ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ (Jobs for Kannadigas) ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ (Private industry) ʼಸಿʼ ಮತ್ತು ʼಡಿʼ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು (Kannadiga employees) ಕಡ್ಡಾಯಗೊಳಿಸುವ ವಿಧೇಯಕಕ್ಕೆ (Bill) ನಿನ್ನೆ ನಡೆದ ಸಚಿವ ಸಂಪುಟ ಸಭೆಯು (Cabinet meeting) ಒಪ್ಪಿಗೆ ನೀಡಿದೆ.
ʼಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆʼ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಭಾಗ್ಯ ದೊರೆತಿದ್ದು, ಸಿ ಹಾಗೂ ಡಿ ದರ್ಜೆಯ ನೌಕರರ ನೇಮಕಾತಿಯಲ್ಲಿ ಕನ್ನಡಿಗರ ನೇಮಕ ಕಡ್ಡಾಯವಾಗಲಿದೆ. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರ ಕಡೆಗಣನೆ ಆಗುತ್ತಿದೆ ಎಂಬ ಆರೋಪಗಳಿವೆ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸುವ ವಿಧೇಯಕಕ್ಕೆ ಕ್ಯಾಬಿನೆಟ್ ಅಸ್ತು ಎಂದಿದೆ.
ಸ್ವಾಭಿಮಾನ ಎತ್ತಿಹಿಡಿಯುವ ಉದ್ದೇಶ: ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಈ ಬಗ್ಗೆ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯುವ ಉದ್ದೇಶದಿಂದ ಈ ತೀರ್ಮಾನ ಮಾಡಿದೆ ಎಂದಿದ್ದಾರೆ. ಕನ್ನಡ ಬೋರ್ಡ್, ಭಾಷೆ, ಧ್ವಜ ಬಳಕೆ, ನಮ್ಮ ಸಂಸ್ಕೃತಿ, ಕಡತಗಳಲ್ಲಿ ಕನ್ನಡ ಬಳಕೆ, ಮುಂದೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಇವೆಲ್ಲವೂ ಕನ್ನಡದ ವಿಷಯ. ಕಡ್ಡಾಯವಾಗಿ ಕನ್ನಡಿಗರಿಗೆ ಇಷ್ಟು ಪರ್ಸೆಂಟ್ ಇರಬೇಕು, ಇದರ ಬಗ್ಗೆ ತೀರ್ಮಾನ ನಾವು ಮಾಡಿದ್ದೇವೆ. ವಿಧೇಯಕ ತರ್ತಾ ಇದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.
ಈ ಬಗ್ಗೆ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ವಿರೋಧದ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ʼತಾಂತ್ರಿಕ ಸಮಸ್ಯೆ ಇದ್ದ ಕಡೆ ಏನೂ ಮಾಡಲಾಗದು. ನಾವು ಕೂಡ ಅರ್ಥ ಮಾಡಿಕೊಳ್ಳುತ್ತೇವೆ. ಅವರು ಕೂಡ ರಾಜ್ಯದಿಂದಲೇ ಬೆಳೆದಿರುವವರು. ಟೆಕ್ನಿಕಲ್ ಬೇಕಾಗುವ ಕಡೆ ರಿಯಾಯಿತಿ ಕೊಡುತ್ತೇವೆ. ಸರ್ಕಾರದ ಗಮನಕ್ಕೆ ಅವರು ತರಬೇಕುʼ ಎಂದಿದ್ದಾರೆ.
