ಈ ಅಂಕಣವನ್ನು ಇಲ್ಲಿ ಆಲಿಸಿ:
ದಶಮುಖ ಅಂಕಣ: ಆ ದಾರಿಯಲ್ಲಿ ಜನ ಸಾಲುಗಟ್ಟಿ ನಡೆಯುತ್ತಿದ್ದರು. ಮೆಟ್ಟು ತೊಟ್ಟವರು, ತೊಡದವರು, ಹೊಸ ಬಟ್ಟೆಯವರು, ಹೊಸದು-ಹಳತರ ಭೇದ ತಿಳಿಯದವರು, ಒಬ್ಬರೇ ನಡೆಯುವವರು, ಗುಂಪಲ್ಲಿ ಗದ್ದಲ ಮಾಡುವವರು, ಕೈಕೂಸುಗಳು, ಅಪ್ಪ/ಅಜ್ಜಂದಿರ ಹೆಗಲೇರಿದ ಚಿಣ್ಣರು, ತಾಯಂದಿರ ಕೈಹಿಡಿದು ಓಡುವವರು, ಊರಿನವರು, ನೆಂಟರು, ಇಷ್ಟರು, ಯಾರನ್ನೋ ಹಿಂಬಾಲಿಸುತ್ತಿದ್ದ ಊರ ನಾಯಿಗಳು, ಆಟೋಗಳಿಗೆ ಸೆಡ್ಡು ಹೊಡೆಯುವಂತೆ ಜನರನ್ನು ಪೇರಿಸಿಕೊಂಡ ಬೈಕುಗಳು, ಮನೆಮಂದಿಯನ್ನೆಲ್ಲ ಹೊತ್ತ ಆಟೋಗಳು, ಊರವರನ್ನು ತುಂಬಿಕೊಂಡಿದ್ದ ಟೆಂಪೊಗಳು… ದಾರಿ ಬದಿಯ ರಂಗು ತೆರೆದುಕೊಳ್ಳುತ್ತಲೇ ಇತ್ತು. ಹತ್ತೂರಲ್ಲೇ ಸುತ್ತೂರು ಜಾತ್ರೆ ಚೆಂದ ಎನ್ನುವ ಮಾತಿನಂತೆ, ಜಾತ್ರೆಯ ಚಂದವನ್ನು ಕಣ್ತುಂಬಿಕೊಳ್ಳಲೆಂದೇ ಅತ್ತ ಹೋಗಿದ್ದಾಗಿತ್ತು. ಜನ, ಜಾತ್ರೆ (village Fair) ಇಬ್ಬರಿಗೂ ಮರುಳು ಎನಿಸುವಂತೆ.. ಜನರೂ ಜಾತ್ರೆಯತ್ತ ಸಾಗುತ್ತಲೇ ಇದ್ದರು, ಜಾತ್ರೆಯೂ ಜನರನ್ನು ಸೆಳೆಯುತ್ತಲೇ ಇತ್ತು.
