ನವದೆಹಲಿ: ರಾಹುಲ್ ಗಾಂಧಿ (Rahul Gandhi) ಭಾರತ ದೇಶದ ಮುಂದಿನ ‘ಮಹಾತ್ಮ’ ಆಗಲು ಸಜ್ಜಾಗಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ಮುಖಂಡ ಇಂದ್ರನಿಲ್ ರಾಜ್ಗುರು ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ರಾಹುಲ್ ಮಹಾತ್ಮ ಗಾಂಧಿಗಿಂತಲೂ ಗುಣದಲ್ಲಿ ಒಂದು ಹೆಜ್ಜೆ ಮುಂದು. ರಾಹುಲ್ “ಮುಕ್ತ” ಮತ್ತು “ಶುದ್ಧ ಹೃದಯದವರು”. ಆದರೆ ಗಾಂಧೀಜಿ ಸ್ವಲ್ಪ “ಕುತಂತ್ರಿ” ಯಾಗಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ನೀವು ಬೇಕಾದರೆ ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಮುಂದಿನ ಮಹಾತ್ಮ ನಾಗಿ ಹೊರಹೊಮ್ಮಲಿದ್ದಾರೆ. ಗಾಂಧೀಜಿ ಸ್ವಲ್ಪ ಕುತಂತ್ರಿಯಾಗಿದ್ದರು. ಆದರೆ, ರಾಹುಲ್ ಸಂಪೂರ್ಣವಾಗಿ ಮುಕ್ತ ಮತ್ತು ಶುದ್ಧ ಹೃದಯದವರಾಗಿದ್ದಾರೆ ಎಂದು ರಾಜ್ಗುರು ಮೇ 1 ರಂದು ರಾಜ್ಕೋಟ್ನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಹೇಳಿದ್ದರೆ. ಮಾಜಿ ಶಾಸಕರಾಗಿರುವ ರಾಜ್ಗುರ್, ರಾಹುಲ್ ಗಾಂಧಿ ದೇಶದ ಮಹಾನ್ “ನಾಯಕ” ಎಂಬುದಾಗಿ ಬಣ್ಣಿಸಿದ್ದಾರೆ.
ಕೆಲವು ಜನರು ಅವರನ್ನು ಪಪ್ಪು (ಪೆದ್ದ) ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದರೆ ದೇಶವು ಈಗ ಅವರನ್ನು ತನ್ನ ನಾಯಕನಾಗಿ ಸ್ವೀಕರಿಸಿದೆ ಎಂದು ರಾಜ್ಗುರು ಹೇಳಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ ಏನು?
ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವ ಮೂಲಕ ಜನರು ಮಹಾತ್ಮ ಗಾಂಧಿ ವಿರುದ್ಧದ ಹೇಳಿಕೆ ಪ್ರತಿಕಾರ ತೀರಿಸಬೇಕು ಎಂದು ಕರೆ ಕೊಟ್ಟಿದೆ.
ಇದನ್ನೂ ಓದಿ: 2026ರಲ್ಲಿ ಭಾರತ ಪೀಸ್ ಪೀಸ್ ಆಗುತ್ತದೆ ಎಂದ ಪಾಕ್ ಮಾಜಿ ಸಂಸದ; ಮೋದಿ ಹಿಂದುತ್ವವೂ ಪತನ ಎಂದು ಹೇಳಿಕೆ!
“ಗಾಂಧೀಜಿ ನಮ್ಮ ರಾಷ್ಟ್ರದ ಪಿತಾಮಹ ಮತ್ತು ನಮ್ಮನ್ನು ಸ್ವಾತಂತ್ರ್ಯದ ಕಡೆಗೆ ನಮ್ಮನ್ನು ಕರೆದೊಯ್ದವರು. ಇಂತಹ ಹೇಳಿಕೆಗಳಿಗಾಗಿ ಭಾರತ ಮತ್ತು ಗುಜರಾತ್ ಜನರು ಕಾಂಗ್ರೆಸ್ ಅನ್ನು ಕ್ಷಮಿಸುವುದಿಲ್ಲ. ಈ ಕೋಪವು ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸುತ್ತದೆ” ಎಂದು ಗುಜರಾತ್ ಬಿಜೆಪಿ ಘಟಕದ ಉಪಾಧ್ಯಕ್ಷ ಭರತ್ ಬೋಘರಾ ಹೇಳಿದ್ದಾರೆ.
ರಾಜ್ಗುರು ಸ್ಪಷ್ಟನೆ ಏನು?
ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ಗುರು, ಅವರು ಇತಿಹಾಸ ಪುಸ್ತಕದಲ್ಲಿ “ಕುತಂತ್ರ” ಎಂಬ ಪದವನ್ನು ಮಹಾತ್ಮರಿಗೆ ಬಳಸಲಾಗಿದೆ ಎಂದು ಹೇಳಿದೆ. “ಕುತಂತ್ರ” ಎಂದರೆ ಅವರು ನಿಜವಾಗಿಯೂ “ಬುದ್ಧಿವಂತರು” ಎಂದು ನಾನು ಹೇಳಿಕೆ ನೀಡಿದ್ದೆ ಎಂಬುದಾಗಿ ರಾಜ್ಗುರು ಹೇಳಿದ್ದಾರೆ.
ನಾನು ಗಾಂಧೀಜಿಗೆ ಸಂಬಂಧಿಸಿದ ಅನೇಕ ಇತಿಹಾಸ ಪುಸ್ತಕಗಳನ್ನು ಓದಿದ್ದೇನೆ ಮತ್ತು ಅಂತಹ ಒಂದು ಪುಸ್ತಕದಲ್ಲಿ ಕುತಂತ್ರ ಎಂಬ ಉಲ್ಲೇಖವಿದೆ. ನಾನು ನನ್ನ ಸ್ವಂತ ಪದಗಳನ್ನು ಸೇರಿಸಿಲ್ಲ. ನಾನು ರಾಹುಲ್ ಗಾಂಧಿಯನ್ನು ‘ಮುಂದಿನ ಮಹಾತ್ಮ’ ಎಂದು ಕರೆದಿದ್ದೇನೆ. ಏಕೆಂದರೆ ಇಂದು, ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ ಹೋರಾಡಿದಂತೆಯೇ ಅವರು ಮಾತ್ರ ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ. ಬಿಜೆಪಿ ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ” ಎಂದು ಮಾಜಿ ಹೇಳಿದರು.