪ್ತಿಯಾಗದಿದ್ದರೆ ಮರು ಮೌಲ್ಯಮಾಪನಕ್ಕೆ ಅವಕಾಶ ಇರುತ್ತದೆ. ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.ಇದಕ್ಕಾಗಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: Class 5, 8 , 9 Exam Results: ಏ.8ರಂದು ಬೆಳಗ್ಗೆ 5, 8, 9ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಫಲಿತಾಂಶ ಪ್ರಕಟ