ಜಾತ್ರೆ ಮುಗಿಸಿ ಬಂದ ಬಳಿಕವೂ ಈ ತೇರು, ರಥ, ಪರಿಷೆ ಎನ್ನುವ ಕಲ್ಪನೆಗಳು ಮನದಲ್ಲಿ ರಿಂಗಣಿಸುತ್ತಿವೆ. ಜಾತ್ರೆಯೆಂದರೇನು? ಭಕ್ತಿಯೇ, ರಕ್ತಿಯೇ, ವಿನೋದವೇ, ಆಮೋದವೇ, ಪ್ರಸಾದದ ಸಾಲೇ, ನೂಕುನುಗ್ಗಲೇ ಅಥವಾ ಜನ ಸೇರುವ ಜಾಗ ಮಾತ್ರವೇ? ಕೂಗಿ ಕರೆಯುವ ಅಂಗಡಿ ಮುಂಗಟ್ಟುಗಳೇ? ಝಗಮಗಿಸುವ ಬಳೆ, ಕ್ಲಿಪ್ಪಿನಂಗಡಿ, ಮಿರ್ಚಿ-ಮಂಡಕ್ಕಿಯ ಸಾಲುಗಳೇ? ದೊಡ್ಡ ತೊಟ್ಟಿಲು, ಟೊರಾಟೊರಾ ಅಥವಾ ಬಾವಿಯಲ್ಲಿ ಗಡಗುಟ್ಟುವ ಮೋಟಾರು ಸೈಕಲ್ಲೇ? ನಾಟಕ, ಬಯಲಾಟಗಳೇ? ಜಾತ್ರೆಯೆಂದರೆ ತೇರೆಳೆಯುವುದೇ? ತೇರಿಲ್ಲದೆಯೂ ಜಾತ್ರೆಗಳು ನಡೆಯುತ್ತವಲ್ಲ. ಧರ್ಮವಿಲ್ಲದೆ ಜಾತ್ರೆಯಿಲ್ಲವೇ? ಅಮೂರ್ತವಾದ ನುಡಿತೇರನ್ನೂ ಎಳೆಯುತ್ತೇವಲ್ಲ. ಕೃಷಿಗೂ ಜಾತ್ರೆ, ತೇರು, ಪರಿಷೆಗಳಿಗೂ ಇರುವ ನಂಟೇನು? ಕೃಷಿ ಸಂಸ್ಕೃತಿ ಸಂಕಷ್ಟಕ್ಕೆ ಸಿಲುಕಿರುವಾಗಲೂ ಜಾತ್ರೆಗಳು ವರ್ಷದಿಂದ ವರ್ಷಕ್ಕೆ ಆಡಂಬರ ಹೆಚ್ಚಿಸಿಕೊಳ್ಳುತ್ತಿವೆಯಲ್ಲ… ಇದನ್ನು ಏನೆಂದು ಅರ್ಥ ಮಾಡಿಕೊಳ್ಳುವುದು?
ಜನವರಿ ಬಂದರೆ ಸಾಕು, ಜಾತ್ರೆಗಳದ್ದೇ ಜಾತ್ರೆ! ಎಪ್ರಿಲ್ವರೆಗಿನ ಕ್ಯಾಲೆಂಡರ್ ನೋಡಿದರೆ, ಪ್ರತಿದಿನ ಒಂದಿಲ್ಲೊಂದು ಕ್ಷೇತ್ರದ ಜಾತ್ರೆ. ಜಾತ್ರೆಯ ಬಯಲಿಗೆ ಹೋಗುವ ದಾರಿಯಲ್ಲಿ ಆಯಾ ದೇವರ ಕ್ಷೇತ್ರ ಮಹಾತ್ಮೆಯನ್ನು ಬಿಂಬಿಸುವ ರೀತಿಯಲ್ಲಿ, ದಾರಿಯುದ್ದಕ್ಕೂ ಕಾಣುವ ಕ್ಷೇತ್ರದ ಪುಡಾರಿಗಳ ಕಟೌಟುಗಳು, ದೂರದಿಂದಲೇ ಜನರನ್ನು ಸೆಳೆಯುವ ಬೃಹತ್ ಕಮಾನುಗಳು, ಗಾಡಿಯ ಹಾರ್ನುಗಳಂತೆ ಬಜಾಯಿಸುತ್ತಲೇ ಇರುವ ದಾರಿಹೋಕರ ಬಾಯಲ್ಲಿನ ಪೀಪೀಗಳು, ಕೈಯಲ್ಲಿ ಶೋಭಿಸುವ ಉಗಿ ಹಾಯುವ ಜೋಳ, ಕಡುಗುಲಾಬಿಯ ಕಾಟನ್ ಕ್ಯಾಂಡಿಗಳು, ಬಜ್ಜಿ-ಬೋಂಡಾ, ಖಾರ-ಮಂಡಕ್ಕಿ, ಬೆಂಡು ಬತ್ತಾಸು, ಕಬ್ಬಿನ ಹಾಲು… ಇವೆಲ್ಲ ಎಷ್ಟು ಸಣ್ಣ ತೇರು ಪೇಟೆಯಾದರೂ ಕಾಣುವುದಕ್ಕೆ ಸಿಕ್ಕೀತು. ಜಾತ್ರೆ ಪೇಟೆ ಅದೆಷ್ಟೇ ಚಿಕ್ಕದಿದ್ದರೂ ಜನಕ್ಕೆ ಸಾಕಾದೀತು, ಎಷ್ಟೇ ದೊಡ್ಡದಿದ್ದರೂ ತಿರುಗಿ ಖರ್ಚಾದೀತು. ತೇರಿಗೆ ಗಾತ್ರವಿದ್ದೀತು, ತೇರು ಪೇಟೆಗಲ್ಲ.
