ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಬಳಸಿ ಇವಿಎಂಗಳನ್ನು (EVMs) ಹ್ಯಾಕ್ ಮಾಡಬಹುದು ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಕೂಡ ಇವಿಎಂಗಳ (Electronic Voting Machine) ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಎಲಾನ್ ಮಸ್ಕ್ ಅವರು ಹೇಳಿರೋದನ್ನು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಕೂಡ ಸಮರ್ಥಿಸಿಕೊಂಡಿರುವುದು ಕಂಡುಬಂದಿದೆ.
ಇವಿಎಂಗಳ ಮೇಲೆ ಎಲಾನ್ ಮಸ್ಕ್ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ʼಮಸುಕಾʼಗಿದ್ದ ಅನುಮಾನ ಈಗ ತೀಕ್ಷ್ಣವಾಗಿದೆ! ತಂತ್ರಜ್ಞಾನ ನಿಪುಣ ಎಂದು ಇಡೀ ಪ್ರಪಂಚವೇ ಒಪ್ಪಿಕೊಂಡಿರುವ ಎಲಾನ್ ಮಸ್ಕ್ ಅವರೇ ಇವಿಎಂಗಳ ಮೇಲೆ ವ್ಯಕ್ತಪಡಿಸಿರುವ ಅನುಮಾನವು ಭಾರತದಲ್ಲಿ ನಡೆದ ಮತದಾನ ಪ್ರಕ್ರಿಯೆಗಳ ಬಗ್ಗೆ ಆತಂಕ ಮೂಡಿಸಿದೆ.
ಚುನಾವಣೆಯ ನಂತರ ದೇಶದ ಕೆಲವೆಡೆ ನಡೆಯುತ್ತಿರುವ ಘಟನೆಗಳಿಗೂ ಮಸ್ಕ್ ಅವರ ಹೇಳಿಕೆಗೂ ತಾಳೆಯಾಗುತ್ತಿದೆ. ಚುನಾವಣೆ ವ್ಯವಸ್ಥೆಯೇ ಪಾರದರ್ಶಕವಾಗಿರದಿದ್ದರೆ ಜನಾದೇಶ ಯಾರ ಕಡೆ ಇದೆ ಎಂದು ತಿಳಿಯುವುದಾದರೂ ಹೇಗೆ? ಇವಿಎಂಗಳ ಸತ್ಯಾಸತ್ಯತೆ ಬಗ್ಗೆ ಈಗ ಪ್ರಪಂಚಕ್ಕೇ ಅರ್ಥವಾಗಿದೆ. ಭಾರತಕ್ಕೂ ಆ ಕಾಲ ಸನ್ನಿಹಿತವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ | Petrol Diesel Price Hike: ಬಡವರ ಮೇಲೆ ತೆರಿಗೆ ಹಾಕಿ ಬೇರೆ ರಾಜ್ಯಗಳಿಗೆ ಹೋಲಿಸುವುದು ದ್ರೋಹ: ಬೊಮ್ಮಾಯಿ ಆಕ್ರೋಶ
ಎಲಾನ್ ಮಸ್ಕ್ ಏನು ಹೇಳಿದ್ದರು?
ಅಮೆರಿಕದ ಚುನಾವಣೆಯಲ್ಲಿ ಬಳಸುವ ಇವಿಎಂಗಳ ಬಗ್ಗೆ ಎಲಾನ್ ಮಸ್ಕ್ ಅವರು ಅನುಮಾನ ವ್ಯಕ್ತಪಡಿಸಿದ್ದರು. “ಅಮೆರಿಕದಲ್ಲಿ ನಾವು ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್‌ಗಳ ಬಳಕೆಯನ್ನು ನಿಲ್ಲಿಸಬೇಕು. ಹ್ಯಾಕರ್‌ಗಳು ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಇದು ಸಣ್ಣ ಸಂಗತಿಯಾದರೂ, ದೊಡ್ಡ ಸಮಸ್ಯೆಯಾಗಿದೆ” ಎಂದು ಎಲಾನ್ ಮಸ್ಕ್ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದು ಅಮೆರಿಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ | Rahul Gandhi: ಕಾಂಗ್ರೆಸ್ ಹೆಚ್ಚು ಕ್ಷೇತ್ರ ಗೆದ್ದರೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್ ಗಾಂಧಿ !
“ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಇವಿಎಂಗಳನ್ನು ಹ್ಯಾಕ್ ಮಾಡಬಹುದು” ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿದ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಕೂಡ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. “ಭಾರತದಲ್ಲಿ ಇವಿಎಂಗಳು ಎಂದರೆ ಬ್ಲ್ಯಾಕ್ ಬಾಕ್ಸ್ (ಯಾರಿಗೂ ಗೊತ್ತಾಗದ, ಒಬ್ಬರಿಗೆ ಮಾತ್ರ ಆಕ್ಸೆಸ್ ಇರುವ ಎಲೆಕ್ಟ್ರಾನಿಕ್ ಡಿವೈಸ್) ಇದ್ದಂತೆ. ಅವುಗಳನ್ನು ಯಾರೂ ಪರಿಶೀಲನೆ ಮಾಡಲು, ತಪಾಸಣೆ ಮಾಡಲು ಸಾಧ್ಯವಿಲ್ಲ. ಭಾರತದ ಚುನಾವಣೆ ಪಾರದರ್ಶಕತೆ ಕುರಿತು ಗಂಭೀರವಾದ ಆತಂಕಗಳು ವ್ಯಕ್ತವಾಗುತ್ತಿವೆ. ಸಂಸ್ಥೆಗಳು ವಿಶ್ವಾಸ ಕಳೆದುಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಒಂದು ನಾಟಕೀಯ ಸ್ವರೂಪ ಪಡೆಯುತ್ತದೆ” ಎಂದು ಹೇಳಿದ್ದರು. ಇದೀಗ ಡಿಸಿಎಂ ಡಿಕೆಶಿ ಅವರು ಕೂಡ ವಿದ್ಯುನ್ಮಾನ ಮತಯಂತ್ರಗಳ ಕಾರ್ಯದಕ್ಷತೆ ಬಗ್ಗೆ ಅನುಮಾನ ಹೊರಹಾಕಿದ್ದಾರೆ.