ಕರ್ನಾಟಕ ಹಾಲು ಮಹಾಮಂಡಳಿ (Karnataka Milk Federation) ನಂದಿನಿ ಹಾಲಿನ ದರ ಏರಿಕೆಯನ್ನು ಘೋಷಿಸಿದೆ. ಹೊಸ ದರ ಬುಧವಾರದಿಂದ ಜಾರಿಗೆ ಬರಲಿದೆ. ಇತ್ತೀಚೆಗಷ್ಟೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬರೆ ಎಳೆದಿದ್ದ ಕರ್ನಾಟಕ ಸರ್ಕಾರ, ಈಗ ಹಾಲಿನ ದರ ಏರಿಕೆ ಮಾಡಿ ಗ್ರಾಹಕರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ. ದರ ಏರಿಕೆಯಿಂದ ಪ್ರತಿ ಲೀಟರ್ ಹಾಲಿಗೆ 2.10 ರೂಪಾಯಿ ಹೆಚ್ಚಳವಾಗಲಿದೆ. ಬೆಲೆ ಹೊಂದಾಣಿಕೆಯ ಜೊತೆಗೆ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಒದಗಿಸಲು ನಂದಿನಿ ಹಾಲಿನ ಪ್ರತಿ ಪ್ಯಾಕೆಟ್ ಈಗ 50 ಮಿಲಿ ಲೀಟರ್ ಹೆಚ್ಚು ಹಾಲನ್ನು ಹೊಂದಿರುತ್ತದೆ. ಉದಾಹರಣೆಗೆ, ಅರ್ಧ ಲೀಟರ್ ಪ್ಯಾಕೆಟ್‌ನಲ್ಲಿ 550 ಮಿ.ಲೀ. ಹಾಲನ್ನು ಹೊಂದಿರುತ್ತದೆ. ಒಂದು ಲೀಟರ್ ಹಾಲಿನ ಪ್ಯಾಕೆಟ್‌ನಲ್ಲೂ 50 ಮಿ.ಲೀ. ಹೆಚ್ಚಿರುತ್ತದೆ. ಈ ಹೆಚ್ಚುವರಿ ಹಾಲಿನ ದರವನ್ನು ಮಾತ್ರ ವಸೂಲಿ ಮಾಡಲಾಗುತ್ತದೆ ಎಂಬುದು ಈ ಬೆಲೆ ಏರಿಕೆ ಮಾಡಿದವರ ಸಮಜಾಯಿಷಿ.
ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದರಿಂದ ನಂದಿನಿ ಹಾಲಿನ ಪ್ಯಾಕೆಟ್‌ಗೆ ತಲಾ 50 ಮಿ.ಲೀ. ಹಾಲು ಹೆಚ್ಚಳ (Nandini Milk Price Hike) ಮಾಡಲಾಗಿದೆ. ಹೀಗಾಗಿ ಹೆಚ್ಚುವರಿ ಹಾಲಿಗೆ 2 ರೂ ದರ ನಿಗದಿಪಡಿಸಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆಯೇ ವಿನಃ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರು ಹಾಲಿನ ದರ ಹೆಚ್ಚಳಕ್ಕೆ ಸ್ಪಷ್ಟನೆ ನೀಡಿದ್ದಾರೆ. ಹಾಲು ಸಂಗ್ರಹಣಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ರೈತರು ಹೆಚ್ಚುವರಿಯಾಗಿ ತರುತ್ತಿರುವ ಹಾಲನ್ನು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಕೆಎಂಎಫ್ ಸಂಸ್ಥೆ ಪ್ಯಾಕೆಟ್‌ಗಳಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಳ ಮಾಡುವ ತೀರ್ಮಾನ ಮಾಡಿದೆ ಎಂದಿದ್ದಾರೆ.
