Site icon Vistara News

ವಿಸ್ತಾರ ಸಂಪಾದಕೀಯ: ಮುಸ್ಲಿಂ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಕಸಿಯಬೇಡಿ

ಸಂಪಾದಕೀಯ

ಮುಸ್ಲಿಂ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದು ಇಸ್ಲಾಂ ವಿರೋಧಿ ಎಂದು ಅಹಮದಾಬಾದ್‌ನ ಜಾಮಾ ಮಸೀದಿಯ ಶಾಹಿ ಇಮಾಮ್ ಶಬ್ಬೀರ್‌ ಅಹಮದ್‌ ಸಿದ್ದಿಕಿ ಹೇಳಿದ್ದಾರೆ. ಇದೊಂದು ಖಂಡನೀಯ ಹೇಳಿಕೆ. ಸಾಮಾನ್ಯವಾಗಿ ಇಂಥ ಹೇಳಿಕೆಗಳನ್ನು ಕಡೆಗಣಿಸಬಹುದೇನೋ. ಆದರೆ ಇಸ್ಲಾಂ ಸಮುದಾಯದಲ್ಲಿ ಧಾರ್ಮಿಕ ಮುಖಂಡರ ಹೇಳಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕೆಲವೊಮ್ಮೆ ಇವು ಫತ್ವಾಗಳಂತೆ ಕಾರ್ಯ ನಿರ್ವಹಿಸುತ್ತವೆ. ಕೆಲವೊಮ್ಮೆ ಅನಾಹುತಗಳನ್ನೂ ಉಂಟು ಮಾಡುತ್ತವೆ. ಇದು ಒಂದು ಸಮುದಾಯವನ್ನು, ಅಲ್ಲಿನ ಮಹಿಳಾ ಸಮುದಾಯವನ್ನು ಹಲವು ದಶಕಗಳ ಕಾಲ ಹಿಂದಕ್ಕೆ ಸರಿಸುವಂಥ ಹೇಳಿಕೆ. ಹೀಗಾಗಿ ಪ್ರಜ್ಞಾವಂತರು ಇದನ್ನು ಖಂಡಿಸಬೇಕಿದೆ.

ದೇಶ ಸ್ವಾತಂತ್ರ್ಯ ಗಳಿಸಿದ ನಂತರದ 16 ಲೋಕಸಭೆಗಳಲ್ಲಿ ಐದು ಲೋಕಸಭೆಗಳು ಮುಸ್ಲಿಂ ಮಹಿಳಾ ಸದಸ್ಯರನ್ನೇ ಹೊಂದಿರಲಿಲ್ಲ. 543 ಲೋಕಸಭಾ ಸ್ಥಾನಗಳಲ್ಲಿ ಒಂದು ಅವಧಿಗೆ ಮುಸ್ಲಿಂ ಮಹಿಳೆಯರ ಸಂಖ್ಯೆ ಎಂದೂ ನಾಲ್ಕನ್ನು ದಾಟಿಲ್ಲ ! ಇಲ್ಲಿಯವರೆಗೆ, 29 ರಾಜ್ಯಗಳ ಪೈಕಿ 24 ರಾಜ್ಯಗಳಿಂದ ಸಂಸತ್ತಿಗೆ ಮುಸ್ಲಿಂ ಮಹಿಳೆಯರು ಆಯ್ಕೆಯಾಗಿಲ್ಲ. ಪ್ರಸ್ತುತ ಲೋಕಸಭೆಯಲ್ಲಿ 543 ಸದಸ್ಯರಲ್ಲಿ ಕೇವಲ ನಾಲ್ವರು (0.7%) ಮಾತ್ರ ಮುಸ್ಲಿಂ ಮಹಿಳೆಯರು. ದೇಶದ ಸಾಮಾನ್ಯ ಜನಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರ ಪ್ರಮಾಣ 6.9%ರಷ್ಟಿದೆ. ಆದರೆ ಸ್ವಾತಂತ್ರ್ಯದ ನಂತರ 16 ಲೋಕಸಭೆಗಳಿಗೆ ಚುನಾಯಿತರಾದ 612 ಮಹಿಳೆಯರಲ್ಲಿ ಕೇವಲ 21 ಮುಸ್ಲಿಂ ಮಹಿಳೆಯರಷ್ಟೇ ಆಯ್ಕೆಯಾಗಿದ್ದಾರೆ. ಭಾರತವು 14 ಮುಸ್ಲಿಂ ಬಹುಸಂಖ್ಯಾತ ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ರಾಜ್ಯ ವಿಧಾನಸಭೆಗಳಲ್ಲೂ ಈ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲೂ ಶಾಸಕರಲ್ಲಿ ಒಟ್ಟಾರೆ ಮಹಿಳೆಯರ ಪ್ರಮಾಣವೇ 8%, ಇದರಲ್ಲೂ ಮುಸ್ಲಿಂ ಮಹಿಳೆಯರ ಪ್ರಮಾಣ ನಗಣ್ಯ. ಇಲ್ಲಿ ಕಾಣುತ್ತಿರುವ ಅಂತರವು ಕಳವಳಕಾರಿಯೇ ಆಗಿದೆ. ಮುಸ್ಲಿಂ ಮಹಿಳಾ ಸಂಸದರ ಸಂಖ್ಯೆ ಹೆಚ್ಚೇ ಆಗಬೇಕಲ್ಲದೆ, ಕಡಿಮೆಯಾಗಬಾರದು. ಕಡಿಮೆಯಾಗುವಂಥ ಹೇಳಿಕೆಗಳನ್ನೂ ಆ ಸಮುದಾಯದ ಹಿರಿಯರು, ಧಾರ್ಮಿಕ ಮುಖಂಡರು ನೀಡಬಾರದು.

