Site icon Vistara News

ವಿಸ್ತಾರ ಸಂಪಾದಕೀಯ: ಶಿಕ್ಷಣ ಎನ್ನುವುದು ಲಾಭ ದೋಚುವ ವ್ಯಾಪಾರವಲ್ಲ

medical edit

ಶಿಕ್ಷಣವು ಲಾಭ ಗಳಿಸುವ ವ್ಯಾಪಾರವಲ್ಲ. ಬೋಧನಾ ಶುಲ್ಕ ಯಾವಾಗಲೂ ಕೈಗೆಟುಕುವ ರೀತಿಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಆಂಧ್ರಪ್ರದೇಶ ಸರ್ಕಾರವು ಎಂಬಿಬಿಎಸ್‌ ವಾರ್ಷಿಕ ಬೋಧನಾ ಶುಲ್ಕವನ್ನು 24 ಲಕ್ಷ ರೂಪಾಯಿಗೆ ನಿಗದಿಪಡಿಸಿದ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆಂಧ್ರಪ್ರದೇಶ ಸರ್ಕಾರ ಬೋಧನಾ ಶುಲ್ಕವನ್ನು ಈ ಹಿಂದಿದ್ದ ಮೊತ್ತಕ್ಕಿಂತ ಏಳು ಪಟ್ಟು ಹೆಚ್ಚು ಏರಿಕೆ ಮಾಡಿತ್ತು. ಜಸ್ಟೀಸ್ ಎಂ.ಆರ್ ಶಾ ಹಾಗೂ ಸುಧಾಂಶು ಧುಲಿಯಾ ಅವರಿದ್ದ ಪೀಠ ಈ ವಿಷಯದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ. ಬೋಧನಾ ಶುಲ್ಕ ಏರಿಕೆ ಮಾಡಿದ್ದ ಸರ್ಕಾರದ ಆದೇಶವನ್ನು ಆಂಧ್ರಪ್ರದೇಶ ಹೈಕೋರ್ಟ್ ಕೂಡ ರದ್ದುಪಡಿಸಿತ್ತು. ಶುಲ್ಕವನ್ನು 7 ಪಟ್ಟು ಏರಿಸಿರುವುದು ನ್ಯಾಯಸಮ್ಮತವಲ್ಲ. ಶಿಕ್ಷಣ ಎನ್ನುವುದು ಲಾಭ ಮಾಡಿಕೊಳ್ಳುವ ವ್ಯಾಪಾರವಲ್ಲ ಎಂದು ಪೀಠ ಹೇಳಿದೆ.

ಶುಲ್ಕವನ್ನು ಕಾಲಕ್ಕೆ ತಕ್ಕಂತೆ ಏರಿಸಬೇಕು ಎಂಬುದೇನೋ ಸರಿ. ಯಾಕೆಂದರೆ ವರ್ಷ ಉರುಳಿದಂತೆ ಹಣದುಬ್ಬರದಿಂದಾಗಿ ಎಲ್ಲದರ ಬೆಲೆಯೂ ಏರುತ್ತದೆ. ಕಲಿಕೋಪಕರಣಗಳು, ಬೋಧನಾ ವೆಚ್ಚವೂ ಏರುವುದರಿಂದ ತುಸು ಮಟ್ಟಿಗೆ ಶುಲ್ಕವನ್ನು ಏರಿಸುವುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಏಕಾಏಕಿ ಏಳು ಪಟ್ಟು ಹೆಚ್ಚಿಸುವುದು ಎಂದರೆ ವಿದ್ಯಾರ್ಥಿಗಳ ಪೋಷಕರ ಪಾಲಿಗೆ ಅದು ಮಾರಕವೇ ಸರಿ. ಖಾಸಗಿ ಮೆಡಿಕಲ್ ಕಾಲೇಜುಗಳ ಸರ್ಕಾರಿ ಕೋಟಾ ಸೀಟುಗಳ ಶುಲ್ಕ ನಿಗದಿಯ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿರುತ್ತದೆ. ಆದರೆ ಅದು ಖಾಸಗಿ ಮೆಡಿಕಲ್ ಕಾಲೇಜುಗಳ ಲಾಬಿಗೆ ಮಣಿದು ಸೀಟು ಶುಲ್ಕವನ್ನು ಸಾಮಾನ್ಯ ಪೋಷಕರಿಗೆ ಹೊರೆ ಆಗುವಂತೆ, ಸೀಟು ಕೈಗೆಟುಕದಂತೆ ಏರಿಸುವುದು ಅನ್ಯಾಯ. ಸರ್ಕಾರಿ ಕೋಟಾದ ಸೀಟು ಪಡೆಯುವವರಲ್ಲಿ ಮಧ್ಯಮ, ಕೆಳಮಧ್ಯಮ, ಬಡ ವರ್ಗದವರೇ ಹೆಚ್ಚಿರುತ್ತಾರೆ. ಎಲ್ಲರಿಗೂ ಶಿಕ್ಷಣ ನೀಡಬೇಕಾದ ಜವಾಬ್ದಾರಿ ಇರುವ ಸರ್ಕಾರವೇ ಈ ಪರಿ ಶುಲ್ಕ ಏರಿಸಿದರೆ ಸರ್ಕಾರದ ಮೇಲೆ ಅವರಿಟ್ಟಿರುವ ನಂಬಿಕೆ ಸುಳ್ಳಾಗುತ್ತದೆ.

