ಹಾಸನ: ಹಾಸನ ಜಿಲ್ಲೆಯಲ್ಲಿ (Hassan news) ಡೆಂಗ್ಯು ಜ್ವರ (Dengue Fever) ಮರಣ ಮೃದಂಗ ಬಾರಿಸುತ್ತಿದೆ ಎಂದು ಶಂಕೆಗೆ ಕಾರಣವಾಗುವಂತೆ, ಮೂವರು ಮಕ್ಕಳು ಜ್ವರ ಏರಿ (Children death) ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಡೆಂಗ್ಯು ಹಾವಳಿ ವಿಪರೀತವಾಗಿದ್ದು, ಈ ಮಕ್ಕಳನ್ನೂ ಡೆಂಗ್ಯು ಜ್ವರ ಬಲಿ ಪಡೆದಿದೆ ಎಂದು ಶಂಕಿಸಲಾಗಿದೆ.
ಅರಕಲಗೂಡು ಮೂಲದ ಒಂದು ಹಾಗು ಹೊಳೆನರಸೀಪುರ ಮೂಲದ ಎರಡು ಕಂದಮ್ಮಗಳು ಸಾವಿಗೀಡಾಗಿವೆ. ಮೂರೂ ಮಕ್ಕಳೂ ತೀವ್ರ ಜ್ವರದಿಂದ ಬಳಲಿದ್ದವು. ಜುಲೈ 1ರಂದು ಅರಕಲಗೂಡು ಮೂಲದ ಅಣ್ಣಪ್ಪಶೆಟ್ಟಿ ಹಾಗು ಪದ್ಮ ದಂಪತಿ ಪುತ್ರಿ ಅಕ್ಷತಾ (13) ಸಾವಿಗೀಡಾಗಿದ್ದಾಳೆ. ಜೂನ್ 30ರಂದು ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಮೂಲದ ವರ್ಷಿಕಾ(8) ತೀವ್ರ ಜ್ವರದಿಂದ ಬಳಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ನಿನ್ನೆ ಕೂಡ ಹೊಳೆನರಸೀಪುರ ತಾಲ್ಲೂಕಿನ ಕಲಾಶ್ರೀ ಜಿ.ಎಲ್ (11) ನಿಧನ ಹೊಂದಿದ್ದಾಳೆ. ಈಕೆ ಹೊಳೆನರಸೀಪುರ ತಾಲ್ಲೂಕಿನ ಗುಡ್ಡೇನಹಳ್ಳಿ ಗ್ರಾಮದ ಲೋಕೇಶ್ ಮತ್ತು ತನುಜ ಎಂಬವರ ಪುತ್ರಿ.
ಪುಟ್ಟ ಮಕ್ಕಳ ಪ್ರಾಣಕ್ಕೆ ಡೆಂಗ್ಯು ಕಂಟಕವಾಗುತ್ತಿದೆ ಎಂಬ ಭೀತಿ ಎದುರಾಗುತ್ತಿದೆ. ಮಕ್ಕಳು ಹಗಲು ಹೊರಗಡೆ ನಿರ್ಬೀತಿಯಿಂದ ಆಟವಾಡುತ್ತಾರೆ. ಡೆಂಗ್ಯು ಹರಡುವ ಸೊಳ್ಳೆಗಳು ಹಗಲಿನಲ್ಲಿ ಸಕ್ರಿಯವಾಗಿದ್ದು, ಬಯಲಿನಲ್ಲಿ ಸುಲಭವಾಗಿ ಸಿಗುವ ಮಕ್ಕಳನ್ನು ಕಚ್ಚುತ್ತಿವೆ. ಹೀಗಾಗಿ ಮಕ್ಕಳಲ್ಲಿ ಡೆಂಗ್ಯು ಪೀಡಿತರು ಜಾಸ್ತಿ ಎಂದು ತರ್ಕಿಸಲಾಗಿದೆ.
