Site icon Vistara News

Partition of India: ಡಿಕೆ ಸುರೇಶ್ ‌ʼದೇಶ ವಿಭಜನೆʼ ಹೇಳಿಕೆ; ಡಿಕೆ ಬ್ರದರ್ಸ್‌ ಮನೆಯತ್ತ ನುಗ್ಗಿದ ಬಿಜೆಪಿ

BJP Protest in bangalore

ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್‌ (Budget 2024) ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದ ಡಿ.ಕೆ. ಸುರೇಶ್‌, “ಭಾರತ ವಿಭಜನೆ” (Partition of India) ಬಗ್ಗೆ ಮಾತನಾಡಿದ್ದರು. ಇದಕ್ಕೆ ದೇಶಾದ್ಯಂತ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗುತ್ತಲೇ ಇವೆ. ಈ ವೇಳೆ, ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆಸಿದ್ದ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಡಿ.ಕೆ. ಸುರೇಶ್‌ (DK Suresh) ಅವರ ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನ ಮಾಡಿದ್ದು, ಪೊಲೀಸರು ಮಧ್ಯದಲ್ಲೇ ತಡೆದು ಅವರನ್ನು ವಶಕ್ಕೆ ತೆಗೆದುಕೊಂಡರು. ಆದರೆ, ಈಗ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿರುವ ಡಿ.ಕೆ. ಸುರೇಶ್‌, “ನಾನು ದೇಶ ವಿಭಜನೆ (Divided Nation) ಬಗ್ಗೆ ಹೇಳಿಕೆಯನ್ನೇ ನೀಡಿಲ್ಲ. ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚಿದ್ದಾರೆ” ಎಂದು ಹೇಳಿದ್ದಾರೆ.

ಇತ್ತ ಬಿಜೆಪಿ ಕಾರ್ಯಕರ್ತರು ಡಿ.ಕೆ. ಬ್ರದರ್ಸ್‌ ಮನೆಗೆ ಮುತ್ತಿಗೆ ಹಾಕಲಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ ಅವರ ನಿವಾಸದ ಬಳಿ ಹೆಚ್ಚಿನ ಪೊಲೀಸ್‌ ಭದ್ರತೆಯನ್ನು ನಿಯೋಜನೆ ಮಾಡಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಆಗಮಿಸುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಮನೆಯ ಸ್ವಲ್ಪ ದೂರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

BJP Protest in bangalore infront of DK Suresh house

35ಕ್ಕೂ ಹೆಚ್ಚು ಕಾರ್ಯಕರ್ತರು ವಶಕ್ಕೆ

ಸುಮಾರು 35ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡ ಬಿಜೆಪಿ ಕಾರ್ಯಕರ್ತರನ್ನು ಬಿಎಂಟಿಸಿ ಬಸ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ ಬಿಜೆಪಿ ಯುವ ಮುಖಂಡರಾದ ಅನಿಲ್ ಶೆಟ್ಟಿ, ಪ್ರಶಾಂತ್, ಸಂದೀಪ್ ರವಿ, ಪ್ರತಾಪ್ ಸೇರಿ 35ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.