ಇತ್ತೀಚಿನ ವರ್ಷಗಳಲ್ಲಿ ಜಾತ್ರೆಗೆ ಹೋಗುವುದಕ್ಕಾಗಿಯೇ ದೂರದೂರುಗಳಿಂದ ವಿಶೇಷ ಬಸ್ಸುಗಳು ಬರುವುದುಂಟು. ಆದರೆ ಇದೆಲ್ಲ ಇಲ್ಲದ ಕಾಲದಲ್ಲಿ ನಡೆದು ಬರುವವರಿಗಾಗಿಯೇ ದಾರಿ ಬದಿಯಲ್ಲಿ ಅರವಟ್ಟಿಗೆಗಳು ತಲೆ ಎತ್ತುತ್ತಿದ್ದವು. ದಾರಿ ಬದಿಯ ಊರುಗಳ ಜನರದ್ದು ಇದೂ ಒಂದು ಸೇವೆಯಂತೆ ಇರುತ್ತಿತ್ತು. ನೀರು-ಬೆಲ್ಲ, ಮಜ್ಜಿಗೆ, ಪಾನಕ, ಕೋಸಂಬರಿ, ಯಾರಾದರೂ ದಾನಿಗಳು ನೀಡಿದರೆ ಕಬ್ಬು, ಬಾಳೆಗೊನೆ… ಹೀಗೆ ದಾರಿಹೋಕರ ತಕ್ಷಣದ ಆಯಾಸ ಪರಿಹಾರಕ್ಕೆ ವ್ಯವಸ್ಥೆ ಇದ್ದೇಇರುತ್ತಿತ್ತು. ಜಾತ್ರೆಗಾಗಿಯೇ ಬುತ್ತಿಗಂಟು ಹೊತ್ತು ತರುವವರು, ಸಾಮಾನು ಸರಂಜಾಮು ಹೇರಿಕೊಂಡು ಬಂದು ಅಡುಗೆ ಮಾಡಿಕೊಳ್ಳುವವರು, ಹರಕೆ ತೀರಿಸುವುದಕ್ಕಾಗಿ ಬರುವ ಜಾತಿ, ಮತ, ಲಿಂಗ, ವಯಸ್ಸು ಮುಂತಾದ ಸರ್ವತ್ರವನ್ನೂ ಮೀರಿದವರು… ಅದೊಂದು ಜಾತ್ಯತೀತ ಜಗತ್ತು. ಎಲ್ಲಿ ನೋಡಿದರೂ ಒಂದಿಷ್ಟು ಬಿಂಬಗಳನ್ನು ಹೊಳೆಯಿಸುತ್ತಾ, ನಾವೆಷ್ಟೇ ಜೋಡಿಸಲು ಪ್ರಯತ್ನಿಸಿದರೂ ಪೂರ್ಣವಾಗದ ಸ್ವಯಂಪೂರ್ಣ ಪ್ರಪಂಚ.