ಜ್ವರ ತೀವ್ರಗೊಂಡ ಬಳಿಕ ಮಕ್ಕಳು ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಜ್ವರದಿಂದ ಬಳಲಿದ ಮಕ್ಕಳ ಸರಣಿ ಸಾವಿನಿಂದ ಆತಂಕ ಹೆಚ್ಚಿದೆ. ಜಿಲ್ಲೆಯಲ್ಲಿ 205 ಜನರಿಗೆ ಡೆಂಗ್ಯು ಜ್ವರ ದೃಡಪಟ್ಟಿದೆ. ಸುಮಾರು 6204 ಜನರಿಗೆ ಡೆಂಗ್ಯು ಲಕ್ಷಣಗಳು ಕಾಣಿಸಿಕೊಂಡಿವೆ. ಜ್ವರ, ಮೈ ಕೈ ನೋವು ಸೇರಿ ಡೆಂಗ್ಯು ಲಕ್ಷಣ ಇರುವ ಆರು ಸಾವಿರ ಜನರ ರಕ್ತದ ಮಾದರಿ ಸಂಗ್ರಹಿಸಲಾಗಿದೆ.
ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದಾಗಿ ಡೆಂಗ್ಯು ವ್ಯಾಪಕವಾಗಿ ಹರಡುತ್ತಿದೆ. ನಿಂತ ನೀರಿನಲ್ಲಿ ಡೆಂಗ್ಯು ಸೊಳ್ಳೆಗಳು ಹುಟ್ಟಿಕೊಳ್ಳುತ್ತಿವೆ. ಡೆಂಗ್ಯು ನಿಯಂತ್ರಣ ಮಾಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಜನ ಆಕ್ರೋಶಿಸಿದ್ದಾರೆ.
ಡೆಂಗ್ಯು ಜ್ವರ ಪರೀಕ್ಷೆಗೆ ದರ ನಿಗದಿ
ಬೆಂಗಳೂರು: ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಡೆಂಗ್ಯೂ ಜ್ವರ ಪತ್ತೆಗೆ ಎರಡು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳಿಗೆ ಒಟ್ಟು 600 ರೂ. ನಿಗದಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.
ಡೆಂಗ್ಯೂ ಜ್ವರ ಪತ್ತೆಗೆ ಎರಡು ಮಾದರಿಯ ಪರೀಕ್ಷೆ ನಡೆಸಲಾಗುತ್ತದೆ. ತಲಾ 300 ರೂ.ನಂತೆ ಒಟ್ಟು 600 ರೂ. ದರವನ್ನು ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ದುಪ್ಪಟ್ಟು ಹಣ ವಸೂಲಿಯಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಲು ಮುಂದಾಗಿದೆ.
ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ
ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ತಿಳಿಸಿದ್ದರು.
ನಮ್ಮ ವೆಬ್‌ಸೈಟಿನಲ್ಲಿ ಡೆಂಗ್ಯೂ ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಪ್ರತಿ ದಿನ ಎಷ್ಟು ಕೇಸ್ ಬಂದಿದೆ ಎನ್ನುವ ಮಾಹಿತಿ ಹಾಕುತ್ತೇವೆ. ದಿನ ನಿತ್ಯ ಡೆಂಗ್ಯೂ ಬುಲೆಟಿನ್ ಕೊಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಎಲ್ಲಾ ಮನೆಗಳ ಸರ್ವೆ ಮಾಡುತ್ತಿದೆ. ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲ ಎಲ್ಲಾ ಮನೆಗಳ ಸರ್ವೆ ನಡೆಸಲು ನಾನು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಮನೆ ಮನೆಗೆ ಭೇಟಿ ಕೊಡಲು ಸೂಚಿಸಿದ್ದೇನೆ. ರಾಜ್ಯಾದ್ಯಂತ ಡೆಂಗ್ಯೂ ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಪ್ರತಿ ಶುಕ್ರವಾರ ಡೆಂಗ್ಯೂ ವಿಚಾರದಲ್ಲಿ ಫೀಲ್ಡ್‌ನಲ್ಲಿ ಇದ್ದು, ಮಾನಿಟರ್ ಮಾಡಲು ಸೂಚಿಸಿದ್ದೇನೆ. ಪ್ರತಿ ಶುಕ್ರವಾರ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ: Dengue Fever In Children: ಮಗುವಿನ ಮೈ ಬಿಸಿ ಆಗಿದೆಯೇ? ಡೆಂಗ್ಯು ಜ್ವರದ ಲಕ್ಷಣಗಳನ್ನು ತಿಳಿದುಕೊಳ್ಳಿ