ನನ್ನ ಹೇಳಿಕೆಯನ್ನು ತಿರುಚಿದ್ದಾರೆ, ಪ್ರತಿಭಟಿಸಲು ಹಕ್ಕಿದೆ: ಡಿ.ಕೆ. ಸುರೇಶ್‌

ಬಿಜೆಪಿ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್‌, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಹಕ್ಕಿದೆ. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಯಾರನ್ನೂ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಹೋರಾಟಕ್ಕೆ ಸಂಪೂರ್ಣ ಸಹಕಾರವನ್ನು ನಮ್ಮ ಸರ್ಕಾರ ಕೊಡುತ್ತದೆ. ನಾನು ಬಿಜೆಪಿ ಪ್ರತಿಭಟನೆಯನ್ನು ಸ್ವಾಗತ ಮಾಡುತ್ತೇನೆ. ದೇವರು ಬಿಜೆಪಿಗೆ ಒಳ್ಳೆಯದು ಮಾಡಲಿ. ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ದೇಶ ವಿಭಜನೆ ಆಗಬೇಕು ಅಂತ ಹೇಳಿಲ್ಲ. ಅವರು ವಿಭಜನೆ ವಿಚಾರದಲ್ಲಿ ಹೋಗ್ತಾ ಇದ್ದಾರೆ. ಬೇರೆ ರಾಜಕಾರಣ ಮಾಡ್ತಾ ಇದ್ದಾರೆ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತೋರಿಸಬೇಕು. ಮಾಧ್ಯಮದವರದ್ದು ತಪ್ಪೋ, ಬಿಜೆಪಿಯವರದ್ದು ತಪ್ಪೋ, ನಂದು ತಪ್ಪೋ ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ನನ್ನ ಹೇಳಿಕೆ ಬಹಳ ಸ್ಪಷ್ಟವಾಗಿದೆ. ಹೇಳಿಕೆಯನ್ನು ತಿರುಚುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಹಾಗಾಗಿ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಅವರ ಹೋರಾಟ ಯಶಸ್ವಿ ಆಗಲಿ. ಅವರವರ ಭಾವನೆಗಳನ್ನು ಹೇಳಲು ಎಲ್ಲರಿಗೂ ಹಕ್ಕಿದೆ. ಹೇಳಿಕೆ ತಿರುಚಿ ರಾಜಕಾರಣ ಮಾಡುತ್ತಿದ್ದಾರೆ. ಮಾಧ್ಯಮಗಳಿಗೆ ನಾನು‌ ಮನವಿ ಮಾಡುತ್ತೇನೆ. ನನ್ನ ಹೇಳಿಕೆಯನ್ನು ಸ್ಪಷ್ಟವಾಗಿ ರಾಜ್ಯ ಮತ್ತು ದೇಶದ ಜನತೆಗೆ ತೋರಿಸಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮವಾಗಿದೆ. ಮಾಧ್ಯಮಗಳು ಕೆಲವರನ್ನು ಗುರಿ ಮಾಡುತ್ತಿರುವುದು ಸರಿನಾ? ತಪ್ಪಾ? ಎಂದು ವಿಶ್ಲೇಷಣೆ ಮಾಡಬೇಕು ಎಂಬುದಾಗಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಡಿ.ಕೆ. ಸುರೇಶ್ ಹೇಳಿದ್ದೇನು?

ಸಂಸದ ಡಿ.ಕೆ. ಸುರೇಶ್‌‌ ಬಜೆಟ್‌ ಬಗ್ಗೆ ನವ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡುವಾಗ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಬಜೆಟ್‌ ಅನ್ನು ಖಂಡಿಸಿದ್ದಾರೆ. ಅಲ್ಲದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬುದಾಗಿ ತಾರತಮ್ಯ ಮಾಡುತ್ತಿದ್ದು, ಹೀಗೇ ಮುಂದುವರಿದರೆ ದೇಶವನ್ನು ವಿಭಜನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಇದನ್ನೂ ಓದಿ: Road Accident : ಜೀಪ್‌, ಬೈಕ್‌ ನಡುವೆ ಭೀಕರ ಅಪಘಾತ; ಸವಾರರು ಸ್ಥಳದಲ್ಲೇ ಮೃತ್ಯು

ಈ ಬಗ್ಗೆ ನವ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್‌, ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಕೊಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ದಕ್ಷಿಣ ಭಾರತ ಬೇರೆ ದೇಶ ಆಗಬೇಕು ಎಂಬ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಡಿ.ಕೆ. ಸುರೇಶ್‌ ಎಚ್ಚರಿಕೆ ನೀಡಿದ್ದರು. ‌

Exit mobile version