Site icon Vistara News

ನಿಮ್ಮಪ್ಪ, ಅಮ್ಮ ನನಗೆ ಓಟ್​ ಹಾಕದಿದ್ದರೆ ಊಟ ಮಾಡಬೇಡಿ; ಶಾಲಾ ಮಕ್ಕಳಿಗೆ ಶಿವ ಸೇನಾ ಶಾಸಕನ ಬ್ಲ್ಯಾಕ್​ಮೇಲ್​

Suresh Bangar

ನವದೆಹಲಿ: ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ (Shiv Sena) ಶಾಸಕರೊಬ್ಬರು ಮುಂಬರುವ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಎರಡು ದಿನಗಳವರೆಗೆ ಏನೂ ತಿನ್ನಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಲಮ್ನೂರಿ ಶಾಸಕ ಸಂತೋಷ್ ಬಂಗಾರ್ (Santosh Bangar) ಈ ವಿಲಕ್ಷಣ ಹೇಳಿಕೆ ನೀಡಿದ್ದಾರೆ.

“ಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ, ಎರಡು ದಿನಗಳವರೆಗೆ ಏನೂ ತಿನ್ನಬೇಡಿ” ಎಂದು ಬಂಗಾರ್ ಶಾಲಾ ಮಕ್ಕಳಿಗೆ ಮರಾಠಿಯಲ್ಲಿ ಹೇಳುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಈ ಘಟನೆಯ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಜಿಲ್ಲಾ ಪರಿಷತ್ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಬಂಗಾರ್, ಯಾಕೆ ತಿನ್ನುತ್ತಿಲ್ಲ ಎಂದು ಕೇಳಿದರೆ “ಸಂತೋಷ್ ಬಂಗಾರ್​ ಗೆ ಮತ ಹಾಕಿ, ಆಗ ಮಾತ್ರ ನಾವು ತಿನ್ನುತ್ತೇವೆ” ಎಂದು ಹೇಳಬೇಕು ಎಂದು ಮಕ್ಕಳಿಗೆ ಹೇಳಿದ್ದಾರೆ. ಮತದಾನ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸುವುದರ ವಿರುದ್ಧ ಚುನಾವಣಾ ಆಯೋಗವು ಕಠಿಣ ನಿರ್ದೇಶನಗಳನ್ನು ಹೊರಡಿಸಿದ ಒಂದು ವಾರದಲ್ಲೇ ಶಿವಸೇನೆ ಶಾಸಕರ ಈ ಹೇಳಿಕೆ ಬಂದಿದೆ.

ಚುನಾವಣೆಯಲ್ಲಿ ಮಕ್ಕಳ ಬಳಕೆ ತಪ್ಪು

ಚುನಾವಣಾ ಆಯೋಗದ ಪ್ರಕಾರ, ಮತಗಳನ್ನು ಗಳಿಸಲು ಮಕ್ಕಳನ್ನು ರಾಜಕೀಯ ಪ್ರಚಾರಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ. ಇದು 1986 ರ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ಕೆಲವು ನಿಬಂಧನೆಗಳನ್ನು ಉಲ್ಲಂಘಿಸುತ್ತದೆ.

ಬಂಗಾರ್ ತಮ್ಮ ಆಘಾತಕಾರಿ ಹೇಳಿಕೆಗಳು ಮತ್ತು ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ ವಿವಾದಕ್ಕೆ ಒಳಗಾಗುತ್ತಾರೆ. 2024ರ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗದಿದ್ದರೆ ನೇಣು ಹಾಕಿಕೊಳ್ಳುವುದಾಗಿ ಅವರು ಕಳೆದ ತಿಂಗಳು ಹೇಳಿದ್ದರು.

ಮಕ್ಕಳಿಗೆ ಬ್ಲ್ಯಾಕ್​ ಮೇಳ್ ಮಾಡಿದ ಬಂಗಾರ್ ವಿರುದ್ಧ ಕ್ರಮ ಕೈಗೊಳ್ಳುವಂಥೆ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿಯ ನಾಯಕರು ಚುನಾವಣಾ ಆಯೋಗಕ್ಕೆ ಒತತ್ತಾಯಿಸಿದ್ದಾರೆ.

ಇದನ್ನೂ ಓದಿ :Narendra Modi : ದಲಿತರು, ಒಬಿಸಿಗಳೇ ಮೋದಿ ಗ್ಯಾರಂಟಿಯ ಫಲಾನುಭವಿಗಳು ಎಂದ ಪ್ರಧಾನಿ

ಎನ್ಸಿಪಿ ಪವಾರ್ ಬಣದ ವಕ್ತಾರ ಕ್ಲೈಡ್ ಕ್ರಾಸ್ಟೊ ಮಾತನಾಡಿ, “ಬಂಗಾರ್ ಶಾಲಾ ಮಕ್ಕಳಿಗೆ ಹೇಳಿದ್ದು ಚುನಾವಣಾ ಆಯೋಗದ ನಿರ್ದೇಶನಕ್ಕೆ ವಿರುದ್ಧವಾಗಿದೆ, ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರು ಪುನರಾವರ್ತಿತ ಅಪರಾಧಿ ಮತ್ತು ಅವರು ಬಿಜೆಪಿಯ ಮಿತ್ರರಾಗಿರುವುದರಿಂದ ಶಿಕ್ಷೆಯಿಂದ ಮುಕ್ತರಾಗುತ್ತಿದ್ದಾರೆ. ಆಯೋಗವು ಯಾವುದೇ ಪೂರ್ವಾಗ್ರಹವಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ವಿಜಯ್ ವಾಡೆಟ್ಟಿವಾರ್ ಅವರು ಬಂಗಾರ್ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು ಮತ್ತು ಅವರ ಪಕ್ಷದ ಶಾಸಕರೊಬ್ಬರು ಶಾಲಾ ಮಕ್ಕಳ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡುತ್ತಿರುವಾಗ ರಾಜ್ಯ ಶಿಕ್ಷಣ ಸಚಿವರು ನಿದ್ರೆ ಮಾಡುತ್ತಿದ್ದಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

Exit mobile version