Site icon Vistara News

ಸಂಪಾದಕೀಯ: ನೌಕಾಪಡೆಗೆ ಮಹಿಳಾ ಬಲ, ಅಗ್ನಿವೀರರ ಸೇರ್ಪಡೆ

ಸಂಪಾದಕೀಯ

ದೇಶದಲ್ಲೇ ಮೊದಲ ಬಾರಿಗೆ ನೌಕಾಪಡೆಗೆ ಅಗ್ನಿಪಥ ಯೋಜನೆ ಅಡಿಯಲ್ಲಿ ನೇಮಕವಾದ ಮೂರು ಸಾವಿರ ಅಗ್ನಿವೀರರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇವರಲ್ಲಿ 341 ಹೆಣ್ಣುಮಕ್ಕಳಿದ್ದಾರೆ ಎಂದು ನೌಕಾಪಡೆ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶ್ರೇಣಿಯ ಅನ್ವಯವೇ ಇಷ್ಟು ಹೆಣ್ಣುಮಕ್ಕಳನ್ನು ನೌಕಾಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಆಯ್ಕೆಯಲ್ಲಿ ಒಂದೇ ಮಾದರಿಯನ್ನು ಅನುಸರಿಸಲಾಗಿದ್ದು, ಪುರುಷರು ಹಾಗೂ ಮಹಿಳೆಯರಿಗೆ ಏಕರೂಪದ ನಿಯಮಗಳು ಅನ್ವಯವಾಗಿವೆ. ಪುರುಷರಂತೆ ಮಹಿಳೆಯರು ಕೂಡ ಪರೀಕ್ಷೆಗೆ ಹಾಜರಾಗಿದ್ದು, ಉತ್ತೀರ್ಣರಾದವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರನ್ನು ನೌಕೆ, ವಾಯುನೆಲೆ, ವಿಮಾನಗಳಲ್ಲಿ ನಿಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಭಾನುವಾರ ನೌಕಾಪಡೆ ದಿನ. ಈ ಹಿನ್ನೆಲೆಯಲ್ಲಿ ಈ ಬೆಳವಣಿಗೆ ತುಂಬಾ ಸಕಾರಾತ್ಮಕವಾದುದು. ಇದು ಮಹಿಳಾ ಶಕ್ತಿಯ ಅನಾವರಣವೂ ಹೌದು.

ಭಾರತೀಯ ಸೈನ್ಯದ ಒಂದೊಂದೇ ಅಂಗಗಳಲ್ಲಿ ನಿಧಾನವಾಗಿಯಾದರೂ ಮಹಿಳೆಯರು ಪ್ರಾಮುಖ್ಯತೆ ಪಡೆಯುತ್ತಿದ್ದಾರೆ. ಯುದ್ಧರಂಗ, ಸೇನಾಪಡೆಗಳು ಮಹಿಳೆಯರಿಗಲ್ಲ ಎಂಬ ಭಾವನೆ ಹಿಂದೊಮ್ಮೆ ಇತ್ತು. ಬಹಳಷ್ಟು ಹೋರಾಟದ ನಂತರ ಸೈನ್ಯದ ಹೋರಾಟದ ಮುಂಚೂಣಿ ನೆಲೆಗಳು, ಹೆಚ್ಚಿನ ದೈಹಿಕ ಶ್ರಮ ಬೇಡುವ ಕಾಯಕಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ತೆರೆಯಲಾಯಿತು. ಈ ಅವಕಾಶಗಳೂ ಸುಮ್ಮನೇ ಬರಲಿಲ್ಲ. ಇದನ್ನು ಪಡೆದವರೂ ಬಹಳಷ್ಟು ಆಂತರಿಕ ಹೋರಾಟಗಳ ಮೂಲಕ ವೃತ್ತಿಬದುಕನ್ನು ಸಾಗಿಸಬೇಕಾಯಿತು. ಇಂದೂ ಮಹಿಳೆಯರ ಪ್ರವೇಶ ಆಗದಿರುವ ಸೈನ್ಯದ ಹಲವು ಅಂಗಗಳು ಇವೆ; ಆದರೆ ನಿಧಾನವಾಗಿಯಾದರೂ ಅವೆಲ್ಲವೂ ಸ್ತ್ರೀಯರಿಗೆ ತೆರೆದುಕೊಳ್ಳುತ್ತಿವೆ ಎಂಬುದು ಒಳ್ಳೆಯ ಸಂಗತಿ. 2021ರವರೆಗೂ ಮಿಲಿಟರಿಯಲ್ಲಿ ಮಹಿಳೆಯರನ್ನು ಅಧಿಕಾರಿಗಳಾಗಿ ಮಾತ್ರ ನಿಯೋಜಿಸಲಾಗುತ್ತಿತ್ತು. 2021ರಲ್ಲಿ 83 ಸ್ತ್ರೀಯರ ಮೊದಲ ಬ್ಯಾಚ್‌ ಕಾಲಾಳು ಸೈನ್ಯದಲ್ಲಿ ಯೋಧರಾಗಿ ಸೇರಿಕೊಳ್ಳುವ ಮೂಲಕ ಇತಿಹಾಸ ಬರೆಯಿತು. 2008ರ ನಂತರ ಮಹಿಳೆಯರು ಸೈನ್ಯದ ವಿವಿಧ ವಿಭಾಗಗಳಲ್ಲಿ ಕಾಯಂ ನಿಯೋಜನೆ (permanent commission) ಪಡೆಯತೊಡಗಿದರು. ಇದರಲ್ಲಿ ನಿಯೋಜಿತರು ನಿವೃತ್ತಿಯವರೆಗೂ ಸೇವೆ ಸಲ್ಲಿಸುತ್ತಾರೆ.

