Site icon Vistara News

Dattatreya Jayanti 2022 | ಸ್ಮರಣೆ ಮಾತ್ರಕೆ ಒಲಿಯುವ ದೇವರು ಶ್ರೀಗುರು ದತ್ತ

Dattatreya Jayanti 2022

ರಾಜಗುರು ದ್ವಾರಕನಾಥ್‌
ಮಾಲಕಮಂಡಲು ಧರಃ ಕರಪದ್ಮಯುಗ್ಮೆ
ಮಧ್ಯಸ್ಥಪಾಣಿಯುಗಲೇ ಡಮರು ತ್ರಿಶೂಲೇ|
ಯಸ್ಯಸ್ತ ಊಧ್ರ್ವಕರಯೋಃ ಶುಭ ಶಂಖಚಕ್ರೆ
ವಂದೇ ತಮತ್ರಿವರದಂ ಭುಜಷಟ್ಕಯುಕ್ತಂ ||
ಈ ಸ್ತೋತ್ರದಅರ್ಥವೆಂದರೆ ಕೆಳಗಿನವೆರಡು ಕೈಗಳೆಂಬ ಕಮಲಗಳಲ್ಲಿರುದ್ರಾಕ್ಷ ಮಾಲೆ, ಕಮಂಡಲಗಳೂ, ನಡುವಿನವೆರಡು ಕೈಗಳಲ್ಲಿಡಮರು ತ್ರಿಶೂಲಗಳೂ ಮತ್ತು ಯಾವಾತನ ಮೆಲಿನವೆರಡು ಕೈಗಳಲ್ಲಿಶುಭಪ್ರದವಾದ ಶಂಖ – ಚಕ್ರಗಳು ಉಂಟೋ ಅಂತಹ ಆರು ಭುಜಗಳುಳ್ಳ ಅತ್ರಿಋುಷಿಗೆ ವರಪ್ರದನಾದವನನ್ನು ಅಂದರೆ ದತ್ತನನ್ನು ವಂದಿಸುವೆ.

********

ಮಾರ್ಗಶಿರ ಮಾಸದ ಶುಕ್ಲಪಕ್ಷದ ರೋಹಿಣಿ ನಕ್ಷತ್ರವನ್ನು ಹೊಂದಿರುವ ಚತುರ್ದಶಿ ಬಹಳ ಪುಣ್ಯದ ದಿನ. ಏಕೆಂದರೆ ಅಂದು ಶ್ರೀಗುರು ದತ್ತಾತ್ರೇಯರ ಜಯಂತಿ. ಕೆಲವೆಡೆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಶುದ್ಧ ಪೂರ್ಣಮಿಯಂದು ದತ್ತಜಯಂತಿಯನ್ನು ಆಚರಿಸುವುದೂ ಉಂಟು. ಇಂದು “ಕಾರ್ತಿಕ ದೀಪʼʼದ ದಿನವೂ ಹೌದು. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಮುಖ್ಯವಾಗಿ ತಮಿಳುನಾಡಿನಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ತಮಿಳರ ಪಂಚಾಂಗದ ಪ್ರಕಾರ ಹುಣ್ಣಿಮೆಯ ಈ ದಿನವನ್ನು “ಕಾರ್ತಿಕೈʼʼಎಂದು ಕರೆಯಲಾಗುತ್ತದೆ. ದತ್ತ ಜಯಂತಿ ಮತ್ತು ಸುಬ್ರಹ್ಮಣ್ಯನಿಗೆ ಸೇರಿದ ಈ ವಿಶೇಷ ದಿನ ಇಂದು ಒದಗಿ ಬಂದಿದೆ. ಹೀಗಾಗಿ ಈ ಬಾರಿಯ ದತ್ತ ಜಯಂತಿಗೆ ವಿಶೇಷವಾದ ಮಹತ್ವವಿದೆ.

