Site icon Vistara News

Election Results 2024: ರಾಮ ಮಂದಿರ ನಿರ್ಮಿಸಿದರೂ ಅಯೋಧ್ಯೆಯಲ್ಲಿ ಬಿಜೆಪಿಗೆ ದಾರುಣ ಸೋಲು!

election results 2024 ayodhya

ಹೊಸದಿಲ್ಲಿ: ಈ ವರ್ಷದ ಆರಂಭದಲ್ಲಿ ಭವ್ಯವಾದ ಶ್ರೀರಾಮ ಮಂದಿರದ (Ayodhya Ram Mandir) ಪ್ರಾಣಪ್ರತಿಷ್ಠೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya election results 2024) ಮಾಡಲಾಯಿತು. ಆದರೆ ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ (Faizabad Election Result) ಎಸ್‌ಪಿ (SP) ಅಭ್ಯರ್ಥಿಯ ಮುಂದೆ ಬಿಜೆಪಿ (BJP) ಅಭ್ಯರ್ಥಿ ಸೋತಿದ್ದಾರೆ.

ಜನವರಿಯಲ್ಲಿ ರಾಮ ಮಂದಿರದಲ್ಲಿ ನಡೆದ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಇಡೀ ಭಾರತದಲ್ಲಿಯೇ ಬಿಜೆಪಿಯ ಪುನಃ ಪ್ರತಿಷ್ಠಾಪನೆಗೆ ಮೂಲವಾಗಲಿದೆ ಎಂದು ಭಾವಿಸಲಾಗಿತ್ತು. ಕಡೇ ಪಕ್ಷ ಉತ್ತರ ಪ್ರದೇಶದಲ್ಲಾದರೂ ಭಾರಿ ಮೆಜಾರಿಟಿಯಲ್ಲಿ ಬಿಜೆಪಿ ಬರಲಿದೆ ಎಂದು ತರ್ಕಿಸಲಾಗಿತ್ತು. ಆದರೆ ಅದು ಆಗಿಲ್ಲ. ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುಂದೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿದ್ದಾರೆ.

ಫೈಜಾಬಾದ್‌ನಿಂದ ಮೂರು ಬಾರಿ ಸಂಸದರಾಗಿರುವ ಸಿಂಗ್ ಅವರ ಈ ಸಲದ ಸೋಲು ಅಚ್ಚರಿದಾಯಕವಾಗಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಿಂತ 10,000ಕ್ಕೂ ಅಧಿಕ ಮತಗಳ ಅಂತರದಿಂದ ಸಿಂಗ್‌ ಹಿಂದುಳಿದರು. ಫೈಜಾಬಾದ್ ಜಿಲ್ಲೆಯನ್ನು 2018ರಲ್ಲಿ ಅಧಿಕೃತವಾಗಿ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು. ಆದಾಗ್ಯೂ, ಲೋಕಸಭಾ ಸ್ಥಾನವನ್ನು ಇನ್ನೂ ಫೈಜಾಬಾದ್ ಎಂದು ಕರೆಯಲಾಗುತ್ತದೆ.

ಉತ್ತರ ಪ್ರದೇಶದ 43 ಲೋಕಸಭಾ ಸ್ಥಾನಗಳಲ್ಲಿ ಇಂಡಿಯಾ ಬ್ಲಾಕ್ ಮುನ್ನಡೆ ಸಾಧಿಸಿದೆ. ಮಧ್ಯಾಹ್ನದ ಹೊತ್ತಿಗೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಕ್ರಮವಾಗಿ 34 ಮತ್ತು ಒಂಬತ್ತು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದವು. 2019ರಲ್ಲಿ 62 ಸ್ಥಾನ ಗಳಿಸಿದ್ದ ಬಿಜೆಪಿ, ಈ ಬಾರಿ 34 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಮತಗಳ ಅಂತರ ಕಳೆದ ಸಲಕ್ಕಿಂತ ಕಡಿಮೆಯಾಗಿದೆ. ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿದರೆ, ಸ್ಮೃತಿ ಇರಾನಿ ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ವಿರುದ್ಧ ಸೋತಿದ್ದಾರೆ.

