Site icon Vistara News

ವಿಸ್ತಾರ ಸಂಪಾದಕೀಯ: ಪ್ರತಿಪಕ್ಷ ನಾಯಕತ್ವ ವಹಿಸಲು ಕಾಂಗ್ರೆಸಿಗಿದು ನಿರ್ಣಾಯಕ ಅವಕಾಶ

Congress has a crucial opportunity to lead the opposition

#image_title

ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ಬೆನ್ನಲ್ಲೇ ಛತ್ತೀಸ್‌ಗಢದ ರಾಜಧಾನಿ ರಾಯಪುರದಲ್ಲಿ ಕಾಂಗ್ರೆಸ್ ಪಕ್ಷದ 85ನೇ ಮಹಾ ಅಧಿವೇಶನ (Congress plenaty Session) ಯಶಸ್ವಿಯಾಗಿ ನಡೆದಿದೆ. ಪಕ್ಷವನ್ನು ಬಲಪಡಿಸಿ 2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ದಿಕ್ಸೂಚಿಯೊಂದಿಗೆ ಮೂರು ದಿನ ಚಿಂತನ ಮಂಥನ ನಡೆಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾಧಿವೇಶನದ ಸಮಾರೋಪದಲ್ಲಿ, ”ಮಹಾಧಿವೇಶನ ಮುಕ್ತಾಯಗೊಂಡಿದೆ. ಆದರೆ, ಹೊಸ ಕಾಂಗ್ರೆಸ್‌ಗೆ ನಾಂದಿ ಹಾಡಿದೆ,” ಎಂದು ಹೇಳಿರುವುದು ಕಾಂಗ್ರೆಸ್‌ ಮುಂಬರುವ ದಿನಗಳಲ್ಲಿ ಯಾವ ಹಾದಿಯಲ್ಲಿ ಸಾಗಲಿದೆ ಎಂಬುದನ್ನು ಪ್ರತಿಫಲಿಸಿದೆ. ಜತೆಗೆ, ಪೂರ್ವ ಮತ್ತು ಪಶ್ಚಿಮ ಭಾರತವನ್ನು ಸಂಪರ್ಕಿಸುವ ಪಾದಯಾತ್ರೆಗೂ ಚಿಂತನೆ ಮೊಳೆದಿರುವುದು, ಕಾಂಗ್ರೆಸ್‌ ಜನರತ್ತ ಮಧ್ಯೆ ಹೋಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಭಾರತ್ ಜೋಡೋ ಯಾತ್ರೆಗೆ ದೊರೆತ ಅಭೂತಪೂರ್ವ ಬೆಂಬಲವೂ ಈ ನಿಟ್ಟಿನಲ್ಲಿ ಯೋಚಿಸಲು ಕಾರಣವಾಗಿರಬಹುದು.

2004ರಿಂದ 2014ರವರೆಗೆ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಸರ್ಕಾರವನ್ನು ಮುನ್ನಡೆಸಿದ ಕಾಂಗ್ರೆಸ್‌ಗೆ 2014ರ ಸಾರ್ವತ್ರಿಕ ಚುನಾವಣೆಯ ಬಳಿಕ ದುರ್ದಿನಗಳು ಶುರುವಾದವು. ಆಡಳಿತದ ಕೊನೆಯ ಐದು ವರ್ಷದಲ್ಲಿ ಕೇಳಿ ಬಂದ ಹಗರಣಗಳು, ಆ ಪಕ್ಷವನ್ನು ಜನರಿಂದ ದೂರ ಕೊಂಡೊಯ್ದವು. ಅದರ ಸಂಪೂರ್ಣ ಲಾಭವನ್ನು ಬಿಜೆಪಿಯನ್ನು ಪಡೆದುಕೊಂಡಿತು. ಆದರೆ, ಆ ನಂತರದಲ್ಲಿ ಕಾಂಗ್ರೆಸ್ ಮೇಲೇಳುವ ಪ್ರಯತ್ನ ಮಾಡಲೇ ಇಲ್ಲ. ಎಂಟು ವರ್ಷಗಳಲ್ಲಿ ನಡೆದ ಬಹುತೇಕ ಎಲ್ಲ ಚುನಾವಣೆಗಳನ್ನು ಸೋತು, ಬೆರಳಣಿಕೆಯಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿವೆ. ಭಾರತದಂಥ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಡಳಿತ ಪಕ್ಷದಷ್ಟೇ ಪ್ರತಿಪಕ್ಷವೂ ಪ್ರಭಾವಶಾಲಿಯಾಗಿರಬೇಕು. ಇಲ್ಲದಿದ್ದರೆ, ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಹಾಗಾಗಿ, ಕಾಂಗ್ರೆಸ್ ತಾನು ಬಲಗೊಳ್ಳುವುದರ ಜತೆಗೆ ಭಾರತ ಪ್ರಜಾಪ್ರಭುತ್ವನ್ನು ಬಲಗೊಳಿಸುವುದು ಅತ್ಯಗತ್ಯ. ಮಹಾಧಿವೇಶನದಲ್ಲಿ ಈ ನಿಟ್ಟಿನಲ್ಲಿ ಚರ್ಚೆಗಳು, ಸಂವಾದಗಳು ನಡೆದಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

