Site icon Vistara News

CM Siddaramaiah: ಸರ್ಕಾರಿ ನೌಕರರ ಹಿತಾಸಕ್ತಿ ಕಾಯಲು ನಾನು ಸದಾ ಸಿದ್ಧ: ಸಿಎಂ ಸಿದ್ದರಾಮಯ್ಯ

cm siddaramaiah 1

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿ ಎರಡು ವೇತನ ಆಯೋಗದ (Pay Commission) ಶಿಫಾರಸ್ಸುಗಳನ್ನು ಜಾರಿ ಮಾಡಿದ್ದು, ಸರ್ಕಾರಿ ನೌಕರರ (Govt Employees) ಹಿತಾಸಕ್ತಿಯನ್ನು ಕಾಯಲು ಸದಾ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ನುಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ʼಮುಖ್ಯಮಂತ್ರಿಗಳಿಗೆ ನಮ್ಮ‌ ಅಭಿನಂದನೆʼ ಕಾರ್ಯಕ್ರಮದಲ್ಲಿ ಬೃಹತ್ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇದು ನಿಮ್ಮೆಲ್ಲರ ಸರ್ಕಾರ.‌ ಸರ್ಕಾರಿ ನೌಕರರ ಹಿತ ಕಾಯಲು ನಾನು ಮತ್ತು ನಮ್ಮ ಸಚಿವ ಸಂಪುಟ ಸದಾ ಸಿದ್ಧವಿದೆ ಎಂದರು.

ಸರ್ಕಾರ ಅಂದ್ರೆ ಎಲ್ಲಾ ಸರ್ಕಾರಿ ನೌಕರರೂ ಸೇರಿರ್ತಾರೆ. ನೀವೆಲ್ಲಾ ಒಟ್ಟು ಸೇರಿದರೆನೇ ಸರ್ಕಾರ. ಅಂಬೇಡ್ಕರ್, ಗಾಂಧಿ, ಬಸವಾದಿ ಶರಣರು ಸಮ‌ ಸಮಾಜದ ಕನಸು ಕಂಡಿದ್ದರು‌. ಇವರೆಲ್ಲರ ಕನಸನ್ನು ನನಸು ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲೂ ಇದೆ. ಇದಕ್ಕಾಗಿ ಶ್ರಮಿಸೋಣ ಎಂದು ಅವರು ಕರೆ ನೀಡಿದರು.

ಸಮ ಸಮಾಜದ ಆಶಯದಿಂದ ಸರ್ಕಾರ ಜಾರಿ ಮಾಡುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ನಿಮ್ಮಗಳ ಮೇಲಿದೆ. ಶೋಷಿತ ಸಮುದಾಯಗಳ ಮನೆ ಬಾಗಿಲಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಿದಾಗ ಮಾತ್ರ ನಮ್ಮ ನಿಮ್ಮ ಶ್ರಮ ಸಾರ್ಥಕವಾಗುತ್ತದೆ. ಹೀಗೆ ನಾವು ನೀವು ಸೇರಿ ಸ್ವಾಸ್ಥ್ಯ ಸಮಾಜ ರೂಪಿಸಬೇಕಿದೆ ಎಂದರು.

ನಿಮ್ಮೆಲ್ಲರ ಬೇಡಿಕೆಯಂತೆ OPS ಮತ್ತು ಆರೋಗ್ಯ ಸಂಜೀವಿನಿ ಕಾರ್ಯಕ್ರಮದ ಬಗ್ಗೆಯೂ ಸರ್ಕಾರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು ನಿಮ್ಮೆಲ್ಲರ ಸರ್ಕಾರ. ನಾನು ನಿಮ್ಮ ಜೊತೆ ಇರ್ತೇನೆ. ನಾವು-ನೀವು ಒಟ್ಟಾಗಿ ಜನರ ಜೊತೆ ಇದ್ದು, ಜನರ ಋಣ ತೀರಿಸೋಣ ಎಂದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಶಾಸಕರಾದ ಪ್ರಕಾಶ್ ರಾಥೋಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿ ರಾಜ್ಯ ಸರ್ಕಾರಿ ನೌಕರರ ಸಂಘದ ನಾನಾ ವಿಭಾಗಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿ ಅವರು ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: CM Siddaramaiah: ಆಪಲ್‌ ಫೋನ್‌ ಬಿಡಿಭಾಗ ತಯಾರಕ ಫಾಕ್ಸ್‌ಕಾನ್ ಸಂಸ್ಥೆ ಅಧ್ಯಕ್ಷರೊಂದಿಗೆ ಸಿದ್ದರಾಮಯ್ಯ ಚರ್ಚೆ

Exit mobile version