Site icon Vistara News

Electoral Bonds: ಚುನಾವಣಾ ಬಾಂಡ್‌ ವಿವರ ನೀಡದ ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್

Vistara News, Election Bond, Supreme Court upholds transparency

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ (Electoral bonds) ವಿವರವನ್ನು ಗಡುವಿನ ಒಳಗೆ ಸಲ್ಲಿಸದ ಭಾರತೀಯ ಸ್ಟೇಟ್‌ ಬ್ಯಾಂಕ್‌ (State Bank of India) ವಿರುದ್ಧ ನ್ಯಾಯಾಂಗ ನಿಂದನೆ (Contempt of court) ಕ್ರಮ ಜರುಗಿಸುವಂತೆ ಲಾಭರಹಿತ ಸಂಸ್ಥೆಯೊಂದು ಸುಪ್ರೀಂ ಕೋರ್ಟ್‌ (supreme court) ಮೊರೆ ಹೋಗಿದೆ.

2019ರ ಏಪ್ರಿಲ್ 12ರ ನಂತರ ಖರೀದಿಸಲಾದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ (Election commission) ಇಸಿಐ) ಸಲ್ಲಿಸಲು ಸುಪ್ರೀಂ ಕೋರ್ಟ್‌ (supreme court) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (State bank of India- SBI) ನೀಡಿದ ಗಡುವು ಮುಗಿದಿದ್ದು, ಇನ್ನೂ ಸಲ್ಲಿಸಿಲ್ಲ. ಇದನ್ನು ಪ್ರಶ್ನಿಸಿ, ನ್ಯಾಯಾಲಯದ ನಿರ್ದೇಶನವನ್ನು ಧಿಕ್ಕರಿಸಿದ ಸಾರ್ವಜನಿಕ ವಲಯದ ಬ್ಯಾಂಕ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವಯಂಸೇವಾ ಸಂಸ್ಥೆ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದೆ.

ಕೇಂದ್ರದ 2018ರ ಯೋಜನೆಯನ್ನು ರದ್ದುಗೊಳಿಸಿರುವ ತೀರ್ಪನ್ನು ಕಳೆದ ತಿಂಗಳು ಸುಪ್ರೀಂ ಕೋರ್ಟ್‌ ನೀಡಿತ್ತು. ಎಡಿಆರ್‌ ಈ ಮೊಕದ್ದಮೆಯ ಪ್ರಮುಖ ಅರ್ಜಿದಾರನಾಗಿದೆ. ಇಬಿ ವಿವರ ಸಲ್ಲಿಸಲು ಗಡುವನ್ನು ಜೂನ್ 30ರವರೆಗೆ ವಿಸ್ತರಿಸಲು ಎಸ್‌ಬಿಐ ಸುಪ್ರೀಂ ಕೋರ್ಟ್‌ ಮುಂದೆ ಕೋರಿದೆ.

ಏಪ್ರಿಲ್ 12, 2019ರ ಬಳಿಕ ಖರೀದಿಸಿದ ಇಬಿಗಳ ಸಂಪೂರ್ಣ ವಿವರಗಳನ್ನು ಇಸಿಐಗೆ ಸಲ್ಲಿಸಲು ಮಾರ್ಚ್ 6ರ ಗಡುವನ್ನು ಸರ್ವೋಚ್ಚ ನ್ಯಾಯಾಲಯವು ನೀಡಿತ್ತು. ಈ ಗಡುವನ್ನು ಉಲ್ಲಂಘಿಸಿದ ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲು ಎಡಿಆರ್ ಕೋರಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಇದಕ್ಕೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಪ್ರತಿಕ್ರಿಯಿಸಿ, ಎಸ್‌ಬಿಐ ಮನವಿಯೊಂದಿಗೆ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಬರಲಿದೆ ಎಂದರು.