ನೌಕಾಪಡೆಯ ಇತ್ತೀಚಿನ ನೇಮಕಾತಿಯ ವಿಶೇಷ ಎಂದರೆ ಮಹಿಳೆಯರನ್ನು ಸೈಲರ್‌ಗಳಾಗಿ (ನೌಕೆಯ ಮೇಲೆ ಹೋಗುವ ಯೋಧರಾಗಿ) ನಿಯೋಜಿಸುತ್ತಿರುವುದು. ಇದುವರೆಗೂ ನೌಕೆಯಲ್ಲಿ ಮಹಿಳಾ ನೇಮಕಾತಿ ಎಂದರೆ ಅದು ಅಧಿಕಾರಿಗಳ ಮಟ್ಟದಲ್ಲಿತ್ತು ಹಾಗೂ ನೇರ ಕ್ರಿಯಾರಂಗದಲ್ಲಿ ಇವರ ಪಾತ್ರವಿರಲಿಲ್ಲ. ಇದೀಗ ಅದೂ ಸಾಧ್ಯವಾಗಿದೆ. ಇದೊಂದು ಮಹತ್ವದ ಮೈಲುಗಲ್ಲು, ಐತಿಹಾಸಿಕ ಬದಲಾವಣೆ. ಸ್ತ್ರೀಯರು ಎಲ್ಲ ಗಾಜಿನ ಚಾವಣಿಗಳನ್ನು ಮೀರಿ ಸಾಗುತ್ತಿರುವುದರ ನಿದರ್ಶನವಾಗಿದೆ ಇದು. ವಿಶೇಷ ಎಂದರೆ ಪುರುಷ, ಮಹಿಳೆಯರಿಗೆ ಏಕರೂಪ ನಿಯಮ ಇತ್ತು. ಮಹಿಳೆಯರು ಈ ಪರೀಕ್ಷೆ ಎದುರಿಸಿ ಆಯ್ಕೆಯಾಗಿರುವುದು ಮಹಿಳಾ ಸಬಲತೆಯನ್ನು ಸಾರಿದೆ.

