Site icon Vistara News

BY Vijayendra : ಕಾಂಗ್ರೆಸ್​ನಿಂದ ಸದನದ ನೀತಿ, ನಿಯಮಗಳ ಉಲ್ಲಂಘನೆ: ವಿಜಯೇಂದ್ರ ಆರೋಪ

Instead of stealing Hindu temple money keep hundi in front of Vidhana Soudha says Vijayendra

ಬೆಂಗಳೂರು: ಆಡಳಿತ ಪಕ್ಷದವರು ಸದನದ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರಕಾರದ ಕ್ರಮಕ್ಕೆ ಸಭಾಧ್ಯಕ್ಷರು ಕೂಡ ಬೆಂಬಲ ನೀಡಿರುವುದು ದುರದೃಷ್ಟ ಎಂದು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಎದುರು ನೋಡುತ್ತಿರುವ ಕಾಂಗ್ರೆಸ್ ಸರಕಾರವು, ರಾಜ್ಯದಲ್ಲಿ ಅಭಿವೃದ್ಧಿಯನ್ನೇ ಮಾಡದ ನಾಲಾಯಕ್ ಸರಕಾರ ಎಂದು ಅವರು ಹೇಳಿದರು.

ನಾಲಾಯಕ್ ಕಾಂಗ್ರೆಸ್ ಸರಕಾರಕ್ಕೆ ಗ್ಯಾರಂಟಿಗಳಿಂದ ತಮ್ಮ ಗೆಲುವು ಸಾಧ್ಯವಿಲ್ಲ ಎಂಬ ಅರಿವಾಗಿದೆ. ಅದಕ್ಕಾಗಿಯೇ ಪದೇಪದೇ ನಿರ್ಣಯ ಮಂಡಿಸಿ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ತೀವ್ರವಾಗಿ ಖಂಡಿಸಿದರು.

ಸದನದ ಗೌರವವನ್ನು ಆಡಳಿತ ಪಕ್ಷವಾದ ಕಾಂಗ್ರೆಸ್ ನಾಶ ಮಾಡುತ್ತಿದೆ. ಬಿಜೆಪಿ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಹಾಗಾಗಿ ನಾವು ಸದನದಲ್ಲಿ ಈ ಕುರಿತು ಧ್ವನಿ ಎತ್ತಿದ್ದೇವೆ. ಕಾನೂನು ಸಚಿವರ ನಡೆಯನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ವಿರೋಧ ಪಕ್ಷದವರಾದ ನಾವು ಸದನದ ನೀತಿ ನಿಯಮಗಳಿಗೆ ಗೌರವ ಕೊಟ್ಟು ಸದನ ಸುಸೂತ್ರವಾಗಿ ನಡೆಯಬೇಕೆಂಬ ನಿಟ್ಟಿನಲ್ಲಿ ಸರಕಾರ ಮತ್ತು ಸಭಾಧ್ಯಕ್ಷರಿಗೆ ಸಹಕಾರ ನೀಡಿದ್ದೇವೆ ಎಂದು ಅವರು ವಿವರಿಸಿದರು. ಆದರೆ, ಇವತ್ತು ಮಾನ್ಯ ಕಾನೂನು ಸಚಿವರು ಏಕಾಏಕಿಯಾಗಿ ಹೆಚ್ಚುವರಿ ವಿಷಯದಡಿ ನಿರ್ಣಯ ಮಂಡಿಸಿದ್ದಾರೆ ಎಂದು ಅವರು ಟೀಕಿಸಿದರು.

ಇದನ್ನೂ ಓದಿ : ದೇಗುಲಗಳಿಗೆ ತೆರಿಗೆ, ಅನ್ಯಧರ್ಮೀಯರಿಗೆ ಹಣ ಬಳಕೆ ಕಪೋಲಕಲ್ಪಿತ ಆರೋಪ; ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು!

ಆಡಳಿತ ಪಕ್ಷವು ವಿಪಕ್ಷದ ತಾಳ್ಮೆ ಪರೀಕ್ಷಿಸುವ ಕೆಲಸ ಮಾಡಿದೆ. ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿಜೀ ಅವರು ಏನು ಸಾಧನೆ ಮಾಡಿದ್ದಾರೆ ಎಂಬುದು ಇಡೀ ದೇಶಕ್ಕೇ ಗೊತ್ತಿದೆ. ಜನತೆಗೂ ಗೊತ್ತಿದೆ. ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತು ಗಾಬರಿಯಿಂದ ಆಡಳಿತ ಪಕ್ಷವಾದ ಕಾಂಗ್ರೆಸ್‍ನವರು ಈ ರೀತಿ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ತಿಳಿಸಿದರು. ವಿಪಕ್ಷ ನಾಯಕ ಆರ್.ಅಶೋಕ್ ಅವರು ಈ ಸಂದರ್ಭದಲ್ಲಿ ಇದ್ದರು.

Exit mobile version