ಜಾತ್ರೆಗಾಗಿಯೇ ಸುಣ್ಣ-ಬಣ್ಣ ಬಳಿದುಕೊಂಡು ಸಿದ್ಧಗೊಳ್ಳುವ ದೇವಾಲಯ, ಎಳೆಯಿಸಿಕೊಳ್ಳುವ ಸಂಭ್ರಕ್ಕೆಂದೇ ಸಿಂಗರಿಸಿಕೊಳ್ಳುವ ತೇರು, ಇನ್ನು ಈ ತೇರು ಕಟ್ಟುವುದೆಂದರೆ ಸುಮ್ಮನಲ್ಲ; ಅಂಥ ಅನುಭವಿಗಳೇ ಬೇಕು. ಉಳಿದ ದಿನಗಳಲ್ಲಿ ತನ್ನ ಪಾರ್ಕಿಂಗ್ ಲಾಟಿನಲ್ಲಿ ಯಾವುದೇ ಪ್ರಸಾದನಗಳಿಲ್ಲದೆ ಚಪ್ಪೆಯಾಗಿ ನಿಂತು ಭಕ್ತರಿಗೆ ದರ್ಶನ ನೀಡುವ ಈ ರಥ, ಉತ್ಸವಕ್ಕೆ ಸರಿಯಾಗಿ ಮದುಮಗಳಂತೆ ಸಿದ್ಧಗೊಳ್ಳುತ್ತದೆ. ಮರದ ತೇರಿನ ಮೇಲೆ ನಾಲ್ಕಾರು ಮಜಲುಗಳ ಶೃಂಗಾರ ಗೋಪುರಗಳು, ಒಂದೊಂದು ಮಜಲಿನಂಚಿಗೂ ಪತಾಕೆಗಳು, ಬಣ್ಣಬಣ್ಣದ ಸಿಲ್ಕಿನಂಥ ಬಟ್ಟೆಗಳು, ತುತ್ತತುದಿಯ ಕಳಸ, ಬಾಳೆಕಂಬ, ರಾಶಿಗಟ್ಟಲೆ ಹೂವು, ತೇರಿನಲ್ಲಿ ಕುಳಿತುಕೊಳ್ಳುವ ಸರ್ವಾಲಂಕೃತ ಉತ್ಸವ ಮೂರ್ತಿ… ಭಕ್ತರು ಉಧೋ ಉಧೋ ಎನ್ನಲು ಇನ್ನೇನು ಬೇಕು?
ಇಷ್ಟಾದ ಮೇಲೆ ಪ್ರಾರಂಭ ತೇರೆಳೆಯುವ ಉನ್ಮಾದ. ಬಾಜಾ-ಬಜಂತ್ರಿ, ಹಾಡು-ಕುಣಿತ, ಪಟಾಕಿ, ಜಯಕಾರದೊಂದಿಗೆ ರಟ್ಟೆಗಾತ್ರದ ಹಗ್ಗವನ್ನು ಹಿಡಿದೆಳೆಯುವ ಅಸಂಖ್ಯಾತ ಭಕ್ತರು; ಬಾಳೆಹಣ್ಣು, ಉತ್ತುತ್ತೆಗಳನ್ನು ಬೀಸಿ ರಥದತ್ತ ಎಸೆಯುವವರು; ಇದನ್ನೆಲ್ಲ ಕಣ್ತುಂಬಿಕೊಳ್ಳಲೆಂದೇ ನೆರೆಯುವವರು; ಕಾಣದಿದ್ದರೆ ಮರದ ಕೊಂಬೆ, ಮನೆಯ ಮಹಡಿ ಮುಂತಾದ ಎತ್ತರದ ಯಾವೊಂದನ್ನೂ ಬಿಡದಂತೆ ಹತ್ತುವ ಉತ್ಸಾಹಿಗಳು; ಆವೇಶದಲ್ಲಿ ತೇಲಾಡುವವರು, ತೀರ್ಥ ಕುಡಿದು ತೂರಾಡುವವರು, ಜನಜಂಗುಳಿಯಲ್ಲಿ ಬೇಕೆಂದೇ ಮೈ ಸೋಕಿಸುವವರು, ಪರ್ಸು-ಮೊಬೈಲು ಕಳಕೊಳ್ಳುವವರು, ಹುಳುಕರು, ಕೊಳಕರು… ಇವರೆಲ್ಲ ಸೇರಿಯೇ ಜಾತ್ರೆ ಎನಿಸಿಕೊಳ್ಳುವುದು. ದೇವರಿಗೆ ಭೇದವುಂಟೇ?
