Site icon Vistara News

Election Results 2024: 400 ಸೀಟ್‌ ಗಳಿಸುವ ಎನ್‌ಡಿಎ ಕನಸು ನುಚ್ಚು ನೂರಾದದ್ದು ಹೇಗೆ?

Election Results 2024 NDA 400

ಹೊಸದಿಲ್ಲಿ: 400 ಲೋಕಸಭೆ ಸ್ಥಾನಗಳ (Lok Sabha Election 2024) ಗುರಿಯನ್ನಿಟ್ಟುಕೊಂಡು ಹೊರಟ ಎನ್‌ಡಿಎ (NDA) ಈ ಸಲದ ಚುನಾವಣೆಯಲ್ಲಿ ಗಳಿಸಲು (Election Results 2024) ಸಾಧ್ಯವಾದದ್ದು 290ರ ಆಸುಪಾಸಿನ ಸ್ಥಾನಗಳನ್ನು ಮಾತ್ರ. ʼಅಬ್‌ ಕಿ ಬಾರ್‌ ಮೋದಿ ಸರ್ಕಾರ್‌ʼ ಜೊತೆಗೆ ʼ400 ಪಾರ್‌ʼ ಎಂಬ ಕನಸನ್ನೂ ಇಟ್ಟುಕೊಂಡು ಒಂದು ವರ್ಷದ ಹಿಂದಿನಿಂದಲೇ ಬಿಜೆಪಿ (BJP) ಹಾಗೂ ಎನ್‌ಡಿಎ ಮಿತ್ರಪಕ್ಷಗಳು ಜೈತ್ರಯಾತ್ರೆಗೆ ಹೊರಟಿದ್ದವು. ಮೂಲಸೌಕರ್ಯ ಸೇರಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು, ಬೃಹತ್‌ ಚುನಾವಣಾ ನಿಧಿಯ ವಿನಿಯೋಗ, ಇತರ ಪಕ್ಷಗಳಿಂದ ಹಲವು ನಾಯಕರ ಆಗಮನ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಂಥ ಧಾರ್ಮಿಕ ಸಂಗತಿಗಳು, ಲವ್‌ ಜಿಹಾದ್‌ನಂತಹ ಮತೀಯ ಸಂಗತಿಗಳು, ಬೃಹತ್‌ ಕಾರ್ಯಕರ್ತ ಪಡೆ- ಎಲ್ಲವನ್ನೂ ಮುಂದಿಟ್ಟುಕೊಂಡು ಚುನಾವಣೆಗೆ ಹೋದರೂ ಬಿಜೆಪಿ 272 ಸೀಟ್‌ ಗಳಿಸಿ ಸ್ವಂತ ಬಲದಿಂದ ಸರ್ಕಾರ ರಚಿಸಲೂ ಸಾಧ್ಯವಾಗಿಲ್ಲ ಎಂಬುದು ಸೋಜಿಗದ ಸಂಗತಿ. ಈ ಹಿನ್ನಡೆಗೆ ಕಾರಣ ಏನಿರಬಹುದು?

ಒಟ್ಟಾರೆ ಎನ್‌ಡಿಎ ಸ್ಥಾನಗಳಿಕೆ 290ರ ಆಸುಪಾಸಿನಲ್ಲಿದೆ. ಮೋದಿ ಕನಸಿನ 400ಕ್ಕೆ ಇದು ತುಂಬಾ ದೂರ. ಎಕ್ಸಿಟ್‌ ಪೋಲ್‌ಗಳು ಕೂಡ ಎನ್‌ಡಿಎಗೆ 350- 365ರ ಆಸುಪಾಸಿನಲ್ಲಿ ಸೀಟು ಗಳಿಕೆ ಆಗಬಹುದು ಎಂದು ಅಂದಾಜಿಸಿದ್ದವು. ಈ ನಿರೀಕ್ಷೆಯೂ ನೆಲಕಚ್ಚಿದೆ. ಎನ್‌ಡಿಎಯ ಹಿನ್ನಡೆಯ ಜೊತೆಜೊತೆಗೇ ಕಾಂಗ್ರೆಸ್‌ ಹಾಗೂ ಇಂಡಿಯಾ ಬ್ಲಾಕ್‌ನ ಮೇಲೇರುವಿಕೆಯನ್ನೂ ಗಮನಿಸಬೇಕು. ಇಂಡಿ ಮೈತ್ರಿಕೂಟ 230ರ ಆಸುಪಾಸಿನ ಸ್ಥಾನಗಳನ್ನು ಗಳಿಸಿದ್ದು, ಇನ್ನೂ ನಲುವತ್ತು ಸೀಟುಗಳನ್ನು ಗಳಿಸಿದ್ದರೆ ಸರ್ಕಾರ ರಚಿಸುವ ಸಾಧ್ಯತೆಯಿತ್ತು. ಈಗಲೂ ಅದು ನಿತೀಶ್‌ ಕುಮಾರ್‌ ಹಾಗೂ ಚಂದ್ರಬಾಬು ನಾಯ್ಡು ಅವರನ್ನು ಸೆಳೆದುಕೊಂಡು ಸರ್ಕಾರ ರಚಿಸಬಹುದೋ ಏನೋ ಎಂಬ ಆಸೆಯಲ್ಲಿದೆ.