‘ದತ್ತ’ ಎಂದರೆ ಕೊಡುವವನು ಎಂದರ್ಥ. ಏನು ಕೇಳಿದರೂ ಕೊಡವವನು. ನೀವು ದತ್ತನನ್ನು ಎಲ್ಲಿಬೇಕಾದರೂ ಪ್ರಾರ್ಥಿಸಬಹುದು, ಕುಳಿತಲ್ಲಿ, ನಿಂತಲ್ಲ, ಮಲಗಿದಲ್ಲಿ ಎಲ್ಲಿಗೆ ಬೇಕಾದರೂ ಬಂದು ನಿಮ್ಮ ಇಷ್ಟಾರ್ಥವನ್ನು ಈಡೇರಿಸುತ್ತಾನೆ. ಬೇರೆಲ್ಲಾ ದೇವರಗಳಿಗೆ ನೀವು ಪೂಜೆ, ಅಭಿಷೇಕ, ಸಹಸ್ರನಾಮ, ವ್ರತಕಲ್ಪಾದಿಗಳನ್ನು ಭಕ್ತಿಯಿಂದ ಮಾಡಿ ಪ್ರಾರ್ಥಿಸಬೇಕು. ಆದರೆ ಸ್ಮರಣೆಮಾಡಿದ ಮಾತ್ರಕ್ಕೆ ಸಂತುಷ್ಟನಾಗಿ ಮನೋಕಾರ್ಯವನ್ನು ನೆರವೇರಿಸುವ ಜಗತ್ತಿನ ಏಕೈಕ ದೇವರು ದತ್ತ. ದತ್ತ ತ್ರಿಮೂರ್ತಿಗಳ ಸ್ವರೂಪ, ಸುಗುಣ ರೂಪ, ಅವಧೂತ ಪರಂಪರೆಯ ಸೃಷ್ಟಿ ಕರ್ತ. ನಾರಾಯಣನ ಅವತಾರಗಳಿಗೂ ಕಾರಣಕರ್ತ.

ದತ್ತನ ಅವತಾರ ಹೇಗೆ?
ಚಿತ್ರಕೂಟ ಅರಣ್ಯದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾದ ಅತ್ರಿಮಹರ್ಷಿಗಳು ತಮ್ಮ ಧರ್ಮಪತ್ನಿ ಅನುಸೂಯಾದೇವಿ ಯೊಂದಿಗೆ ವಾಸವಾಗಿದ್ದರು. ಅನುಸೂಯ ಪರಮ ಪತಿವ್ರತೆ. ಅತ್ಯಂತ ಸುಂದರಿ ಬೇರೆ. ಅತ್ರಿ ಮುನಿಗಳ ತಪೋನುಷ್ಠಾನಗಳು ಮತ್ತು ಅನುಸೂಯಾಳ ಪರಮಪತಿ ವ್ರತವು ಎಲ್ಲಲೋಕವನ್ನು ತಲೂಪಿತ್ತು. ಇಂದ್ರಾದಿ ದೇವತೆಗಳು ಎಲ್ಲಿ ಇವರಿಬ್ಬರು ತಮ್ಮ ಪುಣ್ಯದ ಪ್ರಭಾವದಿಂದ ಸ್ವರ್ಗದ ಅಧಿಪತಿಗಳಾಗುತ್ತಾರೋ ಎಂದು ಹೆದರಿ, ತ್ರಿಮೂರ್ತಿಗಳ ಹತ್ತಿರ ಹೋಗಿ ಈ ಬಗ್ಗೆ ಹೇಳಿದರು. ಅನುಸೂಯಾಳನ್ನು ಅತಿಯಾಗಿ ಪ್ರಶಂಸಿಸಿ ತ್ರಿಮೂರ್ತಿಗಳಿಗೆ ಕೋಪ ಬರುವಂತೆ ಮಾಡಿದರು. ಆಕೆಯ ವ್ರತಭಂಗ ಮಾಡದಿದ್ದರೆ ಮೂರು ಲೋಕವನ್ನೂ ಆಕ್ರಮಣ ಮಾಡಿಕೊಂಡುಬಿಡುತ್ತಾಳೆ ಎಂದು ಹೆದರಿಸಿದರು.