ಧರ್ಮದ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರನ್ನು ನಿರಂತರವಾಗಿ ದಮನಿಸಲಾಗುತ್ತಿದೆ. ಮೊದಲು ತ್ರಿವಳಿ ತಲಾಕ್ ಹೆಸರಿನಲ್ಲಿ ದೌರ್ಜನ್ಯ ನಡೆಸಲಾಗುತ್ತಿತ್ತು. ಈಗ ಕೇಂದ್ರ ಸರಕಾರವೇನೋ ತಲಾಕ್‌ ನಿಷೇಧಿಸಿ ಕಾಯಿದೆ ಜಾರಿ ಮಾಡಿದೆ. ಇದರ ಜಾರಿಗೂ ಬಹಳ ವಿರೋಧ ಮತೀಯ ವಲಯದಿಂದ ವ್ಯಕ್ತವಾಯಿತು. ಆದರೆ ಮುಸ್ಲಿಂ ಮಹಿಳೆಯರೇ ಇದನ್ನು ಹೃತ್ಪೂರ್ವಕ ಸ್ವಾಗತಿಸಿದ್ದರಿಂದಾಗಿ ಇತರರೂ ಅಂಗೀಕರಿಸುವಂತಾಯಿತು. ಇತ್ತೀಚಿನ ಬೆಳವಣಿಗೆ ಎಂದರೆ ಹಿಜಾಬ್ ಹಟಕ್ಕೆ ಬಿದ್ದು ಹೆಣ್ಣು ಮಕ್ಕಳನ್ನು ಕಾಲೇಜಿಂದಲೇ ಬಿಡಿಸಲಾಗುತ್ತಿದೆ. ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗುವ ಅವಕಾಶವನ್ನು ಅವರಿಗೆ ನಿರಾಕರಿಸಲಾಗುತ್ತಿದೆ. ಬದಲಾವಣೆಗೆ, ಆಧುನಿಕತೆಗೆ ಒಗ್ಗಿಕೊಳ್ಳಲು ಮುಸ್ಲಿಂ ಮಹಿಳೆಯರು ಸಿದ್ಧರಿದ್ದಾರೆ. ಇದನ್ನು ಇರಾನ್‌ನ ಮಹಿಳೆಯರು ಸಾಬೀತುಪಡಿಸಿದ್ದಾರೆ. ಹಿಜಾಬನ್ನು ಕಿತ್ತೆಸೆದು ಅವರು ಪ್ರಭುತ್ವಕ್ಕೆ ಪ್ರತಿರೋಧ ತೋರಿದ್ದಾರೆ. ನಾವು ಉತ್ತಮ ಮಾದರಿಗಳನ್ನು ಅನುಸರಿಸಬೇಕೇ ಹೊರತು ವಿವೇಕಹೀನ ಹೇಳಿಕೆಗಳನ್ನಲ್ಲ. ಮುಸ್ಲಿಂ ಹೆಣ್ಣು ಮಕ್ಕಳು ಪ್ರತಿಭಾವಂತರಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಅವರು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ವೈದ್ಯರಾಗಿ, ಎಂಜಿನಿಯರ್ ಆಗಿ, ವಿಜ್ಞಾನಿಯಾಗಿ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಆದರೆ ಶೈಕ್ಷಣಿಕವಾಗಿ ಮುಸ್ಲಿಂ ಹೆಣ್ಣು ಮಕ್ಕಳು ಸಾಕಷ್ಟು ಹಿಂದಿರುವಂತೆ ಮಾಡಲಾಗಿದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಎಸ್ಸೆಸ್ಸೆಲ್ಸಿ ದಾಟಿ ಹೋಗುವ ಮುಸ್ಲಿಂ ಹೆಣ್ಣುಮಕ್ಕಳು ಕಡಿಮೆ. ಮುಸ್ಲಿಂ ಹೆಣ್ಣು ಮಕ್ಕಳೂ ಮುಕ್ತವಾಗಿ ಓಡಾಡುವ, ಶಿಕ್ಷಣ ಪಡೆಯುವ, ಮುಖ್ಯವಾಹಿನಿಯಲ್ಲಿ ಬೆರೆತು ಒಂದಾಗುವ ಅವಕಾಶ ಸೃಷ್ಟಿಯಾಗಬೇಕು. ಇದರಲ್ಲಿ ಮುಸ್ಲಿಂ ಮಹಿಳೆಯರಿಗೆ ಸಿಗಬೇಕಾದ ರಾಜಕೀಯ ಅವಕಾಶವೂ ಒಂದು.