ಆರ್ಥಿಕತೆಯ ಕಠೋರ ಚಿತ್ರಣ

ಹಲವು ವಿರೋಧ ಪಕ್ಷದ ನಾಯಕರು ಮತ್ತು ವಿಶ್ಲೇಷಕರು ಬಿಜೆಪಿಯ ʼ400 ಪಾರ್’ ಅಭಿಯಾನವನ್ನು ಅಟಲ್‌ ಬಿಹಾರಿ ವಾಜಪೇಯಿ ಅವರ ʼಇಂಡಿಯಾ ಶೈನಿಂಗ್’ ಹೇಳಿಕೆಯ ಪುನರಾವರ್ತನೆ ಎಂದು ಬಣ್ಣಿಸಿದ್ದಾರೆ. 2004ರಲ್ಲಿ ವಾಜಪೇಯಿ ಸರ್ಕಾರವು ತಾನು ನಡೆಸಿದ ಸುಧಾರಿತ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಆಧಾರದ ಮೇಲೆ ಆತ್ಮವಿಶ್ವಾಸದಿಂದ ʼಇಂಡಿಯಾ ಶೈನಿಂಗ್’ ಅಭಿಯಾನವನ್ನು ನಡೆಸಿತ್ತು. ಆದರೆ ಅದರ ಬಲದಲ್ಲಿ ಅಧಿಕಾರಕ್ಕೆ ಮರಳಲು ವಿಫಲವಾಯಿತು. ಈ ಅತಿಯಾದ ಆತ್ಮವಿಶ್ವಾಸ ಪಕ್ಷವನ್ನು ದಡ ಸೇರಿಸಿರಲಿಲ್ಲ. ʼ400 ಪಾರ್’ ಎಂಬುದು ವಾಸ್ತವಕ್ಕಿಂತ ಸ್ವಲ್ಪ ದೂರವಾದ ಆತ್ಮವಿಶ್ವಾಸವಾಗಿತ್ತು. ಕೋವಿಡ್ ಸಮಸ್ಯೆಯ ಹೊರತಾಗಿಯೂ ಮೋದಿ ಸರ್ಕಾರದ ಆರ್ಥಿಕತೆ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಆದರೆ ವಿರೋಧ ಪಕ್ಷದ ನಾಯಕರು ಸದಾ ಆರ್ಥಿಕತೆ ಕಠೋರವಾಗಿದೆ ಎಂದು ಚಿತ್ರಿಸಿದರು. ಹೊರಗೆ ಹೊಳೆಯುತ್ತಿರುವ ಆರ್ಥಿಕತೆಯ ಒಳಗೆ ಉದ್ಯೋಗಗಳ ಕೊರತೆ ಮತ್ತು ಅಸಮಾನತೆ ಇದೆ ಎಂದು ಬಣ್ಣಿಸಿದರು. ಮೋದಿ ಸರ್ಕಾರ ಮೂಲಸೌಕರ್ಯಗಳಂಥ ವಿಷಯಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದರೂ, ಅದು ಮತಗಳಾಗಿ ಪರಿವರ್ತನೆ ಆಗಲಿಲ್ಲ. ಮೋದಿ ಖಂಡಿತವಾಗಿಯೂ ಆರ್ಥಿಕತೆಯನ್ನು ವೇಗದಲ್ಲಿ ಮುನ್ನಡೆಸಿದ್ದಾರೆ. ಆದರೆ ಪ್ರತಿಪಕ್ಷಗಳು ನಿರಂತರ ಸವಾಲುಗಳನ್ನು ಮುಂದಿಟ್ಟವು. ಜಾಗತಿಕ ಸಂಕಷ್ಟದ ನಡುವೆಯೂ ಭಾರತದ ಕಡಿಮೆ ಹಣದುಬ್ಬರ ಮತ್ತು ಹೆಚ್ಚಿನ ಬೆಳವಣಿಗೆಯು ಉತ್ತಮ ಪರ್ಯಾಯವಾಗಿತ್ತು. ಆದರೆ ಭಾರತೀಯ ಮಧ್ಯಮ – ಕೆಳವರ್ಗ ಇನ್ನಷ್ಟನ್ನು ನಿರೀಕ್ಷಿಸಿತ್ತು.