ಮೇಲ್ನೋಟಕ್ಕೆ ಈ ಕ್ರಮದಲ್ಲಿ ಸದುದ್ದೇಶವೇ ಇರುವಂತೆ ಕಾಣಿಸುತ್ತಿದೆ. ಯಾಕೆಂದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಈ ಬಾರಿ ಹಾಲಿನ ಉತ್ಪಾದನೆ ಶೇ.15 ಹೆಚ್ಚಳವಾಗಿದೆ. ಹಿಂದಿನ ವರ್ಷಗಳಲ್ಲಿ ಈ ವೇಳೆಗೆ ನಿತ್ಯ ಸರಾಸರಿ 90 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಈ ಬಾರಿ ಸರಾಸರಿ 99 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಹೀಗೆ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ಹಾಲನ್ನು ರೈತರಿಂದ ಖರೀದಿ ಮಾಡಬೇಕು. ಯಾವುದೇ ಕಾರಣಕ್ಕೂ ಅವರಿಂದ ಹಾಲು ಪಡೆಯಲು ನಿರಾಕರಿಸಬಾರದು ಎಂಬುದು ಸದುದ್ದೇಶ. ಇದು ನಾಡಿನ ಲಕ್ಷಾಂತರ ಹೈನುಗಾರರ ಹಿತದೃಷ್ಟಿಯಿಂದ ಕೆಎಂಎಫ್ ಸಂಸ್ಥೆಯು ತೆಗೆದುಕೊಂಡ ನಿರ್ಣಯ. ಪ್ಯಾಕೆಟ್‌ನಲ್ಲಿ ಹೆಚ್ಚುವರಿ ಹಾಲನ್ನು ಸೇರಿಸುವುದು ಸರಿ. ಅದು ಬಳಕೆದಾರನಿಗೆ ಲಾಭವಾಗಿ ಸಿಗುವಂತೆ ಮಾಡದೆ, ಆತನಿಗೆ ಬೇಕಿಲ್ಲದಿದ್ದರೂ ಬಲವಂತವಾಗಿ ನೀಡುತ್ತಿರುವಂತೆ ಈ ಕ್ರಮ ಇದೆ. ಬಳಕೆದಾರನ ದೃಷ್ಟಿಯಿಂದ ಇದು ಅಷ್ಟೇನೂ ಸರಿಯಾದ ಕ್ರಮವಲ್ಲ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಯೋತ್ಪಾದಕನಿಗೆ ಶ್ರದ್ಧಾಂಜಲಿ; ಕೆನಡಾ ಸಂಸತ್ ನ ಮೂರ್ಖತನ
ಈಗಲೂ ಹಾಲಿನ ಮಾರಾಟದಿಂದ ಕೆಎಂಎಫ್ ಲಾಭವನ್ನು ಗಳಿಸುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ಗರಿಷ್ಠ ಪ್ರಮಾಣದ ಹಾಲನ್ನು ಹಾಲಿನ ಪೌಡರ್ ತಯಾರಿಕೆ ಮಾಡುವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ನಿತ್ಯ ಸುಮಾರು 30 ಲಕ್ಷ ಲೀಟರ್ ಹಾಲು ಪೌಡರ್ ತಯಾರಿಕೆಗಾಗಿ ಬಳಸಲ್ಪಡುತ್ತಿದ್ದು, 250 ಮೆಟ್ರಿಕ್ ಟನ್ ಹಾಲಿನ ಪೌಡರ್ ತಯಾರಿಸಲಾಗುತ್ತಿದೆ. ಇದು ಹಾಲಿನ ಪೌಡರ್‌ಗೆ ಇರುವ ಬೇಡಿಕೆಗೆ ಅನುಗುಣವಾಗಿದೆ. ಜೊತೆಗೆ ಮೊಸರು, ತುಪ್ಪ, ಬೆಣ್ಣೆ ಮುಂತಾದ ನಂದಿನಿ ಹೈನು ಉತ್ಪನ್ನಗಳಿವೆ. ಹಾಗೆಯೇ ಮೈಸೂರು ಪಾಕ್, ಪೇಢ ಮುಂತಾದ ಸಿಹಿ ಉತ್ಪನ್ನಗಳೂ ಇವೆ. ಇವೆಲ್ಲವುಗಳ ಮಾರಾಟದಿಂದ ಬರುತ್ತಿರುವ ಒಟ್ಟಾರೆ ಆದಾಯವು ಈ ಸಂಸ್ಥೆಯನ್ನು ಸಲಹುತ್ತಿದೆ. ರಾಜ್ಯದಲ್ಲಿ ಹಾಲಿನ ಬಳಕೆಯನ್ನು ಹೆಚ್ಚು ಮಾಡಬೇಕು; ಆ ಮೂಲಕ ಹೈನುಗಾರರಿಗೆ ನೆರವಾಗಬೇಕು ಎಂಬ ಉದ್ದೇಶವೇನೋ ಚೆನ್ನಾಗಿದೆ. ಆದರೆ ಇದನ್ನು ಬೇರೆ ಮೂಲಗಳಿಂದ ಭರಿಸಬೇಕು ಹೊರತು ಹಾಲಿನಿಂದಲ್ಲ. ಯಾಕೆಂದರೆ ಹಾಲು ಒಂದು ರೀತಿಯಿಂದ ಎಲ್ಲರ ಅಗತ್ಯ ಆಹಾರ. ಹೊಟ್ಟೆ ತುಂಬ ಊಟವಿಲ್ಲದಾಗ ಹಾಲು ಕುಡಿದೇ ಹೊಟ್ಟೆ ತುಂಬಿಸಿಕೊಳ್ಳುವವರಿದ್ದಾರೆ. ಮಕ್ಕಳಿಗೆ, ಮಹಿಳೆಯರಿಗೆ ಹಾಲು ಅತ್ಯಂತ ಪೌಷ್ಟಿಕ ಆಹಾರ. ಆದರೆ ಎಲ್ಲರೂ ಈ ಏರಿದ ಬೆಲೆಯಲ್ಲಿ ಹಾಲನ್ನು ಕೊಳ್ಳುವ ಸ್ಥಿತಿವಂತರಾಗಿರುವುದಿಲ್ಲ.
ಜೊತೆಗೆ ಹಾಲಿನ ದರ ಏರಿಕೆಯೆಂದರೆ ಒಂದು ರೀತಿಯಲ್ಲಿ ಪೆಟ್ರೋಲ್ ದರ ಏರಿಕೆಯಂತೆಯೇ. ಇದನ್ನನುಸರಿಸಿ ಕಾಫಿ, ಟೀ ಮುಂತಾದ ಹೋಟೆಲ್ ಉತ್ಪನ್ನಗಳ ದರಗಳು ಹೆಚ್ಚಾಗಲಿವೆ. ಮೊಸರು, ತುಪ್ಪ, ಬೆಣ್ಣೆಗಳ ದರವೂ ಹೆಚ್ಚಬೇಕಾದೀತು. ಹಾಲನ್ನು ಬಳಸಿ ಮಾಡುವ ಖಾದ್ಯಗಳ ಬೆಲೆಯೂ ಹೆಚ್ಚಾಗುತ್ತದೆ. ಹೀಗಾಗಿ ಇದು ಬಳಕೆದಾರರಿಗೆ ಹೊರೆಯೇ ಆಗಿದೆ. ಕಾಂಗ್ರೆಸ್ ಸರಕಾರ ಎಲ್ಲೆಲ್ಲಿ ದರ ಏರಿಸಬಹುದು ಎಂಬ ಕಡೆಯೆಲ್ಲಾ ಪ್ರಯತ್ನಿಸಿ ನೋಡುತ್ತಿರುವಂತಿದೆ. ಇತ್ತೀಚೆಗೆ ತಾನೇ ಪೆಟ್ರೋಲ್- ಡೀಸೆಲ್ ಬೆಲೆಯೇರಿಕೆಯನ್ನು ಮಾಡಿತ್ತು. ಹೀಗೆ ಒಂದರ ಹಿಂದೆ ಒಂದರಂತೆ ಬೆಲೆ ಏರಿಕೆಯ ಬರೆ ಎಳೆಯುತ್ತ ಹೋದರೆ ಕೆಳ ಹಾಗೂ ಕೆಳಮಧ್ಯಮ ವರ್ಗದ ಬಳಕೆದಾರರು ಬದುಕುಳಿಯುವುದೇ ಕಷ್ಟವಾಗಲಿದೆ. ಹೈನುಗಾರರಿಗೆ ಹಾಲು ಮಾರಾಟದ ಲಾಭ ಸಿಗಲಿ. ಆದರೆ ಅದಕ್ಕಾಗಿ ಸಾಮಾನ್ಯ ಬಳಕೆದಾರನ ಜೇಬಿಗೆ ಹೆಚ್ಚಿನ ಹೊರೆ ಆಗದಿರಲಿ.