ಆಯಾ ಪ್ರದೇಶಗಳ ಸಂಸ್ಕೃತಿ-ಸಂಪ್ರದಾಯಗಳ ದೀರ್ಘಕಾಲದ ಅಲಿಖಿತ ಚರಿತ್ರೆಯಂತೆ ಕಾಣುತ್ತವೆ ಈ ಜಾತ್ರೆಗಳು. ಜಾತ್ರೆಗೆಂದೇ ತವರಿಗೆ ಬರುವ ಹೆಮ್ಮಕ್ಕಳು, ನೆಂಟರು, ಇಷ್ಟರು, ಗಡಿ ಸೀಮೆಗಳ ಹಂಗಿಲ್ಲದಂತೆ ದೂರದೂರುಗಳಿಂದ ಬರುವ ಭಕ್ತಾದಿಗಳು, ಯಾವುದೇ ಮನೆಯಲ್ಲಿ ಯಾರೂ ಜಾತ್ರಿಗರು ತಂಗಬಹುದೆಂಬಂತೆ ಊರನ್ನೇ ಆವರಿಸುತ್ತಿದ್ದ ಆತಿಥೇಯ ಭಾವ, ಜೀವನದಲ್ಲಿ ಮೊದಲ ಬಾರಿಗೆ ಸಿಕ್ಕಿದವರನ್ನೂ ಜಾತಿ-ಮತ ಕೇಳದಂತೆ ಊರಿನವರು ಒಳಗೊಳ್ಳುತ್ತಿದ್ದ ಪರಿ… ಹೌದಲ್ಲ! ಸಾಮರಸ್ಯಕ್ಕೆ ಬೇಕಾದ್ದು ಪ್ರೀತಿಸುವ ಮನಸ್ಸು ಮಾತ್ರ.
ನಾಡಿನ ಉದ್ದಗಕ್ಕೆ ನಡೆಯುವ ಜಾತ್ರೆ- ರಥೋತ್ಸವಗಳ ಹೆಸರನ್ನೊಮ್ಮೆ ನೆನಪಿಸಿಕೊಳ್ಳುತ್ತಾ ಹೋದರೆ, ಮೈಸೂರಿನ ಚಾಮುಂಡಿ ರಥೋತ್ಸವ, ಕೊಡಗಿನ ಓಂಕಾರೇಶ್ವರ, ನಂಜನಗೂಡಿನ ನಂಜುಂಡೇಶ್ವರ, ಮೇಲುಕೋಟೆಯ ಚೆಲುವನಾರಾಯಣ, ಸಿದ್ಧಗಂಗೆಯ ಗೋಸಲ ಸಿದ್ದೇಶ್ವರ, ಹುಬ್ಬಳ್ಳಿಯ ಸಿದ್ಧಾರೂಢ, ಬಾದಾಮಿಯ ಬನಶಂಕರಿ, ಶಿರಸಿಯ ಮಾರಿಕಾಂಬೆ, ʻಅಜ್ಜನ ಜಾತ್ರೆʼ ಎಂದೇ ಕರೆಸಿಕೊಳ್ಳುವ ಗವಿಸಿದ್ದೇಶ್ವರ ಜಾತ್ರೆ, ಕಲ್ಬುರ್ಗಿಯ ಶರಣ ಬಸವೇಶ್ವರ, ಸವದತ್ತಿಯ ಎಲ್ಲಮ್ಮ, ಬಳ್ಳಾರಿಯ ಕನಕದುರ್ಗಮ್ಮ ಸಿಡಿ ಬಂಡಿ, ಕೊಟ್ಟೂರಿನ ಬಸವೇಶ್ವರ, ಉಡುಪಿಯ ಶ್ರೀಕೃಷ್ಣ, ಶೃಂಗೇರಿಯ ಶಾರದೆ, ಕೊಲ್ಲೂರಿನ ಮೂಕಾಂಬಿಕೆ, ಧರ್ಮಸ್ಥಳದ ಮಂಜುನಾಥ, ಹಂಪೆಯ ವಿರೂಪಾಕ್ಷ, ಗೋಕರ್ಣದ ಮಹಾಬಲೇಶ್ವರ… ಊಹುಂ! ಹೇಳಿ ಮುಗಿಸುವುದಕ್ಕೆ ಸಾಧ್ಯವೇ ಇಲ್ಲ. ಹೋಗುವುದಾದರೂ ಎಲ್ಲಿ, ಯಾವುದಕ್ಕೆ? ಜಾತ್ರಿಗರು ಊರಿಂದೂರಿನ ಯಾತ್ರಾರ್ಥಿಗಳಾಗುವುದು ಇದಕ್ಕೇ ಇರಬೇಕು!
