ಬೆಂಗಳೂರು: ಲೋಕ ಸಭಾ ಚುನಾವಣೆಯಲ್ಲಿ (Election Results 2024) ಬಿಜೆಪಿ 2019ರ ಚುನಾವಣೆಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿರುವುದು ಮೋದಿಯ ಸೋಲು. ಈ ಹಿನ್ನಡೆಯ ನೈತಿಕತೆಯನ್ನು ಅವರು ಹೊರಬೇಕಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಇಂಡಿ ಒಕ್ಕೂಟದ ಪಕ್ಷಗಳಿಗೆ ದೊರೆತಿರುವ ಗೆಲುವುಗಳು ಪ್ರಜಾಪ್ರಭುತ್ವ ವಿಜಯ ಎಂದು ಹೇಳಿದರು.
ಈ ಬಾರಿಯ ಚುನಾವಣೆಯ ಮೋದಿ ಮತ್ತು ಜನರ ನಡುವಿನ ಹೋರಾಟವಾಗಿತ್ತು. ಹೀಗಾಗಿ ಜನರು ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಕ್ಕಿರಲಿಲ್ಲ. ಬಿಜೆಪಿ ಒಬ್ಬ ವ್ಯಕ್ತಿಯನ್ನು (ಮೋದಿಯನ್ನು) ಮುಂದಿಟ್ಟುಕೊಂಡು ಮತ ಕೇಳಿತ್ತು. ಆ ವ್ಯಕ್ತಿಯ ವಿಫಲಗೊಂಡಿದ್ದಾರೆ. ಹೀಗಾಗಿ ಬಿಜೆಪಿ ಏಕಾಂಗಿಯಾಗಿ ಸರಳ ಬಹುಮತ ಪಡೆಯದೇ ಇರುವುದು ಪ್ರಧಾನಿ ನರೇಂದ್ರ ಮೋದಿ ಸೋಲು ಎಂದು ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆ ಸೀಜ್ ಮಾಡಿತ್ತು. ವಿಪಕ್ಷಗಳನ್ನು ಅನಗತ್ಯವಾಗಿ ಸಾಂವಿಧಾನಿಕ ಸಂಸ್ಥೆಗಳ ಮೂಲಕ ಗುರಿ ಮಾಡಲಾಗಿತ್ತು . ಆದರೆ ನಾವು ಸಕಾರಾತ್ಮಕ ಪ್ರಚಾರ ನಡೆಸಿದೆವು. ಇದರಿಂದಾಗಿ ಬಿಜೆಪಿಯ ಸಂಚು ಕೈಗೂಡಲಿಲ್ಲ ಎಂದು ಖರ್ಗೆ ಹೇಳಿದರು.
ನಮ್ಮ ಒಕ್ಕೂಟ ಹಾಗೂ ಪಕ್ಷ ನಿರುದ್ಯೋಗ, ಬೆಲೆ ಏರಿಕೆ ಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಹೋಗಿತ್ತು. ಜನರಿಗೆ ಅದರ ಮನದಟ್ಟಾಗಿದೆ. ಅವರು ನಮ್ಮನ್ನು ಬೆಂಬಲಿಸಿದರು ಎಂದು ಖರ್ಗೆ ಹೇಳಿದರು.
ನಮ್ಮ ಪ್ರಣಾಳಿಕೆ ಬಗ್ಗೆ ಮೋದಿ ಸುಳ್ಳು ಹೇಳಿದರು. ಆದರೆ, ಜನರು ಅದನ್ನು ಅರ್ಥ ಮಾಡಿಕೊಂಡರು. ನಾವು ನಮ್ಮ ಯಾತ್ರೆಗಳ ಮೂಲಕ ಜನರ ಸಮಸ್ಯೆ ಅರಿತು ಅದನ್ನು ಸರಿಪಡಿಸಲು ಮಾರ್ಗ ಕಂಡುಕೊಂಡೆವು. ಅದನ್ನೇ ಪ್ರಣಾಳಿಕೆ ಮಾಡಿ ಜನರಿಗೆ ನೀಡಿದೆವು. ಆದಾಗ್ಯೂ ಬಿಜೆಪಿ ತನ್ನ ಅಹಂಕಾರದಿಂದ ಸೋಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Narendra Modi : ವಾರಾಣಸಿಯಲ್ಲೂ ಮೋದಿ ಜನಪ್ರಿಯತೆ ಮಸುಕು; ಗೆಲುವಿನ ಅಂತರ ಕೇವಲ 1.5 ಲಕ್ಷ ಮತಗಳು
ಬಿಜೆಪಿ ನೇತೃತ್ವದ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ದಾಳಿ ಮಾಡಿತ್ತು. ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿತ್ತು. ವಿಪಕ್ಷ ನಾಯಕರನ್ನು ಬಂಧಿಸುವ ಕೆಲಸ ಮಾಡಲಾಗಿತ್ತು. ಅದೇ ರೀತಿ ಮುಂದೆ ಪ್ರಜಾಪ್ರಭುತ್ವ ಮೇಲೆ ದಾಳಿ ಮಾಡುವ ಉದ್ದೇಶವನ್ನೂ ಹೊಂದಿತ್ತು. ಇಂಥ ವಿಷಯಗಳನ್ನು ನಾವು ಜನರ ಮುಂದಿಡುವ ಕೆಲಸ ಮಾಡಿದೆವು. ಇದಕ್ಕಾಗಿ ನಾನು ನಮ್ಮ ಎಲ್ಲ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳು ಪರಸ್ಪರ ಸಹಕಾರದ ಮೂಲಕ ಪ್ರಚಾರದಲ್ಲಿ ಪಾಲ್ಗೊಂಡೆವು. ಆದಾಗ್ಯೂ ನಮ್ಮ ಹೋರಾಟ ತಾರ್ಕಿಕ ಅಂತ್ಯ ತಲುಪಿಲ್ಲ. ಜನ ಪರ ಮತ್ತು ಸಂವಿಧಾನದ ಉಳಿವಿಗೆ ನಾವು ಹೋರಾಟ ಮಾಡಬೇಕಿದೆ ಸಂಸತ್ ವಿಪಕ್ಷಗಳ ಧ್ವನಿಗೆ ಮಾನ್ಯತೆ ಸಿಗಬೇಕು ಎಂದು ಹೇಳಿದರು.
ಸಂವಿಧಾನ ಉಳಿದಿದೆ: ರಾಹುಲ್ ಗಾಂಧಿ
ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆದ ಹಿನ್ನಡೆ ಸಂವಿಧಾನಕ್ಕೆ ಸಿಕ್ಕಿರುವ ಗೆಲುವು ಎಂದು ಕಾಂಗ್ರೆಸ್ ನಾಯಕ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚಿಸುವ ಕುರಿತು ಹಾಗೂ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಬಗ್ಗೆ ಇಂಡಿ ಒಕ್ಕೂಟದ ಸದಸ್ಯರ ಚರ್ಚೆ ಮಾಡದೇ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದರು.
ಇದು ಇಂಡಿಯಾ ಒಕ್ಕೂಟ ಮತ್ತು ಎನ್ಡಿಎ ನಡುವಿನ ಹೋರಾಟ ಮಾತ್ರ ಆಗಿರಲಿಲ್ಲ. ಇದು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ, ಪ್ರಜಾಪ್ರಭುತ್ವ ಮೇಲಿ ದಾಳಿಯ ವಿರುದ್ಧದ ಹೋರಾಟವಾಗಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲರನ್ನೂ ಬೆದರಿಸಿ ವಶಕ್ಕೆ ಪಡೆಯುವ ಕೆಲಸ ಮಾಡಿದ್ದರು.
ಆದರೆ ನಮ್ಮ ಹೋರಾಟ ಸಂವಿಧಾನವನ್ನು ಉಳಿಸುವುದಾಗಿತ್ತು. ಈ ವಿಚಾರದಲ್ಲಿ ನಮ್ಮೊಂದಿಗೆ ಸೇರಿದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ಸಂವಿಧಾನ ಉಳಿಸುವ ನಿರ್ಧಾರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೀರಿ ರಾಹುಲ್ ಹೇಳಿದರು.
ಇಂಡಿ ಒಕ್ಕೂಟದ ನಾವೆಲ್ಲರೂ ಹೋರಾಟ ಮಾಡಿದೆವು. ನಾವು ಎಲ್ಲರೂ ಒಂದೇ ದೃಷ್ಟಿಕೊನದಿಂದ ಹೋರಾಡಿದ್ದೇವೆ. ಷೇರು ಮಾರುಕಟ್ಟೆ ಮತ್ತು ಅದಾನಿ ಮತ್ತು ಮೋದಿಯ ನಡುವೆ ಭ್ರಷ್ಟಾಚಾರದ ಸಂಬಂಧವಿದೆ. ಆದರೆ ದೇಶವು ಒಗ್ಗಾಟಾಗಿ ಮೋದಿ ಅಮಿತ್ ಶಾ ಆಡಳಿತ ನಡೆಸುವುದು ಬೇಡ ಎಂದು ನಿರ್ಧರಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ರಾಹುಲ್ ಹೇಳಿದ್ದಾರೆ.
ಬಡವರ ಗೆಲುವು
ಬಿಜೆಪಿಗೆ ಹಿನ್ನಡೆ ಉಂಟು ಮಾಡಿದ ದೇಶದ ಜನರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತೇನೆ. ಸಂವಿಧಾನ ಉಳಿಸುವ ಕೆಲಸ ಬಡವರು ಮಾಡಿದ್ದಾರೆ. ಸಂವಿಧಾನ ದೇಶದ ಧ್ವನಿ, ಬಡ ಜನರು ಇದನ್ನು ಉಳಿಸಿದ್ದಾರೆ. ಅದೇ ರೀತಿ ನಾನು ನೀಡಿದ ಭರವಸೆ ಈಡೇರಿಸುತ್ತೇವೆ. ಜಾತಿ ಗಣತಿ, ಮಹಾಲಕ್ಷ್ಮಿ ಭರವಸೆಯನ್ನು ನಾವು ಈಡೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇಂಡಿಯಾ ಒಕ್ಕೂಟದ ನಾಯಕರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ವಯನಾಡ್ ಹಾಗೂ ರಾಯ್ಬರೇಲಿ ಕ್ಷೇತ್ರದಲ್ಲಿ ಗೆದ್ದಿದ್ದು ಯಾವ ಕ್ಷೇತ್ರದಲ್ಲಿ ಉಳಿಯಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ನಾವು ಆಡಳಿತ ಪಕ್ಷದಲ್ಲಿ ಇರಬೇಕೋ ಅಥವಾ ವಿಪಕ್ಷದಲ್ಲಿ ಇರಬೇಕೋ ಎಂಬ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಹೇಳಿದ್ದಾರೆ.