Site icon Vistara News

Election Results 2024: ಲೋಕಸಭೆ ಚುನಾವಣೆಯ ರಾಜ್ಯವಾರು ಬಲಾಬಲ ಹೀಗಿದೆ

Election Results 2024

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ರಾಜಕೀಯ ಪಕ್ಷಗಳಿಗೆ ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಸ್ವತಃ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬೇಕೆಂದಿದ್ದ ಬಿಜೆಪಿ ಕೇವಲ 240 ಸ್ಥಾನಗಳಿಗೆ ತೃಪ್ತಿ ಪಡುವಂತಾಗಿದೆ. ಹೀಗಾಗಿ ಈ ಬಾರಿ ಸರಳ ಬಹುಮತ ಪಡೆದ ಪಕ್ಷವೇ ಇಲ್ಲ. ಆದಾಗ್ಯೂ ಎನ್​ಡಿಎ ಒಕ್ಕೂಟ 290ಕ್ಕೂ ಅಧಿಕ ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯವುದು ಖಚಿತ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದು ಕೂಡ ನಿಶ್ಚಿತ. ಒಟ್ಟು 400 ಸೀಟುಗಳ ಅಭಿಲಾಷೆಯಲ್ಲಿದ್ದ ಬಿಜೆಪಿ ಇದೀಗ ಬೇರೆ ಪಕ್ಷಗಳ ಜತೆ ಸೇರಿ ಸರ್ಕಾರ ರಚಿಸಬೇಕಾಗುತ್ತದೆ. ಈ ರೀತಿಯಾಗಿ ಅಚ್ಚರಿಯ ಫಲಿತಾಂಶ ಕಂಡ ಲೋಕಸಭಾ ಚುನಾವಣೆಯ ರಾಜ್ಯವಾರು ಚಿತ್ರಣ ಇಲ್ಲಿದೆ.

ಉತ್ತರ ಪ್ರದೇಶ

ಉತ್ತರ ಪ್ರದೇಶ ಅತಿ ಹೆಚ್ಚು 80 ಲೋಕ ಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಇಂಡಿಯಾ ಒಕ್ಕೂಟಕ್ಕೆ ಮುನ್ನಡೆ ದೊರಕಿದೆ. ಬಿಜೆಪಿಗೆ ಕೇವಲ 34 ಸೀಟುಗಳು ದೊರಕಿದ್ದರೆ, ಎಸ್​ಪಿ 36 ಸೀಟುಗಳು ಗೆದ್ದುಕೊಂಡಿದೆ. ಕಾಂಗ್ರೆಸ್​ 6 ಹಾಗೂ ಇತರ ಪಕ್ಷಗಳು 4 ಸೀಟುಗಳನ್ನು ಗೆದ್ದಿವೆ. ಕಳೆದ ಬಾರಿ ಇಲ್ಲಿ ಬಿಜೆಪಿ 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹಾಗಾಗಿ ಇಲ್ಲಿ ಬಿಜೆಪಿಗೆ ಭಾರಿ ನಷ್ಟವಾಗಿದೆ.

ಪಶ್ಚಿಮ ಬಂಗಾಳ

31 ಲೋಕ ಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಇಂಡಿ ಒಕ್ಕೂಟಕ್ಕೆ ಲಾಭವಾಗಿದೆ. ಇಲ್ಲಿ ಟಿಎಂಸಿ 31 ಸೀಟ್​ಗಳನ್ನು ಗೆದ್ದಿದ್ದರೆ, ಬಿಜೆಪಿಗೆ 10 ಸೀಟ್​ಗಳು ಮಾತ್ರ ದೊರಕಿವೆ. ಕಾಂಗ್ರೆಸ್​ ಪಕ್ಷ 1 ಸ್ಥಾನ​ ತನ್ನದಾಗಿಸಿಕೊಂಡಿದೆ. ಕಳೆದ ಬಾರಿ ಇಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು.

ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಎನ್​ಡಿಎ ಒಕ್ಕೂಟಕ್ಕೆ ನಷ್ಟವಾಗಿದೆ. ಇಲ್ಲಿ ಕಾಂಗ್ರೆಸ್​ 12 ಸೀಟ್​ ಗೆದ್ದಿದ್ದರೆ ಬಿಜೆಪಿ 11 ಸೀಟ್​ಗಳಲ್ಲಿ ಜಯಿಸಿದೆ. ಶಿವಸೇನೆ ಉದ್ಧವ್​ ಠಾಕ್ರೆ ಬಣ 10​ ಹಾಗೂ ಎನ್​​ಸಿಪಿ ಶರದ್ ಪವಾರ್​ ಬಣ 5 ಸೀಟು ತನ್ನದಾಗಿಸಿಕೊಂಡಿದೆ. ಶಿವ ಸೇನೆ ಶಿಂಧೆ ಬಣಕ್ಕೆ 6 ಸೀಟ್​ ಸಿಕ್ಕಿದೆ. ಕಳೆದ ಬಾರಿ ಇಲ್ಲಿ ಬಿಜೆಪಿ ಮತ್ತು ಶಿವಸೇನೆ ಜತೆಯಾಗಿ 40 ಸೀಟುಗಳನ್ನು ಗೆದ್ದಿದ್ದವು.

ಕರ್ನಾಟಕ

28 ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್​ 9 ಸ್ಥಾನ ಗೆದ್ದಿದೆ. ಜೆಡಿಎಸ್​ 2 ಸ್ಥಾನ ಗೆದ್ದುಕೊಂಡಿದೆ. ಕಳೆದ ಬಾರಿ ಇಲ್ಲಿ ಬೆಂಬಲಿತ ಪಕ್ಷೇತರ ಸೇರಿದಂತೆ ಬಿಜೆಪಿ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಬಿಹಾರ

ಬಿಹಾರದಲ್ಲಿ ಜೆಡಿಯುಗೆ 13 ಮತ್ತು ಬಿಜೆಪಿ ಸೀಟುಗಳು ಗೆದ್ದಿವೆ. ಆರ್​ಜೆಡಿಗೆ 4 ಮತ್ತು ಕಾಂಗ್ರೆಸ್‌ಗೆ 3 ಸೀಟುಗಳು ಸಿಕ್ಕಿವೆ. ಇತರ ಪಕ್ಷಗಳಿಗೆ 8 ಸೀಟ್ ದೊರಕಿದೆ.

ತಮಿಳುನಾಡು

ದಕ್ಷಿಣದ ಪ್ರಮುಖ ರಾಜ್ಯವಾಗಿರುವ ತಮಿಳುನಾಡಿನಲ್ಲಿ ಡಿಎಂಕೆ 22 ಸ್ಥಾನ ಗೆದ್ದುಕೊಂಡಿದೆ. ಕಾಂಗ್ರೆಸ್‌ 9 ಮತ್ತು ಇತರ ಪಕ್ಷಗಳಿಗೆ 8 ಸ್ಥಾನಗಳು ಲಭಿಸಿವೆ.

ಅಂಡಮಾನ್​ ನಿಕೋಬಾರ್

ಕೇಂದ್ರಾಡಳಿತ ಪ್ರದೇಶವಾಗಿರುವ ಅಂಡಮಾನ್ ಹಾಗೂ ನಿಕೋಬಾರ್​ನಲ್ಲಿ ಇದ್ದ ಏಕೈಕ ಸ್ಥಾನ ಬಿಜೆಪಿ ಪಾಲಾಗಿದೆ.

ಆಂಧ್ರಪ್ರದೇಶ

ಆಂಧ್ರಪ್ರದೇಶದಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆದ್ದಿದ್ದರೆ, ವೈಎಸ್​ಆರ್​ಪಿ 4 ಸ್ಥಾನ ಗೆದ್ದಿದೆ. ಬಿಜೆಪಿ 3, ಜನಸೇನಾ ಪಕ್ಷ 2 ಸ್ಥಾನ ತನ್ನದಾಗಿಸಿಕೊಂಡಿದೆ.

ಮಧ್ಯಪ್ರದೇಶ

ಮಧ್ಯ ಪ್ರದೇಶದಲ್ಲಿ ಒಟ್ಟು 29 ಲೋಕ ಸಭಾ ಕ್ಷೇತ್ರಗಳಿವೆ. ಇಲ್ಲಿ ಅಷ್ಟನ್ನೂ ಬಿಜೆಪಿ ಗೆದ್ದುಕೊಂಡು ಕ್ಲೀನ್ ಸ್ವೀಪ್ ಮಾಡಿದೆ.

