Site icon Vistara News

CM Meeting: ಅಧಿಕಾರಿಗಳಿಗೆ ಸಿದ್ದರಾಮಯ್ಯ 10 ಖಡಕ್ ಸೂಚನೆ; ಚುರುಕಿನ ಆಡಳಿತಕ್ಕೆ 3 ತಿಂಗಳ ಗಡುವು

CM Meeting

ಬೆಂಗಳೂರು: ಜುಲೈ 8 ಹಾಗೂ 9 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಭೆ ಮಂಗಳವಾರ ರಾತ್ರಿ ಮುಕ್ತಾಯವಾಯಿತು. ಎರಡು ದಿನಗಳ ಸುದೀರ್ಘ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಅವರು (CM Meeting) , ಅಧಿಕಾರಿಗಳಿಗೆ ಲೋಪ ದೋಷ ಸರಿಪಡಿಸಿಕೊಂಡು ಆಡಳಿತ ಸುಧಾರಣೆ ಮಾಡಲು 3 ತಿಂಗಳು ಗಡುವು ಕೊಟ್ಟು, 10 ಖಡಕ್ ಸೂಚನೆಗಳನ್ನು ನೀಡಿದ್ದಾರೆ.

ಮುಖ್ಯಮಂತ್ರಿಯವರ ಸೂಚನೆಗಳು

  1. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ- ಸಿಇಒ- ಎಸ್ಪಿ ಸಮನ್ವಯದಿಂದ, ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ.
  2. ಸರ್ಕಾರ ಸಮಾಜದ ಅಸಮಾನತೆ ತೊಡೆದು ಹಾಕುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಸರ್ಕಾರದ ಹಣ ದುರುಪಯೋಗ ಆಗದಂತೆ ಕೆಲಸ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಬೇಕು. ಚರ್ಚೆ ಸಂದರ್ಭದಲ್ಲಿ ಹಲವು ಲೋಪದೋಷಗಳ ಕುರಿತು ಪ್ರಸ್ತಾಪಿಸಲಾಗಿದ್ದು, ಇವುಗಳನ್ನು ಸರಿಪಡಿಸಿಕೊಂಡು ಹೋಗಬೇಕು.
  3. ಉದ್ದೇಶಪೂರ್ವಕವಾಗಿ ಇಂತಹ ಲೋಪ ದೋಷಗಳನ್ನು ಮುಂದುವರಿಸಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು.
  4. ನಾವೆಲ್ಲರೂ ಸರ್ಕಾರದ ಸೇವಕರು. ಅದಕ್ಕೆ ವಿಧಾನಸೌಧದಲ್ಲಿ ಕೆಂಗಲ್‌ ಹನುಮಂತಯ್ಯನವರು ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ್ದಾರೆ.
  5. ನಾವು ಸಮಾಜವನ್ನು, ಸಮಾಜದಲ್ಲಿರುವ ಅಸಮಾನತೆಯ ಕಾರಣವನ್ನು ಅರ್ಥ ಮಾಡಿಕೊಂಡು, ನಮ್ಮ ಜನಪರ ಯೋಜನೆಗಳನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಬೇಕು. ಉದಾಹರಣೆಗೆ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ಜಾರಿಯಾಗಿವೆ.
  6. ಇತರ ಕೆಲವು ಕಾರ್ಯಕ್ರಮಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು.
  7. ಈಗಾಗಲೇ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಲಾಗಿದೆ. ನೀವೆಲ್ಲರೂ ಸೇರಿ ಜಿಲ್ಲೆ ಅಭಿವೃದ್ಧೀ ಕುರಿತು ಚಿಂತನೆ ನಡೆಸಬೇಕು.
  8. ಜನಪರ ಕಾರ್ಯಕ್ರಮಗಳನ್ನು ನಾವು – ನೀವು ಎಲ್ಲಾ ಚಾಚೂ ತಪ್ಪದೆ ಅನುಷ್ಠಾನಗೊಳಿಸಬೇಕು. ಏಕೆಂದರೆ ಜನರ ತೆರಿಗೆ ಹಣದಿಂದ ನಾವೆಲ್ಲರೂ ಇದ್ದೇವೆ. ಅವರ ಋಣ ತೀರಿಸಬೇಕು.
  9. ಸಮಾಜದ ಋಣ ನಮ್ಮ ಮೇಲಿದೆ ಎಂಬುದನ್ನು ಅರಿತು ಕೆಲಸ ಮಾಡಬೇಕು.
  10. ಮೂರು ತಿಂಗಳ ನಂತರ ಮತ್ತೆ ಸಭೆ ನಡೆಸಲಾಗುವುದು. ಆಗ ಸುಧಾರಣೆಯಾಗದಿದ್ದರೆ ಸಹಿಸಲಾಗದು.