ಶಿಕ್ಷಣ ಎಂಬುದು ಲಾಭ ಮಾಡಿಕೊಳ್ಳುವ ವ್ಯಾಪಾರವಲ್ಲ ಎಂಬ ನ್ಯಾಯಪೀಠದ ಮಾತು ಮನನ ಮಾಡಿಕೊಳ್ಳಬೇಕಾದಂಥದ್ದು. ಈಗಲೂ ಸರ್ಕಾರಿ ವಲಯದಲ್ಲೇ ಇರುವ, ಮುಂದೆಯೂ ಇರಬೇಕಾದ ಮೂಲಭೂತ ಸೌಕರ್ಯ, ಆರೋಗ್ಯ ಇತ್ಯಾದಿ ಸೇವಾ ವಲಯಗಳಲ್ಲಿ ಶಿಕ್ಷಣವೂ ಒಂದು. ಮೆಡಿಕಲ್-‌ ಎಂಜಿನಿಯರಿಂಗ್‌ನಂಥ ಉನ್ನತ ಶಿಕ್ಷಣ ಇಂದು ಬಹುತೇಕ ಖಾಸಗಿ ಪಾಲಾಗಿದ್ದರೂ, ಈ ವಲಯದ ಮೇಲೆ ಒಂದು ಆರೋಗ್ಯಕರ ನಿಗಾವನ್ನು ಸರ್ಕಾರ ಇಟ್ಟುಕೊಂಡಿದೆ. ಕಾಲಕಾಲಕ್ಕೆ ಸರ್ಕಾರದ ನೀತಿ ನಿಯಮಾವಳಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಾದರೂ, ಪ್ರಜೆಗಳೆಲ್ಲರಿಗೂ ಶಿಕ್ಷಣ ದೊರೆಯಬೇಕು ಹಾಗೂ ಅದು ಕೈಗೆಟಕುವ ವೆಚ್ಚದಲ್ಲಿ ಸಿಗಬೇಕು ಎಂಬ ಮೂಲಭೂತ ನಿಯಮದಲ್ಲಿ ವ್ಯತ್ಯಾಸವಾಗಿಲ್ಲ; ಮುಂದೆಯೂ ಆಗಬಾರದು. ಒಂದು ವೇಳೆ ಸರ್ಕಾರ ಈ ನಿಟ್ಟಿನಲ್ಲಿ ಎಡವಿದರೆ ಕೋರ್ಟ್‌ ಅದರ ಕಿವಿ ಹಿಂಡಬೇಕು, ಆ ಕೆಲಸವನ್ನು ಅದು ಮಾಡಿದೆ. ಪ್ರಜೆಗಳು ನೀಡುವ ತೆರಿಗೆ ಹಣದಲ್ಲಿ ಆರೋಗ್ಯ- ಶಿಕ್ಷಣ ವಲಯಗಳು ನಡೆಯಬೇಕು. ಪ್ರಜೆಗಳು ಅದಕ್ಕಾಗಿ ಮತ್ತಷ್ಟು ಹಣ ಸುರಿಯುವಂತಿರಬಾರದು.