ಹೀಗಾಗಿ ತ್ರಿಮೂರ್ತಿಗಳು ಆಕೆಯ ಪತಿವ್ರತವನ್ನು ಪರೀಕ್ಷಿಸಲು ಕಾರಣಿಕ ವೇಷ ಹಾಕಿಕೊಂಡು ಅನಸೂಯಳಿದ್ದ ಆಶ್ರಮಕ್ಕೆ ಬಂದು ಭಿಕ್ಷೆ ಬೇಡಿದರು. ಈ ಸಂದರ್ಭದಲ್ಲಿ ಅತ್ರಿಮಹರ್ಷಿಗಳು ತಪಸ್ಸಿಗೆಂದು ಹೊರಹೋಗಿದ್ದರು. ‘‘ಸಾದ್ವೀಮಣಿಯೇ, ನಾವು ಮೂವರೂ ಇಚ್ಛಾಭೋಜನ ಮಾಡುವ ಆಸೆಯಿಂದ ಇಲ್ಲಿಗೆ ಬಂದಿದ್ದೇವೆ. ನಿಮಗೆ ನಮಗೆ ಭೋಜನ ವ್ಯವಸ್ಥೆ ಮಾಡಲು ಸಾಧ್ಯವೇ’’ ಎಂದು ಕೇಳಲು ಅನುಸೂಯ ಸಂತೋಷದಿಂದ ಒಪ್ಪಿದಳು.
ಆಗ ಅತಿಥಿಗಳ ವೇಷದಲ್ಲಿದ್ದ ತ್ರಿಮೂರ್ತಿಗಳು ,‘‘ನೀನು ನಗ್ನಳಾಗಿ ಬಂದು ಬಡಿಸಿದರೆ ಮಾತ್ರ ನಾವು ಭೋಜನ ಮಾಡುತ್ತೇವೆ’’ ಎಂದು ಹೇಳಿದರು.

ಅತಿಥಿಗಳ ಈ ಅನಿರೀಕ್ಷಿತ ಅಪೇಕ್ಷೆ ಕೇಳಿ ಅನುಸೂಯಾದೇವಿಯು ಗೊಂದಲಕ್ಕೆಬಿದ್ದಳು. ಇವರ ಬೇಡಿಕೆಯನ್ನು ನೋಡಿದರೆ ನನ್ನ ಸತ್ವಪರೀಕ್ಷೆಗಾಗಿಯೇ ಬಂದವರ ಹಾಗೆ ಕಾಣಿಸುತ್ತದೆ, ಇವರು ಬಹುಶಃ ಅವತಾರಪುರುಷರೇ ಇರಬೇಕೆಂದುಕೊಂಡು, ನಿಮ್ಮ ಇಚ್ಛೆಯಂತೆಯೇ ಊಟಕ್ಕೆ ಬಡಿಸುತ್ತೇನೆ’’ ಎಂದು ಹೇಳಿ ಪಾಕಶಾಲೆಗೆ ಹೋದಳು. ಭೋಜನಕ್ಕೆ ತಯಾರು ಮಾಡಿದ ಬಗೆಬಗೆಯ ಪದಾರ್ಥಗಳನ್ನು ತೆಗದುಕೊಂಡ ಅನುಸೂಯ ಪತಿ ದೇವರ ಪ್ರಾರ್ಥನೆ ಮಾಡಿ; ‘‘ನನಗೆ ಪರೀಕ್ಷೆಯ ಸಮಯ ಬಂದಿದೆ, ನಿಮ್ಮ ಸಹಕಾರ ವಿರಲಿ’’ಎಂದು ಕೋರಿಕೊಂಡು, ಅನ್ನಪೂರ್ಣೆಶ್ವರಿಯನ್ನು ಪ್ರಾರ್ಥಸಿ, ನಗ್ನಳಾಗಿ ಬಡಿಸಳು ಹೋದಳು.

