ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪಥ ಸಂಚಲನಕ್ಕೆ ಸುಪ್ರೀಂ ಕೋರ್ಟ್ ಓಕೆ ಎಂದಿದೆ. ಇದಕ್ಕೆ ಮುನ್ನ ಆರ್‌ಎಸ್‌ಎಸ್ ಪಥ ಸಂಚಲನ ಮತ್ತು ಸಭೆ ನಡೆಸದಂತೆ ಅಲ್ಲಿಯ ಡಿಎಂಕೆ ಸರ್ಕಾರ ತಡೆ ಹಾಕಿತ್ತು. ಇದರ ವಿರುದ್ಧ ಸಂಘಟನೆ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ಪಥ ಸಂಚಲನಕ್ಕೆ ಅವಕಾಶ ಕಲ್ಪಿಸಿತ್ತು. ಇದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಈಗ ಆರ್‌ಎಸ್‌ಎಸ್ ಪರ ತೀರ್ಪು ನೀಡಿದ್ದು, ಪಥ ಸಂಚಲನಕ್ಕೆ ಬೇಷರತ್ತಾಗಿ ಅವಕಾಶ ಕೊಡಿ ಎಂದು ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ. ಇದು ಆರ್‌ಎಸ್‌ಎಸ್‌ನ ವಿಜಯ ಎಂದು ಮಾತ್ರ ನೋಡದೆ, ಸಂವಿಧಾನ ಪ್ರತಿಪಾದಿಸುವ ಪ್ರಜಾಸತ್ತಾತ್ಮಕ ಹಕ್ಕಿನ ಗೆಲುವು ಎಂದು ಭಾವಿಸಬೇಕಿದೆ.
ನಮ್ಮ ಸಂವಿಧಾನದ 19ರಿಂದ 22ರವರೆಗಿನ ವಿಧಿಗಳು ಭಾರತೀಯ ಪ್ರಜೆಗೆ ʼಸ್ವಾತಂತ್ರ್ಯದ ಹಕ್ಕುʼಗಳನ್ನು ನೀಡಿದೆ. ಇದರಲ್ಲಿ ʼಸಂಘ ಮತ್ತು ಸಂಸ್ಥೆಗಳನ್ನು ರಚಿಸುವ ಸ್ವಾತಂತ್ರ್ಯʼ ಹಾಗೂ ʼಅಸ್ತ್ರಗಳಿಲ್ಲದೆ ಶಾಂತಿಯುತವಾಗಿ ಒಂದೆಡೆ ಸಭೆ ಸೇರುವ ಸ್ವಾತಂತ್ರ್ಯ.ʼ ಸೇರಿದೆ. ಇದರಲ್ಲೇ ʼವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ.ʼವನ್ನೂ ಪ್ರತಿಪಾದಿಸಲಾಗಿದೆ. ಆರ್‌ಎಸ್‌ಎಸ್ ಒಂದು ಸ್ವತಂತ್ರ ಸಂಘಟನೆ. ಅದು ಯಾವುದೇ ಬಗೆಯ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ʼರಾಷ್ಟ್ರೀಯವಾದʼದ ಹಿನ್ನೆಲೆಯಲ್ಲಿ ಸಂಘಟನೆಯ ಚಟುವಟಿಕೆಗಳು ಹಬ್ಬಿಕೊಂಡಿವೆ. ಸೇವೆ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನೂ ಅದು ನಡೆಸುತ್ತಿದೆ. ಭಾರತೀಯ ಸಂವಿಧಾನ ಪ್ರತಿಪಾದಿಸುವ ಎಲ್ಲ ಮುಕ್ತ ನಾಗರಿಕ ಹಕ್ಕುಗಳನ್ನೂ ಸ್ವಾತಂತ್ರ್ಯಗಳನ್ನೂ ಸಂಮಾನಿಸುವ, ಗೌರವಿಸುವ, ಹಿಂದೂ ಜೀವನಧರ್ಮದ ತತ್ವಗಳನ್ನು ಪ್ರತಿಪಾದಿಸುವ ಸಂಘಟನೆಯಾಗಿ ಆರೆಸ್ಸೆಸ್ ಬೆಳೆದುಬಂದಿದೆ. ಇದು ವಿಶ್ವದ ಅತೀ ದೊಡ್ಡ ಸಂಘಟನೆಯೂ ಹೌದು. ಹೀಗಿರುವಾಗ, ಆರೆಸ್ಸೆಸ್‌ನ ಸಭೆ ಸೇರುವ ಹಾಗೂ ಪಥ ಸಂಚಲನ ನಡೆಸುವ ಹಕ್ಕನ್ನು ಕಿತ್ತುಕೊಳ್ಳುವ ತಮಿಳುನಾಡು ಸರ್ಕಾರದ ನಿರ್ಧಾರ ಮೂರ್ಖತನದ್ದು.