ಇಂಡಿಯಾ ಬ್ಲಾಕ್‌ನ ಒಗ್ಗಟ್ಟು

ಹೆಚ್ಚಿನ ದೊಡ್ಡ ಮತ್ತು ಸಣ್ಣ ವಿರೋಧ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಇಂಡಿಯಾ ಬ್ಲಾಕ್‌ನ ಧ್ವಜದಡಿ ಒಟ್ಟಾದವು. ಅಲ್ಪಸಂಖ್ಯಾತರ ಮತಗಳು ವಿರೋಧ ಪಕ್ಷಗಳ ನಡುವೆ ವಿಭಜನೆಯಾದರೂ ಒಟ್ಟಾರೆಯಾಗಿ ಇಂಡಿಯಾ ಬ್ಲಾಕ್‌ನ ನಡುವೆಯೇ ಉಳಿಯಿತು. ಹೀಗೆ ಬಿಜೆಪಿ ವಿರುದ್ಧದ ಗಣನೀಯ ಲಾಭವನ್ನು ಇಂಡಿಯಾ ಬ್ಲಾಕ್ ಮಾಡಿಕೊಂಡಿತು. ಬಹುಶಃ ಈ ನಿರೀಕ್ಷೆಗೆ ಹೆದರಿಯೇ ಬಿಜೆಪಿ ಕೆಲವು ವರ್ಷಗಳಿಂದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರ ನೆಲೆಗಳಲ್ಲಿ ಪ್ರವೇಶ ಮಾಡಲು ಪ್ರಯತ್ನಿಸುತ್ತಿದೆ. ಜೊತೆಗೆ ದಲಿತರ ಮತಗಳನ್ನೂ ಸೆಳೆಯು ಸಾಕಷ್ಟು ಇಂಜಿನಿಯರಿಂಗ್‌ ಕೆಲಸವನ್ನು ಬಿಜೆಪಿ ಮಾಡಿದೆ. ಆದರೆ ಈ ಬಾರಿ ವಿಪಕ್ಷಗಳ ಮತವು ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕ್ರೋಡೀಕರಣಗೊಂಡವು. ಇದು ಬಿಜೆಪಿಯ ಓಟಕ್ಕೆ ದೊಡ್ಡ ಅಡಚಣೆಯಾಯಿತು.

