ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಗಡಿಯಲ್ಲಿ ಚೀನಾದ ಸೇನೆ ಉಪಟಳ ಆರಂಭಿಸಿದೆ. ಅರುಣಾಚಲ ಪ್ರದೇಶದ ಗಡಿಯಲ್ಲಿ ಡಿಸೆಂಬರ್ 9ರಂದು ಭಾರತ ಹಾಗೂ ಚೀನಾ ಯೋಧರ ಮಧ್ಯೆ ಭಾರಿ ಪ್ರಮಾಣದಲ್ಲಿ ಹೊಡೆದಾಟ ನಡೆದಿದ್ದು, ಉಭಯ ಕಡೆಗಳ ಸೈನಿಕರಿಗೂ ಗಾಯಗಳಾಗಿವೆ. ಕಮ್ಯುನಿಸ್ಟ್ ದೇಶ ಹೆಚ್ಚು ಹಾನಿ ಅನುಭವಿಸಿದೆ ಎಂದು ತಿಳಿದುಬಂದಿದೆ. ಆದರೆ ಅದು ಮತ್ತೆ ಅಂಥ ಪ್ರಯತ್ನ ನಡೆಸಲಾರದು ಎಂದು ಹೇಳಲಾಗದು. ಲೇಹ್- ಲಡಾಕ್ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಚೀನಾ ವರ್ಷಗಟ್ಟಲೆ ಬಿಕ್ಕಟ್ಟು ಸೃಷ್ಟಿಸಿದ್ದುದನ್ನು ಮರೆಯಲಾಗದು. ಹಾಗೆಯೇ ಎರಡೂವರೆ ವರ್ಷಗಳ ಹಿಂದೆ (2020 ಜೂನ್) ಲಡಾಕ್‌ನ ಗಲ್ವಾನ್‌ನಲ್ಲಿ ಭಾರತದ ಗಡಿಯನ್ನು ಅತಿಕ್ರಮಿಸಲು ಚೀನಾ ಸೈನಿಕರು ಪ್ರಯತ್ನಿಸಿದ್ದು ಹಾಗೂ ಅದನ್ನು ಪ್ರತಿಭಟಿಸಿ ಭಾರತದ 20 ಸೈನಿಕರು ಬಲಿಯಾದದ್ದನ್ನು ಭಾರತ ಎಂದೂ ಮರೆತಿಲ್ಲ. ತನ್ನ ಎಷ್ಟು ಸೈನಿಕರು ಆ ಸಂದರ್ಭದಲ್ಲಿ ಮಡಿದರು ಎಂಬುದನ್ನು ಕೂಡ ಕುತಂತ್ರಿ ಚೀನಾ ಇನ್ನೂ ಬಹಿರಂಗಪಡಿಸಿಲ್ಲ. ಕುಟಿಲತೆ, ಆಕ್ರಮಣಕಾರಿತನವೇ ಚೀನಾದ ಮಂತ್ರ.
ಅರುಣಾಚಲ ಪ್ರದೇಶದ ಮೇಲೆ ಮೊದಲಿನಿಂದಲೂ ಚೀನಾ ಹಿಡಿತ ಸಾಧಿಸಲು ಯತ್ನಿಸುತ್ತಿದ್ದು, ಅದು ಸಾಧ್ಯವಾಗಿಲ್ಲ. ಇಲ್ಲಿನ ಗಡಿಯಂಚಿನ ನಿವಾಸಿಗಳನ್ನು, ಗಡಿಯಲ್ಲಿ ಯೋಧರನ್ನು ಕೆಣಕುವುದನ್ನು ಚೀನಾ ಉದ್ಯೋಗ ಮಾಡಿಕೊಂಡಿದೆ. ಇದರ ಭಾಗವಾಗಿಯೇ ಡಿ.9ರಂದು ಅದರ ಸೈನಿಕರು ಭಾರತದ ಸೈನಿಕರನ್ನು ಕೆಣಕಿದ್ದಾರೆ. ಇದಕ್ಕೆ ಭಾರತದ ಯೋಧರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಆದರೆ ಅರುಣಾಚಲ ಪ್ರದೇಶದ ಬಗೆಗೆ ಚೀನಾದ ಹಸಿವು ಇಂದು ನಿನ್ನೆಯದಲ್ಲ. ಅದು ಅರುಣಾಚದಲ್ಲಿ ಭಾರತಕ್ಕೆ ಸೇರಿರುವ 15 ಪ್ರದೇಶಗಳನ್ನು, 90,000 ಎಕರೆ ಪ್ರದೇಶವನ್ನು ತನ್ನದೆಂದು ವಾದಿಸುತ್ತದೆ. ಅದನ್ನು ʻದಕ್ಷಿಣ ಟಿಬೆಟ್ʼ ಎಂದು ಕರೆಯುತ್ತದೆ ಹಾಗೂ ತನ್ನ ನಕಾಶೆಯಲ್ಲಿ ಸೇರಿಸಿಕೊಂಡಿದೆ. ಅರುಣಾಚಲದಲ್ಲಿ ಕೆಲವು ಕಡೆ ಗಡಿ ಸರಿಯಾಗಿ ನಿರ್ಧಾರವಾಗಿಲ್ಲ ಎಂಬುದು ನಿಜ. ಇಲ್ಲಿ ಚೀನಾ ಸೈನ್ಯ ಸುಲಭವಾಗಿ ಒಳತೂರಿ ಬರುವುದಕ್ಕೆ ಸಾಕಷ್ಟು ಆಸ್ಪದವಿದೆ ಎಂಬುದೂ ನಿಜ. 1962ರ ಯುದ್ಧದ ವೇಳೆಗೆ ಚೀನಾದ ಸೈನಿಕರು ಸುಮಾರು 20 ಕಿಲೋಮೀಟರ್‌ನಷ್ಟು ಒಳಬಂದು, ಯುದ್ಧವಿರಾಮದ ಬಳಿಕ ಹಿಂದೆ ಸರಿದಿದ್ದರು. ಆಗ ಅಂತಾರಾಷ್ಟ್ರೀಯ ಸಮುದಾಯ ಭಾರತದ ಜತೆಗೆ ನಿಂತಿತ್ತು. ಟಿಬೆಟ್ ವಿಚಾರದಲ್ಲಿ ದಲಾಯಿ ಲಾಮಾ ಅವರಿಗೆ ಆಶ್ರಯ ನೀಡಿರುವ ಭಾರತದ ಕ್ರಮ ಇಂದಿಗೂ ಚೀನಾಗೆ ಇರಸುಮುರಸು.
ಎರಡೂವರೆ ವರ್ಷಗಳ ಬಳಿಕ ಮತ್ತೆ ಭಾರತವನ್ನು ಚೀನಾ ಕೆಣಕಿದೆ. ಹೀಗೆ ಆಗಾಗ ಕೆಣಕುವುದು ಕೂಡ ಚೀನಾದ ಯುದ್ಧತಂತ್ರಗಳಲ್ಲಿ ಒಂದು ಎಂಬುದನ್ನು ರಾಜನೀತಿಜ್ಞರು ಚೆನ್ನಾಗಿ ಬಲ್ಲರು. ವ್ಯಾಪಾರ- ವ್ಯವಹಾರದಲ್ಲಿ ತನಗೆ ನಷ್ಟವಾಗದಂತೆ ನೋಡಿಕೊಳ್ಳುವುದರ ಜತೆಗೇ ಗಡಿಯಲ್ಲಿ ಹೀಗೆ ಉಪದ್ವ್ಯಾಪ ನಡೆಸುವುದು ಅದಕ್ಕೆ ಸಲೀಸು. ನೆರೆರಾಷ್ಟ್ರಕ್ಕೆ ಕಾಟ ಕೊಡುವಲ್ಲಿ ಚೀನಾದ ಯುದ್ಧನೀತಿ ಬಹುಮುಖಿಯಾಗಿದೆ. ಭಾರತದ ಸುತ್ತಮುತ್ತಲಿನ ಪುಟ್ಟ ದೇಶಗಳಿಗೆ ಸಾಲ ನೀಡಿ, ತನ್ನ ಸಾಲದಿಂದ ಅವುಗಳು ಮುಳುಗುವಂತೆ ಮಾಡಿ, ಅಲ್ಲಿ ತನ್ನ ವ್ಯಾಪಾರ ಹಾಗೂ ಮಿಲಿಟರಿ ವಸಾಹತುಗಳನ್ನು ಸ್ಥಾಪಿಸಿ, ಅಲ್ಲಿಂದ ಭಾರತದ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಿಕೊಳ್ಳುತ್ತದೆ. ಸೈಬರ್ ಕಾರಸ್ಥಾನಗಳ ಮೂಲಕ ನಮ್ಮ ದೇಶದ ಸರಕಾರಿ- ವ್ಯೂಹಾತ್ಮಕ ವೆಬ್‌ಸೈಟ್‌ಗಳಿಗೆ ಲಗ್ಗೆ ಹಾಕಲು ಯತ್ನಿಸುತ್ತದೆ. ವೈರಿ ದೇಶ ಪಾಕಿಸ್ತಾನಕ್ಕೆ ಮಿಲಿಟರಿ ಬೆಂಬಲ ಹಾಗೂ ಅಲ್ಲಿಂದ ಕಾರ್ಯಾಚರಿಸುವ ಉಗ್ರರ ಶಿಬಿರಗಳಿಗೆ ಧನಸಹಾಯ ಮಾಡುತ್ತದೆ. ವಿಶ್ವಸಂಸ್ಥೆಯಲ್ಲಿ ಭಾರತ ತಕ್ಕ ದಾಖಲೆಗಳನ್ನು ನೀಡಿ, ತನ್ನ ವಿರುದ್ಧ ಕೆಲಸ ಮಾಡುವ ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಡ ತಂದಾಗಲೂ ಚೀನಾ ಅದಕ್ಕೆ ಅಡ್ಡಗಾಲು ಹಾಕುತ್ತದೆ. ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಭಾರತಕ್ಕೆ ಕಿರುಕುಳ ಕೊಡಲು ಅದು ಸದಾ ಸಿದ್ಧವಾಗಿಯೇ ಇರುತ್ತದೆ.
ಆದರೆ ಚೀನಾಗೆ ಈಗ ವಿಸ್ಮಯ ಮೂಡಿಸಿರುವುದು ಭಾರತದ ಸಿದ್ಧತೆ. ಚೀನಾದ ಕಪಟ ಕಾರ್ಯತಂತ್ರಗಳನ್ನೂ ಯುದ್ಧನೀತಿಗಳನ್ನೂ ಅರ್ಥ ಮಾಡಿಕೊಂಡಿರುವ ನೂತನ ಭಾರತದ ಎದಿರೇಟುಗಳು ಚೀನಾವನ್ನು ಅಚ್ಚರಿಯಲ್ಲಿ ಕೆಡವಿರುವ ಸಾಧ್ಯತೆ ಇದೆ. ಗಲ್ವಾನ್‌ನಲ್ಲಿ ಚೀನಾ ಸೈನಿಕರ ಪಾಶವೀ ದಾಳಿಗೆ ಅದೇ ಮಾದರಿಯ ಉತ್ತರ ನೀಡುವಲ್ಲಿಂದ ಹಿಡಿದು, ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಒತ್ತಡ ಹಾಕಿಸುವವರೆಗೂ ಭಾರತದ ರಾಜನೀತಿ, ವ್ಯೂಹಾತ್ಮಕ ಸಿದ್ಧತೆ, ಮಿಲಿಟರಿ ಸನ್ನದ್ಧತೆಗಳು ಹಬ್ಬಿವೆ. ಠಕ್ಕ ಚೀನಾದ ಬಗ್ಗೆ ಸದಾ ಎಚ್ಚರ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ರಾಜನೀತಿಯ ಮಾದರಿ ಹೀಗೇ ಮುಂದುವರಿಯುವುದು ಅಗತ್ಯ. ಜತೆಗೆ ಅಕ್ಕಪಕ್ಕದ ದೇಶಗಳನ್ನು ಒಲಿಸಿಕೊಳ್ಳುವ ರಾಜನೀತಿ, ಅಮೆರಿಕದಂಥ ಮಿತ್ರ ರಾಷ್ಟ್ರಗಳನ್ನು ಕಾಪಾಡಿಕೊಳ್ಳುವ ಜಾಣ್ಮೆ, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ವಿವೇಕದ ಮೂಲಕ ಇಂಥ ಸಂದಿಗ್ಧತೆಗಳನ್ನು ಎದುರಿಸಬಹುದಾಗಿದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ನ್ಯಾಯಾಂಗ ನೇಮಕಾತಿಗಳಲ್ಲಿ ರಾಜಕೀಯ ಕಾರ್ಯಾಂಗದ ಹಸ್ತಕ್ಷೇಪ ಬೇಡ