ಆಗ ಆಕೆಯ ಪತಿವ್ರತದ ಪ್ರಭಾವದಿಂದಾಗಿ ತ್ರಿಮೂರ್ತಿಗಳೂ ಶಿಶುಗಳಾಗಿ ಪರಿವರ್ತನೆಗೊಂಡಿದ್ದರು. ಕೂಡಲೇ ಅನುಸೂಯ ಮಾತೃಭಾವದಿಂದ ಈ ಶಿಶುಗಳನ್ನು ಎತ್ತಿಕೊಂಡು ಎದೆಹಾಲು ಕುಡಿಸಿ, ತೊಟ್ಟಿಲಲ್ಲಿಮಲಗಿಸಿ ಜೋಗುಳ ಹಾಡಿದಳು.

ಶ್ರೀ ಗುರು ದತ್ತ ಪಾದುಕೆ

ಅಷ್ಟರಲ್ಲಿ ಅತ್ರಿಮಹರ್ಷಿಗಳು ಬಂದು ವಿಷಯವನ್ನೆಲ್ಲಾ ತಿಳಿದರು. ಅವರಿಗೆ ಶಿಶು ಗಳಾಗಿರುವುದು ತ್ರಿಮೂರ್ತಿಗಳೇ ಎಂದು ತಿಳಿದು ಹೋಯಿತು. ಇಷ್ಟರಲ್ಲಿತ್ರಿಮೂರ್ತಿಗಳು ಪ್ರತ್ಯಕ್ಷ ರಾಗಿ, ಬೇಕಾದವರ ಕೇಳುವಂತೆ ಸೂಚಿಸಿದರು. ಆಗ ಅನುಸೂಯಾ ದೇವಿಯು ಈ ಮೂವರು ಶಿಶುಗಳನ್ನೂಬಿಟ್ಟು ಹೋಗುವಂತೆ ಕೇಳಿಕೊಳ್ಳುತ್ತಾರೆ. ಆಗ ತ್ರಿಮೂರ್ತಿಗಳು ‘ತಥಾಸ್ತು’ ಎಂದು ಹೇಳಿ ತಮ್ಮ ಅಂಶದಿಂದ ಸೃಷ್ಟಿಯಾದ ಮೂವರು ಶಿಶುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಹೀಗಾಗಿ ದತ್ತರದು ‘ನಯೋನಿ’ ಸೃಷ್ಟಿ.

ಬ್ರಹ್ಮನ ಶಿಶುವಿಗೆ ಚಂದ್ರನೆಂದು, ವಿಷ್ಣುವಿನ ಶಿಶುವಿಗೆ ದತ್ತನೆಂದು, ಮಹೇಶ್ವರನ ಶಿಶುವಿಗೆ ದೂರ್ವಾಸನೆಂದು ನಾಮಕರಣ ಮಾಡಲಾಗುತ್ತದೆ. ಮುಂದೆ ತಾಯಿ ಅನುಸೂಯದೇವಿಯ ಅಪ್ಪಣೆಪಡೆದು ಚಂದ್ರನು ಚಂದ್ರಮಂಡಲಕ್ಕೂ ದೂರ್ವಾಸನು ತಪಸ್ಸಿಗಾಗಿ ಹೊರಟು ಹೋಗುತ್ತಾರೆ. ಆದರೆ ನಾರಾಯಣ ಸ್ವರೂಪಿಯಾದ ದತ್ತಾದೇವರು ತಾಯಿಯ ಬಳಿಯೇ ಉಳಿದುಕೊಂಡು, ಲೋಕರಕ್ಷಕರಾಗುತ್ತಾರೆ.