ಪ್ರತಿಪಕ್ಷಗಳ ʼಉಚಿತʼ ಸ್ಕೀಮ್‌ಗಳು

ರಾಹುಲ್ ಗಾಂಧಿ (Rahul gandhi) ನೇತೃತ್ವದ ಕಾಂಗ್ರೆಸ್‌, ದಿಲ್ಲಿಯಲ್ಲಿ ಆಪ್, ಉತ್ತರ ಪ್ರದೇಶದಲ್ಲಿ ಎಸ್‌ಪಿ, ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌, ತಮಿಳುನಾಡಿನಲ್ಲಿ ಡಿಎಂಕೆ ಪಕ್ಷಗಳು ಕೆಳವರ್ಗದ, ಕೆಳಮಧ್ಯಮವರ್ಗದ ಜನರಿಗೆ, ವಿವಿಧ ಜಾತಿ ಗುಂಪುಗಳಿಗೆ ನಾನಾ ಉಚಿತ ಕೊಡುಗೆಗಳನ್ನು ಘೋಷಿಸಿದರು. ಇದಕ್ಕೆ ಜನತೆ ಮನಸೋತರು ಎನ್ನಬಹುದು. ಕರ್ನಾಟಕದಲ್ಲಿ ಐದು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್‌ ಗೆದ್ದು ಬಂದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪ್ರತಿಯೊಬ್ಬ ಬಡ ಮಹಿಳೆಗೆ 1 ಲಕ್ಷ ರೂಪಾಯಿ ನೀಡುವ ರಾಹುಲ್ ಗಾಂಧಿ ಮೆಗಾ ಆಫರ್‌ ಮನಸೆಳೆಯಿತು. ದೇಶದ ಮಹಿಳೆಯರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರನ್ನು ಗುರಿಯಾಗಿಸಿಕೊಂಡರೂ ಈ ಕೊಡುಗೆಯು ಭಾರತದ ಸಂಪೂರ್ಣ ವಾರ್ಷಿಕ ಬಜೆಟ್‌ನ ಅರ್ಧಕ್ಕಿಂತ ಹೆಚ್ಚಾಗುತ್ತದೆ. ಆದರೆ ಇದರ ಗಣಿತವನ್ನು ಯಾವುದೇ ಪ್ರಜೆ ಮಾಡುವುದಿಲ್ಲ. ಪ್ರಚಾರದ ಜಾಹೀರಾತುಗಳಲ್ಲಿ ಇದು ಹೈಲೈಟ್ ಆಯಿತು. ಬಹಳಷ್ಟು ಮತದಾರರನ್ನು ಬಿಜೆಪಿಯ ಮಡಿಲಿನಿಂದ ಎಳೆದಿರಬೇಕು. ಉದ್ಯೋಗ ಕೋಟಾಗಳ ಮೇಲಿನ 60% ಮಿತಿಯನ್ನು ತೆಗೆದುಹಾಕುವುದು ಮತ್ತು ಮಿಲಿಟರಿ ನೇಮಕಾತಿಯ ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸುವುದು ಮುಂತಾದ ಕೆಲವು ಇತರ ಪ್ರಲೋಭನಕಾರಿ ಕೊಡುಗೆಗಳನ್ನು ಇಂಡಿಯಾ ಬ್ಲಾಕ್ ಹೊಂದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಕೆಲವು ಪ್ರಮುಖ ಜಾಗತಿಕ ಅರ್ಥಶಾಸ್ತ್ರಜ್ಞರು ಹುರಿದುಂಬಿಸಿದಂತೆ ʼಸಂಪತ್ತಿನ ಪುನರ್ವಿತರಣೆʼಯ ತನ್ನ ಮೂಲಭೂತ ಕಾರ್ಯಸೂಚಿಯನ್ನು ರಾಹುಲ್ ಗಾಂಧಿ ಪ್ರಸ್ತಾಪಿಸಿದರು. ಈ ಕನಸನ್ನು ಸಾಕಷ್ಟು ಮತದಾರರಿಗೆ ಮಾರಲು ರಾಹುಲ್‌ಗೆ ಸಾಧ್ಯವಾಗಿರಬಹುದು.

ರಾಮಮಂದಿರ ಕೆಲಸ ಮಾಡಲಿಲ್ಲ

ರಾಮಮಂದಿರವು (ayodhya ram mandir) ಬಿಜೆಪಿಯ ಏಕೈಕ ಬೃಹತ್ ಚುನಾವಣಾ ವಿಷಯ ಆಗಿತ್ತು. ಆದರೆ ಅದು ಚುನಾವಣೆಗೆ ಕೆಲವು ತಿಂಗಳುಗಳ ಮೊದಲೇ ಬಂದು ಹೊರಟುಹೋಯಿತು. ಹೀಗಾಗಿ ಅದು ಹಿಂದೂಗಳ ಮತಗಳನ್ನು ಕ್ರೋಡೀಕರಿಸಲು ಸಹಾಯವಾಗಲಿಲ್ಲ. 2019ರಲ್ಲಿ ನಡೆದ ಪುಲ್ವಾಮಾ ದಾಳಿ, ಸರ್ಜಿಕಲ್ ಸ್ಟ್ರೈಕ್‌ಗಳು ಮಾಡಿದ ಕೆಲಸವನ್ನು ರಾಮ ಮಂದಿರ ಮಾಡಲಿಲ್ಲ. ಆರ್ಥಿಕತೆಯ ವೇಗವಾದ ಚಲನೆಗಳು, ದೇಶವನ್ನು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಮಾಡುವ ಮೋದಿಯವರ ಭರವಸೆಗಳೂ ವರ್ಕ್‌ ಆಗಲಿಲ್ಲ.

