Site icon Vistara News

ವಿಸ್ತಾರ ಸಂಪಾದಕೀಯ: ಬೆಂಗಳೂರು ರೌಡಿಗಳ ಸಾಮ್ರಾಜ್ಯ ಆಗದಿರಲಿ

Banaglore incident

ಬೆಂಗಳೂರಿನ ಅಂಗಡಿಯೊಂದರಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದನ್ನು ಪ್ರಶ್ನಿಸಿ ಅನ್ಯಕೋಮಿನ ಯುವಕರು ಮೊಬೈಲ್‌ ಶಾಪ್‌ನಲ್ಲಿದ್ದ ಯುವಕನಿಗೆ ಥಳಿಸಿದ್ದಾರೆ. ಭಾನುವಾರ ಸಂಜೆ ನಡೆದ ಈ ಘಟನೆಯಲ್ಲಿ ಐದಾರು ಯುವಕರ ಗ್ಯಾಂಗ್‌ ನಗರ್ತಪೇಟೆಯಲ್ಲಿರುವ ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿಗೆ ಬಂದು, ʼನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕಿದ್ದೀಯಾ?ʼ ಎಂದು ತಗಾದೆ ತೆಗೆದು ಮುಖೇಶ್‌ ಎಂಬಾತನನ್ನು ಅಂಗಡಿಯಿಂದ ಹೊರಗೆಳೆದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಮುಖೇಶ್‌ ಕೂಡಲೇ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಆರಂಭದಲ್ಲಿ ಪೊಲೀಸರು ಎಫ್ಐಆರ್ ಮಾಡಲು ಹಿಂದೇಟು ಹಾಕಿದ್ದರು. ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿ, ಐವರನ್ನು ಬಂಧಿಸಿದ್ದರು. ಇದೀಗ ಬಿಜೆಪಿ ಸಂಸದರು ಮತ್ತಿತರರು ಕೂಡ ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿದ್ದು, ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದೆ. ನೊಂದ ವ್ಯಕ್ತಿ ದೂರು ನೀಡಿದ ಕೂಡಲೇ ಪೊಲೀಸರು ಕ್ರಮ ಕೈಗೊಂಡಿದ್ದರೆ ಪ್ರಕರಣ ಅಲ್ಲಿಗೇ ಮುಗಿಯುತ್ತಿತ್ತೋ ಏನೋ. ಪೊಲೀಸರು ಕೆರೆದು ಹುಣ್ಣು ಮಾಡಿಕೊಂಡಿದ್ದಾರೆ.

ಇಂಥದೇ ಇನ್ನೊಂದು ಪ್ರಕರಣ 20 ದಿನಗಳ‌ ಹಿಂದೆಯೂ ನಡೆದಿದೆ ಎನ್ನಲಾಗಿದೆ. ಸತೀಶ್‌ ಎಂಬುವರು ನಡೆಸುತ್ತಿದ್ದ ಹೋಟೆಲ್‌ಗೆ ಪುಂಡರು ಬಂದು ಫ್ರೀಯಾಗಿ ಊಟ ಕೇಳಿದ್ದು, ಕೊಡದೇ ಹೋದಾಗ ಸತೀಶ್‌ ಹಾಗೂ ಅವರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಸಂಸದರು ಆರೋಪಿಸಿದ್ದಾರೆ. ಇದು ಬಾಂಗ್ಲಾದಿಂದ ಅಕ್ರಮವಾಗಿ ಬಂದು ನೆಲೆಸಿರುವ ಪುಂಡರ ಕೃತ್ಯ ಎನ್ನಲಾಗಿದೆ. ಇನ್ನೊಂದು ಪ್ರಕರಣ ನಿನ್ನೆ ತಾನೆ ನಡೆದಿದೆ. ಆರ್‌ಟಿ ನಗರದ ಸುಲ್ತಾನ್‌ ಪಾಳ್ಯದಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚಿ ಪುಡಿ ರೌಡಿಗಳು ಗುಂಪು ಕಟ್ಟಿಕೊಂಡು ದ್ವಿಚಕ್ರ ವಾಹನಗಳಲ್ಲಿ ತಲವಾರು, ಲಾಂಗ್‌ ಝಳಪಿಸುತ್ತಾ ಕೇಕೆ ಹಾಕುತ್ತಾ ಓಡಾಡಿದ್ದಾರೆ. ಆ ಕ್ಷಣವೇ ಬೀದಿಯಲ್ಲಿ ಯಾರಾದರೂ ಇದನ್ನು ಪ್ರಶ್ನಿಸಿದ್ದರೆ ಹಾಗೆ ಪ್ರಶ್ನಿಸಿದವರ ತಲೆ ಉರುಳುವ ಸಾಧ್ಯತೆಯೂ ಇತ್ತು. ಯಾಕೆಂದರೆ ಗ್ಯಾಂಗ್‌ ಮನೋವರ್ತನೆ ಹಾಗೂ ಅಮಲುಕೋರತನ ಎರಡೂ ದುಷ್ಕೃತ್ಯಗಳನ್ನು ಪ್ರೇರೇಪಿಸುವಂಥದು.

