Site icon Vistara News

Election Results 2024: ಬಿಜೆಪಿ ಹಿನ್ನಡೆ ನಡುವೆಯೂ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿ ಆಗುವುದು ಖಚಿತ!

Narendra Modi

Election Results 2024

ಬೆಂಗಳೂರು: ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭಾ ಚುನಾವಣೆಗಳ ಜೊತೆಗೆ 18ನೇ ಲೋಕಸಭಾ ಚುನಾವಣೆಯ (Election Results 2024) ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ನಡೆಯಿತು. ಸಂಸತ್ತಿನ ಕೆಳಮನೆ ಎಂದೂ ಕರೆಯಲ್ಪಡುವ ಲೋಕಸಭೆಯು 543 ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿದೆ. ಆಯಾ ಕ್ಷೇತ್ರಗಳ ಧ್ವನಿಯಾಗಿ ಸೇವೆ ಸಲ್ಲಿಸುವ ಒಬ್ಬ ಸದಸ್ಯರನ್ನು ಈ ಚುನಾವಣೆಯಲ್ಲಿ ಆರಿಸಲಾಗುತ್ತದೆ. ಒಟ್ಟು 80 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವು ಲೋಕಸಭೆಯಲ್ಲಿ ಭಾರತದ ಎಲ್ಲಾ ರಾಜ್ಯಗಳಿಗಿಂತ ಅತ್ಯಧಿಕ ಸದಸ್ಯರನ್ನು ಹೊಂದಿದೆ. ಮಹಾರಾಷ್ಟ್ರವು ಒಟ್ಟು 48 ಕ್ಷೇತ್ರಗಳೊಂದಿಗೆ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಎರಡನೇ ರಾಜ್ಯ. ಮುಂದಿನ ಐದು ವರ್ಷಗಳ ಕಾಲ ಲೋಕಸಭೆಗೆ ಸರ್ಕಾರದ ಆಯ್ಕೆಯ ಮತ ಎಣಿಕೆಯು ನಿರ್ಣಾಯಕ ಕ್ಷಣವಾಗಿತ್ತು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಗಮನ ಸೆಳೆದಿದ್ದವು.

2024ರ ಲೋಕಸಭಾ ಚುನಾವಣೆಯ ಫಲಿತಾಂಶವು ಬಿಜೆಪಿಗೆ ವಾಸ್ತವ ತೆರೆದಿಟ್ಟಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವು ಸರ್ಕಾರ ರಚಿಸಲು ಸಿದ್ಧವಾಗಿದೆ. ಆದಾಗ್ಯೂ 272 ಸ್ಥಾನಗಳ ಸರಳ ಬಹುಮತ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಇದು 2019ರಲ್ಲಿ ಸ್ವತಂತ್ರವಾಗಿ 303 ಸ್ಥಾನಗಳನ್ನು ಗಳಿಸಿ ವಿಜೃಂಭಿಸಿದ್ದ ಬಿಜೆಪಿಯ ತಾಕತ್ತಿಗೆ ವ್ಯತಿರಿಕ್ತವಾಗಿದೆ. ಆ ವರ್ಷ ಎನ್​​ಡಿಎ 353 ಸೀಟುಗಳನ್ನು​ ಗೆದ್ದುಕೊಂಡಿತ್ತು.

ಸಾಂಪ್ರದಾಯಿಕ ಭದ್ರಕೋಟೆಗಳಾದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಬಿಜೆಪಿಗೆ ಗಮನಾರ್ಹ ಹಿನ್ನಡೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಪಕ್ಷವು ಒಡಿಶಾ, ತೆಲಂಗಾಣ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಇದು ವಿವಿಧ ಪ್ರದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ದೊರಕಿದೆ.

ಇಂಡಿ ಒಕ್ಕೂಟದ ಸವಾಲು

ಮತ್ತೊಂದೆಡೆ, ಬಿಜೆಪಿ ಮತ್ತು ಅದರ ನೀತಿಗಳ ವಿರುದ್ಧ ಸಾಮೂಹಿಕ ಪ್ರತಿರೋಧದಿಂದ ಪ್ರೇರಿತವಾದ ಇಂಡಿ ಬ್ಯಾನರ್ ಅಡಿಯಲ್ಲಿನ ಏಕೀಕೃತ ವಿರೋಧ ಬಣವು ಸರಿಸುಮಾರು 230 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಒಕ್ಕೂಟವು ವಿವಿಧ ರಾಜ್ಯಗಳಲ್ಲಿ ಗಣನೀಯ ಲಾಭಗಳನ್ನು ಪಡೆದಿದೆ. ಇದು ಬಿಜೆಪಿಯ ಪ್ರಾಬಲ್ಯಕ್ಕೆ ಪ್ರಬಲ ಸವಾಲನ್ನು ಒಡ್ಡಿದೆ. ಈ ಒಕ್ಕೂಟಕ್ಕೆ ಸರ್ಕಾರ ರಚಿಸುವ ಅವಕಾಶ ಕಡಿಮೆ ಇದ್ದರು ಒಂದು ಕೈ ನೋಡುವ ಸಾಧ್ಯತೆಗಳಿವೆ.

