Site icon Vistara News

ವಿಸ್ತಾರ ಸಂಪಾದಕೀಯ: ಪಕ್ಷಾಂತರ ರಾಜಕಾರಣ; ನೈತಿಕತೆಯ ಅಧಃಪತನ!

Defection politics; Decline of morality!

#image_title

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election) ದಿನಗಣನೆ ಆರಂಭವಾಗಿದೆ. ಚುನಾವಣೆ ಹತ್ತಿರ ಬರುತ್ತಿರುವಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿತ ಅವ್ಯಾಹತವಾಗಿ ನಡೆಯುತ್ತದೆ. ಚುನಾವಣೆ ದಿನ ಘೋಷಣೆಗೆ ಮೊದಲೇ ಬಿಜೆಪಿಯಿಂದ ಕಾಂಗ್ರೆಸ್‌ಗೆ, ಕಾಂಗ್ರೆಸ್‌ನಿಂದ ಬಿಜೆಪಿಗೆ, ಜೆಡಿಎಸ್‌ನಿಂದ ಬಿಜೆಪಿ- ಕಾಂಗ್ರೆಸ್‌ಗೆ ಹಾರುವ ಪ್ರಕ್ರಿಯೆ ಚುರುಕಾಗಿದೆ. ಒಂದು ಪಕ್ಷದಲ್ಲಿ ಅತೃಪ್ತರಾದವರು ಇನ್ನೊಂದು ಕಡೆ ಮನ್ನಣೆ ಸಿಗಬಹುದು ಎಂಬ ಆಸೆಯಿಂದ ಬೇರೆ ಪಕ್ಷಗಳತ್ತ ಜಿಗಿಯುತ್ತಿದ್ದಾರೆ. ಹಿಂದೆಲ್ಲ ವಿರಳವಾಗಿರುತ್ತಿದ್ದ ಇಂಥ ನೆಗೆತ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ಬೆಳಗ್ಗೆ ಒಂದು ಪಕ್ಷ, ಮಧ್ಯಾಹ್ನ ಮತ್ತೊಂದು ಪಕ್ಷ, ರಾತ್ರಿ ಮಗದೊಂದು ಪಕ್ಷಕ್ಕೆ ಹಾರಲೂ ಈಗಿನ ರಾಜಕಾರಣಿಗಳು ಮುಜುಗರಪಡುತ್ತಿಲ್ಲ! ಹಿಂದೆಲ್ಲಾ ಪಕ್ಷಾಂತರ ಹೊಂದುವವರು ʼನನಗೆ ಈ ಪಕ್ಷದಲ್ಲಿ ಉಸಿರುಗಟ್ಟುವ ಅನುಭವವಾಗುತ್ತಿದೆʼ ʼನನ್ನ ಯೋಗ್ಯತೆಯನ್ನು ಪರಿಗಣಿಸಲಾಗುತ್ತಿಲ್ಲʼ ʼಆ ಪಕ್ಷದ ತತ್ವ ಆದರ್ಶಗಳನ್ನು ಮೆಚ್ಚಿಕೊಂಡಿದ್ದೇನೆʼ ಎಂಬ ಮೇಲ್ನೋಟದ ಕಾರಣಗಳನ್ನಾದರೂ ಕೊಡುತ್ತಿದ್ದರು. ಈಗ ಅದೂ ಇಲ್ಲ. ಅಂದರೆ ಇವರಿಗೆಲ್ಲಾ ಅಧಿಕಾರವೇ ಪರಮೋದ್ದೇಶವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ನಿರ್ದಿಷ್ಟ ತತ್ವ ಸಿದ್ಧಾಂತ ಆಧರಿಸಿದ ರಾಜಕಾರಣ ಕಣ್ಮರೆಯಾಗುತ್ತಿರುವುದು, ಸ್ಥಾಪಿತ ಹಿತಾಸಕ್ತಿ, ಕುಟುಂಬ ರಾಜಕಾರಣಗಳು ವಿಜೃಂಭಿಸುತ್ತಿರುವುದು ಇವುಗಳೆಲ್ಲ ಪಕ್ಷಾಂತರದ ಜತೆಜತೆಗೇ ಜೋಡಿಸಿಕೊಂಡಿರುವ ಪೀಡೆಗಳು.

