ವಿಜಯಪುರ: ಮುಡಾ ಹಗರಣದಲ್ಲಿ (MUDA Scam, MUDA Case) ಸದ್ಯಕ್ಕೆ ನಿರಾಳರಾಗಿರುವ ಸಿಎಂ ಸಿದ್ದರಾಮಯ್ಯ (CM Siddaramaiah), ಇಂದು ಆಲಮಟ್ಟಿಯಲ್ಲಿರುವ (Alamatti) ಕೃಷ್ಣಾ ಅಣೆಕಟ್ಟಿಗೆ (Krishna Dam) ತೆರಳಿ ಗಂಗಾಪೂಜೆ ಮಾಡಿ ಬಾಗಿನ ಅರ್ಪಿಸಲಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರೂ ಜೊತೆಗೂಡಲಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ ಬಹಾದ್ದೂರ್ ಶಾಸ್ರೀ ಸಾಗರ ಜಲಾಶಯ ತುಂಬಿದ್ದು, ಈ ಹಿನ್ನೆಲೆಯಲ್ಲಿ ಗಂಗಾಪೂಜೆ ನಡೆಯಲಿದೆ. ಜಲಸಂಪನ್ಮೂಲ ಇಲಾಖೆ ಹಾಗೂ ಕೆ.ಬಿ.ಜೆ.ಎನ್.ಎಲ್ ವತಿಯಿಂದ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಸಮಾರಂಭ ಆಯೋಜನೆಯಾಗಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಾಗಿನ ಅರ್ಪಣೆಗೆ ಸಿದ್ಧತಾ ಕಾರ್ಯ ಪೂರ್ಣವಾಗಿದೆ.
ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10 ಗಂಟೆಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು, 10.50ಕ್ಕೆ ಕೊಪ್ಪಳದ ಗಿಣಿಗೇರಾ ಏರ್ ಸ್ಟ್ರಿಪ್‌ಗೆ ಆಗಮಿಸಲಿದ್ದಾರೆ. ಅಲ್ಲಿಂದ 11ಕ್ಕೆ ರಸ್ತೆ ಮೂಲಕ ಕುಷ್ಟಗಿ, ಇಲಕಲ್ ಮಾರ್ಗವಾಗಿ 12.30ಕ್ಕೆ ಆಲಮಟ್ಟಿ ತಲುಪಲಿದ್ದಾರೆ.
ಮದ್ಯಾಹ್ನ 1 ಗಂಟೆಗೆ ಕೃಷ್ಣೆಯ ಜಲಧಿಗೆ ಆಲಮಟ್ಟಿ ಜಲಾಶಯದಲ್ಲಿ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಶಿವಾನಂದ ಪಾಟೀಲ, ಎಂ ಬಿ ಪಾಟೀಲ, ಆರ್.ಬಿ.ತಿಮ್ಮಾಪೂರ ಹಾಗೂ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ ಶಾಸಕರು, ಇನ್ನಿತರ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3ಕ್ಕೆ ಆಲಮಟ್ಟಿಯಿಂದ ಇಲಕಲ್, ಕುಷ್ಟಗಿ ರಸ್ತೆ ಮಾರ್ಗವಾಗಿ ಹೊರಟು, 4.30 ಕ್ಕೆ ಕೊಪ್ಪಳದ ಗಿಣಿಗೇರಾ ಏರ್ ಸ್ಟ್ರಿಪ್ ತಲುಪಿ, ಅಲ್ಲಿಂದ ನಿಗದಿತ ವಿಶೇಷ ವಿಮಾನದ ಮೂಲಕ ಪ್ರಯಾಣಿಸಿ ಸಾಯಂಕಾಲ 5.30ಕ್ಕೆ ಬೆಂಗಳೂರು ತಲುಪಲಿದ್ದಾರೆ.
ಈ ನಡುವೆ, ರಾಜ್ಯಪಾಲರು ಅನುಮತಿ ನೀಡಿದ ಮುಡಾ ಕೇಸ್ ತನಿಖೆ ಪ್ರಕರಣದಲ್ಲಿ ಸಿಎಂಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಈ ಕುರಿತ ವಿಚಾರಣೆಯನ್ನು ಆ.29ಕ್ಕೆ ಮುಂದೂಡಿದೆ. ಅರ್ಜಿ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ಬಳಿಕ ಮಾತನಾಡಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ದೂರುದಾರರು ಹಾಗೂ ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ. ಪಿಸಿ ಆಕ್ಟ್ 17ಎ ಅಡಿ ಅನುಮತಿ ಪ್ರಶ್ನಿಸಲಾಗಿದ್ದು, ರಿಟ್ ಅರ್ಜಿಯೊಂದಿಗೆ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ. ರಾಜ್ಯಪಾಲರು ವಿವೇಚನಾರಹಿತವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ. ಇನ್ನು ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು ಎಂದು ಪ್ರಭುಲಿಂಗ ನಾವದಗಿ ವಾದಿಸಿದ್ದಾರೆ. ಎಲ್ಲಾ ವಾದವನ್ನು ಕೋರ್ಟ್ ಆಲಿಸಿದ್ದು, ಹೈಕೋರ್ಟ್ ಮುಂದಿನ ಆದೇಶ ನೀಡುವವರೆಗೂ ಅಂದರೆ ಆಗಸ್ಟ್ 29ರವರೆಗೆ ವಿಚಾರಣೆ ಮುಂದೂಡಬೇಕು ಎಂದು ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚನೆ ನೀಡಿದರು.
ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಾದ ಮಂಡಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು. ಸಿಎಂ ಸಿದ್ದರಾಮಯ್ಯ ಪರ ವಕೀಲ ಮನು ಸಿಂಘ್ವಿ ವಾದ ಮಂಡಿಸಿ, ಪ್ರಕರಣದಲ್ಲಿ ಸಂವಿಧಾನಾತ್ಮಕ ಮತ್ತು ಆಡಳಿತಾತ್ಮಕ ವಿಚಾರಗಳಿವೆ. ನಾಳೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ಬಾಕಿ ಇದೆ. ಗವರ್ನರ್ ಆದೇಶ ನೀಡುವ ಮುನ್ನ ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಆದರೆ, ಗವರ್ನರ್ ಯಾವ ಆಧಾರ ಇಲ್ಲದೆಯೂ ಅನುಮತಿ ನೀಡಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: CM Siddaramaiah: ಹೊಟ್ಟೆಕಿಚ್ಚಿನಿಂದಾಗಿ ಬಿಜೆಪಿಯವರಿಂದ ನನ್ನ ವಿರುದ್ಧ ಸುಳ್ಳು ಆರೋಪ; ಸಿದ್ದರಾಮಯ್ಯ