ಸೈನ್ಯದ ಮೂರೂ ದಳಗಳಲ್ಲಿ ನೌಕಾಪಡೆಯೇ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ಹೊಂದಿದೆ. ಭೂ, ವಾಯು ಹಾಗೂ ನೌಕಾಪಡೆಗಳು ಕ್ರಮವಾಗಿ 0.56%, 1.08% ಮತ್ತು 6.5% ಮಹಿಳೆಯರನ್ನು ಹೊಂದಿವೆ. ಇಷ್ಟಾಗಿಯೂ ಕೆಲವು ಕಡೆ ಇನ್ನೂ ಮಹಿಳೆಯರ ಪ್ರವೇಶವಾಗಿಲ್ಲ. ಉದಾಹರಣೆಗೆ ಸಬ್‌ಮರೀನ್‌ಗಳಲ್ಲಿ, ಭೂ ಗಡಿ ಕಾಯುವ ಪ್ಯಾಟ್ರೋಲಿಂಗ್‌ ಹಾಗೂ ಸಮರಯೋಧರಲ್ಲಿ ಮಹಿಳಾ ನೇಮಕವಾಗಿಲ್ಲ. ಇದಕ್ಕೆ ಕಾರಣ ಇಂಥ ಕಡೆಗಳಲ್ಲಿ ಮಹಿಳಾಸ್ನೇಹಿ ಮೂಲಸೌಕರ್ಯಗಳ ಕೊರತೆ. ಮುಂದಿನ ದಿನಗಳಲ್ಲಿ ಅದೂ ಸರಿಹೋಗಬಹುದು ಎಂದು ಆಶಿಸೋಣ.

ತಂತ್ರಜ್ಞಾನದ ದೃಷ್ಟಿಯಿಂದಲೂ ಭಾರತೀಯ ನೌಕಾಪಡೆ ಆತ್ಮ ನಿರ್ಭರತೆ ಸಾಧಿಸುತ್ತಿದೆ, 2047ರ ವೇಳೆಗೆ ಅದು ಸಂಪೂರ್ಣ ಆತ್ಮನಿರ್ಭರವೆನಿಸಲಿದೆ ಎಂದು ಅದರ ಮುಖ್ಯಸ್ಥರು ತಿಳಿಸಿದ್ದಾರೆ. ಇದು ದೂರದ ಕನಸೇ ಆದರೂ ಈ ದೂರಗಾಮಿ ಚಿಂತನೆ ಸ್ವಾಗತಾರ್ಹವಾಗಿದೆ. ಹಲವು ದಶಕಗಳ ನಿರಂತರ ಪರಿಶ್ರಮದಿಂದಲೇ ಇಂದು ಭಾರತೀಯ ಮೂರೂ ಪಡೆಗಳೂ ಆತ್ಮನಿರ್ಭರತೆಯತ್ತ ಸಾಗುತ್ತಿವೆ. ಸುತ್ತ ಶತ್ರುಗಳನ್ನು ಹೊಂದಿರುವ ಭಾರತಕ್ಕೆ ರಕ್ಷಣೆಯ ವಿಚಾರದಲ್ಲಿ ಆತ್ಮನಿರ್ಭರತೆ ಅತೀ ಅಗತ್ಯವಾಗಿದೆ. ಇದರಲ್ಲಿ ಮಹಿಳೆಯರೂ ಪಾಲ್ಗೊಳ್ಳುತ್ತಾರೆ ಎಂಬುದು ಇನ್ನಷ್ಟು ಆತ್ಮವಿಶ್ವಾಸ ತುಂಬುವ ವಿಚಾರ. ಮಹಿಳಾಸ್ನೇಹಿ ಮೂಲಸೌಕರ್ಯಗಳು, ಸೈನ್ಯದ ಎಲ್ಲ ವಿಭಾಗಗಳಲ್ಲಿ ಕಾಯಂ ನೇಮಕಾತಿಯಂಥ ಇನ್ನಷ್ಟು ಕ್ರಮಗಳು ನೆರವೇರಿದರೆ ಆಗ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರನ್ನು ಸೈನ್ಯದಲ್ಲಿ ಕಾಣಲು ಸಾಧ್ಯವಾಗಬಹುದು.

ಇದನ್ನೂ ಓದಿ | First Batch Of Agniveers | ನೌಕಾಪಡೆಗೆ 341 ಸ್ತ್ರೀಯರು ಸೇರಿ 3 ಸಾವಿರ ಅಗ್ನಿವೀರರ ನೇಮಕ, ಸ್ತ್ರೀ ಸಬಲೀಕರಣಕ್ಕೆ ಮುನ್ನುಡಿ

Exit mobile version