Site icon Vistara News

Congress Guarantee: ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ ಸರ್ಕಾರ ಮಾಡಿದ ಖರ್ಚು ಎಷ್ಟು ಸಾವಿರ ಕೋಟಿ?

Congress Guarantee

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೇ 20ಕ್ಕೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಸರ್ಕಾರದ ಸಾಧನೆಗಳ ಬಗ್ಗೆ ಕೈ ನಾಯಕರು ಸ್ಮರಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ಘೋಷಿಸಿದ್ದ 5 ಗ್ಯಾರಂಟಿಗಳನ್ನು (Congress Guarantee) ಜಾರಿ ಮಾಡಿರುವ ಕಾಂಗ್ರೆಸ್‌ ಸರ್ಕಾರ, ಪಂಚ ಗ್ಯಾರಂಟಿಗಳು ಜಾರಿಯಾದಾಗಿನಿಂದ ಈವರೆಗೆ ಬಳಕೆಯಾಗಿರುವ ಅನುದಾನದ ಮಾಹಿತಿ ಬಿಡುಗಡೆ ಮಾಡಿದೆ.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಲ್ಲಿ 5 ಕೆಜಿ ಅಕ್ಕಿಯ ಜತೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ತಲಾ 170 ರೂ. ನೀಡುವ ʼಅನ್ನಭಾಗ್ಯ ಯೋಜನೆʼ, ಮನೆ ಯಜಮಾನಿಗೆ ಮಾಸಿಕ 2000 ರೂ. ಮಾಸಾಶನ ನೀಡುವ ʼಗೃಹ ಲಕ್ಷ್ಮಿ ಯೋಜನೆʼ, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್‌ ಒದಗಿಸುವ ʼಗೃಹ ಜ್ಯೋತಿ ಯೋಜನೆʼ, ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ʼಶಕ್ತಿ ಯೋಜನೆʼಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ. ಇನ್ನು ಐದನೇ ಗ್ಯಾರಂಟಿಯಾದ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ., ಡಿಪ್ಲೊಮಾ ಮಾಡಿದವರಿಗೆ 1500 ರೂ. ನೀಡುವ ಯುವ ನಿಧಿ ಯೋಜನೆ ಅನುಷ್ಠಾನದ ಹಂತದಲ್ಲಿದೆ.

ಇದನ್ನೂ ಓದಿ | Prajwal Revanna Case: ಎಸ್‌ಐಟಿ ಕೇಸ್‌ಗಳಿಗಾಗಿ ಇನ್ನೊಬ್ಬ ಎಸ್‌ಪಿಪಿ ನೇಮಕ; ಹೈಕೋರ್ಟ್‌ನಲ್ಲಿ ವಾದಕ್ಕೆ ಸಜ್ಜಾದ ಸರ್ಕಾರ

ಗ್ಯಾರಂಟಿಗಳಿಗೆ ಆಗಿರುವ ವೆಚ್ಚ

ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ ಮೇ 19ರವರೆಗೆ ಬಳಕೆಯಾಗಿರುವ ಅನುದಾನದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ 23,098 ಕೋಟಿ ರೂ., ಗೃಹಜ್ಯೋತಿ ಯೋಜನೆಗೆ 10,207 ಕೋಟಿ ರೂ., ಶಕ್ತಿ ಯೋಜನೆಗೆ 4,054 ಕೋಟಿ ರೂ., ಅನ್ನ ಭಾಗ್ಯ ಯೋಜನೆಗೆ 7,364 ಕೋಟಿ ರೂ. ಹಾಗೂ ಯುವ ನಿಧಿ ಯೋಜನೆಗೆ 93 ಕೋಟಿ ರೂ. ವೆಚ್ಚವಾಗಿದೆ. ಐದೂ ಯೋಜನೆಗಳಿಗೆ ಒಟ್ಟು 44,816 ಕೋಟಿ ರೂ.ಗಳು ಖರ್ಚಾಗಿದೆ. ಇನ್ನು ಶಕ್ತಿ ಯೋಜನೆಯಲ್ಲಿ 211.5 ಕೋಟಿ ಟ್ರಿಪ್‌ಗಳಲ್ಲಿ ಮಹಿಳೆಯರು ಸರ್ಕಾರಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ.

ಏಳು ಕೋಟಿ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು: ಸಿಎಂ

ಕಾಂಗ್ರೆಸ್‌ ಸರ್ಕಾರ 1 ವರ್ಷದ ಪೂರೈಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರವನ್ನು ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು ಅಭದ್ರತೆಯ ಆತಂಕ ಇರಲೇಬಾರದೆಂದು ಸ್ಪಷ್ಟವಾದ ಬಹುಮತವನ್ನು ಕೊಟ್ಟು ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದು ರಾಜ್ಯದ ಮತದಾರರ ಪ್ರಜ್ಞಾವಂತಿಕೆ ಎಂದು ತಿಳಿಸಿದ್ದಾರೆ.

ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದಗಳಿಂದಾಗಿ ನಲುಗಿಹೋಗಿದ್ದ ರಾಜ್ಯದ ಆಡಳಿತವನ್ನು ಮತ್ತೆ ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿಗೆ ಹೆಗಲು ಕೊಟ್ಟಾಗ ಅದರ ಭಾರದ ಅರಿವು ನಮಗಿತ್ತು. ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಲು ನಾವು ಹೋರಾಟವನ್ನೇ ಮಾಡಬೇಕಾಯಿತು. ನಮ್ಮ ಕೈಗಳ ಬಲಕುಂದಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಕೇಂದ್ರ ಸರ್ಕಾರದ ಜೊತೆಗೂಡಿ ರಾಜ್ಯ ಬಿಜೆಪಿ ನಡೆಸಿದೆ. ಇಂತಹ ಸವಾಲುಗಳ ನಡುವೆಯೂ ನಮ್ಮ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ನಮ್ಮ ಮಾತು ಉಳಿಸಿಕೊಂಡಿದ್ದೇವೆ. ನಮ್ಮ ಸಂಕಲ್ಪ ಕೇವಲ ಗ್ಯಾರಂಟಿ ಯೋಜನೆಗಳಲ್ಲ, ಅಭಿವೃದ್ದಿಯ ರಥವನ್ನು ಗ್ಯಾರಂಟಿಗಳ ಆಚೆಗೆ ಕೊಂಡೊಯ್ದು ರಾಜ್ಯವನ್ನು ಸುಖಿ ಮತ್ತು ಸ್ವಾವಲಂಬಿಯನ್ನಾಗಿ ಮಾಡುವುದು.

ಸಾಧನೆಯ ಬಲದಲ್ಲಿ ನಮ್ಮನ್ನು ಎದುರಿಸಲಾಗದ ನಮ್ಮ ವಿರೋಧಪಕ್ಷಗಳು ಜಾತಿ -ಧರ್ಮಗಳನ್ನು ರಾಜಕೀಯದ ಅಸ್ತ್ರಗಳನ್ನಾಗಿ ಬಳಸಿಕೊಂಡು ನಮ್ಮ ಮೇಲೆ ಎರಗುತ್ತಿದ್ದಾರೆ. ರಾಜ್ಯದ ಪ್ರಜ್ಞಾವಂತ ಜನತೆ ಈ ವಿಭಜನಕಾರಿ ಮತ್ತು ವಿನಾಶಕಾರಿ ಅಜೆಂಡಾಗೆ ಬಲಿಯಾಗದೆ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳಲು ಸಹಕರಿಸಬೇಕೆಂದಷ್ಟೇ ನನ್ನ ಕೋರಿಕೆ ಎಂದು ಹೇಳಿದ್ದಾರೆ.ʼ

ಇದನ್ನೂ ಓದಿ | Reservation in Outsourcing: ಇನ್ನು ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ; ಸಿದ್ದರಾಮಯ್ಯ ಸರ್ಕಾರದ ಮಹತ್ವದ ಆದೇಶ

ಉಳಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ದಿಯ ಕಾಯಕವನ್ನು ನಮಗೆ ಬಿಟ್ಟು ಬಿಡಿ. ನುಡಿದಂತೆ ನಡೆದಿದ್ದೆವು, ನುಡಿದಂತೆ ನಡೆಯುತ್ತಿರುವೆವು, ಮುಂದೆಯೂ ನುಡಿದಂತೆಯೇ ನಡೆಯುವೆವು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | CM Siddaramaiah: ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕಾರ ಕಾಂಗ್ರೆಸ್‌ಗೆ ಎಷ್ಟು ಸೀಟ್‌? ಸಂಪುಟ ಪುನಾರಚನೆ ಇಲ್ಲ!

ಅಭಿವೃದ್ಧಿ ಮತ್ತು ಜನರ ಕಲ್ಯಾಣವನ್ನೇ ಮೂಲಮಂತ್ರವಾಗಿಟ್ಟುಕೊಂಡಿರುವ ನಮ್ಮ ಸರ್ಕಾರವು ಒಂದು ವರ್ಷದ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿದೆ. ಈ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೆ ನಾಡಿನ ಅಭಿವೃದ್ಧಿಯ ರಥವನ್ನು ಸಮಾನವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ನುಡಿದಂತೆ ನಡೆಯುತ್ತಿರುವ ನಮಗೆ ನಿಮ್ಮ ಬೆಂಬಲ – ಸಹಕಾರ ಮುಂದೆಯೂ ಇರಲಿ ಎಂದು ಆಶಿಸುತ್ತಾ, ಈ ಒಂದು ವರ್ಷದ ಅವಧಿಯಲ್ಲಿ ನಮ್ಮ ಕೆಲವು ಪ್ರಮುಖ ಸಾಧನೆಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Exit mobile version