Site icon Vistara News

Dengue cases: ಡೆಂಗ್ಯೂ ತಡೆಗೆ ಟಾಸ್ಕ್ ಫೋರ್ಸ್ ರಚನೆಗೆ ಸಿಎಂ ಸೂಚನೆ

Dengue cases

ಬೆಂಗಳೂರು: ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಹಾಗೂ ಡಿಎಚ್‌ಒಗಳು ಪ್ರತೀ ದಿನ ಸಮನ್ವಯದಿಂದ ಸಭೆ ನಡೆಸಿ ಡೆಂಗ್ಯೂ (Dengue cases) ಹರಡದಂತೆ ಕ್ರಮ ಕೈಗೊಳ್ಳಬೇಕು. ಡೆಂಗ್ಯೂ ತಡೆಗೆ ಟಾಸ್ಕ್ ಫೋರ್ಸ್ (task force) ರಚನೆ ಮಾಡಬೇಕು. ಎರಡು ತಿಂಗಳ ಮಟ್ಟಿಗೆ ಟಾಸ್ಕ್ ಫೋರ್ಸ್ ಹೈ ಅಲರ್ಟ್ ಆಗಿದ್ದು, ರೋಗ ನಿಯಂತ್ರಣ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಏನು ಮಾಡಬೇಕು, ಎಷ್ಟು ಹಣ ಅಗತ್ಯವಿದೆ ಎನ್ನುವುದನ್ನು ತಿಳಿಸಿ. ತಕ್ಷಣ ಹಣ ಬಿಡುಗಡೆಗೆ ಸೂಚಿಸಿದ್ದೇನೆ. ಡೆಂಗ್ಯೂ ಹರಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಮಾಡಿ

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಪೂರ್ಣ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಇದುವರೆಗೆ 7362 ಪ್ರಕರಣ ಪತ್ತೆಯಾಗಿದ್ದು, ಪ್ರಸ್ತುತ 303 ಸಕ್ರಿಯ ಪ್ರಕರಣಗಳಿವೆ. 7 ಸಾವು ಸಂಭವಿಸಿದೆ. ಸೊಳ್ಳೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸುವ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆಗೆ ವಿಶೇಷ ವಾರ್ಡ್‌ ಸಜ್ಜುಗೊಳಿಸಬೇಕು. ಮೆಡಿಕಲ್‌ ಕಾಲೇಜುಗಳಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು. ಡೆಂಗ್ಯೂ ಪತ್ತೆಗೆ ಪರೀಕ್ಷೆ ಹೆಚ್ಚಿಸಬೇಕು. ಡೆಂಗ್ಯೂ ಪಾಸಿಟಿವ್‌ ಇರುವ ವ್ಯಕ್ತಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಬೇಕು. ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್‌ ರಚಿಸಬೇಕು. ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ಪ್ರತಿದಿನ ಸಭೆಗಳನ್ನು ನಡೆಸಿ ಪರಿಶೀಲನೆ ನಡೆಸಬೇಕು ಎಂದು ಸಿಎಂ ಸೂಚಿಸಿದರು.

ಇದನ್ನೂ ಓದಿ | Road Safety: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಪ್ರಾಣ ಹೋದರೆ ಸಹಿಸಲ್ಲ: ಅಪಘಾತಗಳ ಹೆಚ್ಚಳಕ್ಕೆ ಸಿಎಂ ಗರಂ

ಪ್ರಸ್ತುತ ಸಾಲಿನಲ್ಲಿ 215 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದ್ದು, 42 ಕಡೆಗಳಲ್ಲಿ ಕಟ್ಟಡ ಗುರುತಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ 503 ನಮ್ಮ ಕ್ಲಿನಿಕ್‌ಗಳು ಕಾರ್ಯಾಚರಿಸುತ್ತಿವೆ. ನಮ್ಮ ಕ್ಲಿನಿಕ್‌ಗಳಲ್ಲಿ ಲಭ್ಯವಿರುವ ಸೇವೆಗಳ ಮಾಹಿತಿಯನ್ನು ಪ್ರಚುರಪಡಿಸಬೇಕು ಎಂದು ತಿಳಿಸಿದರು.

ವಕ್ಫ್‌ ಆಸ್ತಿ ಒತ್ತುವರಿ ತೆರವು ಚುರುಕುಗೊಳಿಸಿ

ವಕ್ಫ್‌ ಆಸ್ತಿ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಚುರುಕುಗೊಳಿಸಬೇಕು. ರಾಜ್ಯದಲ್ಲಿ 217 ವಕ್ಫ್‌ ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿಯಿದೆ. 22581 ವಕ್ಫ್‌ ಖಾತೆ ಮ್ಯುಟೇಶನ್‌ ಬಾಕಿಯಿದ್ದು, ಇದನ್ನು ತ್ವರಿತಗೊಳಿಸಬೇಕು. ನ್ಯಾಯಾಲಯಗಳಲ್ಲಿ ತಡೆ ಇರುವ ಪ್ರಕರಣಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದರು.

ಅನುಕಂಪದ ಆಧಾರದ ನೌಕರಿ ಶೀಘ್ರ ನೀಡಬೇಕು

ದೌರ್ಜನ್ಯ ತಡೆ ಅಧಿನಿಯಮದ ಅಡಿ ದಾಖಲಾಗಿರುವ ಒಟ್ಟು 26 ಕೊಲೆ ಪ್ರಕರಣಗಳಲ್ಲಿ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಬೇಕಾಗಿದ್ದು, ಆದಷ್ಟು ಬೇಗನೆ ನೌಕರಿ ಒದಗಿಸಬೇಕು. ಜಿಲ್ಲೆಯಲ್ಲಿ ಉಪ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ನಡೆಸಬೇಕು.

ತಿಂಗಳೊಳಗೆ ಸಿಂಧುತ್ವ ಪ್ರಮಾಣ ಪತ್ರ ನೀಡಿ

ಸಿಂಧುತ್ವ ಪ್ರಮಾಣ ಪತ್ರವನ್ನು ಒಂದು ತಿಂಗಳ ಒಳಗಾಗಿ ನೀಡಬೇಕು. ಪ್ರಸ್ತುತ 2684 ಅರ್ಜಿಗಳು ಬಾಕಿಯಿದ್ದು, ಅರ್ಹತೆ ಇದ್ದವರಿಗೆ ತಕ್ಷಣ ಪ್ರಮಾಣ ಪತ್ರ ನೀಡಬೇಕು. ವಿನಾಕಾರಣ ಸಿಂಧುತ್ವ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಅವರನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಂಬೇಡ್ಕರ್‌ ಭವನ ನಿರ್ಮಾಣ ಕಾಮಮಗಾರಿ ಹಲವು ಕಡೆ ಅರ್ಧದಲ್ಲಿ ನಿಂತಿದ್ದು, ಕಾಮಗಾರಿ ಪೂರ್ಣಗೊಳಿಸುವ ಕುರಿತು ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Exit mobile version