ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ (Uttar Pradesh Election results 2024) 80 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ತುರುಸಿನಲ್ಲಿ ನಡೆಯುತ್ತಿದ್ದು, ಬಿಜೆಪಿಯ ಭದ್ರಕೋಟೆಯಲ್ಲಿ ಬಿರುಕುಗಳು ಕಾಣಲಾರಂಭಿಸಿವೆ. ಮತ ಎಣಿಕೆಯ ಸಂದರ್ಭದಲ್ಲಿ ಸಮಾಜವಾದಿ ಪಾರ್ಟಿ (SP) ಹಾಗೂ ಕಾಂಗ್ರೆಸ್ (Congress) ಪಕ್ಷಗಳು ಬಿಜೆಪಿಗೆ ತೀವ್ರವಾದ ಹಣಾಹಣಿ ಒಡ್ಡಿವೆ. ಆರಂಭಿಕ ಮುನ್ನಡೆಗಳ ಪ್ರಕಾರ ಬಿಜೆಪಿ 43 ಕಡೆ ಮುನ್ನಡೆ ಸಾಧಿಸಿದ್ದರೆ, ಎಸ್‌ಪಿ- ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟ 36 ಕಡೆಗಳನ್ನು ಮುನ್ನಡೆ ತೋರಿಸಿದೆ.
ರಾಜ್ಯದಲ್ಲಿ ತೀವ್ರ ಸಾರ್ವತ್ರಿಕ ಚುನಾವಣೆ ಏಳು ಹಂತಗಳಲ್ಲಿ ನಡೆದಿತ್ತು. 80 ಸೀಟುಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯ ರಾಜಕೀಯವಾಗಿ ನಿರ್ಣಾಯಕವಾಗಿದೆ. ಇಲ್ಲಿ ಎಲ್ಲರ ಕಣ್ಣುಗಳು ಸ್ಪರ್ಧಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಪ್ರತಿಪಕ್ಷದ ದಿಗ್ಗಜರಾದ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಭಾರೀ ಸ್ಪರ್ಧಿಗಳ ಮೇಲಿವೆ.
ಮತ ಎಣಿಕೆಯ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ದಿನೇಶ್ ಸಿಂಗ್ ಅವರ ಕುಟುಂಬದ ಭದ್ರಕೋಟೆಯಾದ ರಾಯ್ ಬರೇಲಿಯಲ್ಲಿ 28,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾಗಿಂತ 15,000ಕ್ಕೂ ಹೆಚ್ಚು ಮತಗಳಿಂದ ಹಿಂದುಳಿದಿದ್ದಾರೆ.
ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ 80 ಸ್ಥಾನಗಳ ಪೈಕಿ 62-65 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದವು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾರಿ ಬಹುಮತ ಗಳಿಸುವ ನಿರೀಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಇದು ನಿಜವಾಗಬೇಕಾದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಗೆಲ್ಲಬೇಕಿದೆ.
ವಾರಣಾಸಿಯಿಂದ ಸತತ ಮೂರನೇ ಬಾರಿಗೆ ನಿಂತಿರುವ ಪ್ರಧಾನಿ ಮೋದಿ ಅವರಿಗೆ ಆರಂಭಿಕ ಮತ ಎಣಿಕೆಯ ವೇಳೆ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಜಯ್ ರಾವ್ ಅವರ ಎದುರು ಹಿನ್ನಡೆ ಕಂಡುಬಂತು. ನಂತರ ಅವರು ಮುನ್ನಡೆ ಸಾಧಿಸಿದರು. ಲಖನೌದಿಂದ ಹ್ಯಾಟ್ರಿಕ್‌ಗಾಗಿ ಸ್ಪರ್ಧಿಸುತ್ತಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಪೈಪೋಟಿ ಎದುರಿಸಿದ್ದಾರೆ. ಕೇಂದ್ರ ಸಚಿವರಾದ ಮಹೇಂದ್ರ ನಾಥ್ ಪಾಂಡೆ, ಸ್ಮೃತಿ ಇರಾನಿ ಮತ್ತು ಅನುಪ್ರಿಯಾ ಪಟೇಲ್ ಅವರ ಚುನಾವಣಾ ಭವಿಷ್ಯ ತಂತಿಯ ಮೇಲಿದೆ.
ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯವರ ಹಿಂದಿನ ಕ್ಷೇತ್ರವಾದ ರಾಯ್ ಬರೇಲಿಯಲ್ಲಿ ನಿಂತಿದ್ದಾರೆ. 2004ರಿಂದ ಮೂರು ಬಾರಿ ಅಮೇಥಿಯನ್ನು ಪ್ರತಿನಿಧಿಸಿರುವ ರಾಹುಲ್, 2019ರಲ್ಲಿ ಅಲ್ಲಿ ಸ್ಮೃತಿ ಇರಾನಿ ಎದುರು ಸೋತಿದ್ದರು. ಇಲ್ಲಿ ಈ ಬಾರಿ ರಾಹುಲ್ ಮುನ್ನಡೆ ಕಾಣಿಸಿದ್ದಾರೆ.
ಏತನ್ಮಧ್ಯೆ, ಸಮಾಜವಾದಿ ಪಕ್ಷದ ಯಾದವ್ ಕುಟುಂಬವು ಅಸಾಧಾರಣ ಮುನ್ನಡೆ ತೋರಿಸಿದೆ. ಯಾದವ್ ಕುಟುಂಬದ ಐದು ಸದಸ್ಯರು ಲೋಕಸಭೆ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಧರ್ಮೇಂದ್ರ ಯಾದವ್, ಅಕ್ಷಯ ಯಾದವ್ ಮತ್ತು ಆದಿತ್ಯ ಯಾದವ್ ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಯಶಸ್ಸಿಗೆ ಸ್ಪರ್ಧಿಸಿದ್ದಾರೆ.
2019ರ ಚುನಾವಣೆಯಲ್ಲಿ ಬಿಜೆಪಿ 62 ಸ್ಥಾನಗಳನ್ನು ರಾಜ್ಯದಲ್ಲಿ ಗೆದ್ದಿತ್ತು. ಅದರ ಮಿತ್ರ ಪಕ್ಷವಾದ ಅಪ್ನಾ ದಳ (ಎಸ್) ಎಸ್‌ಪಿ- ಬಿಎಸ್‌ಪಿ ಮೈತ್ರಿಯ ವಿರುದ್ಧ ಎರಡು ಸ್ಥಾನಗಳನ್ನು ಗಳಿಸಿತು. ಬಿಎಸ್‌ಪಿ ಹತ್ತು ಸ್ಥಾನಗಳನ್ನು ಮತ್ತು ಎಸ್‌ಪಿ ಐದು ಸ್ಥಾನಗಳನ್ನು ಗಳಿಸಿದ್ದವು. ಮುಂಬರುವ ಫಲಿತಾಂಶಗಳು ಅಪಾರ ಮಹತ್ವವನ್ನು ಹೊಂದಿವೆ.
ಇದನ್ನೂ ಓದಿ: Election Results 2024: ಅಸಾದುದ್ದೀನ್ ಓವೈಸಿ ವಿರುದ್ಧ ಹಿಂದು ಫೈರ್ ಬ್ರ್ಯಾಂಡ್ ಮಾಧವಿ ಲತಾಗೆ ಭಾರಿ ಮುನ್ನಡೆ