Site icon Vistara News

Election results 2024: ಎನ್‌ಡಿಎ ಸರಕಾರದಲ್ಲಿ ರಾಜ್ಯದಿಂದ 4 ಮಂದಿಗೆ ಸಚಿವ ಸ್ಥಾನ ಫಿಕ್ಸ್?‌

election results 2024 joshi hdk cnm bommai

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶದ (Election results 2024) ಬಳಿಕ ಎನ್‌ಡಿಎ (NDA) ಒಕ್ಕೂಟ ಸರಕಾರ ರಚನೆಯ ಹಾದಿಯಲ್ಲಿದೆ. ಈ ಸಂದರ್ಭದಲ್ಲಿ ರಾಜ್ಯದಿಂದ ಆರಿಸಿ ಬಂದಿರುವ ಸಂಸದರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಫಿಕ್ಸ್‌ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಎನ್‌ಡಿಎ ಬಯಸಿದೆ ಎನ್ನಲಾಗಿದೆ.

ಪ್ರಹ್ಲಾದ ಜೋಶಿ (Prahlad Joshi) ಅವರು ಎನ್‌ಡಿಎ ಮೂರನೆಯ ಅವಧಿಯಲ್ಲೂ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಿರರ್ಗಳತೆ ಹೊಂದಿರುವ ಪ್ರಹ್ಲಾದ್‌ ಜೋಶಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ನಾಲ್ಕನೇ ಬಾರಿಗೆ ಹುಬ್ಬಳ್ಳಿ- ಧಾರವಾಡದ ಸಂಸದರಾಗಿ ಆಯ್ಕೆಯಾಗಿರುವ ಜೋಶಿ, ಬ್ರಾಹ್ಮಣ ಕೋಟಾವನ್ನು ತುಂಬಲಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಗೂ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಮಾಜಿ ಸಿಎಂ ಆಗಿ ಅನುಭವ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತುಗಾರಿಕೆ, ಆರ್ಥಿಕತೆಯ ವಿಚಾರಗಳಲ್ಲಿ ವಿಶೇಷ ಜ್ಞಾನ ಹೊಂದಿರುವಿಕೆಯ ಜೊತೆಗೆ ಲಿಂಗಾಯತ ಕೋಟಾ ಕೂಡ ಬೊಮ್ಮಾಯಿ ಅವರಿಗೆ ನೆರವಾಗಲಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಸಿ.ಎನ್‌ ಮಂಜುನಾಥ್‌ (Dr CN Manjunath) ಅವರೂ ಸಚಿವ ಸ್ಥಾನ ಪಡೆಯಬಲ್ಲವರ ಯಾದಿಯಲ್ಲಿ ಇದ್ದಾರೆ ಎನ್ನಲಾಗಿದೆ. ಮಂಜುನಾಥ್‌ ಅವರ ಹಿರಿತನ, ಆರೋಗ್ಯ ಕ್ಷೇತ್ರದ ಅನುಭವ ಸರಕಾರದಲ್ಲಿ ನೆರವಾಗಲಿದೆ ಎಂಬ ಮುಂದಾಲೋಚನೆ. ಜೊತೆಗೆ, ಹಲವು ಬಾರಿಯ ಸಂಸದರಾಗಿರುವ, ಕಾಂಗ್ರೆಸ್‌ನ ಹೆಬ್ಬಂಡೆ ಡಿ.ಕೆ ಸುರೇಶ್‌ (DK Suresh) ಅವರನ್ನು ದೊಡ್ಡ ಅಂತರದಲ್ಲಿ ಸೋಲಿಸಿ ಮಣ್ಣು ಮುಕ್ಕಿಸಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದ ಹೆಗ್ಗಳಿಕೆ ಜೊತೆಗಿದೆ.

ಮಾಜಿ ಸಿಎಂ, ಜೆಡಿಎಸ್‌ ಮುಖಂಡ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಮೈತ್ರಿ ಖೋಟಾದಲ್ಲಿ ಸಚಿವ ಸ್ಥಾನ ಫಿಕ್ಸ್ ಆಗಿದೆ ಎನ್ನಲಾಗಿದೆ. ಜೆಡಿಎಸ್‌ ಎರಡು ಸ್ಥಾನಗಳ ಬೆಂಬಲ ಈಗ ಎನ್‌ಡಿಎಗೆ ಮಹತ್ವದ್ದಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಹಾಗೂ ಜೆಡಿಎಸ್‌ ಮೈತ್ರಿಯನ್ನು ಬೆಂಬಲಿಸುವುದು ಎನ್‌ಡಿಗೆ ಮೈತ್ರಿ ಧರ್ಮವಾಗಿದೆ ಎನ್ನಲಾಗಿದೆ. ಜೊತೆಗೆ ಒಕ್ಕಲಿಗ ಕೋಟಾ ಕೂಡ ತುಂಬಲಿದೆ.

