Site icon Vistara News

ವಿಸ್ತಾರ ಸಂಪಾದಕೀಯ: ಬಿಹಾರ, ಬಂಗಾಲದ ಕೋಮು ಹಿಂಸಾಚಾರ ನಿಯಂತ್ರಿಸಿ

Control communal violence in Bihar, Bengal

Control communal violence in Bihar, Bengal

ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ರಾಮನವಮಿ ದಿನದ ಮೆರವಣಿಗೆಗಳ ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಹಿಂಸಾಚಾರ ಗಂಭೀರ ಸ್ವರೂಪ ಪಡೆದಿದೆ. ಬಿಹಾರದಲ್ಲಿ ಒಬ್ಬ ವ್ಯಕ್ತಿ ಸತ್ತಿದ್ದಾನೆ. ಅಲ್ಲಿ ಬಾಂಬ್‌ಗಳು ಸ್ಫೋಟಿಸಿವೆ. ಬಂಗಾಳದ ಹೌರಾದಲ್ಲಿ ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಹಲವು ವಾಹನಗಳಿಗೆ, ಪೊಲೀಸ್‌ ವಾಹನಗಳಿಗೇ ಬೆಂಕಿ ಹಚ್ಚಲಾಗಿದೆ. ಗುಜರಾತ್‌ನ ವಡೋದರಾದಲ್ಲೂ, ಮಹಾರಾಷ್ಟ್ರದ ಹಲವೆಡೆಯೂ ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ. ನೂರಾರು ಮಂದಿಯ ಮೇಲೆ ಎಫ್‌ಐಆರ್‌ ದಾಖಲಿಸಿ, ಬಂಧಿಸಲಾಗಿದೆ. ಇದು ರಾಜಕೀಯ ವಾಕ್ಸಮರ, ಮೇಲಾಟಕ್ಕೂ ಕಾರಣವಾಗಿದೆ.

ಈ ಗಲಭೆಯಲ್ಲಿ ಸ್ಪಷ್ಟವಾಗಿ ಕಂಡುಬಂದಿರುವ ವಿಚಾರವೆಂದರೆ, ರಾಮನವಮಿ ಉತ್ಸವದಲ್ಲಿ ತೊಡಗಿದ್ದವರ ಮೇಲೆ ನಡೆದ ಅವ್ಯಾಹತ ದಾಳಿ. ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ನಡೆದಿದೆ ಹಾಗೂ ಈ ದಾಳಿಗಳ ಹಿಂದಿರುವವರನ್ನು ನಿಯಂತ್ರಿಸುವಲ್ಲಿ ಅಲ್ಲಿನ ಸರ್ಕಾರಗಳು ವಿಫಲವಾಗಿವೆ. ಹಿಂದೂವಿರೋಧಿ ಶಕ್ತಿಗಳು ಇದರಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪಶ್ಚಿಮ ಬಂಗಾಳದಲ್ಲಿ ದಸರಾ ಸಂದರ್ಭದಲ್ಲೂ ಹಿಂಸಾಚಾರ ಭುಗಿಲೆದ್ದಿತ್ತು. ಹಿಂದೂಗಳು ಬಹುಸಂಖ್ಯಾತರೆನಿಸಿಕೊಂಡಿದ್ದರೂ ಬಂಗಾಳ ರಾಜ್ಯದಲ್ಲಿ ಮುಕ್ತವಾಗಿ ತಮ್ಮ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಲು ಅಂಜುವಂತಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಂತೂ, ಮುಸ್ಲಿಮರ ಪ್ರದೇಶಕ್ಕೆ ನೀವು ಹೋಗಿದ್ದೇಕೆ ಎಂದು ಹಿಂದೂಗಳನ್ನೇ ಪ್ರಶ್ನಿಸಿದ್ದಾರೆ. ಕೆಲವು ಕಾಲದ ಹಿಂದೆ ಅವರೇ ʼಜೈ ಶ್ರೀರಾಂʼ ಎಂದು ಕೂಗುವವರನ್ನು ನಿರ್ಬಂಧಿಸಿದ್ದುದನ್ನು ನೆನಪಿಸಿಕೊಳ್ಳಬಹುದು. ಪಶ್ಚಿಮ ಬಂಗಾಲದ ಮುಸ್ಲಿಂ ಮುಖಂಡರೊಬ್ಬರು, ಆಜಾನ್ ವೇಳೆ ನಿಮ್ಮದೇನು ರಾಮ ನವಮಿ ಮೆರವಣಿಗೆ ಎಂದು ಪ್ರಶ್ನಿಸಿ ಗಲಭೆಯನ್ನು ಸಮರ್ಥಿಸಿದ್ದಾರೆ.