ವಯಸ್ಸು ಮತ್ತು ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಸೂಚನೆಯೂ ಈ ಅಧಿವೇಶನದಲ್ಲಿ ಸಿಕ್ಕಿದೆ. ಹಾಗಾಗಿ ಕಾಂಗ್ರೆಸ್ ಗೆ ಪಕ್ಷ ಮುನ್ನಡೆಸುವುದಷ್ಟೇ ಅಲ್ಲ, ಪ್ರತಿಪಕ್ಷಗಳ ಒಕ್ಕೂಟವನ್ನು ಮುನ್ನಡೆಸುವ ಸಮರ್ಥ ನಾಯಕತ್ವ ವಹಿಸುವ ಗುರುತರ ಹೊಣೆಗಾರಿಕೆ ಕಾಂಗ್ರೆಸ್ ನಾಯಕರ ಮೇಲಿದೆ. 2024ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಕೂಟ ರಚನೆಗಾಗಿ ಜೆಡಿಯು ಸೇರಿದಂತೆ ಹಲವು ಪ್ರತಿಪಕ್ಷಗಳು ಕಾಂಗ್ರೆಸ್ ಕಡೆ ನೋಡುತ್ತಿವೆ. ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸುತ್ತಿವೆ. ವಾಸ್ತವದಲ್ಲಿ, ಬಿಜೆಪಿಯ ವಿರುದ್ಧ ಕಾಂಗ್ರೆಸ್ ಹೊರಗಿಟ್ಟು ಮೈತ್ರಿ ಕೂಟ ರಚಿಸಿಕೊಳ್ಳುವುದರಲ್ಲೂ ಯಾವುದೇ ಅರ್ಥವಿಲ್ಲ. ಹಾಗಾಗಿ, ಈ ಅವಕಾಶವನ್ನು ಕಾಂಗ್ರೆಸ್ ಎರಡೂ ಕೈಗಳಿಂದ ಬಾಚಿಕೊಂಡು, ಪ್ರಬಲ ಪ್ರತಿಪಕ್ಷವಾಗಿ ಬೆಳೆಯುವ ಸಾಹಸವನ್ನು ಮಾಡಬೇಕು. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಅರ್ಹ ವ್ಯಕ್ತಿಯನ್ನು ತನ್ನ ನಾಯಕನೆಂದು ಘೋಷಿಸುವ ಮೂಲಕ ನಾಯಕತ್ವದ ಬರ ಮತ್ತು ಗೊಂದಲವನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಉಕ್ರೇನ್- ರಷ್ಯಾ ನಡುವೆ ಶಾಂತಿ ಸ್ಥಾಪನೆಗಾಗಿ ಭಾರತದ ಮಧ್ಯಸ್ತಿಕೆ ಸೂಕ್ತ

ಸಂಸತ್ತು ಮತ್ತು ವಿವಿಧ ರಾಜ್ಯ ವಿಧಾನಸಭೆಗಳ ಮೇಲ್ಮನೆ ಹಾಗೂ ಕೆಳಮನೆಯಲ್ಲಿ ಬಿಜೆಪಿ ಹೊರತುಪಡಿಸಿದರೆ ಅತಿ ಹೆಚ್ಚು ಜನಪ್ರತಿನಿಧಿಗಳನ್ನು ಕಾಂಗ್ರೆಸ್ ಪಕ್ಷವೇ ಹೊಂದಿದೆ. ಈಗಲೂ ದೇಶಾದ್ಯಂತ ಕಾಂಗ್ರೆಸ್ ಪಕ್ಷವು ತನ್ನ ಪ್ರಸ್ತುತತೆಯನ್ನು ಕಾಯ್ದುಕೊಂಡಿದೆ. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರ ಪಡೆ ಇದೆ, ಸಂಪನ್ಮೂಲ ಕ್ರೋಡೀಕರಿಸುವ ಪ್ರಾದೇಶಿಕ ನಾಯಕರಿದ್ದಾರೆ. ಆದರೆ, ಪಕ್ಷದ ಕೇಂದ್ರ ನಾಯಕತ್ವದ ಗೊಂದಲ, ಆಂತರಿಕ ಕಚ್ಚಾಟ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಈವರೆಗೂ ಸೋಲಿನಿಂದ ಹೊರ ಬರಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಕಾಂಗ್ರೆಸ್‌ ತನಗಿರುವ ನೈಜ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು, ಮೈಕೊಡವಿ ಎದ್ದರೆ ಖಂಡಿತವಾಗಿಯೂ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಬಲ್ಲದು. ಅಷ್ಟು ಮಾತ್ರವಲ್ಲ, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋರಾಡಿದರೆ ಅಧಿಕಾರವೂ ದಕ್ಕಬಹುದು. ಈ ಎಲ್ಲ ಚಿಂತನೆಗಳಿಗೆ ರಾಯಪುರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನ ನಾಂದಿ ಹಾಡಿದೆ. ಆದರೆ ಕಾರ್ಯ ಸಾಧಿಸುವ ಗುರುತರ ಹೊಣೆಗಾರಿಕೆ ಕಾಂಗ್ರೆಸ್ ನಾಯಕರ ಮೇಲಿದೆ.

Exit mobile version