ಇದೇ ಅಧಿವೇಶನದಲ್ಲಿ ಮಂಡನೆ: ಲಾಡ್
ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad), ಇದೇ ಅಧಿವೇಶನದಲ್ಲಿ ಈ ವಿಧೇಯಕ ಮಂಡಿಸಿ ಕಾನೂನು ತರುತ್ತೇವೆ ಎಂದು ತಿಳಿಸಿದ್ದಾರೆ. ಕೈಗಾರಿಕೆಗಳ ಮ್ಯಾನೇಜ್ಮೆಂಟ್ ಒಳಗೆ ಶೇಕಡಾ 50ರಷ್ಟು ಕನ್ನಡಿಗರು ಇರಬೇಕು. 70% ನಾನ್ ಮ್ಯಾನೇಜ್ಮೆಂಟ್ ಲೆವಲ್‌ನಲ್ಲಿ ಇರಬೇಕು. ನಮ್ಮಲ್ಲಿ ಎಲ್ಲ ರೀತಿಯ ಸ್ಕೀಲ್ ಇರುವವರು ಇದ್ದಾರೆ. ನಾವು ಹೊರ ರಾಜ್ಯಗಳು ಮತ್ತು ಹೊರ ದೇಶಕ್ಕೆ ಹೋಗಿ ಅಲ್ಲಿ ಕಂಪನಿ ಮಾಡಿದರೆ ಸ್ಥಳೀಯರಿಗೆ ನಾವು ಅವಕಾಶ ಕೊಡುತ್ತೇವೆ. ಅವರು ಸಹ ಇಲ್ಲಿ ಸ್ಥಳೀಯರಿಗೆ ಅವಕಾಶ ಕೊಡಲಿ ಎಂದು ಲಾಡ್ ಹೇಳಿದ್ದಾರೆ.
ಇದಕ್ಕೆ ಕೆಲ ಕಂಪನಿಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ ಕಿರಣ್ ಮಜುಂದಾರ್ ನನಗೆ ವಾಟ್ಸ್ಯಾಪ್ ಮೇಸೆಜ್ ಮಾಡಿದ್ದಾರೆ. ನಾನು ಸಹ ವ್ಯವಹಾರದ ಕುಟುಂಬದಿಂದ ಬಂದವನು. ನನಗೂ ಅದರ ಬಗ್ಗೆ ಮಾಹಿತಿ ಇದೆ. ಕಂಪನಿಗಳಿಗೆ ಇದರಿಂದ ನಷ್ಟ ಆಗುತ್ತೆ ಅನ್ನೋದಾದ್ರೆ ನಮ್ಮ ಬಳಿ ಬಂದು ಅದನ್ನು ಹೇಳಲಿ. ಯಾವ ಈ ರೀತಿಯ ಸಮಸ್ಯೆ ಆಗುತ್ತೆ ಅಂತ ಹೇಳಲಿ. ಅದನ್ನು ಪರಿಶೀಲನೆ ಮಾಡೋಣ. ಇದನ್ನು ರಾತ್ರೋರಾತ್ರಿ ಮಾಡುವುದಿಲ್ಲ. ಕಂಪನಿಗಳ ಹಿತದೃಷ್ಟಿಯಿಂದಲೇ ಮಾಡುತ್ತೇವೆʼ ಎಂದು ಲಾಡ್ ಹೇಳಿದ್ದಾರೆ.
ನಾವು ಸರೋಜಿನಿ ಮಹಿಷಿ ವರದಿಯ ಆಧಾರದ ಮೇಲೆ ಇದನ್ನು ಮಾಡುತ್ತಿದ್ದೇವೆ. ಇಲ್ಲಿಯೇ ಹುಟ್ಟಿರಬೇಕು, ಇಲ್ಲವೇ ಹದಿನೈದು ವರ್ಷಗಳ ಕಾಲ ಇಲ್ಲೇ ಇದ್ದು ಕೆಲಸ ಮಾಡುತ್ತಿದ್ದರೆ ಆತ ಕರ್ನಾಟಕದ ವ್ಯಕ್ತಿ ಆಗ್ತಾನೆ. ಆತನನ್ನು ಸ್ಥಳೀಯ ಎಂದು ಕರೆಯುತ್ತೇವೆ. ಅಂಥಹವರು ಕನ್ನಡಿಗರ ಹೆಸರಿನಲ್ಲಿ ಉದ್ಯೋಗಕ್ಕೆ ಅರ್ಹರು ಎಂದು ಲಾಡ್ ಹೇಳಿದ್ದಾರೆ.
ಇದನ್ನೂ ಓದಿ: GT World Mall: ಅನ್ನದಾತನಿಗೆ ಅವಮಾನ ಮಾಡಿದ ಜಿಟಿ ಮಾಲ್ ಮುಂದೆ ಪಂಚೆ ಉಟ್ಟು ಪ್ರತಿಭಟನೆ, ಕ್ಷಮೆ ಕೇಳಿದ ಮಾಲೀಕ