ಬೆಂಗಳೂರು: ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ (Private industry) ʼಸಿʼ ಮತ್ತು ʼಡಿʼ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು (Kannadiga employees) ಕಡ್ಡಾಯಗೊಳಿಸುವ ವಿಧೇಯಕಕ್ಕೆ ನಿನ್ನೆ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು. ಇಂದು ಈ ವಿಚಾರವನ್ನು ಸಿಎಂ ಟ್ವೀಟ್ ಮಾಡಿದ್ದು, ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಇದು ಕುತೂಹಲ ಮೂಡಿಸಿದೆ.
“ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ (Private industry) ʼಸಿʼ ಮತ್ತು ʼಡಿʼ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು (Kannadiga employees) ಕಡ್ಡಾಯಗೊಳಿಸುವ ವಿಧೇಯಕಕ್ಕೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ನಂತರ ಸ್ವಲ್ಪ ಹೊತ್ತಿನಲ್ಲಿ ಅದನ್ನು ಡಿಲೀಟ್ ಮಾಡಿದ್ದರು.
ಉದ್ಯಮಿಗಳ ಜತೆ ಚರ್ಚಿಸಿ ಗೊಂದಲಗಳಿಗೆ ತೆರೆ: ಎಂ ಬಿ ಪಾಟೀಲ
ಖಾಸಗಿ ಉದ್ಯಮಗಳಲ್ಲಿ ಕೂಡ ಕನ್ನಡಿಗರಿಗೆ ಕೆಲವು ಶ್ರೇಣಿಯ ಹುದ್ದೆಗಳನ್ನು ನೂರಕ್ಕೆ ನೂರರಷ್ಟು ಮೀಸಲಿಡುವುದು ಖಚಿತ. ಇದೇ ಸಂದರ್ಭದಲ್ಲಿ ಉದ್ಯಮಗಳ ಹಿತಾಸಕ್ತಿಗಳನ್ನು ಸಹ ಕಾಪಾಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಸಂಬಂಧ ಸರಕಾರ ವಿಧೇಯಕಕ್ಕೆ ಅನುಮೋದನೆ ನೀಡಿದೆ. ಈ ವಿಚಾರವಾಗಿ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ-ಬಿಟಿ, ಕಾನೂನು ಮತ್ತು ಕಾರ್ಮಿಕ ಸಚಿವರುಗಳ ಜೊತೆ ಚರ್ಚಿಸಿ, ಗೊಂದಲಗಳಿಗೆ ತೆರೆ ಎಳೆಯಲಾಗುವುದು ಎಂದರು.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ತಯಾರಿಕಾ ವಲಯ ಮತ್ತು ಕೈಗಾರಿಕಾ ಕ್ರಾಂತಿಯ ಉಜ್ವಲ ಅವಕಾಶಗಳನ್ನು ನಾವು ಕಳೆದುಕೊಳ್ಳುವಂತಿಲ್ಲ. ಸ್ಥಳೀಯರ ಹಿತಾಸಕ್ತಿಗಳನ್ನು ಕಾಪಾಡಲು ಸರಕಾರ ಬದ್ಧವಾಗಿದೆ. ಹಾಗೆಯೇ ಉದ್ಯಮ ವಲಯದವರ ಹಿತಾಸಕ್ತಿಗೂ ಧಕ್ಕೆಯಾಗದಂತೆ ನಿಗಾ ವಹಿಸಲಾಗುವುದು. ಈ ಕುರಿತು ಸಂಬಂಧಪಟ್ಟ ಎಲ್ಲರ ಜೊತೆಗೂ ಮಾತುಕತೆ ನಡೆಸಲಾಗುವುದು. ಈ ವಿಷಯದಲ್ಲಿ ಯಾವುದೇ ಆತಂಕ ಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕವು ಪುರೋಗಾಮಿ ರಾಜ್ಯವಾಗಿದೆ. ‘ಗ್ಲೋಬಲ್ ಚೈನಾ ಒನ್’ ನೀತಿಯಿಂದ ಒದಗಿ ಬಂದಿರುವ ಸದವಕಾಶವನ್ನು ನಾವು ಕಳೆದುಕೊಳ್ಳುವಂತಿಲ್ಲ. ಇದು ಶತಮಾನಕ್ಕೊಮ್ಮೆ ಒದಗಿ ಬರುವ ಅವಕಾಶ. ಕೌಶಲ ಇಲ್ಲದ ಕನ್ನಡಿಗ ಉದ್ಯೋಗಿಗಳನ್ನು ತರಬೇತಿ ಮೂಲಕ ಸಜ್ಜುಗೊಳಿಸುವ ಕೆಲಸವನ್ನೂ ಸರ್ಕಾರ ಮಾಡಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ಅಧಿವೇಶನದಲ್ಲಿ ಮಂಡನೆ: ಲಾಡ್
ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಇದೇ ಅಧಿವೇಶನದಲ್ಲಿ ಈ ವಿಧೇಯಕ ಮಂಡಿಸಿ ಕಾನೂನು ತರುತ್ತೇವೆ ಎಂದು ತಿಳಿಸಿದ್ದಾರೆ. ಕೈಗಾರಿಕೆಗಳ ಮ್ಯಾನೇಜ್ಮೆಂಟ್ ಒಳಗೆ ಶೇಕಡಾ 50ರಷ್ಟು ಕನ್ನಡಿಗರು ಇರಬೇಕು. 70% ನಾನ್ ಮ್ಯಾನೇಜ್ಮೆಂಟ್ ಲೆವಲ್‌ನಲ್ಲಿ ಇರಬೇಕು. ನಮ್ಮಲ್ಲಿ ಎಲ್ಲ ರೀತಿಯ ಸ್ಕೀಲ್ ಇರುವವರು ಇದ್ದಾರೆ. ನಾವು ಹೊರ ರಾಜ್ಯಗಳು ಮತ್ತು ಹೊರ ದೇಶಕ್ಕೆ ಹೋಗಿ ಅಲ್ಲಿ ಕಂಪನಿ ಮಾಡಿದರೆ ಸ್ಥಳೀಯರಿಗೆ ನಾವು ಅವಕಾಶ ಕೊಡುತ್ತೇವೆ. ಅವರು ಸಹ ಇಲ್ಲಿ ಸ್ಥಳೀಯರಿಗೆ ಅವಕಾಶ ಕೊಡಲಿ ಎಂದು ಲಾಡ್ ಹೇಳಿದ್ದಾರೆ.
ಇದಕ್ಕೆ ಕೆಲ ಕಂಪನಿಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ ಕಿರಣ್ ಮಜುಂದಾರ್ ನನಗೆ ವಾಟ್ಸ್ಯಾಪ್ ಮೇಸೆಜ್ ಮಾಡಿದ್ದಾರೆ. ನಾನು ಸಹ ವ್ಯವಹಾರದ ಕುಟುಂಬದಿಂದ ಬಂದವನು. ನನಗೂ ಅದರ ಬಗ್ಗೆ ಮಾಹಿತಿ ಇದೆ. ಕಂಪನಿಗಳಿಗೆ ಇದರಿಂದ ನಷ್ಟ ಆಗುತ್ತೆ ಅನ್ನೋದಾದ್ರೆ ನಮ್ಮ ಬಳಿ ಬಂದು ಅದನ್ನು ಹೇಳಲಿ. ಯಾವ ಈ ರೀತಿಯ ಸಮಸ್ಯೆ ಆಗುತ್ತೆ ಅಂತ ಹೇಳಲಿ. ಅದನ್ನು ಪರಿಶೀಲನೆ ಮಾಡೋಣ. ಇದನ್ನು ರಾತ್ರೋರಾತ್ರಿ ಮಾಡುವುದಿಲ್ಲ. ಕಂಪನಿಗಳ ಹಿತದೃಷ್ಟಿಯಿಂದಲೇ ಮಾಡುತ್ತೇವೆʼ ಎಂದು ಲಾಡ್ ಹೇಳಿದ್ದಾರೆ.
ನಾವು ಸರೋಜಿನಿ ಮಹಿಷಿ ವರದಿಯ ಆಧಾರದ ಮೇಲೆ ಇದನ್ನು ಮಾಡುತ್ತಿದ್ದೇವೆ. ಇಲ್ಲಿಯೇ ಹುಟ್ಟಿರಬೇಕು, ಇಲ್ಲವೇ ಹದಿನೈದು ವರ್ಷಗಳ ಕಾಲ ಇಲ್ಲೇ ಇದ್ದು ಕೆಲಸ ಮಾಡುತ್ತಿದ್ದರೆ ಆತ ಕರ್ನಾಟಕದ ವ್ಯಕ್ತಿ ಆಗ್ತಾನೆ. ಆತನನ್ನು ಸ್ಥಳೀಯ ಎಂದು ಕರೆಯುತ್ತೇವೆ. ಅಂಥಹವರು ಕನ್ನಡಿಗರ ಹೆಸರಿನಲ್ಲಿ ಉದ್ಯೋಗಕ್ಕೆ ಅರ್ಹರು ಎಂದು ಲಾಡ್ ಹೇಳಿದ್ದಾರೆ.
ಇದನ್ನೂ ಓದಿ: CM Siddaramaiah: ಖಾಸಗಿ ಕೈಗಾರಿಕೆಗಳ ಶೇ.100 ಉದ್ಯೋಗ ಕನ್ನಡಿಗರಿಗೆ: ಸಿದ್ದರಾಮಯ್ಯ ಕ್ಯಾಬಿನೆಟ್ ನಿರ್ಣಯ