ಬೆಂಗಳೂರು: ರಾಜ್ಯಕ್ಕೆ ಒಂದು ಗಿಫ್ಟ್ ಸಿಟಿ (GIFT City) ಮಾದರಿಯ ಹಬ್ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಲ್ಲಿ ಮನವಿ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಅವರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಗುಜರಾತಿನಲ್ಲಿ ಇರುವಂತೆ ಕರ್ನಾಟಕಕ್ಕೂ ಗಿಫ್ಟ್ ಸಿಟಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು. ದೇಶದಲ್ಲಿ ಒಂದು ಕಡೆ ಮಾತ್ರ ಮಾಡಲು ಅವಕಾಶವಿದೆ. ಇದರ ಬಗ್ಗೆ ಆಲೋಚನೆ ಮಾಡಲಾಗುವುದು ಎಂದು ಪ್ರಧಾನಿಯವರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು. ಕರ್ನಾಟಕದ ತೆರಿಗೆ ಪಾವತಿಗೆ ಅನುಗುಣವಾಗಿ ಅನುದಾನ ನೀಡಬೇಕೆಂಬ ಬೇಡಿಕೆಯನ್ನು ಕೂಲಂಕುಷವಾಗಿ ಪರಿಶೀಲಿಸುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ ಎಂದರು.
ಅತ್ಯಂತ ಸೌಹಾರ್ದಯುತ ಭೇಟಿ ಇದಾಗಿತ್ತು. ಸುಮಾರು 40 ನಿಮಿಷಗಳ ಕಾಲ ನಾನು, ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಸಚಿವರಾದ ಪರಮೇಶ್ವರ, ಮಹದೇವಪ್ಪ ಅವರು ಪ್ರಧಾನಿ ಮೋದಿ ಅವರ ಜೊತೆ ಚರ್ಚೆ ನಡೆಸಿದೆವು. ರಾಜ್ಯದ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಭದ್ರಾ ಮೇಲ್ದಂಡೆ, ಮೇಕೆದಾಟು, ಮಹದಾಯಿ, ಬೆಂಗಳೂರಿನ ಮೆಟ್ರೋ, ಪೆರಿಫೆರಲ್ ರಿಂಗ್ ರಸ್ತೆ, ಟನಲ್ ರಸ್ತೆ ಸೇರಿದಂತೆ ರಾಜ್ಯದಲ್ಲಿ ಬಾಕಿ ಇರುವ ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಯಿತು ಎಂದು ಡಿಕೆಶಿ ನುಡಿದರು.
ಬೆಂಗಳೂರಿನ ಅಭಿವೃದ್ಧಿಗಾಗಿ ಮನವಿ
ಬೆಂಗಳೂರಿನ ಜಲಸಂಪನ್ಮೂಲ, ನಗರಾಭಿವೃದ್ಧಿ, ಫೆರಿಫೆರಲ್ ರಿಂಗ್ ರಸ್ತೆ, ಮೆಟ್ರೋ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಇನ್ನೊಮ್ಮೆ ಕೆಲವು ಮಾಹಿತಿಗಳ ಜತೆ ಬನ್ನಿ ಎಂದು ತಿಳಿಸಿದ್ದಾರೆ. ಮಂತ್ರಿಗಳು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಒಟ್ಟಾರೆ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ, ನೀವು ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇವೆ ಎಂದರು.
ಜುಲೈ 3ರ ನಂತರ ರಾಹುಲ್ ಗಾಂಧಿ ಭೇಟಿ
ರಾಹುಲ್ ಗಾಂಧಿ (Rahul Gandhi) ಅವರ ಭೇಟಿಯ ಬಗ್ಗೆ ಕೇಳಿದಾಗ “ಶನಿವಾರ ಸಂಜೆ ದೆಹಲಿಗೆ ಬಂದ ಕಾರಣ ಭೇಟಿ ಸಾಧ್ಯವಾಗಲಿಲ್ಲ. ಸಂಸತ್ ಅಧಿವೇಶನ ಮುಗಿದ ನಂತರ ಜುಲೈ 3 ರ ನಂತರ ಭೇಟಿ ಮಾಡಿ ಅನೇಕ ವಿಚಾರಗಳ ಬಗ್ಗೆ ಅವರ ಜತೆ ಚರ್ಚೆ ನಡೆಸಲಾಗುವುದು. ಶನಿವಾರ ಮಧ್ಯಾಹ್ನ ಕರ್ನಾಟಕದ ನಾಯಕರ ಭೇಟಿಗೆ ಸಮಯ ನಿಗದಿ ಆಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಭೇಟಿಯಾಗಲು ಆಗಲಿಲ್ಲ” ಎಂದು ತಿಳಿಸಿದರು.
ಇದನ್ನೂ ಓದಿ: Gujarat GIFT City: ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ಮದ್ಯ ಸೇವನೆಗೆ ಅವಕಾಶ!