ಗುರು ಸ್ವರೂಪಿ ದತ್ತ
ದತ್ತರನ್ನು ಗುರು ಸ್ವರೂಪಿ ಎಂದು ಕರೆಯಲಾಗುತ್ತದೆ. ಅವರ ಚರಿತ್ರೆಯನ್ನು ‘ಶ್ರೀಗುರುಚರಿತ್ರೆ’ ಎಂದು ಹೆಸರಿಸಲಾಗಿದೆ. ಇದೊಂದು ಪ್ರಾಸಾಧಿಕ ಗ್ರಂಥವಾಗಿದ್ದು, ಭಾವಿಕ ಜನರಿಗೆ ಕಾಮಧೇನು, ಕಲ್ಪವೃಕ್ಷ ಗಳಂತೆ ಫಲಪ್ರದವಾಗಿದೆ. ಇದರ ಪಾರಾಯಣದಿಂದ ಪುರುಷಾರ್ಥಗಳು, ಅಷ್ಟಸಿದ್ದಿಗಳು ಲಭ್ಯವಾಗುತ್ತವೆ. ಧ್ಯಾನಕಾಂಡ, ಕರ್ಮಕಾಂಡ ಮತ್ತು ಭಕ್ತಿಕಾಂಡ ಎಂದು ಮೂರು ಕಾಂಡಗಳನ್ನು ಒಳಗೊಂಡ ಈ ಚರಿತ್ರೆಯು 53ಅಧ್ಯಾಯಗಳಲ್ಲಿವೆ. ಪ್ರತಿಯೊಂದು ಅಧ್ಯಯಕ್ಕೂ ತನ್ನದೇ ಆದ ಮಹತ್ವವಿರುತ್ತದೆ. ಕಷ್ಟ-ಕಾರ್ಪಣ್ಯ ಕಳೆಯಲು ಸಹಾಯಕವಾಗಿರುತ್ತದೆ.

ದೇವರಿಗೆ ಬಡವ-ಶ್ರೀಮಂತನೆಂಬ ಭೇದವಿಲ್ಲ, ಆ ಜಾತಿ- ಈ ಜಾತಿ ಶ್ರೇಷ್ಠವೆಂಬುದಿಲ್ಲ, ಎಲ್ಲರ ಕಷ್ಟವನ್ನೂ ದೂರ ಮಾಡುತ್ತಾನೆ ಎಂಬುದುದನ್ನು ಗುರುಚರಿತ್ರೆಯಲ್ಲಿ ಕಥೆಗಳ ಮೂಲಕ ನಿರೂಪಿಸಲಾಗಿದೆ. ಇದರ ಪಾರಾಯಣಕ್ಕಿಂತ ದೊಡ್ಡ ಪೂಜೆ ಇಲ್ಲ. ಇದನ್ನು ಶ್ರದ್ಧಾ ಭಕ್ತಿಯಿಂದ ಪಾರಾಯಣ ಮಾಡಿದರೆ ಏನನ್ನು ಬೇಕಾದರೂ ಗಳಿಸಬಹುದು. ಇದಕ್ಕೆ ನಾನೇ ಸಾಕ್ಷಿ. ವಿವಿಧ ರೀತಿಯ ಸಂಕಷ್ಟಗಳು, ಶತ್ರುಭೀತಿ ನಮ್ಮನ್ನೆಲ್ಲಾ ಕಾಡುತ್ತಿರುವ ಈ ಹೊತ್ತಲ್ಲಿ ಇದರ ಪಾರಾಯಣ ನಮ್ಮನ್ನು ಕಾಪಾಡುವುದರಲ್ಲಿ ಅನುಮಾನವಿಲ್ಲ. ದೈವಭಕ್ತರು ಮನೆ ಮನೆಗಳಲ್ಲಿ ಇದರ ಪಾರಾಯಣ ಮಾಡಿದರೆ ದೇಶ ಎಲ್ಲಾ ರೀತಿಯಲ್ಲಿಯೂ ಸುರಕ್ಷಿತವಾಗಿರುತ್ತದೆ. ಸಾಗರವನ್ನು ದಾಟಲು ನೌಕೆ ಬೇಕು ಅಂತೆಯೇ ಭವ ಸಾಗರವ ದಾಟಲು ಇರುವ ನೌಕೆ ಶ್ರೀಗುರು ಚರಿತ್ರೆ ಎಂಬುದನ್ನು ನಾವ್ಯಾರೂ ಮರೆಯಬಾರದು.