ಪಕ್ಷಾಂತರ ನಿಷೇಧ ಕಾಯಿದೆ ಎಂಬುದೊಂದಿದೆ. ಪಕ್ಷಾಂತರವು ದೊಡ್ಡ ಪಿಡುಗಾಗಿ ಪರಿಣಮಿಸಿದ್ದ ಸಂದರ್ಭದಲ್ಲಿ, 1985ರಲ್ಲಿ ತರಲಾದ ಈ ಕಾಯಿದೆಗೆ 2003ರಲ್ಲಿ ಮತ್ತಷ್ಟು ಬಲ ತುಂಬಲಾಗಿತ್ತು. ಆದರೆ ಇದು ನೀಡುವ ಪಕ್ಷಾಂತರದ ವ್ಯಾಖ್ಯೆ ಸೀಮಿತವಾದುದು. ಶಾಸಕ ಅಥವಾ ಸಂಸದ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ ಇನ್ನೊಂದು ರಾಜಕೀಯ ಪಕ್ಷಕ್ಕೆ ಸೇರಿದರೆ, ಮತದಾನದ ಸಮಯದಲ್ಲಿ ಹಾಜರಿರಬೇಕೆಂಬ ಪಕ್ಷದ ವಿಪ್‌ ಉಲ್ಲಂಘಿಸಿದರೆ, ಅದು ಪಕ್ಷಾಂತರ. ಅಂಥವರನ್ನು ಅನರ್ಹಗೊಳಿಸಬಹುದು. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷ ಸೇರಿದರೆ ಪಕ್ಷಾಂತರ ಕಾಯಿದೆ ಅನ್ವಯವಾಗುವುದಿಲ್ಲ. ಕಾನೂನು ಚಾಪೆಯ ಕೆಳಗೆ ತೂರಿದರೆ ಪಕ್ಷಾಂತರಿಗಳು ರಂಗೋಲಿ ಕೆಳಗೆ ತೂರುತ್ತಾರೆ. 2019ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ನಡೆದ ದೊಡ್ಡ ಡ್ರಾಮಾವನ್ನು ನೆನಪಿಸಿಕೊಂಡರೆ ಇದು ಅರ್ಥವಾಗುತ್ತದೆ. ಇದು ವಿಶ್ವಾಸಮತ ಸಂದರ್ಭದ ಪಕ್ಷಾಂತರವಾದರೆ, ಚುನಾವಣೆ ಸಂದರ್ಭದ ಪಕ್ಷಾಂತರವೂ ಇನ್ನೊಂದು ಬಗೆಯ ಅವಕಾಶವಾದವೇ ಆಗಿದೆ.

ಇತ್ತೀಚೆಗಷ್ಟೇ ಮೇಘಾಲಯದಲ್ಲಿ ಚುನಾವಣೆ ಮುಗಿದಿದೆ. ತಮಾಷೆಯೆಂದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ಸಿಡಿಯುತ್ತಿರುವ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮೇಘಾಲಯದಲ್ಲಿ ಮಾತ್ರ ಬಿಜೆಪಿ ಮಿತ್ರಕೂಟವನ್ನು ಬೆಂಬಲಿಸುತ್ತಿದೆ! ಹಾಗಿದ್ದರೆ ತತ್ವ, ಸಿದ್ಧಾಂತ ಎಂಬುದಕ್ಕೆ ಬೆಲೆ ಎಲ್ಲಿದೆ? ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಉಂಟಾದರೆ ಜೆಡಿಎಸ್‌ ಪಕ್ಷ ಬಿಜೆಪಿ ಜತೆಗೆ ಹೋಗುತ್ತದೋ, ಕಾಂಗ್ರೆಸ್‌ ಜತೆಗೋ ಎಂಬುದು ಕೊನೆಯ ಕ್ಷಣದವರೆಗೂ ಹೇಳಲು ಸಾಧ್ಯವಿಲ್ಲ. ಪಕ್ಷದ ತಾತ್ವಿಕತೆ ಎಂಬುದು ಇಂದು ಬರಿಯ ಬಾಯಿಮಾತಾಗಿ ಉಳಿದಿದೆ ಎಂಬುದೇ ಇದರರ್ಥ. ದುರದೃಷ್ಟಕರ ವಿಚಾರ ಎಂದರೆ, ಮತದಾರರು ಕೂಡ ಈ ಹೊಸ ಅಪವಿತ್ರ ರಾಜಕೀಯ ಸೂತ್ರಗಳಿಗೆ ಹೊಂದಿಕೊಂಡು ಬಿಟ್ಟಿದ್ದಾರೆ. ಚುನಾವಣೆಯಲ್ಲಿ ಹಣವೇ ಪ್ರಧಾನ ಪಾತ್ರ ವಹಿಸುತ್ತಿದೆ. ಹಣ ಚೆಲ್ಲಿದರೆ ಯಾವ ಪಕ್ಷದಿಂದ ನಿಂತರೂ ಗೆಲ್ಲಬಹುದು ಎಂಬ ಉಢಾಪೆಯನ್ನು ರಾಜಕಾರಣಿಗಳು ಮೈಗೂಡಿಸಿಕೊಂಡಿದ್ದಾರೆ. ಈಗಾಗಲೇ ಭಾವಿ ಅಭ್ಯರ್ಥಿಗಳು ಕುಕ್ಕರ್‌ ಮುಂತಾದ ಆಮಿಷಗಳ ಮೂಲಕ ಮತದಾರರನ್ನು ಓಲೈಸುತ್ತಿದ್ದರೆ, ಮತದಾರರು ಯಾವುದೇ ಪಾಪಪ್ರಜ್ಞೆಯೂ ಇಲ್ಲದೇ, ಪ್ರತಿರೋಧದ ಧ್ವನಿಯೂ ಇಲ್ಲದೇ, ಅವುಗಳನ್ನು ಸ್ವೀಕರಿಸುತ್ತಿದ್ದಾರೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ವಲಯ ಏಕೆ?

ಚುನಾವಣೆಯಲ್ಲಿ ಗೆಲ್ಲಲು ಕೋಟಿ ಕೋಟಿ ಹಣ ಹಂಚಿಕೆ, ಹೀಗೆ ಹಂಚಿದ ಹಣ ವಾಪಸ್ ಪಡೆಯಲು ಭ್ರಷ್ಟಾಚಾರ… ಈ ಕರಾಳ ಸರಣಿ ಮುಂದುವರಿಯುತ್ತದೆ. ರಾಜಕಾರಣಿಗಳು ಮಾತ್ರವಲ್ಲ, ಮತದಾರರು ಕೂಡ ನೈತಿಕತೆ ಕಳೆದುಕೊಳ್ಳುತ್ತಿದ್ದಾರೆ. ಇಂಥ ಅಪವಿತ್ರ ರಾಜಕಾರಣಕ್ಕೆ ಅಂತ್ಯ ಹಾಡಲು, ಪಕ್ಷಾಂತರಿಗಳಿಗೆ ಬುದ್ಧಿ ಕಲಿಸಲು ಮತದಾರರಿಂದ ಮಾತ್ರ ಸಾಧ್ಯ. ಮತದಾರರು ಕ್ಷಣಿಕ ಲಾಭಕ್ಕಾಗಿ ನೈತಿಕ ಪ್ರಜ್ಞೆ ತೊರೆದರೆ ಪ್ರಜಾಪ್ರಭುತ್ವಕ್ಕೇ ಅಪಾಯವಿದೆ. ಇಂಥ ನೀತಿಗೆಟ್ಟ ರಾಜಕಾರಣ ಮತ್ತಷ್ಟು ವಿಜೃಂಭಿಸಲಿದೆ. ಮತದಾರರು ಪ್ರಜ್ಞಾವಂತರಾಗಿ, ಆಮಿಷಗಳಿಗೆ ʼನೋʼ ಎನ್ನುವುದು, ಪಕ್ಷಾಂತರಿಗಳಿಗೆ ಬುದ್ಧಿ ಕಲಿಸುವುದು- ಇವುಗಳನ್ನು ಮಾಡಿದರೆ ಮಾತ್ರ ಪ್ರಜಾಪ್ರಭುತ್ವದ ಅಂತಃಸ್ಸತ್ವ ಉಳಿಯಲಿದೆ.

Exit mobile version