ಮಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Elections 2024) ಉತ್ತಮ ಸಾಧನೆ ಮಾಡುವ ತಂತ್ರಗಾರಿಕೆ ಹೆಣೆಯುತ್ತಿರುವ ಕಾಂಗ್ರೆಸ್ ಕರಾವಳಿಯಲ್ಲಿ ಮೊದಲ ಬೃಹತ್ ಸಮಾವೇಶ (Congress Samavesha) ನಡೆಸುವ ಮೂಲಕ ಹೆಚ್ಚು ಕಡಿಮೆ ಪ್ರಚಾರದ ಕಣಕ್ಕೆ ಧುಮುಕಿದೆ. ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶವನ್ನು ಮಂಗಳೂರು ಹೊರವಲಯದ ಅಡ್ಯಾರ್ ನಲ್ಲಿರುವ ಸಹ್ಯಾದ್ರಿ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿದ್ದು, ಇದರಲ್ಲಿ ಹಿರಿಯ ನಾಯಕರೆಲ್ಲ ಭಾಗವಹಿಸಿದರು. ಕರಾವಳಿಯಿಂದ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ನಮ್ಮನ್ನು ಬೈಬೇಡಿ, ನಾವು ಹಿಂದೆ ಕೊಟ್ಟಿದ್ದ ಯೋಜನೆಗಳು, ಈಗ ಕೊಟ್ಟಿರುವ ಗ್ಯಾರಂಟಿಗಳನ್ನು ಮರೀಬೇಡಿ ಎಂದು ಮನವಿ ಮಾಡಿದೆ. ಅದರಲ್ಲೂ ಮುಖ್ಯವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikararjuna Kharge) ಅವರು ಕರಾವಳಿ ಜನರ ಮುಂದೆ ದಯನೀಯ ಮನವಿಯನ್ನು ಮಾಡಿಕೊಂಡರು.
ಸಮಾವೇಶದ ಮೂಲಕ ಕರಾವಳಿಯಲ್ಲಿ ನೆಲಕಚ್ಚರುವ ಕಾಂಗ್ರೆಸ್‌ಗೆ ಶಕ್ತಿ ತುಂಬುವ ಪ್ರಯತ್ನವನ್ನು ನಡೆಸಲಾಯಿತು. ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಸಮಾವೇಶದಲ್ಲಿ ಉಭಯ ಜಿಲ್ಲೆಗಳ 50 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ : CM Siddaramaiah : ಫೆ. 24-25ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಏಕತಾ ಸಮಾವೇಶ
Congress Samavesha :ಕಾಂಗ್ರೆಸ್ ಮಾಡಿಕೊಟ್ಟ ಅನುಕೂಲ ಮರೆಯಬೇಡಿ ಎಂದ ಖರ್ಗೆ
ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕರಾವಳಿಯ ಜನರು ಭುಸುಧಾರಣೆ ಕಾಯಿದೆಯಿಂದ ಆದ ಲಾಭವನ್ನು ಮರೆತಿದ್ದಾರೆ ಈಗ ಭಗವಾಧ್ವಜ ಹಿಡಿದು ಅಡ್ಡಾಡುತ್ತಿದ್ದಾರೆ. ನಿಮ್ಮ ತಂದೆ-ತಾಯಿಯ ಸ್ಥಿತಿ ಹಿಂದೆ ಏನಾಗಿತ್ತು? ನಿಮ್ಮ ತಂದೆಯನ್ನು ಭೂಮಿಯ ಮಾಲಕರನ್ನಾಗಿ ಮಾಡಿದವರು ಯಾರು ಎನ್ನುವುದನ್ನು ಮರೆತಿದ್ದೀರಿ ಎಂದು ನೆನಪಿಸಿದರು.
ʻʻಭೂಮಿ ಹಂಚಿದ ಜನ ಈಗ ಎಲ್ಲಿ ಹೋಗಿದ್ದಾರೆ. ಲಾಭ ಪಡೆದುಕೊಂಡ ಜನ ಈಗ ನಮ್ಮನ್ನೇ ಮರೆತು ಹೋಗಿದ್ದಾರೆ. ನಮ್ಮ ದುರ್ದೈವ ಇಲ್ಲಿಯ ಜನ ಜಮೀನು ಕೊಟ್ಟವರನ್ನು ನೆನಪಿನಲ್ಲಿ ಇಟ್ಟುಕೊಂಡಿಲ್ಲ. ಆಹಾರ ಸುರಕ್ಷತೆ, ಉಚಿತ ಶಿಕ್ಷಣವನ್ನು ಜನ ಮರೆತಿದ್ದಾರೆ. ನಮ್ಮಿಂದ ಲಾಭ ಪಡೆದು ಜನರು ಮರೆತಿದ್ದಾರೆ. ಆದರೆ, ಜನರನ್ನು ಒಡೆದು ಸತತ ಅಧಿಕಾರ ಪಡೆಯಲು ಯತ್ನಿಸಿದವರನ್ನು ನೆನಪಿಟ್ಟುಕೊಂಡಿದ್ದಾರೆʼʼ ಎಂದು ಹೇಳಿದರು.