ಈ ಮೂರೂ ಘಟನೆಗಳು, ಮತ್ತು ವರದಿಯಾಗದ ಇಂಥ ಇನ್ನಷ್ಟು ಪ್ರತ್ಯೇಕ ಘಟನೆಗಳು ಬೆಂಗಳೂರಿನ ಪ್ರಸ್ತುತ ಕಾನೂನು ಸುವ್ಯವಸ್ಥೆಯ ದಾರುಣ ಚಿತ್ರಣವನ್ನು ನಮ್ಮ ಮುಂದಿಡುತ್ತಿವೆ. ಬೀದಿ ರೌಡಿಗಳು ಲಾಂಗ್‌ ಝಳಪಿಸಿ ಪುಟ್ಟ ಅಂಗಡಿಯವರನ್ನೋ ಸಣ್ಣ ಉದ್ಯಮಿಗಳನ್ನೋ ಬೆದರಿಸಿ ವಸೂಲಿ ಮಾಡುವುದು, ಹಫ್ತಾ ನೀಡದಿದ್ದರೆ ದಾಂಧಲೆ ನಡೆಸುವುದು ಅವ್ಯಾಹತವಾಗಿದೆ. ವೈರಿ ಗ್ಯಾಂಗ್‌ಗಳು ರಸ್ತೆಗಳಲ್ಲೇ ಹೊಡೆದಾಡಿಕೊಳ್ಳುತ್ತವೆ, ರೌಡಿಗಳು ಬೀದಿ ಹೆಣಗಳಾಗುತ್ತಾರೆ. ಇನ್ನು ಬೈಕ್ ವ್ಹೀಲಿಂಗ್ ಮಾಡಿ ಇತರರಿಗೆ ಭಯ ಹುಟ್ಟಿಸುವವರು, ಅದನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದರೂ ಪೊಲೀಸರ ಭಯವಿಲ್ಲ ಎನ್ನುವಂತಿದ್ದಾರೆ. ಬೀದಿಯಲ್ಲಿ, ಮನೆ ಮನೆಯ ಎದುರಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂಬ ಅರಿವಿದ್ದರೂ ಇಲ್ಲದವರಂತೆ ರೌಡಿಗಳು, ಕೊಲೆಗಾರರು ದುಷ್ಕೃತ್ಯ ಎಸಗಿ ಪರಾರಿಯಾಗುತ್ತಿದ್ದಾರೆ. ದಾರಿಹೋಕ ಅಮಾಯಕರನ್ನು ಗಾಂಜಾ ಮತ್ತಿನಲ್ಲಿರುವವರು ಸುಖಾಸುಮ್ಮನೆ ತಿವಿದು ಸಾಯಿಸುತ್ತಿದ್ದಾರೆ. ಪಾಗಲ್‌ಪ್ರೇಮಿಗಳು ತಮ್ಮ ಪ್ರೇಮ ನಿರಾಕರಿಸುವ ಹುಡುಗಿಯರ ಮೇಲೆ ಆಸಿಡ್‌ ಎರಚುವುದು, ಚಾಕುವಿನಿಂದ ತಿವಿದು ಸಾಯಿಸುವುದು ರಾಜಾರೋಷವಾಗಿ ಎಲ್ಲರ ಕಣ್ಣೆದುರೇ ನಡೆಯುತ್ತಿದೆ. ಬದಲಾಗಿರುವ ಈ ಅಪರಾಧಗಳ ಸ್ವರೂಪ ನಮ್ಮನ್ನು ಆತಂಕಕ್ಕೆ ಒಳಪಡಿಸುವಂತಿದೆ. ಮೊಬೈಲ್, ಚೈನ್ ಎಗರಿಸಿ ಪರಾರಿಯಾಗುವ ಪ್ರಕರಣಗಳಂತೂ ಅಸಂಖ್ಯ.