ಮೋದಿ ಗೆಲುವಿನ ಅಂತರ ಕುಸಿತ

ಈ ಚುನಾವಣೆಯ ಫಲಿತಾಂಶದ (Election Results 2024) ಮೂಲಕ ಮೋದಿ ಪ್ರಭಾವ ದೇಶದಲ್ಲಿ ಕುಸಿದಿದೆಯೇ ಎಂಬ ಚರ್ಚೆ ಆರಂಭವಾಗಿದೆ. ಅದಕ್ಕಿಂತಲೂ ಎರಡು ಅವಧಿಗೆ ತಾವು ಪ್ರತಿನಿಧಿಸಿದ್ದ ವಾರಾಣಸಿ ಕ್ಷೇತ್ರದಲ್ಲಿಯೂ ಅವರ ಪ್ರಭಾವ ಬಹುತೇಕ ಮಸುಕಾಗಿದೆ ಎಂಬುದೇ ಚರ್ಚೆಯ ಪ್ರಮುಖ ವಸ್ತು. ಪ್ರಧಾನಿ ಮೋದಿ ಅವರು 2014ರ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಅಜಯ್​ ರಾಯ್​ ವಿರುದ್ಧ 1.5 ಲಕ್ಷ ಮತಗಳ ಅಂತರದಿಂದ ಮಾತ್ರ ಗೆದ್ದಿದ್ದಾರೆ.

ವಾಸ್ತವದಲ್ಲಿ ಅವರ ಪಾಲಿಗೆ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ವಿಜಯ. ಹೀಗಾಗಿ ಅವರ ಅಭಿಮಾನಿಗಳು ಹಾಗೂ ವಾರಾಣಸಿ ಮತದಾರರ ಪಾಲಿಗೆ ಹೆಮ್ಮೆಯ ಸಂಗತಿ. ಪ್ರಧಾನಿ ಮೋದಿ  6,12,970 ಮತಗಳನ್ನು ಪಡೆದಿದ್ದರೆ ಅವರ ಸಮೀಪದ ಪ್ರತಿಸ್ಪರ್ಧಿ ಅಜಯ್​ ರಾಯ್​ 460457 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ಮತಗಳಲ್ಲಿ ಮೋದಿ ಪಾಲಿ ಶೇಕಡಾ 54. 24 ಹಾಗೂ ಪ್ರತಿಸ್ಪರ್ಧಿ ಪಡೆದ ಶೇಕಡಾವಾರು ಮತ 40.74. ಆದರೆ, ಸಾಮಾನ್ಯ ಅಭ್ಯರ್ಥಿಯೊಬ್ಬ ಇಷ್ಟೊಂದು ಅಂತರದಿಂದ ಗೆಲ್ಲುವುದು ಸಾಮಾನ್ಯ ವಿಷಯವಲ್ಲ. ಆದರೆ, ಪ್ರಧಾನಿ ಅಭ್ಯರ್ಥಿಯಾಗಿ ಅವರ ಪಡೆದ ಅಂತರ ಕಡಿಮೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Election Results 2024: ಕಂಗನಾ, ಸುರೇಶ್‌ ಗೋಪಿ, ಶತ್ರುಘ್ನ ಸಿನ್ಹಾ ಸೇರಿ ಹಲವು ನಟ–ನಟಿಯರ ಗೆಲುವು

ಪ್ರಧಾನಿ ಮೋದಿ ಅವರು ಎರಡನೇ ಅವಧಿಗೆ (2019) ವಾರಾಣಸಿಯಲ್ಲಿ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಆ ಅವಧಿಯಲ್ಲಿ ಅವರು ಸಮೀಪದ ಸ್ಪರ್ಧಿ ಶಾಲಿನಿ ಯಾದವ್ ಅವರನ್ನು ಮಣಿಸಿದ್ದರು. ಅಂತೆಯೇ 2014ರಲ್ಲಿ 3.72 ಲಕ್ಷ ಮತಗಳ ಅಂತರದಲ್ಲಿ ಹಾಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಗೆಲುವು ಕಂಡಿದ್ದರು. 2014ರಲ್ಲಿ ಭರ್ಜರಿ ಅಂತರದಿಂದಲೇ ಗೆದ್ದಿದ್ದ ಅವರು 2019ರಲ್ಲಿ ಭಾರೀ ಅಂತರದ ವಿಜಯ ದಾಖಲಿಸಿದ್ದರು. ಈ ಫಲಿತಾಂಶಗಳು ಮೋದಿಯ ಗೌರವ ಹಾಗೂ ಘನತೆಗೆ ಪೂರಕವಾಗಿತ್ತು. ಪ್ರಧಾನಿ ಮೋದಿ ಎರಡನೇ ಅವಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಅಂತೆಯೇ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವೂ ಅಲ್ಲಿ ದೊಡ್ಡ ಸುಧಾರಣೆ ಮಾಡಿದೆ.

ಇದನ್ನೂ ಓದಿ: Karnataka Election Results 2024: ಬೆಂ. ಗ್ರಾಮಾಂತರದಲ್ಲಿ ಸಹೋದರನಿಗೆ ಸೋಲು; ಜನರ ತೀರ್ಪಿನ ಬಗ್ಗೆ ಬೇರೆ ಮಾತಿಲ್ಲ ಎಂದ ಡಿಕೆಶಿ

Exit mobile version