ಅರುಣಾಚಲ ಪ್ರದೇಶ

ಈಶಾನ್ಯ ರಾಜ್ಯವಾಗಿರುವ ಅರುಣಾಚಲ ಪ್ರದೇಶದಲ್ಲಿ ಇದ್ದ ಎರಡು ಸ್ಥಾನವನ್ನು ಬಿಜೆಪಿ ವಶಪಡಿಸಿಕೊಂಡಿದೆ.

ಅಸ್ಸಾಂ

ಅಸ್ಸಾಂನಲ್ಲಿ ಒಟ್ಟು 14 ಸ್ಥಾನಗಳಿವೆ. ಅದರಲ್ಲಿ ಬಿಜೆಪಿ 9 ಸ್ಥಾನ ಗೆದ್ದಿದ್ದರೆ ಕಾಂಗ್ರೆಸ್​ 3 ಹಾಗೂ ಇತರರು 2 ಸ್ಥಾನ ಗೆದ್ದಿದ್ದಾರೆ.

ಛತ್ತೀಸ್​ಗಢ

ನಕ್ಸಲರ ಉಪಟಳ ಹೆಚ್ಚಿರುವ ಛತ್ತೀಸ್​ಗಡದಲ್ಲಿ ಒಟ್ಟು ಇರುವ 11 ಸ್ಥಾನಗಳಲ್ಲಿ ಬಿಜೆಪಿ 9 ಸ್ಥಾನ ಗೆದ್ದಿದೆ. ಉಳಿದ 2 ಸ್ಥಾನ ಕಾಂಗ್ರೆಸ್​ಗೆ ದೊರಕಿದೆ.

ದಾದರ್​ ಮತ್ತು ನಾಗರ್​ ಹವೇಲಿ

ಕೇಂದ್ರಾಡಳಿತ ಪ್ರದೇಶವಾಗಿರುವ ದಾದರ್ ಮತ್ತು ನಾಗರ್​ ಹವೇಲಿಯಲ್ಲಿ ಒಂದೇ ಸ್ಥಾನವಿದ್ದು ಅದು ಬಿಜೆಪಿಗೆ ಸಿಕ್ಕಿದೆ.

ದಮನ್, ದಿಯು

ಕೇಂದ್ರಾಡಳಿತ ಪ್ರದೇಶವಾಗಿರುವ ದಿಯು ಹಾಗೂ ದಮನ್​ನಲ್ಲಿ ಪಕ್ಷೇತರ ಒಂದು ಸ್ಥಾನ ಗೆದ್ದಿದ್ದಾರೆ.

ಗೋವಾ

ಕೇಂದ್ರಾಡಳಿತ ಪ್ರದೇಶವಾಗಿರುವ ಗೋವಾದಲ್ಲಿ 2 ಸ್ಥಾನಗಳು ಇದ್ದವು. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದು ಸೀಟುಗಳನ್ನು ಹಂಚಿಕೊಂಡಿವೆ.

ಗುಜರಾತ್​

ಗುಜರಾತ್​ನಲ್ಲಿ ಒಟ್ಟು 26 ಲೋಕಸಭಾ ಸ್ಥಾನಗಳಿವೆ. ಅವುಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ವಶಪಡಿಸಿಕೊಂಡಿದೆ. ಒಂದು ಸ್ಥಾನ ಕಾಂಗ್ರೆಸ್​ಗೆ ಬಂದಿದ್ದು 10 ವರ್ಷದ ಬಳಿಕ ಖಾತೆ ತೆರೆದಿದೆ.

ಹರಿಯಾಣ

ಹರಿಯಾಣದಲ್ಲಿ ಒಟ್ಟು 10 ಲೋಕಸಭಾ ಸ್ಥಾನಗಳು ಇವೆ. ಅವುಗಳಲ್ಲಿ ಬಿಜೆಪಿ 5 ಸ್ಥಾನ ಗೆದ್ದಿದ್ದರೆ ಕಾಂಗ್ರೆಸ್​ ಅಷ್ಟೇ ಸೀಟ್​ಗಳನ್ನು ಖಾತೆಗೆ ಸೇರಿಸಿಕೊಂಡಿದೆ.

