Site icon Vistara News

Electoral Bonds: ಟಾಪ್‌ 10 ವೈಯಕ್ತಿಕ ದಾನಿಗಳು ಕೊಟ್ಟ ಹಣದಲ್ಲಿ 84% ಬಿಜೆಪಿ ಪಾಲು; ಕೊಟ್ಟವರು ಯಾರು?

electoral bonds bjp

ಹೊಸದಿಲ್ಲಿ: ಟಾಪ್ 10 ವೈಯಕ್ತಿಕ ದಾನಿಗಳು (personal donors) ಏಪ್ರಿಲ್ 12, 2019 ಮತ್ತು ಜನವರಿ 11, 2024ರ ನಡುವೆ ₹180.2 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು (Electoral Bonds) ಖರೀದಿಸಿದ್ದಾರೆ. ಇದರಲ್ಲಿ ₹152.2 ಕೋಟಿ ಅಥವಾ 84.5% ಭಾರತೀಯ ಜನತಾ ಪಕ್ಷಕ್ಕೆ (BJP) ದೇಣಿಗೆ ನೀಡಲಾಗಿದೆ. ಚುನಾವಣಾ ಆಯೋಗ (Election commission) ಗುರುವಾರ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ವೈಯಕ್ತಿ ದೇಣಿಗೆ ಸ್ವೀಕರಿಸಿದ ಎರಡನೇ ಅತಿದೊಡ್ಡ ಪಕ್ಷವೆಂದರೆ ತೃಣಮೂಲ ಕಾಂಗ್ರೆಸ್ (TMC). ಇದು ₹16.2 ಕೋಟಿ ಅಥವಾ ಸುಮಾರು 9% ಹಣವನ್ನು ಪಡೆದುಕೊಂಡಿದೆ. ಮೂರನೇ ದೊಡ್ಡ ಪಾರ್ಟಿ ಭಾರತ್ ರಾಷ್ಟ್ರ ಸಮಿತಿ (BRS), ₹ 5 ಕೋಟಿ.

ಅಗ್ರ ದಾನಿ, ಆರ್ಸೆಲರ್ ಮಿತ್ತಲ್‌ನ ಅಧ್ಯಕ್ಷ ಲಕ್ಷ್ಮಿನಿವಾಸ್ ಮಿತ್ತಲ್, ₹35 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದಾರೆ. ಇವೆಲ್ಲವೂ ಬಿಜೆಪಿಗೆ ದೇಣಿಗೆಯಾಗಿವೆ. ಎರಡನೇ ಪ್ರಮುಖ ವೈಯಕ್ತಿಕ ದಾನಿ ಲಕ್ಷ್ಮಿದಾಸ್ ವಲ್ಲಭದಾಸ್ ಮರ್ಚೆಂಟ್, ಅವರು ನವೆಂಬರ್ 2023ರಲ್ಲಿ ಬಿಜೆಪಿಗೆ ತಮ್ಮ ಎಲ್ಲಾ ₹25 ಕೋಟಿಗಳನ್ನು ದೇಣಿಗೆ ನೀಡಿದರು. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ ಅವರು ಮರ್ಚೆಂಟ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಗ್ರೂಪ್ ಕಂಟ್ರೋಲರ್ ಆಗಿದ್ದು 33 ವರ್ಷಗಳಿಗೂ ಹೆಚ್ಚು ಕಾಲ ಕಂಪನಿಯಲ್ಲಿದ್ದಾರೆ.

ಟಾಪ್ 10 ದಾನಿಗಳಲ್ಲಿ ಮಿತ್ತಲ್, ಮರ್ಚೆಂಟ್, ಕೆಆರ್ ರಾಜಾ ಜೆಟಿ, ಇಂದರ್ ಠಾಕುರ್‌ದಾಸ್ ಜೈಸಿಂಘನಿ, ರಾಹುಲ್ ಜಗನ್ನಾಥ್ ಜೋಶಿ ಮತ್ತು ಅವರ ಪುತ್ರ ಹರ್ಮೇಶ್ ರಾಹುಲ್ ಜೋಷಿ, ರಾಜು ಕುಮಾರ್ ಶರ್ಮಾ, ಸೌರಭ್ ಗುಪ್ತಾ ಮತ್ತು ಅನಿತಾ ಹೇಮಂತ್ ಶಾ ಬಿಜೆಪಿಗೆ ಮಾತ್ರ ದೇಣಿಗೆ ನೀಡಿದ್ದಾರೆ.