ಮತಹಂಚಿಕೆ ಪ್ರಮಾಣ

ಇಂಡಿಯಾ ಒಕ್ಕೂಟ ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. NDA ಒಕ್ಕೂಟ ಪಶ್ಚಿಮ ಮತ್ತು ಹಿಂದಿ ಹೃದಯಭಾಗದಲ್ಲಿ ಮುನ್ನಡೆದಿದೆ. ಯಾವುದೇ ಮೈತ್ರಿಯಲ್ಲಿಲ್ಲದ ಪಕ್ಷಗಳು ಪೂರ್ವ ಪ್ರದೇಶದಿಂದ ಮುನ್ನಡೆ ಸಾಧಿಸುತ್ತಿವೆ. 2019ರ ಚುನಾವಣೆಗೆ ಹೋಲಿಸಿದರೆ ಹಿಂದಿ ಹೃದಯಭಾಗದಲ್ಲಿ 1.6% ಮತ್ತು ಪಶ್ಚಿಮದಲ್ಲಿ 12.7% ಅಂಕಗಳಿಂದ NDA ಒಕ್ಕೂಟದ ಮತ ಹಂಚಿಕೆಯು ಕುಸಿದಿದೆ. ಆದರೆ ಇಂಡಿಯಾ ಬ್ಲಾಕ್ ಎಲ್ಲಾ ಪ್ರದೇಶಗಳಲ್ಲಿ ಮತಪ್ರಮಾಣ ಹೆಚ್ಚಿಸಿಕೊಂಡಿದೆ. ಪಶ್ಚಿಮದಲ್ಲಿ ಭಾರತ ಬ್ಲಾಕ್‌ಗೆ ಅತಿದೊಡ್ಡ ಲಾಭ ಬಂದಿದ್ದು, 16.8% ಹೆಚ್ಚಿಸಿಕೊಂಡಿದೆ.

ಉತ್ತರ ಪ್ರದೇಶದ ಜಾತಿ ಸಮೀಕರಣ

ಬಿಜೆಪಿ ಈ ಬಾರಿ ಉತ್ತರ ಪ್ರದೇಶದಲ್ಲಿ ಭಾರಿ ಹೊಡೆತ ತಿಂದಿದೆ. ಕಳೆದ ಸಲಕ್ಕಿಂತ 30ಕ್ಕೂ ಅಧಿಕ ಸ್ಥಾನಗಳನ್ನು ಕಳೆದುಕೊಂಡಿದೆ. ಇದಕ್ಕೆ ಈ ರಾಜ್ಯದ ಜಾತಿ ರಾಜಕೀಯವನ್ನು ಬಿಜೆಪಿ ಕಡೆಗಣಿಸಿದ್ದೇ ಕಾರಣ ಎನ್ನಲಾಗುತ್ತಿದೆ. ರಾಮ ಮಂದಿರದ ಅಲೆ ಏರಿ ಬಂದ ಬಿಜೆಪಿ, ಹಿಂದುತ್ವದ ಮೂಲಕ ಗೆಲ್ಲಬಹುದು ಎಂದುಕೊಂಡಿತು. ಆದರೆ ಇಲ್ಲಿ ಹಿಂದುತ್ವ ರಾಜಕಾರಣಕ್ಕಿಂತಲೂ ಜಾತಿ ರಾಜಕಾರಣದ ಸಮೀಕರಣವೇ ಹೆಚ್ಚು ಕೆಲಸ ಮಾಡಿದೆ. ಈ ಸಲ ದಲಿತ ಮತಗಳು ಸಾಮೂಹಿಕವಾಗಿ ಎಸ್‌ಪಿ ಸೇರಿದಂತೆ ಇಂಡಿಯಾ ಬ್ಲಾಕ್‌ನತ್ತ ತಿರುಗಿದೆ ಎನ್ನಲಾಗುತ್ತಿದೆ. ಹಾಗೆಯೇ ಮುಸ್ಲಿಂ ಮತಗಳೂ ಸಾಂಪ್ರದಾಯಿಕವಾಗಿ ಎಸ್‌ಪಿ ಹಾಗೂ ಬಿಎಸ್‌ಪಿಯ ಪಾಲಾದವು. ಇದು ಬಿಜೆಪಿಗೆ ನಷ್ಟ ಉಂಟುಮಾಡಿದೆ.

ಇದನ್ನೂ ಓದಿ: Election Results 2024: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್‌ ಪುತ್ರನಿಗೆ ಭರ್ಜರಿ ಜಯ

Exit mobile version