ಮಂಗಳೂರಿನ ಜನರು ಬಹಳ ಬುದ್ಧಿವಂತರು. ಅವರಿಗೆ ಮೋದಿ ಜಮೀನು ಕೊಟ್ರಾ? ಆಹಾರ ಸುರಕ್ಷತೆಯನ್ನು ಮೋದಿ ಕೊಟ್ಟಿದ್ದಾರಾ? ಅವರಿಗೆ ಬಿಜೆಪಿಯಿಂದ ಲಾಭ ಸಿಕ್ಕಿದ್ಯಾ? ಎಂದು ಹೇಳುವ ಮೂಲಕ ಜನರನ್ನು ಪ್ರಶ್ನೆ ಮಾಡಿದರು.
ಮಂಗಳೂರಿನಲ್ಲಿ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಕಾಂಗ್ರೆಸ್. ಆದರೆ, ಜನರು ಬಿಜೆಪಿ ಮಾತು ಕೇಳಿ ಇಲ್ಲಿ ಹೊಡೆದಾಟ ಮಾಡುತ್ತಾರೆ ಎಂದು ಖರ್ಗೆ ಹೇಳಿದರು.
LIVE : ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ, ಮಂಗಳೂರು https://t.co/0FCA1kTd10
— Karnataka Congress (@INCKarnataka) February 17, 2024
Congress Samavesha : ಮುಂಜಾನೆ ಎದ್ದ ಕೂಡಲೇ ಕಾಂಗ್ರೆಸ್‌ಗೆ ಬೈತಾರೆ!
ಇಲ್ಲಿನ ಜನ ಮಾತು ಮಾತಿಗೆ ಮೋದಿ.. ಮೋದಿ ಅಂತಾರೆ. ಆದರೆ, ಹಾಗೆ ಕರೆದರೆ ಹೊಟ್ಟೆ ತುಂಬುತ್ತದಾ ಮಂಗಳೂರಿನ ಜನ ಮುಂಜಾನೆ ಎದ್ದು ಕೂಡಲೇ ಕಾಂಗ್ರೆಸ್ ಗೆ ಬೈತಾರೆ ಎಂದು ಬೇಸರ ಮಾಡಿಕೊಂಡ ಖರ್ಗೆ, ಮಂಗಳೂರು ಉಡುಪಿಯಲ್ಲಿ ಸೇತುವೆ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಕಾಲದಲ್ಲಿ, ಬಂದರು ನಿರ್ಮಾಣ, ವಿಮಾನ ನಿಲ್ದಾಣ ಆಗಿದ್ದು ಕಾಂಗ್ರೆಸ್ ಕಾಲದಲ್ಲಿ. ಎಲ್ಲಾ ಬೃಹತ್ ಯೋಜನೆಗಳೂ ಕಾಂಗ್ರೆಸ್ ಕಾಲದಲ್ಲಿಯೇ ಆಗಿದ್ದು. ಮಣಿಪಾಲ ಶೈಕ್ಷಣಿಕ ಅಭಿವೃದ್ಧಿ, ಬ್ಯಾಂಕ್ ಗಳನ್ನು ಕೊಟ್ಟಿರೋದೂ ಕಾಂಗ್ರೆಸ್. ಆದರೆ, ಮೋದಿ ಇಲ್ಲಿನ ಬ್ಯಾಂಕ್ ಗಳನ್ನು ಅಹಮದಾಬಾದ್‌ನ ಬ್ಯಾಂಕ್‌ಗಳ ಜೊತೆ ಸೇರಿಸಿಬಿಟ್ಟರು. ಆದರೂ ಇಲ್ಲಿನ ಜನರು ಮೋದಿಗೆ ಜೈಕಾರ ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ʻʻನಾವು ಹಿಂದೆ ಮಾಡಿದ ಗ್ಯಾರಂಟಿಗಳನ್ನು ಮರೆತಿರಿ. ಆದರೆ, ಈಗ ಕೊಟ್ಟ ಗ್ಯಾರಂಟಿಗಳನ್ನಾದರೂ ನೆನಪಿಡಿʼʼ ಎಂದು ಅವರು ಮನವಿ ಮಾಡಿದರು.