Site icon Vistara News

Doctors Strike: ಕೋಲ್ಕತಾ ವೈದ್ಯೆ ಕೊಲೆಗೆ ಆಕ್ರೋಶ; ರಾಜ್ಯ ಸರಕಾರದ ವಿರುದ್ಧ ತಿರುಗಿದ ವೈದ್ಯರ ಪ್ರತಿಭಟನೆ

doctors strike bangalore

ಬೆಂಗಳೂರು: ಕೋಲ್ಕತಾದಲ್ಲಿ ನಡೆದಿರುವ ವೈದ್ಯೆಯ ಬರ್ಬರ ಸಾಮೂಹಿಕ ಅತ್ಯಾಚಾರ ಹಾಗು ಕೊಲೆಯ (Kolkata Doctor murder case) ವಿರುದ್ಧ ಭುಗಿಲೆದ್ದಿರುವ ವೈದ್ಯರ ಸಮೂಹದ ಆಕ್ರೋಶ, ಇದೀಗ ರಾಜ್ಯ ಸರಕಾರದ ವಿರುದ್ಧ ತಿರುಗಿದೆ. ಸರ್ಕಾರಿ ಆಸ್ಪತ್ರೆಗಳ ವೈದ್ಯರು (Govt hospital doctors) ಸಿಲಿಕಾನ್‌ ಸಿಟಿಯಲ್ಲಿ ವೈದ್ಯರು ಪ್ರತಿಭಟನೆ (Doctors strike) ಆರಂಭಿಸಿದ್ದು, ತಮಗೆ ಭದ್ರತೆ ಹಾಗೂ ಸ್ಟೈಫಂಡ್‌ ಹೆಚ್ಚಿಸಬೇಕು ಎಂದು ಧರಣಿ ಕೂತಿದ್ದಾರೆ.

ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುತ್ತಿರುವ ನೂರಾರು ವೈದ್ಯರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಮುಷ್ಕರಕ್ಕೆ ಇಳಿದಿದ್ದಾರೆ. ವೈದ್ಯರಿಗೆ ನ್ಯಾಯ ಕೊಡಿಸಿ ಎಂದು ಪ್ರತಿಭಟನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ʼಜಸ್ಟಿಸ್ ಫಾರ್ ಆರ್ ಜೆ ಕರ್ʼ ಎಂಬ ಬೋರ್ಡ್‌ಗಳನ್ನು ಹಿಡಿದುಕೊಂಡು ಪ್ರತಿಭಟಿಸುತ್ತಿದ್ದಾರೆ.

ನಮಗೆ ಸೆಕ್ಯೂರಿಟಿ ಹಾಗೂ ಸ್ಟೈಫಂಡ್ ಹೆಚ್ಚಿಗೆ ಮಾಡಬೇಕು. ಅಡ್ಮಿಶನ್ ಫೀಸ್ ಕಡಿಮೆ ಮಾಡಬೇಕು. ಪ್ರಸ್ತುತ 1.13 ಲಕ್ಷ ರೂಪಾಯಿ ವಾರ್ಷಿಕ ಫೀಸ್ ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2.27 ಲಕ್ಷ ರೂ. ಫೀಸ್ ಕಟ್ಟಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇರುವವರಿಗೆ ಪ್ರತಿ ತಿಂಗಳು 60 ಸಾವಿರ ಸ್ಟೈಫಂಡ್ ಇದೆ. ಆದರೆ ಸಾಮಾನ್ಯ ಆಸ್ಪತ್ರೆಯಲ್ಲಿ 40 ಸಾವಿರ ರೂಪಾಯಿ ಸ್ಟೈಫಂಡ್ ಇದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಸ್ಟೈಫಂಡ್ ಇದ್ದು, ನಮಗೆ ಬೇರೆ ರಾಜ್ಯದಲ್ಲಿ ಇರುವ ಸ್ಟೈಫಂಡ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಕೆಸಿ ಜನರಲ್, ವಿಕ್ಟೋರಿಯಾ, ಜಯದೇವ, ಮಿಂಟೋ, ಬೌರಿಂಗ್ ಆಸ್ಪತ್ರೆಗಳ ವೈದ್ಯರು ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ. ಹಲವು ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಸಂಸದ ಮಂಜುನಾಥ್‌ ಭೇಟಿ

ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್ ಮಂಜುನಾಥ್ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಧರಣಿಗೆ ಸಾತ್ ನೀಡಿದರು. ʼವೈದ್ಯರು ನಾಳೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಅವರಿಗೆ ನಾನು ಬೆಂಬಲ ನೀಡುತ್ತಿದ್ದೇನೆ. ವೈದ್ಯರಿಗೆ ಇನ್ನೂ ಹಲವು ಬೇಡಿಕೆಗಳು ಇವೆ. ಅವುಗಳನ್ನು ಈಡೇರಿಸಬೇಕು. ಕೋಲ್ಕತಾದಲ್ಲಿ ಮಹಿಳಾ ವೈದ್ಯೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಇದು ಬರ್ಬರ ಘಟನೆ. ವೈದ್ಯರಿಗೆ ಸೂಕ್ತ ಭದ್ರತೆ ನೀಡಬೇಕು. ನಾಳೆ ಇಡೀ ದೇಶದ ಜನ ವೈದ್ಯರ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದಾರೆʼ ಎಂದು ಸಂಸದ ಮಂಜುನಾಥ್‌ ಹೇಳಿದರು.

ನಾಳಿನ ಪ್ರತಿಭಟನೆಗೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಬೆಂಬಲ; ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಬಂದ್

ಬೆಂಗಳೂರು: ಕೋಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ತುರ್ತು ಸೇವೆಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲು ಭಾರತೀಯ ವೈದ್ಯಕೀಯ ಸಂಘವು ಆ.17ರಂದು ದೇಶಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಗೆ (Doctors Protest) ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಬೆಂಬಲ ವ್ಯಕ್ತಪಡಿಸಿದೆ.

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪತ್ರ ಬರೆದಿದೆ. ವೈದ್ಯಾಧಿಕಾರಿಗಳು ದಿನದ 24/7 ಗಂಟೆ ಬಡ ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಿದ್ದು, ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಹಾಗೂ ಕೋವಿಡ್ -19 ನಂತಹ ಸಾಂಕ್ರಾಮಿಕ ರೋಗವು ಇಡೀ ಪ್ರಪಂಚವನ್ನೇ ಬಾಧಿಸಿದ ಸಂದರ್ಭದಲ್ಲಿ ವೈದ್ಯರು ಹಗಲಿರುಳು ಎನ್ನದೇ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸಿದ್ದರು.

ಆದರೆ ಆ.9 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಯುವ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಘೋರ ಅಪರಾಧವಾಗಿದ್ದು, ಇದು ಕಾನೂನಿನ ವೈಫಲ್ಯವನ್ನು ಎತ್ತಿ ಹಿಡಿಯುತ್ತದೆ. ಅಲ್ಲದೇ ಈ ಪ್ರಕರಣವು ವೈದ್ಯರ ಮನೋಸ್ಥೈರ್ಯವನ್ನು ಕುಗ್ಗುವಂತೆ ಮಾಡಿದ್ದು, ಇದನ್ನು ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಗಂಭೀರವಾಗಿ ಪರಿಗಣಿಸಿದೆ.

ಇದನ್ನೂ ಓದಿ: Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

Exit mobile version