Site icon Vistara News

ವಿಸ್ತಾರ ಸಂಪಾದಕೀಯ: ಚುನಾವಣೆ ಆಯೋಗದ ಮತದಾನಸ್ನೇಹಿ ನಿರ್ಧಾರ

Election Commission's vote-friendly decision

ಎಲ್ಲರಿಗೂ ಮತದಾನ (Voting) ಮಾಡಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ 80 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲು ಚುನಾವಣೆ ಆಯೋಗ ನಿರ್ಧರಿಸಿದೆ. ವಿಶೇಷಚೇತನ ಮತದಾರರಿಗೆ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯಗಳ ಜತೆಗೆ ಮನೆಯಿಂದ ಮತಗಟ್ಟೆಗೆ ಪಿಕ್‌ ಆಂಡ್‌ ಡ್ರಾಪ್‌ ಕೂಡ ಕಲ್ಪಿಸಲಾಗುತ್ತಿದೆ. ಇವು ಸ್ವಾಗತಾರ್ಹ ಉಪಕ್ರಮಗಳು. ಮತದಾನ ಪ್ರಮಾಣ ಹೆಚ್ಚಿಸಲೂ ಈ ಕ್ರಮ ಅನುಕೂಲವಾಗಲಿದೆ. ಈ ಹಿಂದೆ ಅನೇಕ ವಯೋವೃದ್ಧರು ಮತದಾನ ಮಾಡುವ ಆಸಕ್ತಿ ಇದ್ದರೂ ಅನಾರೋಗ್ಯದ ಕಾರಣದಿಂದ ದೂರ ಉಳಿಯುತ್ತಿದ್ದರು. ಕೆಲವರು ಶತಾಯುಷಿಗಳು ಮಕ್ಕಳ, ಮೊಮ್ಮಕ್ಕಳ ಹೆಗಲೇರಿ ಬಂದು ಮತದಾನ ಮಾಡುತ್ತಿದ್ದುದೂ ಉಂಟು. ಚುನಾವಣೆ ಆಯೋಗದ ಈ ಹೊಸ ಕ್ರಮ ಅಂಥ ಹಿರಿಯ ನಾಗರಿಕರ ʼಪ್ರಜಾಸತ್ತಾತ್ಮಕ ಚೈತನ್ಯʼಕ್ಕೆ ಸಲ್ಲಿಸಿದ ಗೌರವವಾಗಿದೆ ಎಂದರೂ ಅಡ್ಡಿಯಿಲ್ಲ. ಇದೇ ವೇಳೆ ಈ ಉಪಕ್ರಮದಿಂದ ಮತದಾನ ವ್ಯವಸ್ಥೆಯ ದುರುಪಯೋಗ ಆಗದಂತೆಯೂ ಎಚ್ಚರ ವಹಿಸಬೇಕಿದೆ. ಜನರಿಗಾಗಿ ತರುವ ಯಾವುದೇ ಯೋಜನೆಯ ದುರುಪಯೋಗವನ್ನು ರಾಜಕೀಯ ಪುಢಾರಿಗಳು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇಂಥದು ಆಗದಂತೆ ಕಟ್ಟುನಿಟ್ಟು ವಹಿಸುವುದು ಅಗತ್ಯ.

ಚುನಾವಣೆ ಆಯೋಗ ಇತ್ತೀಚಿನ ವರ್ಷಗಳಲ್ಲಿ ಮತದಾನ ಸುಗಮವಾಗಲು ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದೆ. ಇದು ಅದರ ಮುಂದುವರಿದ ಭಾಗವಾಗಿದೆ. ಹೀಗೆಯೇ ಅನೇಕ ಸುಧಾರಣೆಗಳು ಚುನಾವಣೆ ವ್ಯವಸ್ಥೆಯಲ್ಲಿ ಆಗಿವೆ ಹಾಗೂ ಇನ್ನೂ ಆಗಬೇಕಿವೆ. ಬ್ಯಾಲೆಟ್‌ ಪೇಪರ್‌ಗಳನ್ನು ಆಚೆಗಿಟ್ಟು ಚುನಾವಣಾ ಯಂತ್ರಗಳನ್ನು ಸಮಗ್ರ ದೇಶದಲ್ಲಿ ತಂದುದು ಕ್ರಾಂತಿಕಾರಿ ಕ್ರಮ. ಇದರಿಂದ ಅತ್ಯಲ್ಪ ಅವಧಿಯಲ್ಲಿ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಸದ್ಯ ಕಡಿಮೆ ಮತದಾನ ಎಂಬುದು ಇಂದಿನ ಚುನಾವಣೆಗಳ ದೊಡ್ಡ ಸಮಸ್ಯೆ. ಮತದಾರರಲ್ಲಿ ತಾವಾಗಿಯೇ ಮತ ಹಾಕಬೇಕೆಂಬ ಪ್ರಜಾಸತ್ತಾತ್ಮಕ ಜವಾಬ್ದಾರಿ ಮೊಳೆಯದೇ ಹೋದರೆ ಫಲಿತಾಂಶ ಸಮಗ್ರವಾಗಿರುವುದು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಮತದಾನ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಚುನಾವಣಾ ಆಯೋಗ ತೆಗೆದುಕೊಳ್ಳುತ್ತಿದೆ. ಮತ ಹಾಕುವುದನ್ನು ತಪ್ಪಿಸಬೇಡಿ ಎಂಬ ಅಭಿಯಾನವನ್ನು ಚುನಾವಣಾ ಆಯೋಗ ಜತೆಗೆ ಪ್ರಜ್ಞಾವಂತ ಸಂಘಟನೆಗಳು ನಡೆಸುತ್ತಿವೆ. ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ವಸತಿ ಶಾಲೆಗಳು ಕಿರುಕುಳದ ಕೂಪಗಳಾಗದಿರಲಿ