ಜೂನ್ 30ರವರೆಗೆ ಸಮಯವನ್ನು ವಿಸ್ತರಿಸಲು ಎಸ್‌ಬಿಐ ಮಾರ್ಚ್ 4ರಂದು ಮನವಿ ಮುಂದಿಟ್ಟಿದೆ. “ಸಮಗ್ರ ಡೇಟಾವನ್ನು ಡಿಕೋಡಿಂಗ್ ಮಾಡುವುದು ಮತ್ತು ದಾನಿಗಳ ದೇಣಿಗೆಯನ್ನು ಪ್ರತ್ಯೇಕಿಸಿ ನಮೂದಿಸುವುದು ಸಂಕೀರ್ಣ ಪ್ರಕ್ರಿಯೆಯಾಗಿದೆ” ಎಂದು ಎಸ್‌ಬಿಐ ಹೇಳಿದೆ. ಇದನ್ನು ಸುಪ್ರೀಂ ಕೋರ್ಟ್‌ ಅನುಮತಿಸಿದರೆ, ದಾನಿಗಳು ಮತ್ತು ಬಾಂಡ್‌ ಸ್ವೀಕರಿಸಿದವರ ವಿವರಗಳು ಮುಂಬರುವ ಲೋಕಸಭಾ ಚುನಾವಣೆಯ ನಂತರ ಮಾತ್ರ ಸಾರ್ವಜನಿಕವಾಗಿ ಲಭ್ಯವಾಗಲಿವೆ.

ಫೆಬ್ರವರಿ 15ರಂದು, ಐದು ನ್ಯಾಯಾಧೀಶರ ಪೀಠವು ಕೇಂದ್ರದ 2018ರ ರಾಜಕೀಯ ನಿಧಿಯ ಯೋಜನೆಯನ್ನು “ಅಸಾಂವಿಧಾನಿಕ” ಎಂದು ಘೋಷಿಸಿತು. ಇಬಿ ವಿತರಿಸುವ ಏಕೈಕ ನಿಯೋಜಿತ ಬ್ಯಾಂಕ್ ಆಗಿದ್ದ ಎಸ್‌ಬಿಐಗೆ ಬಾಂಡ್‌ಗಳ ವಿತರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠ ನಿರ್ದೇಶಿಸಿತ್ತು. ಈ ಬಾಂಡ್‌ ವ್ಯವಸ್ಥೆಯು ರಾಜಕೀಯ ಪಕ್ಷಗಳಿಗೆ ದಾನಿಗಳು ನೀಡುವ ಕೊಡುಗೆಗಳನ್ನು ಸಂಪೂರ್ಣವಾಗಿ ಅನಾಮಧೇಯಗೊಳಿಸಿತ್ತು. ಕಪ್ಪು ಹಣ ಅಥವಾ ಅಕ್ರಮ ಚುನಾವಣಾ ಹಣಕಾಸು ಚಲಾವಣೆಗೆ ಇಲ್ಲಿ ನಿರ್ಬಂಧ ಇರಲಿಲ್ಲ. ಮಾಹಿತಿಯ ಹಕ್ಕಿನಲ್ಲಿ ಇದನ್ನು ಪಡೆಯುವಂತಿರಲಿಲ್ಲ.

“ಎಸ್‌ಬಿಐ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ತ್ವರಿತವಾಗಿ ಕ್ರೋಡೀಕರಿಸಿ ಬಹಿರಂಗಪಡಿಸಲು ಅಗತ್ಯವಾದ ಮೂಲಸೌಕರ್ಯವನ್ನು ಹೊಂದಿದೆ. ಚುನಾವಣಾ ಬಾಂಡ್‌ಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ಎಸ್‌ಬಿಐನ ಐಟಿ ವ್ಯವಸ್ಥೆಯು ಈಗಾಗಲೇ ಜಾರಿಯಲ್ಲಿದೆ. ಪ್ರತಿ ಬಾಂಡ್‌ಗೆ ನಿಯೋಜಿಸಲಾದ ಅನನ್ಯ ಸಂಖ್ಯೆಗಳ ಆಧಾರದ ಮೇಲೆ ಸುಲಭವಾಗಿ ವರದಿ ನೀಡಬಹುದು” ಎಂದು ಎಡಿಆರ್‌ ವಾದಿಸಿದೆ..

ಇದನ್ನೂ ಓದಿ: Electoral Bonds: ಚುನಾವಣೆ ಬಾಂಡ್‌; ಸುಪ್ರೀಂ ತೀರ್ಪಿನಿಂದ ಆಗೋ ಬದಲಾವಣೆ ಏನು?

Exit mobile version