Site icon Vistara News

Water Price Hike: ಬೆಂಗಳೂರಿನಲ್ಲಿ ನೀರಿನ ದರ ಏರಿಕೆಗೆ ವೇಗ; ನಿಮಗೆ ಎಷ್ಟಾಗುತ್ತೆ ಚೆಕ್‌ ಮಾಡಿ

bwssb water price hike

ಬೆಂಗಳೂರು: ʼಯಾರು ಎಷ್ಟೇ ವಿರೋಧಿಸಿದರೂ ನಾನು ಬೆಂಗಳೂರಿನಲ್ಲಿ (Bangalore) ಕುಡಿಯುವ ನೀರಿನ ದರ (Drinking Water price hike) ಏರಿಸುವವನೇʼ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ನಿನ್ನೆ ಹೇಳಿದ ಬೆನ್ನಲ್ಲೇ, ನೀರಿನ ದರ ಏರಿಕೆ ಪ್ರಕ್ರಿಯೆಗೆ ಬೆಂಗಳೂರು ಜಲಮಂಡಳಿ (BWSSB) ವೇಗ ನೀಡಿದೆ.

2014ರಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಅಲ್ಪಪ್ರಮಾಣದ ದರ ಏರಿಕೆ ಮಾಡಿದ ಬಳಿಕ, ನಗರದಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಇದೀಗ ಹತ್ತು ವರ್ಷದ ನಂತರ ದರ ಏರಿಕೆಗೆ ಪ್ರಸ್ತಾವನೆ ಸಿದ್ಧವಾಗುತ್ತಿದೆ. ಶೀಘ್ರದಲ್ಲೇ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ.

ಹಾಲಿ ನೀರಿನ ದರ

ಪ್ರಸ್ತುತ ನೀರಿನ ದರಗಳು ಹೀಗಿವೆ. 0- 8000 ಸಾವಿರ ಲೀಟರ್ ನೀರು ಬಳಕೆ ಮಾಡುವವರಿಗೆ ಒಂದು‌ ಸಾವಿರ ಲೀಟರ್‌ಗೆ 7 ರೂಪಾಯಿ. 8000-25000 ಸಾವಿರ ಲೀಟರ್ ನೀರು ಬಳಕೆ ಮಾಡುವವರಿಗೆ ಒಂದು ಸಾವಿರ ಲೀಟರ್‌ಗೆ 11 ರೂಪಾಯಿ. 25,000 – 50000 ಸಾವಿರ ಲೀಟರ್ ನೀರು ಬಳಕೆ ಮಾಡುವವರಿಗೆ ಒಂದು ಸಾವಿರ ಲೀಟರ್‌ಗೆ 26 ರೂಪಾಯಿ ಶುಲ್ಕ ಬೀಳುತ್ತಿದೆ.

ಪರಿಷ್ಕರಣೆ ಮಾಡಲು ಯೋಚಿಸಿರುವ ದರ

8000 ಸಾವಿರ ನೀರು ಬಳಕೆ ದರ ಏರಿಕೆ ಮಾಡದಿರಲು ಶಿಫಾರಸು ಮಾಡಲಾಗಿದೆ. 8000-25000 ಸಾವಿರ ಲೀಟರ್ ನೀರು ಬಳಕೆ ಮಾಡುವವರಿಗೆ ಒಂದು ಸಾವಿರ ಲೀಟರ್‌ಗೆ 11 ರೂ. ಯಿಂದ 15 ರೂ. ಏರಿಕೆ. 25,000 – 50000 ಸಾವಿರ ಲೀಟರ್ ನೀರು ಬಳಕೆ ಮಾಡುವವರಿಗೆ 1 ಸಾವಿರ ಲೀಟರ್ ಗೆ 26 ರೂ. ಯಿಂದ 30 ರೂ.ಗೆ ಏರಿಕೆ. ನಾನ್ ಡೊಮೆಸ್ಟಿಕ್ ಬಳಕೆದಾರರಿಗೆ ಶೇ.25%ರಷ್ಟು ನೀರಿನ ದರ ಏರಿಕೆಗೆ ಪ್ರಸ್ತಾವನೆ ಮಾಡಲಾಗಿದೆ.

ಎಷ್ಟೇ ವಿರೋಧ ಬಂದರೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಖಚಿತ; ಡಿ.ಕೆ.ಶಿವಕುಮಾರ್

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ 12-13 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ಆದರೂ ಬಿಡಬ್ಲ್ಯೂ ಎಸ್‌ಎಸ್‌ಬಿ ಕಷ್ಟಪಟ್ಟು ನಿರ್ವಹಣೆ ಮಾಡುತ್ತಿದೆ. ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ನೀರಿನ ದರ ಏರಿಕೆ (Water Price Hike) ಅನಿವಾರ್ಯ. ಅದನ್ನು ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ “ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ, 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ” ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜಧಾನಿಯ 1.40 ಕೋಟಿ ಜನಸಂಖ್ಯೆಗೆ ನೀರನ್ನು ಒದಗಿಸಲೇ ಬೇಕು. ಇದಕ್ಕಾಗಿ ಸಾಲ ಮಾಡಿ, ಸಂಪರ್ಕ ಜಾಲವನ್ನು ಹೆಚ್ಚಿಸದ ಹೊರತು ನೀರು ಕೊಡಲು ಕಷ್ಟವಾಗುತ್ತದೆ. ದರ ಹೆಚ್ಚಳ ಮಾಡದಿದ್ದರೇ ನೀರು ಸರಬರಾಜು ಕಂಪನಿ ಉಳಿಯುವುದಿಲ್ಲ, ನೌಕರರು ಬದುಕಲು ಆಗುವುದಿಲ್ಲ. ಸಂಸ್ಥೆಗೆ ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ. ಎಲ್ಲರಿಗೂ ನೀರಿನ ದರ ಹೆಚ್ಚಳ ಮಾಡುವುದಿಲ್ಲ. ಎಷ್ಟು ಏರಿಕೆ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಚರ್ಚೆ ಮಾಡಲಿ. ಧರಣಿ ಮಾಡಲಿ ನಾನು ಇದಕ್ಕೆ ಬದ್ಧವಾಗಿದ್ದೇನೆ ಎಂದು ಹೇಳಿದರು.