ಶಿಕ್ಷಣವು ಸುಲಭ ಲಭ್ಯವಾಗುವಲ್ಲಿ ಸರ್ಕಾರದ ಹೊಣೆ ಇರುವಂತೆ, ಜನಪ್ರತಿನಿಧಿಗಳೂ ತಮ್ಮ ಕ್ರಿಯಾಶೀಲ ಕೊಡುಗೆಯನ್ನು ನೀಡುವ ಸಾಧ್ಯತೆ ಬಹಳಷ್ಟಿದೆ. ಅದರಲ್ಲೂ ಸರ್ಕಾರಿ ಶಾಲೆಗಳಿಗೆ, ಕಾಲೇಜುಗಳಿಗೆ ಕಾಯಕಲ್ಪ ನೀಡಿದರೆ ಶಿಕ್ಷಣದ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಉದಾಹರಣೆಗೆ ದೆಹಲಿ ಮಾದರಿ ಶಾಲೆಗಳು ಇಂದು ಜಗತ್ತಿನಾದ್ಯಂತ ಅಧ್ಯಯನದ ಸಂಗತಿಗಳಾಗಿವೆ. ಬೆಂಗಳೂರಿನಲ್ಲೇ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ತಮ್ಮ ಕ್ಷೇತ್ರದ ಶಾಲೆಯೊಂದನ್ನು ಅಲ್ಲಿನ ವಿದ್ಯಾರ್ಥಿಗಳು ಉಪಗ್ರಹ ತಯಾರಿಸುವವರೆಗೂ ತರಬೇತಿ ನೀಡುವಂತೆ ಬೆಳೆಸುತ್ತಿದ್ದಾರೆ. ಬಸವರಾಜ ಹೊರಟ್ಟಿ ಅವರು ತಮ್ಮ ಊರಿನ ಸರ್ಕಾರಿ ಶಾಲೆ, ಕಾಲೇಜನ್ನು ಎಷ್ಟು ಗುಣಾತ್ಮಕಗೊಳಿಸಿದ್ದಾರೆ ಎಂದರೆ ಅಲ್ಲಿ ಸೀಟ್ ಪಡೆಯಲು ವಿದ್ಯಾರ್ಥಿಗಳು ಮುಗಿಬೀಳುತ್ತಾರೆ, ಜನಪ್ರತಿನಿಧಿಗಳಿಂದ ಶಿಫಾರಸು ಮಾಡಿಸುತ್ತಾರೆ. ಹೀಗೆ ಹಲವನ್ನು ಹೆಸರಿಸಬಹುದು.

ಶಿಕ್ಷಣವನ್ನು ಸಾಮಾನ್ಯರ ಕೈಗೆಟುಕುವಂತೆ ರೂಪಿಸಬೇಕು ಎಂದು ಕೆಲ ವರ್ಷದ ಹಿಂದೆ ಆರ್‌ಎಸ್‌ಎಸ್ ಕೂಡ ನಿರ್ಣಯ ಕೈಗೊಂಡಿದೆ. ʼʼಶಿಕ್ಷಣವು ಯಾವುದೇ ದೇಶ- ಸಮಾಜವನ್ನು ರೂಪಿಸುವ ಸಂಗತಿಗಳಲ್ಲಿ ಒಂದು. ಹೀಗಾಗಿ ಅದನ್ನು ಪೋಷಿಸುವುದು ಸರ್ಕಾರದ ಕರ್ತವ್ಯ. ನಮ್ಮ ಯುವಜನತೆಗೆ ಸೂಕ್ತ ಹಾಗೂ ಕಡಿಮೆ ದರದ ಶಿಕ್ಷಣ ದೊರೆಯುವಂತೆ ಪಾಲಿಸಿಗಳನ್ನು ರೂಪಿಸುವುದು ಹಾಗೂ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಹೊಣೆʼʼ ಎಂದು 2016ರಲ್ಲಿ ನಡೆದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾ ನಿರ್ಣಯ ಕೈಗೊಂಡಿತ್ತು. ರಾಷ್ಟ್ರೀಯ ಮೌಲ್ಯಗಳಲ್ಲಿ ಆರ್‌ಎಸ್‌ಎಸ್‌ನ ಸುಮಧುರ ಸಂಬಂಧ ಹೊಂದಿರುವ ಕೇಂದ್ರದ ಬಿಜೆಪಿ ಸರ್ಕಾರ ಈ ಅಂಶವನ್ನೂ ಗಮನಿಸುವುದು ಮುಖ್ಯ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ರಾಜ್ಯ ಸರ್ಕಾರಗಳು ಯದ್ವಾತದ್ವಾ ಶುಲ್ಕ ಏರಿಸದಂತೆಯೂ ಕೇಂದ್ರ ನೋಡಿಕೊಳ್ಳಬೇಕಾಗಿದೆ.

Exit mobile version