ಬೆಂಗಳೂರು: ಡೆಂಗ್ಯು ಜ್ವರಕ್ಕೆ (Dengue Fever) ಬೆಂಗಳೂರಲ್ಲಿ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಡೆಂಗ್ಯು ಸಾವಿನ (Dengue death) ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 8 ಡೆಂಗ್ಯು ಮರಣಗಳು ಆಗಿವೆ.
ರಾಜಧಾನಿಯಲ್ಲಿ 11 ವರ್ಷ ಬಾಲಕ ಹಾಗೂ 23 ವರ್ಷದ ಯುವಕ ಡೆಂಗ್ಯು ಜ್ವರದಿಂದ ನಿನ್ನೆ ಮೃತಪಟ್ಟಿದ್ದಾರೆ. ಇವರಿಬ್ಬರೂ ಕಳೆದೊಂದು ವಾರದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಬಿಬಿಎಂಪಿ ಪೂರ್ವ ವಲಯದಲ್ಲೇ ಎರಡು ಸಾವು ದಾಖಲಾಗಿದೆ. ಈ ಮೊದಲು ಡೆಂಗ್ಯುವಿಗೆ 27 ವರ್ಷದ ಯುವಕನ ಸಾವು ಸಂಭವಿಸಿತ್ತು. ಮಕ್ಕಳು ಸೇರಿದಂತೆ ಸಣ್ಣ ಪ್ರಾಯದವರೇ ಹೆಚ್ಚಾಗಿ ಈ ಜ್ವರಕ್ಕೆ ತುತ್ತಾಗುತ್ತಿರುವುದು ಕಂಡುಬಂದಿದೆ.
ಬೆಳಗಾವಿಯಲ್ಲಿ ಬಾಲಕಿ ಬಲಿ
ರಾಜ್ಯದಲ್ಲಿ ಡೆಂಗ್ಯೂ ಸೋಂಕಿತರ ಸಂಖ್ಯೆ ತೀವ್ರವಾಗಿ (Dengue Fever) ಏರಿಕೆ ಆಗುತ್ತಿದೆ. ಡೆಂಗ್ಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಡುವವರ ಸಂಖ್ಯೆಯು ಹೆಚ್ಚುತ್ತಿದೆ. ಶಂಕಿತ ಡೆಂಗ್ಯು ಜ್ವರಕ್ಕೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೇಯಾ ಕೃಷ್ಣಾ ದೇವದಾತೆ (11) ಎಂಬಾಕೆ ಮೃತಪಟ್ಟಿದ್ದಾಳೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ನಿವಾಸಿ ಶ್ರೇಯಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಅನಾರೋಗ್ಯದಿಂದ ಶ್ರೇಯಾ ಅಸುನೀಗಿದ್ದಾಳೆ. ಬಾಲಕಿ ಸಾವಿನ ಬಗ್ಗೆ ಡಿಹೆಚ್ಒ ಮಹೇಶ ಕೋಣಿ ಮಾಹಿತಿ ನೀಡಿದ್ದಾರೆ.
ಶ್ರೇಯಾ ತಂದೆ ಕೃಷ್ಣಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾನುವಾರ ರಾತ್ರಿ ವಾಂತಿ ಶುರುವಾಗಿತ್ತು, ಹೀಗಾಗಿ ಮಾರನೆ ದಿನವೆ ಸಂಕೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಕಳಿಸಿದ್ದರು. ಅಲ್ಲಿ ಹೋದಾಗ ಡೆಂಗ್ಯು ಆಗಿದೆ ಎಂದು ಹೇಳಿದ್ದರು ಎಂದಿದ್ದಾರೆ.
5 ಸಾವಿರ ಗಡಿ ದಾಟಿದ ಡೆಂಗ್ಯೂ
ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜುಲೈ) 1,16,999 ಶಂಕಿತವಾಗಿದ್ದು, ಇದರಲ್ಲಿ 51,219 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 5548 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಇದುವರೆಗೂ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಬೆಂಗಳೂರು ಸೇರಿ ರಾಜ್ಯಾದ್ಯಂತ 8 ಮಂದಿ ಮೃತಪಟ್ಟಿದ್ದಾರೆ. ಶಿವಮೊಗ್ಗ, ಧಾರವಾಡ, ಮೈಸೂರು, ಹಾವೇರಿಯಲ್ಲಿ ತಲಾ ಒಬ್ಬರು, ಹಾಸನದಲ್ಲಿ ಇಬ್ಬರು ಹಾಗೂ ಬೆಂಗಳೂರಿನಲ್ಲಿ ಮೂವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: Dengue fever: ರಾಜ್ಯದಲ್ಲಿ ದಿನೇದಿನೆ ಹೆಚ್ಚಾಗ್ತಿವೆ ಡೆಂಗ್ಯೂ ಪ್ರಕರಣಗಳು; ಕಳೆದ 24 ಗಂಟೆಯಲ್ಲಿ 293 ಕೇಸ್ ದೃಢ!