Site icon Vistara News

CM Siddaramaiah: ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಯೋಗಾಸನ ಹಾಕಿದ ಸಿಎಂ; ನಟಿ ಶ್ರೀಲೀಲಾ ನೋಡಲು ಮುಗಿಬಿದ್ದ ಜನ

cm siddaramaiah international yoga day 2024

ಬಳ್ಳಾರಿ: ಬಳ್ಳಾರಿಯ ಜಿಂದಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನ (International Yoga Day 2024) ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ನಟಿ ಶ್ರೀಲೀಲಾ (Actress Sreeleela) ಭಾಗವಹಿಸಿದರು. ಶ್ವಾಸಗುರು ವಚನಾನಂದ ಸ್ವಾಮೀಜಿ (Shwasa Guru Vachanananda Swamiji) ನೇತೃತ್ವದಲ್ಲಿ ಕಾರ್ಯಕ್ರಮ ಹಾಗೂ ಯೋಗಾಸನಗಳ (Yogasana) ಪ್ರದರ್ಶನ ನಡೆಯಿತು.

ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೆಲ ಹೊತ್ತು ವೇದಿಕೆ ಮೇಲೆ ಯೋಗ ಮಾಡಿದರು. ಬಳಿಕ ಸಸಿಗೆ ನೀರು ಎರೆದು ಭಾಷಣ ಮಾಡದೇ ವೇದಿಕೆಯಿಂದ ನಿರ್ಗಮಿಸಿದರು.

“ಯೋಗ ದಿನದಲ್ಲಿ ಭಾಗಿ ಆಗಿದ್ದು ತುಂಬಾ ಸಂತೋಷ ಆಗ್ತಿದೆ. ಸೂರ್ಯನಮಸ್ಕಾರ, ಪ್ರಾಣಾಯಾಮ ಮನುಷ್ಯನಿಗೆ ಬಹಳ ಮುಖ್ಯ. ನಾನು ಮನೆಯಲ್ಲಿ ಇದ್ದಾಗ ಯೋಗ ಮಾಡುತ್ತೇನೆ. ಬಳ್ಳಾರಿಗೆ ಬಂದಿದ್ದು ನನ್ನ ಮನೆಗೆ ಬಂದಂಥ ಅನುಭವ ಆಯ್ತು. ಅಭಿಮಾನಿಗಳು ನನ್ನನ್ನು ಕಂಡು ಸಂತೋಷ ಪಟ್ರು, ನಾನೂ ಸಂತೋಷ ಪಟ್ಟೆ. ಸಂತೋಷ್ ಲಾಡ್, ಮುರುಗೇಶ್ ನಿರಾಣಿ ಅವರಿಗೆ ಧನ್ಯವಾದ” ಎಂದು ನಟಿ ಶ್ರೀಲೀಲಾ ಹೇಳಿದರು.

“ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಅದೃಷ್ಟ. ಯಾವೆಲ್ಲ ಸಿನಿಮಾ ಮಾಡ್ತಿದ್ದಿಯಾ ಅಂತ ಸಿದ್ದರಾಮಯ್ಯ ಕೇಳಿದ್ರು. ದೊಡ್ಡವರ ಜೊತೆಗೆ ವೇದಿಕೆ ಹಂಚಿಕೊಂಡಾಗ ಮತ್ತಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ” ಎಂದು ಶ್ರೀಲೀಲಾ ನುಡಿದರು. ಈ ಸಂದರ್ಭದಲ್ಲಿ, ನಟ ದರ್ಶನ್ ವಿರುದ್ಧ ಕೇಳಿಬಂದ ಕೊಲೆ ಆರೋಪದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶ್ರೀಲೀಲಾ ಉತ್ತರ ನೀಡಲು ಹಿಂದೇಟು ಹಾಕಿದರು. “ಕೇವಲ ಯೋಗ ದಿನದ ಬಗ್ಗೆ ಮಾತ್ರ ಪ್ರಶ್ನೆ ಕೇಳಿ” ಎಂದು ಈ ಸಂದರ್ಭದಲ್ಲಿ ವಚನಾನಂದ ಸ್ವಾಮೀಜಿ ತಡೆದರು.