ಹಿಮಾಚಲ ಪ್ರದೇಶ

ಒಟ್ಟು ಇರುವ ನಾಲ್ಕು ಸೀಟ್​ಗಳಲ್ಲಿ ಅಷ್ಟನ್ನೂ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಜಮ್ಮು ಮತ್ತು ಕಾಶ್ಮೀರ

ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ 2 ಸ್ಥಾನ ಗೆದ್ದಿದ್ದು ಜೆಕೆಎನ್​ ಪಕ್ಷ 2 ಸ್ಥಾನ ಪಡೆದಿದೆ. ಪಕ್ಷೇತರರಿಗೆ 1 ಒಂದು ಸ್ಥಾನ ದೊರಕಿದೆ.

ಕೇರಳ

ಕೇರಳದಲ್ಲಿ ಒಟ್ಟು 20 ಸೀಟ್​ಗಳಿವೆ. ಅದಲ್ಲಿ ಕಾಂಗ್ರೆಸ್​ 14 ಸೀಟ್​ಗಳನ್ನು ಗೆದ್ದುಕೊಂಡಿದೆ. ಐಯುಎಮ್​ಎಲ್​ 2 ಸೀಟ್ ಗೆದ್ದರೆ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದೆ. ಸಿಪಿಎಂ 1 ಸ್ಥಾನ ಹಾಗೂ ಇತರರು 2 ಸ್ಥಾನ ಗೆದ್ದಿದ್ದಾರೆ.

ಲಡಾಖ್​

ಲಡಾಖ್​​ನಲ್ಲಿ ಇದ್ದ ಒಂದೇ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡಿದ್ದಾರೆ.

ಲಕ್ಷದ್ವೀಪ

ಇಲ್ಲಿನ ಒಂದೇ ಒಂದು ಸ್ಥಾನವನ್ನು ಕಾಂಗ್ರೆಸ್​ ಪಕ್ಷ ತನ್ನದಾಗಿಸಿಕೊಂಡಿದೆ.

ಮಣಿಪುರ

ಜನಾಂಗೀಯ ಗಲಭೆ ಪೀಡಿತ ಮಣಿಪುರದಲ್ಲಿ ಇದ್ದ ಎರಡು ಸ್ಥಾನಗಳನ್ನು ಕಾಂಗ್ರೆಸ್ ಬಾಚಿಕೊಂಡಿದೆ.

ಮೇಘಾಲಯ

ಇಲ್ಲಿ ಒಟ್ಟು 2 ಸ್ಥಾನಗಳಿದ್ದವು. ಅವುಗಳಲ್ಲಿ ಒಂದು ಕಾಂಗ್ರೆಸ್​ ಪಾಲಾಗಿದ್ದರೆ ಇನ್ನೊಂದು ಇತರ ಪಕ್ಷವೊಂದರ ಪಾಲಾಗಿದೆ.

ಮಿಜೋರಾಮ್​

ಸಣ್ಣ ರಾಜ್ಯವಾಗಿರುವ ಮಿಜೋರಾಮ್​ನಲ್ಲಿ ಒಂದೇ ಒಂದು ಸ್ಥಾನವಿತ್ತು. ಇದನ್ನು ಝಡ್​ಪಿಎಂ ಪಕ್ಷ ಗೆದ್ದುಕೊಂಡಿದೆ.

ನಾಗಾಲ್ಯಾಂಡ್​

ಒಟ್ಟು 1 ಸ್ಥಾನ ಇದ್ದ ನ್ಯಾಗಾಲ್ಯಾಂಡ್​ನಲ್ಲಿ ಕಾಂಗ್ರೆಸ್​ ಮೇಲುಗೈ ಸಾಧಿಸಿದೆ.

ನವ ದೆಹಲಿ

ದೆಹಲಿಯಲ್ಲಿ ಬೇರೆ ಪಕ್ಷಗಳಿಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಏಳೂ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.