ಜಾತ್ರೆಯೆಂದರೆ ಧಾರ್ಮಿಕ ಆಚರಣೆಗಳಿಗೆ ಮಾತ್ರವೇ ಸೀಮಿತವೇ? ಕೃಷಿ ಸಂಸ್ಕೃತಿಯ ಜೊತೆಗೆ ಜಾತ್ರೆಗಳಿಗೆ ಇರುವ ನಂಟು ಹೊಸದೇನಲ್ಲ. ನರಗುಂದದ ರೊಟ್ಟಿ ಜಾತ್ರೆ, ಬೆಂಗಳೂರಿನ ಕಡ್ಲೆಕಾಯಿ ಪರಿಷೆ, ಹಲವು ಕಡೆಗಳಲ್ಲಿ ನಡೆಯುವ ದನದ ಜಾತ್ರೆಗಳು, ಯಾವುದೇ ಜಾತ್ರೆಯಲ್ಲಿ ಮಾರಾಟವಾಗುವ ರಾಶಿ ರಾಶಿ ಕೃಷಿ ಉಪಕರಣಗಳು, ಬಿತ್ತನೆಯ ಬೀಜಗಳು, ಕಂಬಳ, ಸುಗ್ಗಿಮೇಳಗಳೆಲ್ಲ ಇದರದ್ದೇ ಇನ್ನೊಂದು ಮುಖ ತಾನೆ? ಉಳಿದೆಲ್ಲ ಹಬ್ಬಗಳಂತೆ ಆಯಾ ಊರಿನ ದೇವರಿಗೂ ಹಬ್ಬವೊಂದನ್ನು ಎಲ್ಲರೂ ಕೂಡಿ ಮಾಡುವ ಈ ಕಲ್ಪನೆಗಳನ್ನು ಕೃಷಿಯ ಮತ್ತು ಗ್ರಾಮ್ಯ ಬದುಕಿನಿಂದ ಬೇರ್ಪಡಿಸಲು ಸಾಧ್ಯವಿಲ್ಲ.
ಇದನ್ನೂ ಓದಿ: ದಶಮುಖ ಅಂಕಣ: ಬಾಗಿಲನು ತೆರೆದು…
ಇಂತಿಪ್ಪ ಜಾತ್ರೆಗಳು ಸಹ ಅತಿಯಾದ ವ್ಯಾಪಾರೀಕರಣಕ್ಕೆ ಒಳಗಾಗಿರುವುದು ಜಾತ್ರೆಗೆ ಹೋಗುವ ಎಂಥವರ ಅರಿವಿಗೂ ಬರುವ ಸಂಗತಿ. ಚೀನಾದಿಂದ ಆಮದಾಗಿ ಬರುವ ಝಗಮಗ ವಸ್ತುಗಳು ತುದಿ-ಮೊದಲಿಲ್ಲದಂತೆ ಜಾತ್ರೆಪೇಟೆಯನ್ನು ಆಕ್ರಮಿಸಿಕೊಂಡಿವೆ. ಸಾಂಪ್ರದಾಯಿಕ ಜಾತ್ರೆ ತಿನಿಸುಗಳಿಗೆ ಪೈಪೋಟಿ ನೀಡುವಂತೆ ಮಂಚೂರಿ-ನೂಡಲ್ಸ್-ಫ್ರೈಡ್ರೈಸ್ ಅಂಗಡಿಗಳು ಕೂಗಿ ಕರೆಯುತ್ತವೆ. ರಂಗೋಲಿ ತಟ್ಟೆಗಳಿಂದ ಹಿಡಿದು ಚಪ್ಪಲಿ, ಬ್ಯಾಗು, ವಸ್ತ್ರಗಳ ರಾಶಿಗಳನ್ನು ಕಂಡಾಗ ಇವುಗಳ ಮೂಲದ ಬಗ್ಗೆ ಕುತೂಹಲ ಹುಟ್ಟದಿರುವುದು ಕಷ್ಟ. ಒಂದಕ್ಕೆರಡರಷ್ಟು ಬೆಲೆಯ ವಸ್ತುಗಳು ಒಂದೆಡೆ; ಇನ್ನೊಂದೆಡೆ ೧೦ ರೂ.