ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಅಧಿಕಾರಿಗಳನ್ನು (retired employees) ಸೇವೆಯಿಂದ ಕೈ ಬಿಡುವಂತೆ ವಿವಿಧ ಇಲಾಖಾ ಮುಖ್ಯಸ್ಥರಿಗೆ ಮುಖ್ಯಮಂತ್ರಿಗಳ (CM Siddaramaiah) ಮುಖ್ಯ ಕಾರ್ಯದರ್ಶಿ (Chief Secretary) ಪತ್ರ ಬರೆದಿದ್ದಾರೆ. ಸರಕಾರದ (Karnataka Govt) ಮೇಲಿನ ಹಣದ ಹೊರೆ (Fiscal deficit) ತಪ್ಪಿಸಲು ಈ ನಡೆ ಕೈಗೊಳ್ಳಲಾಗಿದೆ.
ಆರ್ಥಿಕ ಶಿಸ್ತು ಜಾರಿ ಮಾಡಲು ನಾನಾ ಕಸರತ್ತು ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ, ಈ ಹಿಂದೆಯೂ ಒಮ್ಮೆ ಈ ಕೆಲಸ ಮಾಡಲು ಸೂಚಿಸಿದ್ದರು. ಸದ್ಯ 20 ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಈ ಬಗ್ಗೆ ಪತ್ರ ಬರೆದಿದ್ದಾರೆ. ವಿವಿಧ ಹುದ್ದೆಗಳಿಗೆ ನೇಮಕವಾಗಿದ್ದ ನಿವೃತ್ತ ಅಧಿಕಾರಿಗಳಿಗೆ ಶಾಕ್ ಆಗುವಂತೆ, ಸರಿಸುಮಾರು 370ಕ್ಕೂ ಹೆಚ್ಚು ನಿವೃತ್ತ ನೌಕರರಿಗೆ ಸರ್ಕಾರದಿಂದ ಖೊಕ್ ಸಿಗುತ್ತಿದೆ.
ಆರ್ಥಿಕ ಹೊರೆ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಜನವರಿ 9ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಹೊರಗುತ್ತಿಗೆಯಲ್ಲಿ ನೇಮಕವಾದ ನಿವೃತ್ತ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆ ಮಾಡಿ; ಆ ಹುದ್ದೆಯಲ್ಲಿ ಸೇವೆಯಲ್ಲಿರುವ ಅಧಿಕಾರಿಗಳನ್ನು ನಿಯೋಜನೆ ಮಾಡಿ ಎಂದು ಸೂಚನೆ ನೀಡಿದ್ದರು. ಸಿಎಂ ಸೂಚನೆ ಮೇರೆಗೆ ಜನವರಿ 23 ಮತ್ತು ಫೆಬ್ರವರಿ 22ರಂದು ಇಲಾಖೆಗಳಿಗೆ ಸಿಎಸ್ ಅವರಿಂದ ಟಿಪ್ಪಣಿ ರವಾನೆ ಆಗಿತ್ತು.
ಆದರೂ ನಿವೃತ್ತ ನೌಕರರನ್ನು ಕೈ ಬಿಡುವ ಪ್ರಕ್ರಿಯೆ ಯಾವುದೇ ಮುನ್ನಡೆ ಕಂಡಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಸಿಎಂ ಸೂಚನೆ ಮೇರೆಗೆ ವಿವಿಧ ಇಲಾಖೆಗಳಿಗೆ ಸಿಎಸ್ ಪತ್ರ ಬರೆದಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ನಿರ್ವಹಿಸಲಾಗುತ್ತಿರುವ ಈ ಕಾರ್ಯಗಳ ಹೆಚ್ಚಿನ ಹೊಣೆ ಈಗಿನ ಇಲಾಖಾ ಅಧಿಕಾರಿಗಳ ಮೇಲೆ ಬೀಳಲಿದೆ.
ಈ ಹಿಂದಿನ ಸಿಎಂ ಟಿಪ್ಪಣಿಯಲ್ಲೇನಿದೆ?
“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಹಿತ ಹಲವು ಇಲಾಖೆ- ಸಚಿವಾಲಯಗಳಲ್ಲಿ ಅನಗತ್ಯವಾಗಿ ಹುದ್ದೆಗಳನ್ನು ಸೃಷ್ಟಿಸಿ, ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ, ನೌಕರರನ್ನು ಸಮಾಲೋಚಕ, ವಿಶೇಷ ಸಂಪನ್ಮೂಲ ವ್ಯಕ್ತಿಗಳೆಂದು ಹಾಗೂ ಕೆಲವು ಗ್ರೂಪ್-ಎ ವೃಂದದ ಹುದ್ದೆಗಳಿಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ನಿವೃತ್ತ ನೌಕರರಿಗೆ ವೇತನ, ವಾಹನ ಸೌಲಭ್ಯ ಇನ್ನಿತರ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗುವುದಲ್ಲದೆ, ಕಾರ್ಯಕ್ಷಮತೆಯ ಗುಣಮಟ್ಟ ಹಾಗೂ ಉತ್ತರದಾಯಿತ್ವದ ಕೊರತೆಯೂ ಎದ್ದು ಕಾಣುತ್ತಿದೆ. ಆದ್ದರಿಂದ, ಸದರಿ ಹುದ್ದೆಗಳಿಗೆ ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ, ನೌಕರರನ್ನು ನಿಯೋಜಿಸಲು ಸೂಚಿಸಲಾಗಿದೆ.”
“ಹಾಗೆಯೇ, ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿವೃತ್ತ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೂಚನೆ ಆಧರಿಸಿ ಅಗತ್ಯ ಕ್ರಮ ಕೈಗೊಂಡು ವರದಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ” ಸಿಎಎಸ್ ನಿರ್ದೇಶನ ನೀಡಿದ್ದಾರೆ.
ನಿವೃತ್ತ ಅಧಿಕಾರಿಗಳನ್ನು ಹೀಗೆ ನೇಮಕ ಮಾಡಿಕೊಳ್ಳುವುದನ್ನು ವಿರೋಧಿಸಿ ಸಚಿವಾಲಯ ನೌಕರರ ಸಂಘವೂ ಹೋರಾಟ ಮಾಡಿತ್ತು. ಸಂಘದ ಹಿಂದಿನ ಅಧ್ಯಕ್ಷ ಪಿ. ಗುರುಸ್ವಾಮಿ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಂ ಹಾಗೂ ಇತರ ಮುಖಂಡರು ಸಾಕಷ್ಟು ಬಾರಿ ಮುಖ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ: NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!