ಜೈಸಿಂಘನಿ ಅವರು ದೇಶದ ಅತಿ ದೊಡ್ಡ ತಂತಿಗಳು ಮತ್ತು ಕೇಬಲ್‌ಗಳ ತಯಾರಕರಾದ ಪಾಲಿಕ್ಯಾಬ್ ಇಂಡಿಯಾದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು. ಜೋಶಿ ತಂದೆ-ಮಗ ಜೋಡಿಯು ಅನೇಕ ಸರಕು ಕಂಪನಿಗಳ ಮಂಡಳಿಗಳಲ್ಲಿ ನಿರ್ದೇಶಕರಾಗಿದ್ದಾರೆ. ಇಂಡಿಗೋದ ರಾಹುಲ್ ಭಾಟಿಯಾ ಟಿಎಂಸಿಗೆ ₹ 16.2 ಕೋಟಿ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ₹ 3.8 ಕೋಟಿ ದೇಣಿಗೆ ನೀಡಿದ್ದಾರೆ. ಪ್ರತ್ಯೇಕವಾಗಿ, ಇಂಡಿಗೋ ಮತ್ತು ಸಂಬಂಧಿತ ಘಟಕಗಳು ಮೇ 2019ರಲ್ಲಿ ಬಿಜೆಪಿಗೆ ₹31 ಕೋಟಿ ಮತ್ತು ಏಪ್ರಿಲ್ 2023ರಲ್ಲಿ ಕಾಂಗ್ರೆಸ್‌ಗೆ ₹5 ಕೋಟಿ ದೇಣಿಗೆ ನೀಡಿವೆ.

ಅಜಂತಾ ಫಾರ್ಮಾದ ಸಿಇಒ ರಾಜೇಶ್ ಮನ್ನಾಲಾಲ್ ಅಗರವಾಲ್ ಅವರು ಒಟ್ಟು ₹13 ಕೋಟಿ- ಬಿಜೆಪಿ ಮತ್ತು ಬಿಆರ್‌ಎಸ್‌ಗೆ ತಲಾ ₹5 ಕೋಟಿ ಮತ್ತು ಕಾಂಗ್ರೆಸ್‌ಗೆ ₹3 ಕೋಟಿ ದೇಣಿಗೆ ನೀಡಿದ್ದಾರೆ. ಅಜಂತಾ ಫಾರ್ಮಾ ಪ್ರತ್ಯೇಕವಾಗಿ ಬಿಜೆಪಿಗೆ ₹ 3 ಕೋಟಿ ಮತ್ತು ಕಾಂಗ್ರೆಸ್‌ಗೆ ₹ 1 ಕೋಟಿ ದೇಣಿಗೆ ನೀಡಿದೆ.

ಮತ್ತೊಬ್ಬ ಮಹತ್ವದ ವೈಯಕ್ತಿಕ ದಾನಿ, ಬಯೋಕಾನ್‌ನ ಕಿರಣ್ ಮಜುಂದಾರ್ ಶಾ ಅವರು ವೈಯಕ್ತಿಕ ದಾನಿಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ. ಇವರು ಒಟ್ಟು ₹ 6 ಕೋಟಿ ನೀಡಿದ್ದಾರೆ. ಅದರಲ್ಲಿ ₹ 4 ಕೋಟಿ ಬಿಜೆಪಿಗೆ, ಜನತಾ ದಳ (ಜಾತ್ಯತೀತ) ಮತ್ತು ಕಾಂಗ್ರೆಸ್‌ಗೆ ತಲಾ ₹ 1 ಕೋಟಿ ದೇಣಿಗೆ ನೀಡಿದ್ದಾರೆ.

ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ನ ವಿವರಗಳನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Exit mobile version