ಒಡಿಶಾ

ಇಲ್ಲಿನ ಒಟ್ಟು 21 ಕ್ಷೇತ್ರಗಳಲ್ಲಿ ಬಿಜೆಪಿಯೇ 20 ಗೆದ್ದುಕೊಂಡಿದ್ದು, ಒಂದು ಸ್ಥಾನ ಮಾತ್ರ ಬಿಜೆಡಿ ಪಾಲಾಗಿದೆ.

ಪುದುಚೆರಿ

ಪುದುಚೆರಿಯಲ್ಲಿ ಈ ಬಾರಿ ಬಿಜೆಪಿಗೆ ಅನುಕೂಲ ಆಗಿಲ್ಲ. ಇಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದೆ.

ಪಂಜಾಬ್​

ಒಟ್ಟು 13 ಸ್ಥಾನಗಳಲ್ಲಿ ಕಾಂಗ್ರೆಸ್​ 7 ಸ್ಥಾನ ಗೆದ್ದಿದ್ದರೆ ಆಪ್​ಗೆ 3 ಸೀಟ್ ಸಿಕ್ಕಿದೆ. ಎಸ್​ಎಡಿಗೆ 1 ಹಾಗೂ ಇತರರಿಗೆ 2 ಸ್ಥಾನ ದೊರಕಿದೆ.

ರಾಜಸ್ಥಾನ

ರಾಜಸ್ಥಾನದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳಿವೆ. ಇಲ್ಲಿ 14 ಬಿಜೆಪಿ ಪಾಲಾದರೆ, 8 ಕಾಂಗ್ರೆಸ್ ಹಾಗೂ 3 ಇತರ ಪಕ್ಷಗಳ ಪಾಲಾಗಿವೆ.

ಸಿಕ್ಕಿಂ

ಸಿಕ್ಕಿಮ್​ನಲ್ಲಿರುವ ಒಂದೇ ಒಂದು ಕ್ಷೇತ್ರದಲ್ಲಿ ಎಸ್​ಕೆಎಂ ಪಕ್ಷ ಗೆಲುವು ಸಾಧಿಸಿದೆ.

ತೆಲಂಗಾಣ

ತೆಲಂಗಾಣದಲ್ಲಿ 17 ಲೋಕಸಭಾ ಸ್ಥಾನಗಳು ಇದ್ದವು. ಇವುಗಳಲ್ಲಿ 8 ಬಿಜೆಪಿ ಪಾಲಾದರೆ, 8 ಕಾಂಗ್ರೆಸ್​ಗೆ ಸಿಕ್ಕಿದೆ. ಒಂದು ಎಐಎಮ್​ಐಎಮ್​ಗೆ ದೊರಕಿದೆ.

ಉತ್ತರಾಖಂಡ

ಉತ್ತರಾಖಂಡದಲ್ಲಿ ಒಟ್ಟು 5 ಸೀಟುಗಳಿವೆ. ಅಷ್ಟೂ ಬಿಜೆಪಿ ಪಾಲಾಗಿವೆ.

2019ರ ಫಲಿತಾಂಶ ಏನಾಗಿತ್ತು?

ಹಿಂದಿನ 2019ರ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್​ಡಿಎ 353 ಲೋಕಸಭಾ ಸ್ಥಾನಗಳನ್ನು ಪಡೆಯುವ ಮೂಲಕ ಗಮನಾರ್ಹ ವಿಜಯ ದಾಖಲಿಸಿತ್ತು. ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಬಿಜೆಪಿ ನೇತೃತ್ವದ ಎನ್​​ಡಿಎ ಮತ್ತು ಹೊಸದಾಗಿ ರೂಪುಗೊಂಡ ಇಂಡಿಯಾ ಬ್ಲಾಕ್ ಪ್ರಮುಖ ಸ್ಪರ್ಧಿಗಳಾಗಿದ್ದವು. ಮತದಾರರ ಬೆಂಬಲವನ್ನು ಗಳಿಸಲು ರಾಜಕೀಯ ಪಕ್ಷಗಳು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದವು. ಎನ್​ಡಿಎಯ ಹಾಲಿ ಲೋಕಸಭಾ ಅವಧಿ ಜೂನ್ 16, 2024ರಂದು ಕೊನೆಗೊಳ್ಳಲಿದೆ.

Exit mobile version