ಚಿಕ್ಕಬಳ್ಳಾಪುರ: ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ದಿಢೀರ್ ಹೃದಯಾಘಾತ, ರಕ್ತ ಹೆಪ್ಪುಗಟ್ಟುವುದು ಸೇರಿ ಹಲವು ರೀತಿಯ ಅಡ್ಡಪರಿಣಾಮಗಳು ಉಂಟಾಗಲಿವೆ ಎಂಬ ಸುದ್ದಿಗಳು ವರದಿಯಾದ ಹಿನ್ನೆಲೆಯಲ್ಲಿ ಲಸಿಕೆ ಪಡೆದವರಲ್ಲಿ ಆತಂಕ ಮೂಡಿದೆ. ಈ ನಡುವೆ ಕೋವಿಶೀಲ್ಡ್ ಲಸಿಕೆ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ ಹಾಗೂ ತಂಪು ಪಾನೀಯ ಸೇವನೆ ಮಾಡದಂತೆ ಹಲವು ಕಾಲೇಜು ಆಡಳಿತ ಮಂಡಳಿಗಳು ಸೂಚನಾ ಪತ್ರದ ಮೂಲಕ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದವು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ, ತಪ್ಪು ಮಾಹಿತಿ ನೀಡಿದ ನಗರದ ವಿವಿಧ ಕಾಲೇಜುಗಳ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.
ನಗರದ ಸಿದ್ದರಾಮಯ್ಯ ಲಾ ಕಾಲೇಜು ಹಾಗೂ ಜಚನಿ ಪ್ರಥಮ ದರ್ಜೆ ಕಾಲೇಜುಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಿಂದ ನೋಟಿಸ್ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ದಿಢೀರ್ ಹೃದಯಾಘಾತ, ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಸೂಚನೆ ಪ್ರಕಾರ ಈ ಲಸಿಕೆ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ ಹಾಗೂ ತಂಪು ಪಾನೀಯಗಳು ಸೇವನೆ ಮಾಡಬಾರದು ಎಂದು ಕಾಲೇಜು ಆಡಳಿತ ಮಂಡಳಿಗಳು ಸೂಚನಾ ಪತ್ರ ಹೊರಡಿಸಿದ್ದವು.
ವಾಟ್ಸ್‌ಆ್ಯಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಾಲೇಜುಗಳ ಸೂಚನಾ ಪತ್ರಗಳು ವೈರಲ್ ಆಗಿದ್ದರಿಂದ ತಕ್ಷಣ ಎಚ್ಚೆತ್ತ ಜಿಲ್ಲಾಡಳಿತ, ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಸೂಚನಾ ಪತ್ರಗಳ ಬಗ್ಗೆ ಸೂಕ್ತ ಸ್ಪಷ್ಟನೆ ನೀಡುವಂತೆ ಜಿಲ್ಲಾಧಿಕಾರಿ ನೇತೃತ್ವದ ಡಿಜಾಸ್ಟರ್ ಮ್ಯಾನೇಜ್ಮೆಂಟ್ ಕಮಿಟಿಯಿಂದ ಕಾಲೇಜುಗಳಿಗೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ | Covishield vaccine: ಕೋವಿಶೀಲ್ಡ್ ತಗೋಬೇಡಿ, ಒಳ್ಳೆಯದಲ್ಲ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್ ವೈರಲ್!
ಆರೋಗ್ಯ ಇಲಾಖೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ
ಕೋವಿಶೀಲ್ಡ್ ಲಸಿಕೆ ಪಡೆದವರು ಫ್ರಿಡ್ಜ್‌ನಲ್ಲಿಟ್ಟ ನೀರು, ತಂಪು ಪಾನೀಯಗಳು ಹಾಗೂ ಐಸ್‌ಕ್ರೀಂ ಸೇವಿಸಬಾರದು ಎಂಬ ಕಾಲೇಜು ಆಡಳಿತ ಮಂಡಳಿಗಳ ಸೂಚನಾ ಪತ್ರ ವೈರಲ್ ಆಗಿದ್ದರಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿತ್ತು. ಹೀಗಾಗಿ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮಗಳ ಬಗ್ಗೆ ಇಲಾಖೆಯಿಂದ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ತಿಳಿಸಿದೆ.
ರಕ್ಷಿತ್ ಗಣಪತಿ ಎಂಬುವವರು, ಎಕ್ಸ್ ಖಾತೆಯಲ್ಲಿ ಚಿಕ್ಕಬಳ್ಳಾಪುರದ ಸಿದ್ದರಾಮಯ್ಯ ಲಾ ಕಾಲೇಜಿನ ಸೂಚನಾ ಪತ್ರ ಹಾಕಿ, “ಇದು ನಿಜವೇ? ಈ ಪತ್ರ ನೆನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ, ದಯವಿಟ್ಟು ಸ್ಪಷ್ಟನೆ ನೀಡಿ ಎಂದು ಕೋರಿ, ಸಿಎಂ ಸಿದ್ದರಾಮಯ್ಯ, ಆರೋಗ್ಯ ಇಲಾಖೆಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
Not true. No such circular has been issued from @DHFWKA. https://t.co/tNp8w5cQPn
— K'taka Health Dept (@DHFWKA) May 3, 2024