ಇದನ್ನೂ ಓದಿ | Tourism Policy: ಹೊಸ ಪ್ರವಾಸೋದ್ಯಮ ನೀತಿ; ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸಲು ಸಿಎಂ ಸೂಚನೆ

ಯುವಕರಿಗೆ ತರಬೇತಿ ನೀಡಿ ಉದ್ಯೋಗ ಒದಗಿಸಿ: ಸಿಎಂ ಸೂಚನೆ

ಪಿಎಂ ಸ್ವನಿಧಿ ನಗರ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುವ ಪಿಎಂ ಸ್ವನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಗುರಿಗಿಂತ ಹೆಚ್ಚಿನ ಸಾಧನೆಯಾಗಿದೆ. ಶೇ. 54 ರಷ್ಟು ಮಹಿಳೆಯರು ಸಾಲ ಸೌಲಭ್ಯ ಪಡೆದಿದ್ದಾರೆ. ಉಡುಪಿ, ಕೊಡಗು, ಯಾದಗಿರಿ, ಚಾಮರಾಜನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆಯಾಗಿದೆ. ಯುವ ನಿಧಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೈಗಾರಿಕೋದ್ಯಮಗಳಲ್ಲಿ ಬೇಡಿಕೆಗೆ ಅನುಗುಣವಾದ ತರಬೇತಿ ನೀಡಿ ಉದ್ಯೋಗ ಒದಗಿಸಲು ಸಿಎಂ ಸೂಚಿಸಿದರು.

ಯುವ ನಿಧಿ ಯೋಜನೆಯಲ್ಲಿ ನಿರುದ್ಯೋಗ ಭತ್ಯೆ ಎರಡು ವರ್ಷ ಮಾತ್ರ ನೀಡುವ ಕಾರಣ, ಅಷ್ಟರೊಳಗೆ ಅವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಪಡೆಯಲು ಅನುವು ಮಾಡಿಕೊಡಬೇಕು. ಕಲಿಕೆ ಜೊತೆ ಕೌಶಲ್ಯ ಯೋಜನೆಯಡಿ ಕಲಿಯುವ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಅವರಿಗೆ ಹೆಚ್ಚಿನ ಉದ್ಯೋಗವಾಕಾಶ ಕಲ್ಪಿಸಲಾಗುತ್ತಿದೆ. ಜಿಟಿಟಿಸಿ ಸಂಸ್ಥೆಗಳನ್ನು ಉನ್ನತೀಕರಿಸಿ, ಪ್ರವೇಶಾವಕಾಶವನ್ನು 3000 ದಿಂದ 5,000 ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | CM Siddaramaiah: ಕುವೆಂಪು ಏನು ಹೇಳಿದ್ದಾರೆ ಗೊತ್ತಾ? ಕಾರ್ಯದರ್ಶಿಗೆ ʼಭಾಷಾಂತರʼ ಪಾಠ ಮಾಡಿದ ಸಿಎಂ!

ಇನ್ನು ವೈದ್ಯಕೀಯ ಶಿಕ್ಷಣ ಜಿಲ್ಲೆಗಳಲ್ಲಿರುವ ನರ್ಸಿಂಗ್‌ ಡಿಪ್ಲೊಮಾ ಕಾಲೇಜುಗಳ ಕಾರ್ಯನಿರ್ವಹಣೆಯ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು, ಇವುಗಳನ್ನು ಖುದ್ದು ತಪಾಸಣೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.

Exit mobile version