ಬೆಂಗಳೂರಿನಲ್ಲಿ ತಮ್ಮ ಅಂಗಡಿಯಲ್ಲಿ ತಮಗೆ ಬೇಕಾದ ಹಾಡು ಹಾಕುವ ಸ್ವಾತಂತ್ರ್ಯವೂ ಇಲ್ಲವೇ? ಇಲ್ಲಿನ ಪುಡಿ ರೌಡಿಗಳಿಗೆ ಬೀದಿಯಲ್ಲಿರುವವರನ್ನೆಲ್ಲ ಬೆದರಿಸುವ ಅಧಿಕಾರವನ್ನು ನೀಡಲಾಗಿದೆಯೇ? ಲಾಂಗ್‌ ಹಿಡಿದು ಸಜ್ಜನರನ್ನು ಬೆದರಿಸುವ ರೌಡಿಗಳನ್ನು ಪೊಲೀಸರು ಏನೂ ಮಾಡುತ್ತಿಲ್ಲ ಏಕೆ? ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದ ಗೃಹ ಇಲಾಖೆ ಇನ್ನಷ್ಟು ಚುರುಕಾಗಿ ಕ್ರಿಯಾಶೀಲವಾಗದಿದ್ದರೆ, ಬೆಂಗಳೂರಿಗೆ ಕ್ರೈಂ ಸಿಟಿ ಎಂಬ ಕಳಂಕ ಶಾಶ್ವತವಾಗಿ ಅಂಟಿಕೊಳ್ಳಲಿದೆ. ಉತ್ತರ ಪ್ರದೇಶದಲ್ಲಿ ಒಂದು ಕಾಲದಲ್ಲಿ ಅವ್ಯಾಹತವಾಗಿದ್ದ ಅಪರಾಧ ಮಾಫಿಯಾ ವ್ಯವಸ್ಥೆಯೇ ಅಲ್ಲಿನ ಆಡಳಿತ ಪಕ್ಷವನ್ನು ನೆಲಕ್ಕಿಳಿಸಲು ಕಾರಣವಾಯಿತು ಎಂಬುದನ್ನು ನೆನಪಿಡಬೇಕು. ಬೆಂಗಳೂರಿನ ಭೂಗತ ಲೋಕ ಮತ್ತೆ ಸಕ್ರಿಯವಾದಂತಿದೆ. ಆದರೆ ಈ ಸಲ ಭೂಗತ ಲೋಕಕ್ಕೆ ಮತೀಯ ವಾಸನೆ ಕೂಡ ಅಂಟಿಕೊಂಡಂತಿದೆ. ಹಿಂದೂಗಳನ್ನು ಹುಡುಕಿ ಹುಡುಕಿ ಹಣಿಯುವ ರೌಡಿ ಪ್ರವೃತ್ತಿ ಹೆಚ್ಚು ಹೆಚ್ಚು ಕಂಡುಬರುತ್ತಿದೆ. ಇದು ಅತ್ಯಂತ ಅಪಾಯಕಾರಿ. ಪೊಲೀಸರು ಇದನ್ನು ಇಗಲೇ ಅರ್ಥ ಮಾಡಿಕೊಂಡು ಮಟ್ಟ ಹಾಕಬೇಕು.

ಇನ್ನಷ್ಟು ಓದಿ: ವಿಸ್ತಾರ ಸಂಪಾದಕೀಯ: ಚಾಂಪಿಯನ್​ ಆರ್​​ಸಿಬಿ ಮಹಿಳೆಯರು ಯುವ ಅಥ್ಲೀಟ್​​ಗಳಿಗೆ ಪ್ರೇರಣೆ

ರೌಡಿಗಳ ಸಂಖ್ಯೆ ಎಷ್ಟು ಬೆಳೆದಿದೆ ಎಂದರೆ, ಚುನಾವಣೆಗೆ ಮುಂಚಿತವಾಗಿ ರೌಡಿ ಶೀಟರ್‌ಗಳನ್ನು ಠಾಣೆಗೆ ಕರೆತಂದು ಪರೇಡ್‌ ಮಾಡಿಸುವಾಗ ಕಾಣುವ ರೌಡಿಗಳ ಸಂಖ್ಯೆಯನ್ನು ಗಮನಿಸಿದರೆ ಗಾಬರಿಯಾಗುತ್ತದೆ. ಬೆಂಗಳೂರಿನ ಭೂಗತ ಜಗತ್ತು ಮತ್ತೆ ತುಂಬಿ ತುಳುಕುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳಲ್ಲಿ ಹೆಚ್ಚಳವಾಗಿರುವುದು ಹೆಚ್ಚು ಆತಂಕಕಾರಿ. ಇದು ಮಹಿಳೆಯರಿಗೆ ಈ ನಗರ ಅಸುರಕ್ಷಿತ ಎಂಬ ಭಾವನೆ ಮೂಡಿಸದೇ ಇರದು. ಹಾಗೆಯೇ ಗಾಂಜಾ- ಅಫೀಮು ಮುಂತಾದ ಮಾದಕ ದ್ರವ್ಯಗಳು ಎಗ್ಗಿಲ್ಲದೇ ರಾಜ್ಯದೊಳಗೆ ಸರಬರಾಜಾಗುತ್ತಿದ್ದು, ಇದು ನಮ್ಮ ಯುವಜನತೆಯನ್ನು ಶಾಶ್ವತ ಚಿತ್ತವಿಕಲತೆಯತ್ತ ಕೊಂಡೊಯ್ಯಲಿದೆ. ಇದನ್ನು ಮೂಲದಿಂದಲೇ ಪತ್ತೆ ಹಚ್ಚಿ ತಡೆಯದೇ ಹೋದರೆ ಉಳಿಗಾಲವಿಲ್ಲ. ಇದೆಲ್ಲದಕ್ಕೆ ಪೊಲೀಸ್‌ ವ್ಯವಸ್ಥೆಯನ್ನು ಇನ್ನಷ್ಟು ಸಕ್ರಿಯ, ಗಟ್ಟಿ ಹಾಗೂ ಆಧುನೀಕರಣಗೊಳಿಸಬೇಕಿದೆ.

Exit mobile version