ಗುರು ಸ್ವರೂಪಿಯಾಗಿರುವ ಶ್ರೀದತ್ತರು ಬೋಧಿಸಿದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಶ್ರೀದತ್ತರೇ ಗುರುವು, ತತ್ತ್ವಸ್ವರೂಪನು, ಮಾರ್ಗವು, ಧ್ಯೇಯವು, ದಾರಿ-ಗುರಿಗಳೆರಡೂ ಆಗಿರುವ ತತ್ತ್ವಾರ್ಥಿ ಎನ್ನುತ್ತದೆ ಶಾಂಡಿಲ್ಯೋಪನಿಷತ್ತು. ದತ್ತರು ರಚಿಸಿದ ಕೃತಿಯೇ ‘ಅವಧೂತಗೀತೆ’.

ಅವತಾರ ಪುರುಷ ದತ್ತ
ದತ್ತರ ಮುಂದಿನ ಅವತಾರವೇ ಶ್ರೀಪಾದ ಶ್ರೀವಲ್ಲಭ ಮತ್ತು ಶ್ರೀನರಸಿಂಹ ಸರಸ್ವತಿ ಯತಿಗಳು. ದತ್ತನು ಒಟ್ಟು 24 ಅವತಾರವೆತ್ತಿದ್ದಾರೆ. ಸಾಕ್ಷಾತ್‌ ಶ್ರೀ ದತ್ತಾತ್ರೇಯರು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಲ್ಲಿನ ಶ್ರೀ ಕ್ಷೇತ್ರ ಪೀಠಾಪುರದಲ್ಲಿಶ್ರೀವಲ್ಲಭ ಎಂಬ ಹೆಸರಿನಲ್ಲಿ ಜನಿಸಿದರು. ನಂತರ ಮಹಾರಾಷ್ಟ್ರದ ಕರಂಜಿಪುರದಲ್ಲಿ ಬಾಲಕ ನೋರ್ವನಿಗೆ ವಿದ್ಯದಾನ ಮಾಡಿ (ಮುಂದೆ ಈ ಬಾಲಕನೇ ಶ್ರೀ ನರಸಿಂಹ ಸರಸ್ವತಿ ಯತಿಗಳು ಎಂದು ಜಗತ್ಪ್ರಸಿದ್ಧರಾಗುತ್ತಾರೆ) ಕೃಷ್ಣಾನದಿಯಲ್ಲಿ ಅದೃಶ್ಯರಾಗುತ್ತಾರೆ. ನರಸಿಂಹ ಸರಸ್ವತಿ ಯತಿಗಳು ನಮ್ಮ ರಾಜ್ಯದ ಗಾಣಗಾಪುರಕ್ಕೆ ಬಂದು ನೆಲೆಸಿದ್ದರು. ಅವರ ತಪ್ಪಸ್ಸಿನ ನೆಲ ಗಾಣಗಾಪುರ. ಅವರ ಪೂಜ್ಯ ನಿರ್ಗುಣ ಪಾದುಕೆ ಇಲ್ಲಿದೆ. ದತ್ತಭಕರ ನೆಚ್ಚಿನಕ್ಷೇತ್ರವಾಗಿ ಗಾಣಗಾಪುರ ವಿಖ್ಯಾತಿ ಪಡೆದಿದೆ. ಶ್ರೀ ನರಸಿಂಹ ಸರಸ್ವತಿ ಯತಿಗಳು ಕೂಡ ಮಂದೆ ಶ್ರೀಶೈಲದಲ್ಲಿ ಅದೃಶ್ಯರಾಗುತ್ತಾರೆ.

