ಕೋಲ್ಕತಾ: ಪಶ್ಚಿಮ ಬಂಗಾಳದ (West Bengal) ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮತ ಎಣಿಕೆ (vote counting) ಆರಂಭಕ್ಕೆ ಮುನ್ನವೇ ಕಚ್ಚಾ ಬಾಂಬ್ ಸ್ಫೋಟಿಸಿ ಐವರು ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಲ ರಾಜ್ಯ, ಲೋಕಸಭೆ ಚುನಾವಣೆ (Election Results 2024) ಮತದಾನದ (lok sabha election 2024) ಸಂದರ್ಭದಲ್ಲಿಯೂ ಹಿಂಸಾಚಾರಕ್ಕೆ (violence) ಸಾಕ್ಷಿಯಾಗಿತ್ತು.
ಮತ ಎಣಿಕೆಗೆ ಸ್ವಲ್ಪ ಮುಂಚಿತವಾಗಿ, ದಕ್ಷಿಣ 24 ಪರಗಣಗಳ ಭಂಗಾರ್‌ನ ಚಲ್ತಾಬೇರಿಯಾದಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿದೆ. ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ಬಾಂಬ್ ತಯಾರಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡ ಒಬ್ಬ ವ್ಯಕ್ತಿ ಇಂಡಿಯನ್ ಸೆಕ್ಯುಲರ್ ಫ್ರಂಟ್ (ISF) ನ ಪಂಚಾಯತ್ ಸದಸ್ಯ ಎಂದು ವರದಿಯಾಗಿದೆ.
ಹೇಗಿದೆ ರಾಜ್ಯದ ಪರಿಸ್ಥಿತಿ?
ಪಶ್ಚಿಮ ಬಂಗಾಳವು ಆಡಳಿತಾರೂಢ ಟಿಎಂಸಿ, ಪ್ರತಿಪಕ್ಷ ಬಿಜೆಪಿ ಮತ್ತು ಇಂಡಿಯಾ ಬ್ಲಾಕ್‌ನ ಭಾಗವಾಗಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಸಿಪಿಐ(ಎಂ) ನಡುವೆ ಹೆಚ್ಚಿನ ಸ್ಥಾನಗಳಲ್ಲಿ ತ್ರಿಕೋನ ಹೋರಾಟವನ್ನು ಕಂಡಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯು ಕೇವಲ ಎರಡು ಸ್ಥಾನಗಳಿಂದ 18ಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತ್ತು. ಇಲ್ಲಿ ಎಡದಿಂದ ಬಲಕ್ಕೆ ಗಮನಾರ್ಹವಾದ ರಾಜಕೀಯ ಬದಲಾವಣೆಯಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ರಾಜ್ಯದಲ್ಲಿ ಯಾವುದೇ ಸ್ಥಾನವನ್ನು ಗೆಲ್ಲಲಿಲ್ಲ.
ಸಂದೇಶಖಾಲಿ ಹಗರಣ ಈ ಚುನಾವಣೆಯಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ಇದೀಗ ಅಮಾನತುಗೊಂಡಿರುವ ಟಿಎಂಸಿ ನಾಯಕ ಶೇಖ್ ಷಹಜಹಾನ್ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಭೂಹಗರಣದ ಆರೋಪಗಳು ಭಾರಿ ವಿವಾದ ಎಬ್ಬಿಸಿದ್ದವು. ರಾಜ್ಯದ ಹಲವಾರು ಸ್ಥಾನಗಳಲ್ಲಿ, ವಿಶೇಷವಾಗಿ ಕೋಲ್ಕತ್ತಾ ಉತ್ತರ, ಅಸನ್ಸೋಲ್, ಬ್ಯಾರಕ್‌ಪೋರ್, ಮೇದಿನಿಪುರ್, ಡಾರ್ಜಿಲಿಂಗ್, ಜಾದವ್‌ಪುರ್ ಮತ್ತು ಬಸಿರ್‌ಹತ್‌ನಲ್ಲಿ ಬಲಿಷ್ಠ ಅಭ್ಯರ್ಥಿಗಳು ಹೊಯ್ದಾಡಿದ್ದಾರೆ.
ರಾಜ್ಯವು ಏಪ್ರಿಲ್ 19 ಮತ್ತು ಜೂನ್ 1ರ ನಡುವೆ ಏಳು ಹಂತಗಳಲ್ಲಿ ಮತದಾನ ಮಾಡಿದೆ. ಪಶ್ಚಿಮ ಬಂಗಾಳವು ಸಾರ್ವತ್ರಿಕ ಚುನಾವಣೆಗಳ ಎಲ್ಲಾ ಏಳು ಹಂತಗಳಲ್ಲಿ ಮತದಾನ ಮಾಡಿದ್ದು, ಹೆಚ್ಚಿನ ಶೇಕಡಾವಾರು ಮತದಾನ ದಾಖಲಿಸಿದೆ.
ಎಕ್ಸಿಟ್ ಪೋಲ್‌ಗಳು ಏನೆಂದಿವೆ?
ಇಲ್ಲಿ ಎಕ್ಸಿಟ್ ಪೋಲ್‌ಗಳು ಹೇಳಿರುವಂತೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಬಿಜೆಪಿ ಟಕ್ಕರ್ ನೀಡಲು ಸಿದ್ಧವಾಗಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳವನ್ನು ಬಿಜೆಪಿ ತಲ್ಲಣಗೊಳಿಸಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.
ಎನ್‌ಡಿಟಿವಿ-ಜನ್ ಕಿ ಬಾತ್ ಎಕ್ಸಿಟ್ ಪೋಲ್ ಕೇಸರಿ ಪಕ್ಷಕ್ಕೆ 21ರಿಂದ 26 ಸ್ಥಾನಗಳು ಮತ್ತು ತೃಣಮೂಲ ಕಾಂಗ್ರೆಸ್‌ಗೆ 16-18 ಸ್ಥಾನಗಳನ್ನು ಭವಿಷ್ಯ ನುಡಿದಿದೆ. ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್ ಕೂಡ ಬಿಜೆಪಿಗೆ 21 ಮತ್ತು ತೃಣಮೂಲ ಕಾಂಗ್ರೆಸ್‌ಗೆ 19 ಸ್ಥಾನಗಳನ್ನು ನೀಡಿದರೆ, ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ ಬಿಜೆಪಿಗೆ 21 ರಿಂದ 25 ಸ್ಥಾನಗಳನ್ನು ಭವಿಷ್ಯ ನುಡಿದಿದೆ. ರಾಜ್ಯದಲ್ಲಿ ಮಮತಾ ಬ್ಯಾನರ್ಜಿಯವರ ಪಕ್ಷಕ್ಕೆ 16 ರಿಂದ 20 ಸ್ಥಾನಗಳು ಬರಬಹುದೆಂದು ಅದು ಭವಿಷ್ಯ ನುಡಿದಿದೆ.
ಇದನ್ನೂ ಓದಿ: Election Results 2024: ಮತ ಎಣಿಕೆ ಆರಂಭ: ಮೋದಿಯಿಂದ ರಾಹುಲ್ ಗಾಂಧಿವರೆಗೆ; ಇವರೇ ನೋಡಿ ದೇಶದ ಗಮನ ಸೆಳೆದ ಅಭ್ಯರ್ಥಿಗಳು