ಮಹಿಳೆಯರಿಗೇ ಟಿಕೆಟ್‌ ನೀಡಲು ಹಿಂದೆಮುಂದೆ ನೋಡುವಂಥ ರಾಜಕೀಯ ಪಕ್ಷಗಳಿರುವ ದೇಶ ನಮ್ಮದು. ಯಾವ ಪಕ್ಷವೂ ಪುರುಷರಿಂದ ಆಚೆಗೆ ರಾಜಕೀಯವನ್ನು ಯೋಚಿಸಲು ಸಿದ್ಧವಿಲ್ಲ. ಮಹಿಳೆಯರು ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗಿ ಬಂದಾಗ ಮಹತ್ವದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಬಾಂಗ್ಲಾದಂಥ ದೇಶದಲ್ಲಿ ಮುಸ್ಲಿಂ ಮಹಿಳೆಯರು ಪ್ರಧಾನಮಂತ್ರಿಯಾಗಿ, ಅಧ್ಯಕ್ಷೆಯಾಗಿ ಬಲುದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಮುಸ್ಲಿಂ ಮಹಿಳೆಯರ ಪ್ರತಿಭೆ ಕಡೆಗಣಿಸುವಂಥದಲ್ಲ. ಭಾರತದಂಥ ಮುಕ್ತ ಪ್ರಜಾಪ್ರಭುತ್ವ ದೇಶದಲ್ಲಿ ಸಾಕಷ್ಟು ಅವಕಾಶಗಳು ತೆರೆದಿವೆ; ಮುಸ್ಲಿಂ ಸಮುದಾಯ ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಇನ್ನಷ್ಟು ತೆರೆದುಕೊಳ್ಳಬೇಕಿದೆ. ಹಾಗೇ ರಾಜಕೀಯ ಪಕ್ಷಗಳೂ ಈ ಬಗ್ಗೆ ಯೋಚಿಸಬೇಕಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ತೈಲ ದರ ಇಳಿಕೆಯ ಲಾಭವನ್ನು ಜನಸಾಮಾನ್ಯರಿಗೂ ದಾಟಿಸಿ

Exit mobile version