ನಟಿ ಶ್ರೀಲೀಲಾಗೆ ಸಿಎಂ ಶಾಲು ಹೊದಿಸಿ ಸನ್ಮಾನಿಸಿದರು. ನಟಿ ಶ್ರೀಲೀಲಾ ತೆಗೆದ ಸೆಲ್ಫಿಗೆ ಸಿಎಂ, ಸಂತೋಷ್ ಲಾಡ್ ಪೋಸ್ ಕೊಟ್ಟರು. ಅಕ್ಕಮಹಾದೇವಿ ಕೈಬರಹದ ಫೋಟೋ ಅನ್ನು ಸಿಎಂ ಬಿಡುಗಡೆ ಮಾಡಿದರು. ವೇದಿಕೆ ಮೇಲಿದ್ದ ನಟಿ ಶ್ರೀಲೀಲಾ ನೋಡಲು ಜನ ಮುಗಿಬಿದ್ದರು. ವೇದಿಕೆ ಮೇಲೆ ನಿಂತು ಶ್ರೀಲೀಲಾ ಕೈಬೀಸುತ್ತಿದ್ದಂತೆ ಅಭಿಮಾನಿಗಳು ಸಿಳ್ಳೆ, ಕೇಕೆ ಹೊಡೆದು ಸಂಭ್ರಮಿಸಿದರು.

ಜೆಎಸ್‌ಡಬ್ಲ್ಯೂ ಟೌನ್‌ಶಿಪ್‌ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಅಧಿಕ ಜನರು ಭಾಗಿಯಾದರು. ಸಚಿವ ಸಂತೋಷ್ ಲಾಡ್, ಎಂಪಿ ತುಕಾರಾಂ, ಮಾಜಿ ಸಚಿವ ಮುರುಗೇಶ್ ನಿರಾಣಿ, ಕೂಡ್ಲಿಗಿ ಶಾಸಕ ಶ್ರೀನಿವಾಸ್, ನಟಿ ಶ್ರೀಲೀಲಾ ಸಾಥ್ ನೀಡಿದರು. ʼಸ್ವಂತ ಮತ್ತು ಸಮಾಜಕ್ಕಾಗಿ ಯೋಗʼ ಧ್ಯೇಯ ವಾಕ್ಯದೊಂದಿಗೆ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ.

ಯೋಗ ನಿತ್ಯಜೀವನದ ಭಾಗವಾಗಲಿ: ನರೇಂದ್ರ ಮೋದಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (jammu and kashmir) ಶ್ರೀನಗರದಲ್ಲಿ ಇಂದು ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga Day 2024) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಯೋಗವನ್ನು ಎಲ್ಲರೂ ತಮ್ಮ ದೈನಂದಿನ ಜೀವನದ ಭಾಗವಾಗಿಸಲು ಕರೆ ನೀಡಿದರು.

“ವಿಶ್ವದಾದ್ಯಂತ ಯೋಗಾಭ್ಯಾಸ ಮಾಡುವವರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಯೋಗದ ಮೂಲಕ ನಾವು ಹೆಚ್ಚಿನ ಶಕ್ತಿಯನ್ನು ಪಡೆಯಬಹುದು. ಯೋಗ ದಿನದಂದು ದೇಶದ ಜನರಿಗೆ ಮತ್ತು ವಿಶ್ವದ ಮೂಲೆ ಮೂಲೆಗಳಲ್ಲಿ ಯೋಗ ಮಾಡುವ ಜನರಿಗೆ ನಾನು ಶುಭಾಶಯಗಳನ್ನು ಹೇಳುತ್ತೇನೆ. ಅಂತಾರಾಷ್ಟ್ರೀಯ ಯೋಗ ದಿನವು 10 ವರ್ಷಗಳ ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ. 2014ರಲ್ಲಿ ನಾನು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಸ್ತಾಪಿಸಿದೆ. ಭಾರತದ ಈ ಪ್ರಸ್ತಾಪವನ್ನು 177 ರಾಷ್ಟ್ರಗಳು ಬೆಂಬಲಿಸಿದವು. ಅಂದಿನಿಂದ ಯೋಗ ದಿನವು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ” ಎಂದು ಮೋದಿ ನುಡಿದರು.

“ನಾನು ವಿದೇಶದಲ್ಲಿರುವಾಗ ಜಾಗತಿಕ ನಾಯಕರು ಯೋಗದ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಾರೆ. ನಾವು 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ, ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಲು ನಾನು ಪ್ರತಿಯೊಬ್ಬರನ್ನು ಕೋರುತ್ತೇನೆ” ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: International Yoga Day 2024: ಯೋಗ ದಿನಚರಿಯ ಭಾಗವಾಗಲಿ: ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ

Exit mobile version