ಈ ಬಾರಿ 9.17 ಲಕ್ಷ ಮೊದಲ ಬಾರಿಯ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಅಲ್ಲದೆ ಅಡ್ವಾನ್ಸ್‌ ಅಪ್ಲಿಕೇಷನ್‌ ಸೌಲಭ್ಯದ ಮೂಲಕ ಈಗಾಗಲೇ 1.25 ಲಕ್ಷ ಯುವಕರು ಅರ್ಜಿಗಳನ್ನು ಸಲ್ಲಿಸಿದ್ದು, ಅದರಲ್ಲಿ 41,000 ಮತದಾರರು ಏಪ್ರಿಲ್‌ 1ರಿಂದ ಮತದಾನಕ್ಕೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಮೊದಲ ಬಾರಿಯ ಮತದಾರರಿಗೆ ಸಾಮಾನ್ಯವಾಗಿ ತಮ್ಮ ಹಕ್ಕು ಚಲಾಯಿಸುವ ಉತ್ಸಾಹವಿರುತ್ತದೆ. ಇವರನ್ನು ಎಲ್ಲ ದೃಷ್ಟಿಯಿಂದ ಪ್ರೋತ್ಸಾಹಿಸಬೇಕು. ಇದರ ಜತೆಗೆ, ರಾಜ್ಯದ ದುರ್ಬಲ ಬುಡಕಟ್ಟು ಜನಾಂಗಗಳಾದ ಜೇನು ಕುರುಬರು ಮತ್ತು ಕೊರಗ ಬುಡಕಟ್ಟು ಜನಾಂಗದವರು ಗುಡ್ಡಗಾಡು ಪ್ರದೇಶಗಳಲ್ಲಿದ್ದು, ದೂರದ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸುವಂತೆ ಮಾಡಲು ವಿಶೇಷ ಪ್ರಯತ್ನಗಳೇ ಬೇಕಿವೆ. ಇದಕ್ಕಾಗಿ ರಾಜ್ಯದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ 40 ಎಥ್ನಿಕ್‌ ಮತಗಟ್ಟೆಗಳನ್ನು ಸ್ಥಾಪಿಸುವ ಭರವಸೆ ದೊರೆತಿದೆ. 41,312 ಜನ ತೃತೀಯ ಲಿಂಗಿಗಳನ್ನೂ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವುದರಿಂದ ಅವರೂ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ. ಹೀಗೆ ಮತದಾನದಲ್ಲಿ ಎಲ್ಲರನ್ನೂ ಒಳಗೊಳ್ಳಿಸುವ ಉಪಕ್ರಮ ನಡೆದಾಗಲೇ ಸಮಗ್ರ ಫಲಿತಾಂಶ ದೊರೆಯುತ್ತದೆ.

ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್‌, ಶೌಚಾಲಯ ಮತ್ತು ಅಂಗವಿಕಲರಿಗೆ ರ್ಯಾಂಪ್‌ನಂತಹ ಸೌಲಭ್ಯಗಳನ್ನು ಈ ಬಾರಿ ಶಾಶ್ವತವಾಗಿ ಅಳವಡಿಸುವ ಕುರಿತು ಚಿಂತನೆ ನಡೆದಿರುವುದು ಸ್ವಾಗತಾರ್ಹ. ಚುನಾವಣಾ ಆಯೋಗದ ವತಿಯಿಂದ ಸುವಿಧಾ ವೆಬ್‌ಸೈಟ್‌ ಮತ್ತು ಸಕ್ಷಮ್‌ ಆಪ್‌ಗಳಿವೆ; ಆದರೆ ಇವು ಲೋಪದೋಷಗಳಿಲ್ಲದೆ ಕಾರ್ಯಾಚರಿಸಬೇಕಿದೆ. ಚುನವಾಣೆಯ ಸಂಧರ್ಭದಲ್ಲಿ ಹಣ ಪ್ರಭಾವವನ್ನು ಬಳಸಿ ನಡೆಸಲಾಗುವ ಚುನಾವಣಾ ಆಕ್ರಮವನ್ನು ತಪ್ಪಿಸುವ ನಿಟ್ಟಿನಲ್ಲಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಸಿ ವಿಜಿಲ್‌ ಅಪ್‌ ಮೂಲಕ ಜನಸಾಮಾನ್ಯರು ಚುನಾವಣಾ ಅಕ್ರಮದ ಬಗ್ಗೆ ಅಜ್ಞಾತವಾಗಿ ದೂರು ನೀಡುವ ಸೌಲಭ್ಯವಿದೆ. ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವ, ಮತದಾನದ ಬಗ್ಗೆ ನಗರ ಪ್ರದೇಶ ಹಾಗೂ ಯುವಜನರಲ್ಲಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಹ್ಯಾಕಥಾನ್‌ ಎಲೆಕ್ಯಾಥಾನ್‌- 2023 ಕೂಡ ಕುತೂಹಲಕಾರಿ ಉಪಕ್ರಮ. ಇವೆಲ್ಲವೂ ಚುನಾವಣೆ ಆಯೋಗದ ಜನಪರ ನಡೆಗೆ ಸಾಕ್ಷಿಯಾಗಿವೆ; ಹಾಗೇ ಪರಿಣಾಮಕಾರಿಯಾಗಲಿ.

Exit mobile version