ಈ ಬಾರಿ ಎನ್‌ಡಿಎ ಸರ್ಕಾರದಲ್ಲಿ ಮೈತ್ರಿ ಪಕ್ಷಗಳಿಗೂ ಸಚಿವ ಸ್ಥಾನ ಕೊಡಬೇಕಿರುವುದರಿಂದ ರಾಜ್ಯದಿಂದ ಮೂವರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಎಚ್‌ಡಿಕೆ ಅವರನ್ನೂ ಸೇರಿಸಿದರೆ ನಾಲ್ಕಾಗುತ್ತದೆ. ಕೊನೆಯ ಗಳಿಗೆಯಲ್ಲಿ ಅದೃಷ್ಟ ಕುದುರಿದರೆ ರಮೇಶ್ ಜಿಗಜಿಣಗಿ ಇಲ್ಲವೇ ಗೋವಿಂದ ಕಾರಜೋಳಗೆ ರಾಜ್ಯ ಖಾತೆ ಸಚಿವ ಸ್ಥಾನ ಕೊಡಬಹುದು. ಆದರೆ ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನದ ಲಭ್ಯತೆ ಬಗ್ಗೆ ಅನುಮಾನವಿದೆ.

ದೆಹಲಿಗೆ ಹೊರಟ ಕುಮಾರಸ್ವಾಮಿ

ಮಾಜಿ ಸಿಎಂ, ನೂತನ ಸಂಸದ ಎಚ್‌.ಡಿ ಕುಮಾರಸ್ವಾಮಿ ಅವರು ಈಗಾಗಲೇ ಅಮಿತ್ ಶಾ ಕರೆ ಮೇರೆಗೆ ದೆಹಲಿಗೆ ತೆರಳಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ ಮೂಲಕ ದೆಹಲಿಯತ್ತ ಏರ್ ಇಂಡಿಯಾ ವಿಮಾನದಲ್ಲಿ ಪಯಣ ಬೆಳೆಸಿದ್ದಾರೆ. ನೂತನವಾಗಿ ಆಯ್ಕೆ ಆಗಿರುವ ಮಿತ್ರ ಪಕ್ಷಗಳ ಸಂಸದರನ್ನು ಅಮಿತ್‌ ಶಾ ಅವರು ದೆಹಲಿಗೆ ಆಹ್ವಾನಿಸಿದ್ದು, ದೆಹಲಿಯಲ್ಲಿ ಅಮಿತ್ ಶಾ ಮತ್ತು ನಡ್ಡಾ ಅವರನ್ನು ಎಚ್‌ಡಿಕೆ ಭೇಟಿ ಆಗಲಿದ್ದಾರೆ.

ಇಂದು ಸಂಜೆ ನಾಲ್ಕು ಗಂಟೆಗೆ ಎನ್‌ಡಿಎ ಮೈತ್ರಿಕೂಟದ ಸಭೆ ನಡೆಯಲಿದ್ದು, ಎನ್‌ಡಿಎ ಸರ್ಕಾರ ರಚನೆ ಕುರಿತು ಮಿತ್ರ ಪಕ್ಷಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ಕರೆದಿದ್ದಾರೆ. ಇಲ್ಲಿ ಸರ್ಕಾರ ರಚನೆಗೆ ಪಕ್ಷಗಳು ತಮ್ಮ ಬೆಂಬಲದ ಪತ್ರ ನೀಡಲಿದ್ದು, ಇದಾದ ಬಳಿಕ ಸರ್ಕಾರ ರಚನೆಗೆ ಅವಕಾಶ ಕೋರಿ ರಾಷ್ಟ್ರಪತಿಗಳನ್ನು ಎನ್‌ಡಿಎ ಭೇಟಿಯಾಗಲಿದೆ. ಜೆಡಿಯು ಮತ್ತು ಟಿಡಿಪಿ ಪಕ್ಷಗಳು ಕೂಡ ಬೆಂಬಲವನ್ನು ಘೋಷಿಸಬೇಕಿವೆ. ಈ ಹಿನ್ನೆಲೆಯಲ್ಲಿ ನಿತೀಶ್‌ ಕುಮಾರ್‌ (Nitish kumar) ನಡೆ ಏನು ಎಂಬ ಕುತೂಹಲ ಇನ್ನೂ ಇದೆ.

ಇದನ್ನೂ ಓದಿ: Election Results 2024: ನಿತೀಶ್‌ ಕುಮಾರ್‌ರಿಂದ ಪ್ರಧಾನಿ ಸ್ಥಾನಕ್ಕೆ ಬೇಡಿಕೆ, ಇಂಡಿಯಾ ಸೇರ್ಪಡೆ? ಸುಳಿವು ನೀಡಿದ ಎರಡು ಬೆಳವಣಿಗೆ!

Exit mobile version