Site icon Vistara News

Doda Attack: ಯೋಧನ ಶಿರಚ್ಛೇದಕ್ಕೆ ಯತ್ನಿಸಿದ ವಿಡಿಯೊ ಬಿಡುಗಡೆ ಮಾಡಿದ ಭಯೋತ್ಪಾದಕರು

Doda Attack

Doda Attack

ಶ್ರೀನಗರ: ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (Jaish-e-Mohammed)ನ ‘ಕಾಶ್ಮೀರ ಟೈಗರ್ಸ್’ (Kashmir Tigers) ಇತ್ತೀಚೆಗೆ ಜಮ್ಮುವಿನ ದೋಡಾದಲ್ಲಿ ನಡೆದ ದಾಳಿಯ ನಂತರದ ಘಟನೆಗಳನ್ನು ತೋರಿಸುವ ವಿಡಿಯೊವನ್ನು ಬಿಡುಗಡೆ ಮಾಡಿದೆ ಎಂದು ʼದಿ ಪ್ರಿಂಟ್ʼ ವರದಿ ಮಾಡಿದೆ (Doda Attack). ಈ ವಾರದ ಆರಂಭದಲ್ಲಿ ನಡೆದ ಈ ದಾಳಿಯಲ್ಲಿ ಸೇನಾಧಿಕಾರಿ ಮತ್ತು ಇತರ ಮೂವರು ಸೈನಿಕರು ಹುತಾತ್ಮರಾಗಿದ್ದರು.

ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಪಾಕಿಸ್ತಾನ ಮೂಲದವರು ಎನ್ನಲಾದ ಭಯೋತ್ಪಾದಕರು ಮೃತ ಸೈನಿಕನ ಶಿರಚ್ಛೇದ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಂಡು ಬಂದಿದೆ ಎಂದು ʼದಿ ಪ್ರಿಂಟ್ʼ ತಿಳಿಸಿದೆ. ಕೆಲವು ದಿನಗಳ ಹಿಂದೆ ನಡೆದ ಎನ್‌ಕೌಂಟರ್‌ನಲ್ಲಿ ಮೃತ ಭಯೋತ್ಪಾದಕನ ದೇಹವನ್ನು ಸೈನಿಕರು ಎಳೆದೊಯ್ದಿದ್ದಕ್ಕೆ ಪ್ರತಿಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಭಯೋತ್ಪಾದಕ ಗುಂಪು ಹೇಳಿಕೊಂಡಿದೆ. ಸೇನಾ ಮೂಲಗಳು ಪ್ರಸ್ತುತ ಈ ವಿಡಿಯೊ ತುಣಿಕಿನ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ.

ಘಟನೆಯ ಸಮಯದಲ್ಲಿ ಸೈನಿಕರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಭಯೋತ್ಪಾದಕರು ಹೇಳಿಕೊಂಡಿರುವ ಎಕೆ – 47 ಅನ್ನು ಸಹ ವಿಡಿಯೊದಲ್ಲಿ ಕಂಡು ಬಂದಿದೆ ಎನ್ನಲಾಗಿದೆ.

ದೋಡಾ ಜಿಲ್ಲೆಯ ದೇಸಾ ಎಂಬ ಪ್ರದೇಶದ ಅರಣ್ಯದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಯು ಜುಲೈ 16ರಂದು ರಾತ್ರಿಯೇ ಕಾರ್ಯಾಚರಣೆ ಆರಂಭಿಸಿದ್ದರು. ಉಗ್ರರಿಗಾಗಿ ನಡೆದ ಕಾರ್ಯಾಚರಣೆ ವೇಳೆ ಭಯೋತ್ಪಾದಕರು ಯೋಧರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದರು. ಇದೇ ವೇಳೆ ಯೋಧರು ಕೂಡ ಗುಂಡಿನ ದಾಳಿ ಆರಂಭಿಸಿದ್ದರು. ರಾತ್ರೋರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು.

ಉಗ್ರರನ್ನು ಪತ್ತೆ ಹಚ್ಚಲು ಸೇನೆ ತನ್ನ ಕಾರ್ಯಾಚರಣೆಯನ್ನು ಗುರುವಾರ ತನಕ ಮುಂದುವರಿಸಿತ್ತು. ದೇಸಾ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳನ್ನು ಕೂಂಬಿಂಗ್ ಮಾಡಲಾಗಿದೆ. ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಿಗ್ಗೆ ನಡುವೆ ದೇಸಾ ಕಾಡುಗಳಲ್ಲಿ ಎರಡು ಸಣ್ಣ ಗುಂಡಿನ ಚಕಮಕಿಗಳು ನಡೆದಿವೆ.

ದೋಡಾ ಜಿಲ್ಲೆಯನ್ನು 2005ರಲ್ಲಿ ಭಯೋತ್ಪಾದಕ ಚಟುವಟಿಕೆಗಳಿಂದ ಮುಕ್ತವೆಂದು ಘೋಷಿಸಿದ್ದರೂ ಇತ್ತೀಚೆಗೆ ಇಲ್ಲಿ ಮತ್ತೆ ಉಗ್ರ ಚಟುವಟಿಕೆ ಆರಂಭಗೊಂಡಿದೆ. ಜೂನ್ 12ರಂದು ಚಟರ್ಗಲಾ ಪಾಸ್‌ನಲ್ಲಿ ನಡೆದ ದಾಳಿಯೊಂದಿಗೆ ಮತ್ತೆ ಇಲ್ಲಿ ಹಿಂಸಾಚಾರ ಪ್ರಾರಂಭವಾಯಿತು. ಇದರಲ್ಲಿ ಆರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಈ ವರ್ಷವೊಂದರಲ್ಲೇ ಇಲ್ಲಿ 11 ಸೈನಿಕರು ಹುತಾತ್ಮರಾಗಿದ್ದಾರೆ. ದೋಡಾದಲ್ಲಿ ನಾಲ್ವರು, ಜುಲೈ 8ರಂದು ಕಥುವಾದಲ್ಲಿ ಐವರು, ಮೇಯಲ್ಲಿ ಪೂಂಚ್‌ನಲ್ಲಿ ಓರ್ವ ಐಎಎಫ್ ಸಿಬ್ಬಂದಿ ಮತ್ತು ಜೂನ್‌ನಲ್ಲಿ ಓರ್ವ ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಜಾಸ್ತಿಯಾಗಿರುವ ಕಾರಣ ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಲೇ ಇರುತ್ತಾರೆ. ಜುಲೈ 6 ಮತ್ತು 7 ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಭದ್ರತಾ ಪಡೆಗಳು ಆರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದವು. 

ಇದನ್ನೂ ಓದಿ: Terror Attacks in India: ಭಾರತದೊಳಕ್ಕೆ ನುಸುಳಲು ಉಗ್ರರಿಗೆ ಪಾಕಿಸ್ತಾನ ಧನಸಹಾಯ: ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

Exit mobile version