ಹಾಗಿದ್ದರೆ ಈ ರಾಮನವಮಿ ಗಲಭೆಗಳ ಹಿಂದೆ ಏನಿದೆ? ಇದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಕಷ್ಟವೇನಲ್ಲ. ಹಲವಾರು ದೇಶವಿರೋಧಿ ಶಕ್ತಿಗಳು ಇಂದು ಕ್ರಿಯಾಶೀಲವಾಗಿವೆ. ಇವು ರಾಮನವಮಿ, ಗಣೇಶ ಚತುರ್ಥಿ, ನವರಾತ್ರಿಯಂಥ ಹಿಂದೂ ಧಾರ್ಮಿಕ ಉತ್ಸವಗಳು ಸಂದರ್ಭಗಳನ್ನು ಕಾಯುತ್ತವೆ. ಮೆರವಣಿಗೆಯಲ್ಲಿ ಸಾಗುವ ಹಿಂದೂ ದೇವತೆಗಳನ್ನು ಅಪಮಾನಿಸುವುದು, ಆ ಮೂಲಕ ಹಿಂದೂಗಳನ್ನು ರೊಚ್ಚಿಗೆಬ್ಬಿಸಿ ಹಿಂಸೆಗೆ ಇಳಿಯುವಂತೆ ಮಾಡುವುದು ಇವರ ಉದ್ದೇಶ. ಹಾಗೆ ಸೃಷ್ಟಿಯಾಗುವ ಗಲಭೆಯ ಪೂರ್ವತಯಾರಿಯೊಂದಿಗೆ ಪ್ರವೇಶಿಸುವ ದೇಶದ್ರೋಹಿ ಶಕ್ತಿಗಳು ಇನ್ನಷ್ಟು ಹಿಂಸೆ, ರಕ್ತಪಾತ, ಜೀವಹಾನಿಗೆ ಕಾರಣವಾಗುತ್ತವೆ. ಈ ಕಾನೂನುಬಾಹಿರ, ಕೋಮುದ್ವೇಷ ಪ್ರಚೋದಕ ಕೃತ್ಯಗಳಿಗೆ ಅಕ್ಕಪಕ್ಕದ ಕೆಲವು ದೇಶಗಳು ಕುಮ್ಮಕ್ಕು ನೀಡುತ್ತವೆ. ಪಾಕಿಸ್ತಾನ ತನ್ನ ಬೇಹುಗಾರಿಕೆ ಸಂಸ್ಥೆ ಹಾಗೂ ಮಿಲಿಟರಿಯ ಮೂಲಕ ಇವರಿಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ನೆರವು ನೀಡುತ್ತದೆ. ಭಾರತ ಸರ್ಕಾರ ಸ್ಥಿರವಾಗಿರುವುದು, ಭಾರತ ದೇಶ ಅಭಿವೃದ್ಧಿ ಸಾಧಿಸುವುದು, ಇಲ್ಲಿನವರು ನೆಮ್ಮದಿಯಲ್ಲಿ ಬದುಕುವುದು ಅವರಿಗೆ ಬೇಕಾಗಿಲ್ಲ.

ಇದನ್ನೂ ಓದಿ: Sasaram Violence: ಸ್ವಯಂ ರಕ್ಷಣೆಗಾಗಿ ಮುಸ್ಲಿಮರಿಂದ ಬಾಂಬ್‌ ತಯಾರಿಕೆ ಎಂದ ಆರ್‌ಜೆಡಿ ಶಾಸಕ ಮೊಹಮ್ಮದ್‌

ಇದನ್ನು ಮುಖ್ಯವಾಗಿ ಬಿಹಾರ ಮತ್ತು ಪ. ಬಂಗಾಳಗಳನ್ನು ಆಳುತ್ತಿರುವವರು ಅರ್ಥ ಮಾಡಿಕೊಳ್ಳಬೇಕು. ಬೆಂಕಿ ನಂದಿಸುವ ಕೆಲಸ ಮಾಡಬೇಕೇ ಹೊರತು, ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡಿದರೆ ಅದು ಇಡೀ ಮನೆಯನ್ನು ಸುಡುತ್ತದೆ. ಸರ್ಕಾರಗಳು ದುಷ್ಕರ್ಮಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಕೋಮು ವಿದ್ವೇಷದ ಸಂದರ್ಭದಲ್ಲಿ ಒಂದೊಂದು ಸಣ್ಣ ಕಿಡಿಯನ್ನೂ ನಿರ್ಲಕ್ಷಿಸಲಾಗದು. ಯಾವುದೇ ಉಡಾಫೆಯ ಒಂದು ಮಾತು, ದುರುದ್ದೇಶದ ಒಂದು ಹೇಳಿಕೆ, ಪ್ರಚೋದನೆಯ ಒಂದು ಕೃತ್ಯ ಕೂಡ ಹಿಂಸೆಯನ್ನು ಭುಗಿಲೆಬ್ಬಿಸಲು ಸಾಕಾಗುತ್ತದೆ. ಕೆಲವೊಮ್ಮೆ ಬಿಹಾರದ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿಕೊಳ್ಳುವ ಒಂದು ಸಣ್ಣ ಕಿಡಿಯೂ ಇಡೀ ದೇಶಕ್ಕೆ ಹಬ್ಬಲು ಸಾಕಾಗುತ್ತದೆ. ಇಂಥವರು ಯಾವುದೇ ಕೋಮಿನವರಿರಲಿ, ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅಗತ್ಯ. ಇಲ್ಲಿ ಅಲ್ಪಸಂಖ್ಯಾತರೆಂಬ, ಅಥವಾ ಬಹುಸಂಖ್ಯಾತರೆಂಬ ಓಲೈಕೆಯೂ ಸಲ್ಲದು. ಯಾವುದೇ ಪೂರ್ವಗ್ರಹಗಳಿಲ್ಲದೆ ಗಲಭೆಯ ಮೂಲವನ್ನು ಶೋಧಿಸಿ, ಗಲಭೆಕೋರರ ಹೆಡೆಮುರಿ ಕಟ್ಟಿ, ಶಾಂತಿಯನ್ನು ಮರಳಿ ಸ್ಥಾಪಿಸುವ ಕಾರ್ಯ ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತ ಸರ್ಕಾರಗಳಿಂದ ಆಗಬೇಕಿದೆ.

Exit mobile version