Site icon Vistara News

ED Raid: ʼಕನ್ನಡದ ಕೋಟ್ಯಾಧಿಪತಿʼ ಶೋನಲ್ಲಿ ಪ್ರಶ್ನೆಗೆ ಉತ್ತರಿಸಿ 50 ಲಕ್ಷ ಗೆದ್ದಿದ್ದ ಪಂಪಣ್ಣ ಈಗ ಇಡಿ ಪ್ರಶ್ನೆಗೆ ವಿಲವಿಲ!

pampanna ED raid

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರದಲ್ಲಿ (Valmiki Corporation Scam) ಇಡಿ ಕೈಯಲ್ಲಿ (ED Raid) ಇದೀಗ ಸಿಕ್ಕಿಹಾಕಿಕೊಂಡಿರುವ ರಾಯಚೂರು ಗ್ರಾಮೀಣ (Raichur Rural) ಶಾಸಕ ಬಸವನಗೌಡ ದದ್ದಲ್‌ (Basanagouda Daddal) ಅವರ ಮಾಜಿ ಸಹಾಯಕ ಪಂಪಣ್ಣ (Pampanna), ಮಹಾ ಚಾಲಾಕಿ ಹಾಗೂ ಜಾಣ ಎಂಬುದು ಬಯಲಾಗಿದೆ. ಈತ ಹಿಂದೊಮ್ಮೆ ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನಡೆಸಿಕೊಡುತ್ತಿದ್ದ ʼಕನ್ನಡದ ಕೋಟ್ಯಧಿಪತಿʼ (kannadada kotyadhipathi) ಟಿವಿ ಶೋದಲ್ಲಿ ಭಾಗವಹಿಸಿದ್ದು, ಅಲ್ಲಿ 50 ಲಕ್ಷ ರೂ. ಗೆದ್ದಿದ್ದ ಎಂಬುದು ತಿಳಿದುಬಂದಿದೆ.

ರಾಯಚೂರಲ್ಲಿ ಬಸವನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಕಳೆದ 24 ಗಂಟೆಗಳಿಂದ ಇಡಿಯಿಂದ ಪಂಪಣ್ಣ ಸತತ ತನಿಖೆಗೆ ಒಳಗಾಗುತ್ತಿದ್ದಾನೆ ಹಾಗೂ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತತ್ತರಿಸುತ್ತಿದ್ದಾನೆ ಎಂದು ಗೊತ್ತಾಗಿದೆ.

ಈ ಪಂಪಣ್ಣ ಪುನೀತ್‌ ರಾಜ್‌ಕುಮಾರ್‌ ಮುಂದೆ ಕುಳಿತು ಅವರ ಪ್ರಶ್ನೆಗಳಿಗೆ ಉತ್ತರಿಸಿ ʼಕನ್ನಡದ ಕೋಟ್ಯಾಧಿಪತಿʼ ಕಾರ್ಯಕ್ರಮದಲ್ಲಿ ಭಾರಿ ಮೊತ್ತ ಗೆದ್ದ ಭಾಗ್ಯಶಾಲಿ. 2012ರಲ್ಲಿ ಈತ ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಭಾಗಿಯಾಗಿದ್ದ. 2012ರಲ್ಲಿ ಈತ ಶಿಕ್ಷಕ ವೃತ್ತಿಯಲ್ಲಿದ್ದ. ಶಿಕ್ಷಕನಾಗಿದ್ದಾಗಲೇ ಕನ್ನಡ ಕೋಟ್ಯಾಧಿಪತಿ ಗೇಮ್ ಶೋನಲ್ಲಿ ಸ್ಪರ್ಧಿಸಿದ್ದ.

ಈ ಶೋದಲ್ಲಿ ಪಂಪಣ್ಣ ಕೊನೆಯ ಪ್ರಶ್ನೆಗಿಂತ ಹಿಂದಿನ ಪ್ರಶ್ನೆಯವರೆಗೂ ಬಂದು ಅದನ್ನೂ ಉತ್ತರಿಸಿ 50 ಲಕ್ಷ ರೂ. ಗೆದ್ದಿದ್ದ. ಆದರೆ ನಂತರದ ಒಂದು ಕೋಟಿ ರೂಪಾಯಿಗೆ ಕೇಳಿದ ಪ್ರಶ್ನೆಗೆ ಸೇಫ್ ಆಗಿ ಆಡಿ ಆಟದಿಂದ ನಿವೃತ್ತಿ ಹೊಂದಿದ್ದ. ಹಾಗೆ 50 ಲಕ್ಷ ರೂಪಾಯಿ ಉಳಿಸಿಕೊಂಡಿದ್ದ. ಅಲ್ಲಿಗೆ ಮುಕ್ತಾಯವಾಗಬೇಕಿದ್ದ ಈತನ ಹಣದ ದಾಹ, ನಂತರ ಭ್ರಷ್ಟಾಚಾರದ ಸ್ವರೂಪದಲ್ಲಿ ಮುಂದುವರಿದಿದೆ. ಇದೇ ಜಾಣ್ಮೆಯನ್ನು ಆತ ಡೀಲಿಂಗ್‌ನಲ್ಲಿ ಮುಂದುವರಿಸಿದ್ದ ಎಂದು ಈತನನ್ನು ಬಲ್ಲವರು ಹೇಳುತ್ತಾರೆ.