ಮಂಗಳವಾರ ರಾತ್ರಿಯ ವೇಳೆಗೆ ಪ್ರಮುಖ ಪಕ್ಷಗಳು ಪಡೆದ ಮುನ್ನಡೆಯ ವಿವರ ಹೀಗಿದೆ:

ಎನ್​ಡಿಎ ಬಣ ಒಟ್ಟು 293 ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದೆ. ಅದರಲ್ಲಿ ಬಿಜೆಪಿಯೊಂದೇ 240 ಸ್ಥಾನಗಳನ್ನು ಪಡೆದಿದೆ. 2019ಕ್ಕೆ ಹೋಲಿಸಿದರೆ 62 ಸೀಟ್​ಗಳ ಕೊರತೆ ಎದುರಿಸಿದೆ. ಮಿತ್ರ ಪಕ್ಷ ತೆಲುಗು ದೇಶಂ ಪಾರ್ಟಿ 16 ಸೀಟುಗಳನ್ನು ಗೆದ್ದಿದೆ. ಹಿಂದಿನ ಬಾರಿಗಿಂತ 13 ಸೀಟು​ಗಳನ್ನು ಹೆಚ್ಚು ಗೆದ್ದಿದೆ. ಜೆಡಿಯು 13 ಸೀಟುಗಳನ್ನು ಗಳಿಸಿಕೊಂಡಿದ್ದು, ಹಿಂದಿನ ಬಾರಿಗಿಂತ 4 ಸ್ಥಾನಗಳನ್ನು ಮೈತ್ರಿಯ ಲಾಭವಾಗಿ ಪಡೆದಿದೆ. ಶಿವಸೇನೆ (ಶಿಂಧೆ ಬಣ) 7 ಸ್ಥಾನ ಗಳಿಸಿದ್ದರೆ, ಲೋಕ ಜನಶಕ್ತಿ ಪಾರ್ಟಿ ( ಎಲ್​ಜೆಪಿ) 5 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಕರ್ನಾಟಕದಲ್ಲಿ ಮಿತ್ರ ಪಕ್ಷ ಜೆಡಿಎಸ್​ ಮಂಡ್ಯ ಹಾಗೂ ಕೋಲಾರ ಮೂಲಕ 2 ಸ್ಥಾನ ಕೊಟ್ಟಿದೆ. ಜನಸೇನಾ ಪಾರ್ಟಿ ಆಂಧ್ರದಲ್ಲಿ 2 ಸೀಟ್​ ಗೆದ್ದಿದ್ದು, ಆರ್​ಎಲ್​ಡಿ 2 ಸೀಟ್​ ಗೆಲುವು ಕಂಡಿದೆ. ಎನ್​ಸಿಪಿ (ಅಜಿತ್ ಪವಾರ್ ಬಣ) ಒಂದು ಸ್ಥಾನ ಗೆದ್ದುಕೊಂಡಿದೆ.

​ಕಾಂಗ್ರೆಸ್‌ ಬಲ ಏರಿಕೆ:

ಇಂಡಿ ಒಕ್ಕೂಟದಲ್ಲಿ ಕಾಂಗ್ರೆಸ್​ 99 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು 2019ನೇ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ 47 ಸೀಟುಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ಹಿಂದಿನ ಬಾರಿಗಿಂತ 32 ಸ್ಥಾನಗಳನ್ನು ಹೆಚ್ಚಿಸಿಕೊಂಡಿರುವ ಸಮಾಜವಾದಿ ಪಾರ್ಟಿ 37 ಸೀಟ್​ ಗೆದ್ದಿದೆ. ಟಿಎಂಸಿ 29 ಹಾಗೂ ತಮಿಳುನಾಡಿನಲ್ಲಿ ಡಿಎಂಕೆ 22 ಸೀಟ್​ಗಳನ್ನು ತನ್ನದಾಗಿಸಿಕೊಂಡಿದೆ. ಹಿಂದಿನ ಬಾರಿಗಿಂತ 2 ಕ್ಷೇತ್ರ​ ಹೆಚ್ಚಳವಾಗಿದೆ. ಎಸ್​ಎಸ್​ಯುಬಿಟಿ ಪಾರ್ಟಿ 9 ಸೀಟ್ ಗೆದ್ದಿದೆ. ಎನ್​ಸಿಪಿ ಶರದ್ ಪವಾರ್ ಬಣ 8 ಸೀಟ್​ಗಳನ್ನು ಹೊಂದಿವೆ. ಆರ್​ಜೆಡಿ 4, ಸಿಪಿಐಎಮ್​ 4 ಹಾಗೂ ಐಯುಎಮ್​ಎಲ್​ 3 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ಇತರ ಪಕ್ಷಗಳು 17 ಕ್ಷೇತ್ರಗಳನ್ನು ಬಾಚಿಕೊಂಡಿವೆ. ಐಎನ್​ಡಿ ಪಕ್ಷ 3 ಸ್ಥಾನ, ವೈಎಸ್​ಆರ್​ಪಿ 4 ಸ್ಥಾನ, ವಿಪಿಪಿ 1 ಸ್ಥಾನ, ಎಸ್​ಕೆಎಮ್​ 1 ಸ್ಥಾನ, ಝಡ್​ಪಿಎಮ್ 1 ಸ್ಥಾನ, ಶಿರೋಮಣಿ ಅಕಾಲಿದಳ 1 ಸ್ಥಾನ, ಎಐಎಮ್​ಎಮ್​ 1, ಎಸ್​​ಕೆಎಂ ಒಂದು ಸ್ಥಾನ ಗೆದ್ದುಕೊಂಡಿದೆ.

Exit mobile version