ಇಲ್ಲಿ ಆಶ್ಚರ್ಯದ, ಪವಾಡದ ಸಂಗತಿಯೊಂದನ್ನು ಹೇಳಬೇಕು. ದತ್ತ ಅವತಾರ ಎನಿಸಿಕೊಂಡಿರುವ ಎಲ್ಲ ಅವಧೂತರ ಸಮಾಧಿಗಳು ನಮಗೆ ಕಾಣಸಿಗುತ್ತವೆ. ಆದರೆ ಶ್ರೀಪಾದ ಶ್ರೀವಲ್ಲಭ ಮತ್ತು ಶ್ರೀ ನರಸಿಂಹ ಸರಸ್ವತಿ ಯತಿಗಳ ಸಮಾಧಿ ಎಲ್ಲೂ ಇಲ್ಲ!. ಹೀಗಾಗಿ ಅವರು ಈಗಲೂ ಭಕ್ತರನ್ನು ಕಾಯುತ್ತಿದ್ದಾರೆ ಎಂದೇ ನಾವು ನಂಬಿದ್ದೇವೆ. ಕಲಿಯುಗದಲ್ಲಿ ಜನರು ಅನ್ಯಮಾರ್ಗಗಳನ್ನು ತುಳಿದು ತಮ್ಮ ಮೌಲ್ಯಗಳನ್ನು ಕಳೆದುಕೊಂಡು ದುಖಿಃಸಬಾರದೆಂದು ಶ್ರೀಮನ್ನಾರಾಯಣನೇ ಈ ಯುಗದಲ್ಲಿದತ್ತಾತ್ರೇಯ ಸ್ವರೂಪದಲ್ಲಿ ನೆಲೆಸಿದ್ದಾರೆ.

ಪ್ರಧಾನಿ ಮೋದಿ ಗಾಣಗಾಪುರಕ್ಕೆ ಭೇಟಿ ನೀಡಲಿ
ದತ್ತಾವತಾರಿ ಶ್ರೀ ನರಸಿಂಹ ಸರಸ್ವತಿ ಯತಿಗಳು ನಮ್ಮ ರಾಜ್ಯದ ಗಾಣಗಾಪುರಕ್ಕೆ ಬಂದು ನೆಲೆಸಿದ್ದರು. ಅವರ ಪೂಜ್ಯ ನಿರ್ಗುಣ ಪಾದುಕೆ ಇಲ್ಲಿದೆ. ಹೀಗಾಗಿಯೇ ಗಾಣಗಾಪುರ ತ್ರಿಮೂರ್ತಿ ಸ್ವರೂಪಿ ದತ್ತ ದೇವರು ನೆಲೆಸಿರುವ ಪುಣ್ಯ ಭೂಮಿ. ತ್ರೀಮೂರ್ತಿಗಳು ಒಂದೆಡೆ ಪೂಜಿಸಲ್ಪಡುವ ಅಪರೂಪದ ಕ್ಷೇತ್ರ ಇದು. ನಾವಿಂದು ಭಾರತ ವಿಶ್ವಗುರುವಾಗಬೇಕೆನ್ನುತ್ತೇವೆ. ವಿಶ್ವ ಗುರುವಾಗಲು ನಮಗೆ ಖಂಡಿತವಾಗಿಯೂ ಗುರುಗಳ ಆಶೀರ್ವಾದ ಬೇಕೇ ಬೇಕು. ದೇಶದ ಚುಕ್ಕಾಣಿ ಹಿಡಿದಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ, ಗುರುವಿನ ಆಶೀರ್ವಾದ ಪಡೆದುಕೊಂಡಲ್ಲಿ, ಅವರು ಅಂದುಕೊಂಡಿರುವ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಭಾರತ ವಿಶ್ವಗುರುವಾಗಲೂ ಗುರುವಿನ ಜತೆಗೆ ತ್ರೀಮೂರ್ತಿಗಳ ಆಶೀರ್ವಾದ ದೊರೆತಂತಾಗುತ್ತದೆ.