ತನ್ನ ನಿಸ್ವಾರ್ಥ ಸೇವೆ ಮತ್ತು ಅಪ್ರತಿಮ ದೇಶಭಕ್ತಿಯ ಕಾರಣದಿಂದ ಆರ್‌ಎಸ್‌ಎಸ್ ಮನೆಮಾತಾಗಿದೆ. ಮಾನವೀಯ ಹಾಗೂ ಹಿಂದುಸ್ತಾನದ ಪಾರಂಪರಿಕ ಮೌಲ್ಯಗಳನ್ನು ಕಾಪಾಡುವ ದೃಷ್ಟಿಯಿಂದ ಆರೆಸ್ಸೆಸ್ ನಡೆಸುತ್ತಿರುವ ಮಹತ್ಕಾರ್ಯ ಎಲ್ಲರಿಗೂ ತಿಳಿದಿರುವುದೇ ಆಗಿದೆ. ತನ್ನ ಮೂಲ ಆಶಯವಾದ ʼಭಾರತೀಯ ಪರಂಪರೆಯ ರಕ್ಷಣೆʼಯ ನೆಲೆಯಿಂದ ಅದು ಹಿಂದೆ ಸರಿದಿಲ್ಲ. ಆದರೆ ಕಾಲಕ್ಕೆ ತಕ್ಕಂತೆ ನೀತಿ ನಡಾವಳಿಗಳಲ್ಲಿ ಬದಲಾಗುತ್ತ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಸುಧಾರಣಾವಾದಿ ಹೆಜ್ಜೆಗಳನ್ನು ಇರಿಸಿದೆ. ದುರಂತ- ವಿಕೋಪಗಳು ಸಂಭವಿಸಿದ ಹೊತ್ತಿನಲ್ಲಿ ಸ್ಥಳಕ್ಕೆ ಧಾವಿಸಿ ಶಿಸ್ತುಬದ್ಧ ಸೇನಾಪಡೆಯಂತೆ ತುರ್ತು ಕಾರ್ಯಾಚರಣೆ ಹಾಗೂ ಸೇವೆ ಒದಗಿಸುವ ಅದರ ಕ್ರಮ ಮಾದರಿಯಾಗಿದೆ. ಇಂಥ ಆರೆಸ್ಸೆಸ್ ಆಧುನಿಕ ಜೀವನಕ್ರಮಕ್ಕೂ ಸ್ಪಂದಿಸುತ್ತಿದ್ದು, ಇತ್ತೀಚೆಗೆ ಎಲ್‌ಜಿಬಿಟಿಕ್ಯು ಸಮುದಾಯದ ಬಗ್ಗೆ ಸರಸಂಘಚಾಲಕ ಮೋಹನ್ ಭಾಗವತ್ ಅವರು ಧನಾತ್ಮಕವಾಗಿ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸಿಆರ್‌ಪಿಎಫ್ ಆಯ್ಕೆ ಪರೀಕ್ಷೆ ಕನ್ನಡದಲ್ಲಿ ಏಕಿಲ್ಲ?
ಇಷ್ಟಾಗಿಯೂ ಓಲೈಕೆ ರಾಜಕಾರಣದ ಕಾರಣ ಕೆಲವು ಪಕ್ಷಗಳು ಆರ್‌ಎಸ್‌ಎಸ್ ಅನ್ನು ಬಲಿಪಶು ಮಾಡುತ್ತಿರುವುದು ಸರಿಯಲ್ಲ. ಆರ್‌ಎಸ್‌ಎಸ್‌ಗೆ ಪದೇಪದೆ ಕಿರುಕುಳ ನೀಡುವುದು ಕೆಲವು ಪಕ್ಷಗಳ ಸರ್ಕಾರಗಳಿಗೆ ಫ್ಯಾಷನ್ ಆಗಿ ಬಿಟ್ಟಿದೆ. ಮುಖ್ಯವಾಗಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಲದ ಸರ್ಕಾರಗಳು ಆರೆಸ್ಸೆಸ್ ಅನ್ನು ಇನ್ನಿಲ್ಲದಂತೆ ಪೀಡಿಸುತ್ತಿವೆ. ಆರ್‌ಎಸ್‌ಎಸ್ ಅನ್ನು ಖಳನಾಯಕನಂತೆ, ಅಲ್ಪಸಂಖ್ಯಾತರ ವಿರೋಧಿಯಂತೆ ಬಿಂಬಿಸಲು ಕೆಲವು ಪಕ್ಷಗಳು ಸದಾ ಹಾತೊರೆಯುತ್ತಿರುತ್ತವೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಇಂಥ ಹಲವು ಸಂದರ್ಭಗಳಲ್ಲಿ ಆರ್‌ಎಸ್‌ಎಸ್‌ಗೆ ಕ್ಲೀನ್ ಚಿಟ್ ನೀಡಿವೆ. ಅನೇಕರು ಭಯೋತ್ಪಾದಕ ಕೃತ್ಯಗಳನ್ನೂ ಆರೆಸ್ಸೆಸ್ಸಿಗೆ ಜೋಡಿಸಲು ಯತ್ನಿಸಿದ್ದಾರೆ. ಆದರೆ ಅವು ಕೋರ್ಟ್‌ಗಳಲ್ಲಿ ಸೋತಿವೆ. ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆ ಇಲ್ಲದಾಗ, ತನ್ನ ಸಾಂಪ್ರದಾಯಿಕ ಪಥ ಸಂಚಲನ ನಡೆಸಲೂ ಆರ್‌ಎಸ್‌ಎಸ್ ಮತ್ತೆ ಮತ್ತೆ ಹೋರಾಟ ಮಾಡಬೇಕಾದ ಸನ್ನಿವೇಶ ಸೃಷ್ಟಿಸುವುದು ಸರಿಯಲ್ಲ.