ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟವು ಬಹುಮತ ಸಾಧಿಸಿದೆ. ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಜೂನ್ 9) ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿಯಲ್ಲಿ ಇದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿವೆ. ಇದರ ಬೆನ್ನಲ್ಲೇ, ಲೋಕಸಭೆಯಲ್ಲಿ ನರೇಂದ್ರ ಮೋದಿ ಅವರಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಜ್ಜಾಗಿದ್ದು, ಪ್ರತಿಪಕ್ಷ ನಾಯಕನನ್ನಾಗಿ ರಾಹುಲ್ ಗಾಂಧಿ (Rahul Gandhi) ಅವರನ್ನು ನೇಮಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
“ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನನ್ನಾಗಿ ರಾಹುಲ್ ಗಾಂಧಿ ಅವರನ್ನು ನೇಮಕ ಮಾಡುವ ದಿಸೆಯಲ್ಲಿ ಸಿಡಬ್ಲ್ಯೂಸಿಯು ಅವಿರೋಧವಾಗಿ ನಿರ್ಣಯ ತೆಗೆದುಕೊಂಡಿದೆ. ಸಂಸತ್‌ನಲ್ಲಿ ಪ್ರತಿಪಕ್ಷದ ನಾಯಕತ್ವ ವಹಿಸಲು ರಾಹುಲ್ ಗಾಂಧಿ ಅವರೇ ಸಮರ್ಥ ನಾಯಕರಾಗಿದ್ದಾರೆ. ನೀವೇ ಪ್ರತಿಪಕ್ಷ ನಾಯಕರಾಗಿ ಅಧಿಕಾರ ವಹಿಸಿಕೊಳ್ಳಿ ಎಂಬುದಾಗಿ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಲಿದ್ದಾರೆ” ಎಂಬುದಾಗಿ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಮಾಹಿತಿ ನೀಡಿದ್ದಾರೆ.
The CWC unanimously acknowledged the outstanding service of CP @kharge ji, Sonia Gandhi ji, @RahulGandhi ji and @priyankagandhi ji in elevating the Congress party to such a high level.
— Congress (@INCIndia) June 8, 2024
This meeting of the CWC congratulates the people of our country for voting so powerfully to… pic.twitter.com/GCSIpzb1yb
ನಿರ್ಣಯದಲ್ಲಿ ಏನಿದೆ?
“ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಹಾಗೂ ಭಾರತ್ ಜೋಡೋ ನ್ಯಾಯ ಯಾತ್ರೆ ಮೂಲಕ ಹೊಸ ಅಲೆ ಸೃಷ್ಟಿಸಿದ್ದಾರೆ. ಎರಡೂ ಯಾತ್ರೆಗಳ ಮೂಲಕ ಜನರಲ್ಲಿ ಅವರು ಭರವಸೆ ಮೂಡಿಸಿದ್ದಾರೆ. ದೇಶದ ರಾಜಕೀಯ ನೋಟವನ್ನೇ ಬದಲಿಸಲು ರಾಹುಲ್ ಗಾಂಧಿ ಯಾತ್ರೆಗಳ ಪಾತ್ರ ನಿರ್ಣಾಯಕವಾಗಿದೆ. ಇದರಿಂದ ಕಾಂಗ್ರೆಸ್‌ನ ಲಕ್ಷಾಂತರ ಕಾರ್ಯಕರ್ತರು ಹಾಗೂ ಕೋಟ್ಯಂತರ ಮತದಾರರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ” ಎಂಬುದಾಗಿ ಕಾಂಗ್ರೆಸ್ ನಿರ್ಣಯದಲ್ಲಿ ಉಲ್ಲೇಖಿಸಿದೆ.
ರಾಹುಲ್ ಗಾಂಧಿ ಅವರು ಸಿಡಬ್ಲ್ಯೂಸಿ ನಿರ್ಣಯವನ್ನು ಅಂಗೀಕರಿಸಿದರೆ, ಅವರೇ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಲಿದ್ದಾರೆ. ನರೇಂದ್ರ ಮೋದಿ ಅವರ ಮೂರನೇ ಅವಧಿಯ ಸರ್ಕಾರಕ್ಕೆ ಆ ಮೂಲಕ ರಾಹುಲ್ ಗಾಂಧಿ ಅವರು ಸೆಡ್ಡು ಹೊಡೆಯಲಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇಂಡಿಯಾ ಒಕ್ಕೂಟವು ಒಟ್ಟು 234 ಕ್ಷೇತ್ರಗಳಲ್ಲಿ ಜಯಿಸಿದೆ. ಇದರಿಂದಾಗಿ ಬಲಿಷ್ಠ ಪ್ರತಿಪಕ್ಷವಾಗಿ ಇರಲು ಕಾಂಗ್ರೆಸ್ ತೀರ್ಮಾನಿಸಿದೆ.
ಇದನ್ನೂ ಓದಿ: Rahul Gandhi: ರಾಯ್ ಬರೇಲಿ V/S ವಯನಾಡ್-ರಾಹುಲ್ ಆಯ್ಕೆ ಯಾವುದು?