ದತ್ತನ ಸ್ವರೂಪದ ಮಹತ್ವ
ತ್ರಿಮೂರ್ತಿಗಳ ಅಂಶದಿಂದ ಸೃಷ್ಟಿಯಾದ ಶ್ರೀಗುರುದತ್ತನ ಕೈಯಲ್ಲಿರುವ ಶಂಖ ಮತ್ತು ಚಕ್ರ ಶ್ರೀವಿಷ್ಣುವಿನ ಶಕ್ತಿಯ ಪ್ರತೀಕವಾಗಿದ್ದರೆ, ತ್ರಿಶೂಲ ಮತ್ತು ಡಮರುಗ ಶಿವ ಶಕ್ತಿಯ ಸೂಚಕ ವಾಗಿದೆ. ಕಮಂಡಲ ಮತ್ತು ಜಪಮಾಲೆ ಬ್ರಹ್ಮ ದೇವನ ಪ್ರತಿರೂಪವಾಗಿದೆ. ಇನ್ನು ಜೋಳಿಗೆ ಅಹಂ ನಾಶವಾಗಿರುವುದರ ಸಂಕೇತವಾಗಿದೆ. ಜೋಳಿಗೆ ಹಿಡಿದು ಕೊಂಡು ಮನೆ ಮನೆಗೆ ಅಲೆದಾಡಿ ಭಿಕ್ಷೆ ಬೇಡುವುದರಿಂದ ಅಹಂ ನಾಶವಾಗುತ್ತದೆ ಎಂದು ದತ್ತರು ಈ ಮೂಲಕ ಹೇಳಿದ್ದಾರೆ. ದತ್ತರ ಹಿಂದಿರುವ ಗೋವು ಧರ್ಮದ ಸಂಕೇತವಾಗಿದ್ದರೆ, ನಾಲ್ಕು ನಾಯಿಗಳು ನಾಲ್ಕು ವೇದಗಳನ್ನು ಸಂಕೇತಿಸುತ್ತವೆ. ಔದುಂಬರ ವೃಕ್ಷ ಔಷಧಿಯ ಸಂಕೇತವಾಗಿದೆ, ಕಲ್ಪವೃಕ್ಷ ವಾಗಿದೆ.

ಸ್ವರೂಪವೇ ತಿಳಿಸುವಂತೆ ಭಕ್ತರ ಹಿತ ಕಾಯಲೆಂದೇ ಅವತರಿಸಿರುವ ದೇವರು ಶ್ರೀಗುರು ದತ್ತ. ದತ್ತಾತ್ರೇಯ ದೇವರು ಮತ್ತು ನನ್ನ ಕುಲಗುರುಗಳಾದ ಶೃಂಗೇರಿಯ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳಲ್ಲಿ,ಸರ್ವರಿಗೂ ಸದ್ಭುದ್ಧಿಯನ್ನು ಕೊಟ್ಟು, ಆರ್ಥಿಕ ವಾಗಿಸದೃಢವಾದ, ಸ್ವಾರ್ಥವಿಲ್ಲದ, ಸತ್ಯ, ಧರ್ಮ, ಮಾರ್ಗಗಳಲ್ಲಿಸಾಗಿ, ಅಖಂಡ ಭಾರತವನ್ನು ಕಟ್ಟುಲು ಎಲ್ಲಪ್ರಜೆಗಳಿಗೆ ಆಯಸ್ಸು, ಅಭಿವೃದ್ಧಿಕೊಡಲೆಂದು ಪ್ರಾರ್ಥಿಸುತ್ತೇನೆ.
||ದಿಗಂಬರಾ ದಿಗಂಬರಾ ಶ್ರೀಪಾದವಲ್ಲಭ ದಿಗಂಬರಾ||

ಇದನ್ನೂ ಓದಿ | Prerane | ಎಣ್ಣೆ, ಬತ್ತಿ ಇಲ್ಲದೆ ಬೆಳಗುವ ದೀವಿಗೆ

Exit mobile version