ಇಲಾಖೆಗೆ ಪ್ರತ್ಯೇಕ ವಿದ್ಯುತ್ ತಯಾರಿಕಾ ಕಂಪನಿ

14 ವರ್ಷಗಳಲ್ಲಿ ಸಾಕಷ್ಟು ಬಾರಿ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಇದಕ್ಕಾಗಿ ಇಲಾಖೆಯದ್ದೇ ಪ್ರತ್ಯೇಕ ಕಂಪನಿ ಸ್ಥಾಪಿಸಿ ನೀವೇ ಸೋಲಾರ್ ಸೇರಿದಂತೆ ಇತರೇ ಮೂಲಗಳಿಂದ ವಿದ್ಯುತ್ ತಯಾರಿಸಿದರೆ ಹಣ ಉಳಿತಾಯವಾಗುತ್ತದೆ. ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸಬಹುದು. ದೂರಾಲೋಚನೆ ಇಟ್ಟುಕೊಂಡು ಈಗಾಗಲೇ ಕಂಪನಿ ಸಿದ್ಧಪಡಿಸಲಾಗಿದೆ. ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಿದ ಕಾರಣಕ್ಕೆ ಮೂರುವರೆ ರೂಪಾಯಿಗೆ ವಿದ್ಯುತ್ ಸಿಗುತ್ತಿದೆ. ಆಗ ಹಲವರು ತಲೆಕೆಟ್ಟಿದೆಯಾ ಎಂದು ಆಡಿಕೊಂಡರು. ಇದರಿಂದ ಸರಬರಾಜು ಮಾಡುವ ಖರ್ಚು ಉಳಿತಾಯವಾಗಿದೆ ಎಂದು ಹೇಳಿದರು.

ನಾನಿರುವ ತನಕ ಖಾಸಗೀಕರಣ ಆಗುವುದಿಲ್ಲ

ಬಿಡಬ್ಲ್ಯೂ ಎಸ್‌ಎಸ್‌ಬಿ ನನ್ನ ಬಳಿಯೇ ಇರುವ ಕಾರಣ ಅನೇಕರು ನೂತನ ಯೋಜನೆ ಕುರಿತು ಚರ್ಚೆ ನಡೆಸಲು ಬಂದರು. ಈ ಹಿಂದೆ ಇಂಧನ ಇಲಾಖೆಯಲ್ಲಿ ಇದ್ದಾಗಲು ಇದೇ ಪ್ರಸ್ತಾವನೆ ಬಂದಿತ್ತು. ಮುಂಬೈ ಸೇರಿದಂತೆ ಇತರೆಡೆ ಅದಾನಿ ಹಾಗೂ ಇತರೆ ಕಂಪೆನಿಗಳು ವಿದ್ಯುತ್ ಸರಬರಾಜು ಮಾಡುತ್ತಿವೆ. ನಾನು ಇರುವ ತನಕ ಇದೆಲ್ಲವೂ ಸಾಧ್ಯವಿಲ್ಲ. ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿ, ಇದರ ಸುದ್ದಿಗೆ ಬರಬೇಡಿ ಎಂದು ವಾಪಸ್ ಕಳುಹಿಸಿದೆ ಎಂದರು.

ಜಲ ಹಾಗೂ ಇಂಧನ ಇವೆರಡೂ ಬಹಳ ಮುಖ್ಯವಾದವುಗಳು. ಈ ಹಿಂದೆ ನಾನು ಇಂಧನ ಸಚಿವನಾಗಿದ್ದೆ. ಈಗ ನೀರಾವರಿ ಸಚಿವನಾಗಿದ್ದೇನೆ. ಜೆ.ಎಚ್. ಪಟೇಲ್ ಅವರ ಕಾಲದಲ್ಲಿ ನೀರು ಸರಬರಾಜನ್ನು ಖಾಸಗಿಯವರಿಗೆ ನೀಡಬೇಕು ಎನ್ನುವ ಪ್ರಸ್ತಾವನೆ ಬಂದಿತ್ತು. ನಂತರ ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗಲೂ ಈ ಬಗ್ಗೆ ದೊಡ್ಡ ಚರ್ಚೆಯಾಯಿತು ಎಂದರು.

ಇದನ್ನೂ ಓದಿ: CLP Meeting: ಮುಡಾ ಹಗರಣ; ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಪರ ನಿಂತ ಶಾಸಕರು

Exit mobile version