ಭೋಪಾಲ್: ಶಾಸಕ, ಸಂಸದರಾದವರು ಹೇಗಿರಬೇಕು? ಜನರಿಗೆ ಅದರಲ್ಲೂ ಯುವಕರಿಗೆ, ಮಕ್ಕಳಿಗೆ ಶಿಕ್ಷಣದ ಮಹತ್ವದ ಸಾರಬೇಕು. ಓದಿ ವಿದ್ಯಾವಂತರಾಗಿ, ಕೈತುಂಬ ಸಂಬಳ ಬರುವ ಕೆಲಸ ಹಿಡಿದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂಬುದಾಗಿ ಕರೆ ನೀಡಬೇಕು. ಸಾಧ್ಯವಾದರೆ, ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು. ಆದರೆ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಶಾಸಕ (BJP MLA) ಪನ್ನಾಲಾಲ್ ಶಾಕ್ಯಾ (Pannalal Shakya) ಅವರು, “ಪದವಿ ಪ್ರಮಾಣಪತ್ರಗಳು (Degrees) ಯಾವುದೇ ಉಪಯೋಗಕ್ಕೆ ಬರಲ್ಲ, ಎಲ್ಲರೂ ಪಂಕ್ಚರ್ ಅಂಗಡಿ ತೆರೆಯಿರಿ” ಎಂಬುದಾಗಿ ವಿದ್ಯಾರ್ಥಿಗಳಿಗೆ ಕರೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಮಧ್ಯಪ್ರದೇಶದ ಗುಣ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಇವರು, ತಮ್ಮ ಕ್ಷೇತ್ರದಲ್ಲಿ ನಿರ್ಮಿಸಲಾದ ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಎಂಬ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ. “ನಾವು ಪ್ರೈಮ್ ಮಿನಿಸ್ಟರ್ ಕಾಲೇಜ್ ಆಫ್ ಎಕ್ಸಲೆನ್ಸ್‌ಅನ್ನು ಉದ್ಘಾಟನೆ ಮಾಡಿದ್ದೇವೆ. ಆದರೆ, ನಿಮಗೆ ಒಂದು ಮಾತು ನೆನಪಿರಲಿ. ಕಾಲೇಜುಗಳಲ್ಲಿ ಪಡೆಯುವ ಡಿಗ್ರಿಗಳು ಯಾವುದೇ ಉಪಯೋಗಕ್ಕೆ ಬರಲ್ಲ. ನೀವೊಂದು ಸೈಕಲ್ ಪಂಕ್ಚರ್ ಅಂಗಡಿಯೋ, ರಿಪೇರಿ ಅಂಗಡಿಯೋ ಇಟ್ಟುಕೊಳ್ಳಿ, ಹಣ ಸಂಪಾದಿಸಿ” ಎಂದು ಬಿಜೆಪಿ ಶಾಸಕ ಕರೆ ನೀಡಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
Listen to BJP MLA from Guna Pannalal Shakya is telling the youth that nothing is going with the degree, open Puncture shops.
— Anshuman Sail Nehru (@AnshumanSail) July 15, 2024
Such is the level of unemployment and incompetence in Modi led BJP rule. pic.twitter.com/XDbQ5B7LHI
“ವಿದ್ಯಾರ್ಥಿಗಳು ಹಾಗೂ ಯುವಕರು ಜೀವನದಲ್ಲಿ ಒಂದೇ ಗುರಿಯನ್ನು ಇಟ್ಟುಕೊಳ್ಳಬೇಕು. ಕಾಲೇಜುಗಳಲ್ಲಿ ಪಡೆಯುವ ಪದವಿಗಳು ಜೀವನಕ್ಕೆ ದಾರಿಯಾಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಪದವಿ ಪಡೆಯುವುದರ ಬದಲು ಪಂಕ್ಚರ್ ಅಂಗಡಿ ಇಟ್ಟುಕೊಂಡರೂ ನಿಮ್ಮ ಜೀವನ ಸಾಗುತ್ತದೆ” ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗುತ್ತಲೇ ಸಾರ್ವಜನಿಕರು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪನ್ನಾಲಾಲ್ ಶಾಕ್ಯಾ ಅವರು ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂಬ ಕಾರಣದಿಂದ ರಾಜ್ಯದ 55 ಕಡೆಗಳಲ್ಲಿ ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಎಂಬ ಕಾಲೇಜುಗಳನ್ನು ನಿರ್ಮಿಸಲಾಗಿದ್ದು, ಎಲ್ಲ ಕಾಲೇಜುಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚ್ಯುವಲ್ ವೇದಿಕೆ ಮೂಲಕ ಉದ್ಘಾಟನೆ ಮಾಡಿದ್ದಾರೆ. ಹೀಗೆ ಸದುದ್ದೇಶದಿಂದ ನಿರ್ಮಿಸಿದ ಕಾಲೇಜಿನ ಉದ್ಘಾಟನೆಯ ವೇಳೆ ಪನ್ನಾಲಾಲ್ ಶಾಕ್ಯಾ ಅವರು ನೀಡಿರುವ ಹೇಳಿಕೆಯು ಭಾರಿ ಟೀಕೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.