ನಂತರ ಶಿಕ್ಷಕ ವೃತ್ತಿಯಿಂದ ಹೊರಬಂದಿದ್ದ ಪಂಪಣ್ಣ, ಬಿಚ್ಚಾಲಿ ಗ್ರಾ.ಪಂ ಪಿಡಿಓ ಆಗಿ ನಿಯೋಜನೆಗೊಂಡಿದ್ದ. ಪಿಡಿಓ ಚಾರ್ಜ್ ತೆಗೆದುಕೊಳ್ಳದೆ ರಾಯಚೂರು ತಾ.ಪಂನಲ್ಲಿ ಕೇಸ್ ವರ್ಕರ್ ಆಗಿ ಮುಂದುವರಿದಿದ್ದ. ನೂತನ MLC ಒಬ್ಬರ ಪಿಎ ಆಗಲು, ಪಿಡಿಓ ಕೆಲಸಕ್ಕೆ ಹಾಜರಾಗಿರಲಿಲ್ಲ. ನಂತರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಬಸವನಗೌಡ ದದ್ದಲ್‌ನ ಖಾಸಗಿ ವ್ಯವಹಾರ ನೋಡಿಕೊಳ್ಳಲು ಆರಂಭಿಸಿದ್ದ. ನಗರದ ಆಜಾದ್ ನಗರದಲ್ಲಿ ಐಷಾರಾಮಿ ಪ್ಲ್ಯಾಟ್ ಖರೀದಿಸಿ ವಾಸ ಮಾಡುತ್ತಿದ್ದ.

ಸದ್ಯ ವಾಲ್ಮೀಕಿ ಹಗರಣದಲ್ಲಿ ಪಂಪಣ್ಣ 50 ಲಕ್ಷ ರೂಪಾಯಿ ಕಮಿಷನ್ ಪಡೆದಿರುವ ಆರೋಪವಿದೆ. ಆರೋಪದ ಹಿನ್ನೆಲೆಯಲ್ಲಿ ಜುಲೈ 05ರಂದು ಈತ SIT ವಿಚಾರಣೆ ಒಳಗಾಗಿದ್ದ. ಪಂಪಣ್ಣನಿಂದ ಮಹತ್ವದ ದಾಖಲೆಗಳನ್ನು SIT ಪಡೆದಿದೆ. SIT ವಿಚಾರಣೆ ಬೆನ್ನಲ್ಲೇ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪಂಪಣ್ಣ ಮನೆಯಲ್ಲಿ‌ ಸಿಕ್ಕ ದಾಖಲೆಗಳನ್ನು ಇಡಿ ಅಧಿಕಾರಿಗಳು ಸ್ಕ್ಯಾನ್ ಮಾಡಿ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ಇಡಿ ದಾಳಿ ನಡುವೆಯೇ ಎಸ್‌ಐಟಿ ನೋಟೀಸ್‌

ಇಡಿ ಅಧಿಕಾರಿಗಳ ದಾಳಿ ನಡುವೆಯೇ ಎಸ್ಐಟಿ ಅಧಿಕಾರಿಗಳಿಂದ ಮಾಜಿ ಸಚಿವ ನಾಗೇಂದ್ರ ಮತ್ತು ಶಾಸಕ ಬಸವನ ಗೌಡ ದದ್ದಲ್‌ಗೆ ಇಂದು ಎಸ್ಐಟಿ ಕಚೇರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿಯಾಗಿದೆ. ಎರಡು ದಿನಗಳ ಹಿಂದೆ ನಾಗೇಂದ್ರರನ್ನು ಎಂಟು ಗಂಟೆ, ದದ್ದಲ್‌ರನ್ನು ನಾಲ್ಕು ಗಂಟೆ ಕಾಲ ಎಸ್‌ಐಟಿ ವಿಚಾರಣೆ ನಡೆಸಿತ್ತು. ಮತ್ತೆ ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸೂಚಿಸಿದ್ದರು. ಆದರೆ ನಿನ್ನೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಪರಿಣಾಮ ಇಬ್ಬರೂ ವಿಚಾರಣೆ ಹಾಜರಾಗಿರಲಿಲ್ಲ. ಇವತ್ತೂ ಇಡಿ ದಾಳಿ ಮುಂದುವರಿದ ಪರಿಣಾಮ ಎಸ್ಐಟಿ ವಿಚಾರಣೆಗೆ ಹಾಜರಾಗುವುದು ಅನುಮಾನವಾಗಿದೆ.

ಇದನ್ನೂ ಓದಿ | ED Raid: ಇಡಿ- ಸಿಬಿಐ ಮೆಗಾ ದಾಳಿ; 80 ಅಧಿಕಾರಿಗಳಿಂದ ರೇಡ್‌, ಬ್ಯಾಂಕ್‌ ಸಿಬ್ಬಂದಿ ಮನೆ ಸೀಜ್‌! ಬೆಳಗ್ಗೆಯಿಂದ ಏನೇನಾಯ್ತು?

Exit mobile version