ಗಳಿಗೆ ಮಾರಾಟವಾಗುವ ಸ್ಟೀಲಿನ ಬಣ್ಣದ ಪಾತ್ರೆಗಳು! ಯಾವುದು ಸತ್ಯ? ಜಾತ್ರೆಗಿರುವ ಅನಂತ ಆಯಾಮಗಳ ಪೈಕಿ ಇದೂ ಒಂದು ಎಂದು ಒಪ್ಪಿಕೊಳ್ಳಬೇಕಷ್ಟೆ. ಇನ್ನು ಜೊತೆಗಿರುವ ಬಳಗಕ್ಕೆಲ್ಲ ತೇರುಪೇಟೆಯಲ್ಲಿ ಸತ್ಕಾರ ಮಾಡುವವರನ್ನು ಕಂಡಾಗ… ಯಾರದ್ದೋ ದುಡ್ಡು ಎಲ್ಲಮ್ಮನ್ ಜಾತ್ರೆ!
ಇಷ್ಟಾಗಿ, ಜಾತ್ರೆಗಳು ನಮಗೇಕೆ ಬೇಕು? ಧರ್ಮವನ್ನು ಮರೆತು- ಭಕ್ತಿಯನ್ನು ಅರಿಯುವುದಕ್ಕೆ, ಭ್ರಮೆಗಳನ್ನು ಹರಿಸುವುದಕ್ಕೆ, ಅರ್ಥವಾಗದ ಬಿಡುಗಡೆಯ ಭಾವವೊಂದನ್ನು ಹೊಂದುವುದಕ್ಕೆ, ಖರ್ಚಿಲ್ಲದೆಯೂ ಖುಷಿ ಪಡುವುದಕ್ಕೆ, ಖರ್ಚು ಮಾಡಿ ಸಂಭ್ರಮಿಸುವುದಕ್ಕೆ, ದುಡಿದ ಬಳಲಿಕೆ ತೀರಿಸಿಕೊಳ್ಳುವುದಕ್ಕೆ, ನಮ್ಮವರನ್ನು ಕಾಣುವುದಕ್ಕೆ, ಕಂಡವರನ್ನು ನಮ್ಮವರೆಂದುಕೊಳ್ಳುವುದಕ್ಕೆ, ಈ ವರ್ಷ ತಪ್ಪಿದರೂ ಮುಂದಕ್ಕೆ ಮತ್ತೆ ಬರುತ್ತದೆಂಬ ಭರವಸೆಯನ್ನು ಹೊಂದುವುದಕ್ಕೆ, ರಾಶಿ ರಾಶಿ ನೆನಪುಗಳನ್ನು ಪೇರಿಸಿಕೊಳ್ಳುವುದಕ್ಕೆ, ಬದುಕೆಂದರೆ ಮೊಬೈಲಷ್ಟೇ ಅಲ್ಲ ಎನ್ನುವ ಸರಳ ಸತ್ಯವನ್ನು ಅರ್ಥ ಮಾಡಿಕೊಳ್ಳುವುದಕ್ಕೆ… ಕಾರಣಗಳು ಅಸಂಖ್ಯಾತ. ಹೆಚ್ಚು ಪ್ರಶ್ನಿಸುತ್ತಿರಬೇಡಿ. ಸಮೀಪದಲ್ಲಿ ಎಲ್ಲಿ ಜಾತ್ರೆಯಿದ್ದರೂ ಒಮ್ಮೆ ಹೋಗಿ ಬನ್ನಿ. ಜಾತ್ರೆಯಲ್ಲಿ ಉತ್ತರಗಳೂ ಸಿಗುತ್ತವೆ!
ಇದನ್ನೂ ಓದಿ: ದಶಮುಖ ಅಂಕಣ: ʼಮುನಿಸು ತರವೇ…!’ ಎಂಬ ಮಧುರ ಮಂತ್ರ